ಕೋಪ‍‍‍‍ತಾಪ‌

ಕೋಪ‍‍‍‍ತಾಪ‌

    ಏನಪ್ಪಾ ಇಂಥಾ ಶೀರ್ಷಿಕೆ ಅಂತ ಕೋಪ ಮಾಡ್ಕೋಬೇಡಿ. ವಿಷಯಾನೇ ಅಂಥದ್ದು.  ಕೋಪ ಮಾಡ್ಕೋಬೇಡಾಂದ್ರೆ ಎಂಥ ಕೋಪ ಬಾರದಿರುವವನಿಗೂ  ಕೋಪ ಬರುತ್ತೆ! ಕಾರಣವಿದ್ದೋ ಇಲ್ಲದೆಯೋ  ನಮ್ಮ ಮನದೊಳಗಣ  ಶೌಚವನ್ನು ಆಚೆ ಹಾಕುವುದೇ ಕೋಪದ ಪ್ರಕ್ರಿಯೆ .  ಅಬಾಲವೃದ್ಧರಾದಿಯಾಗಿ  ಎಲ್ಲ ಕಾಲಗಳಲ್ಲಿ, ಎಲ್ಲ ಜಾಗಗಳಲ್ಲಿ, ಎಲ್ಲ ಸಂದರ್ಭಗಳಲ್ಲಿ ತನ್ನಿರುವಿಕೆಯನ್ನು ತೋರ್ಪಡಿಸುತ್ತದೆ ಈ ಕೋಪ ಭಾವ.  ಡ್ಯಾಮಿನ ಕ್ರೆಸ್ಟ್ ಗೇಟ್ ತೆಗೆದಾಗ ನೀರುಕ್ಕುವ ಪರಿಯಲ್ಲಿ ಈ ಕೋಪ ಹಠಾತ್ತನೆ ಭರ್ಜರಿಯಾಗಿ  ದಾಳಿಯಿಡುತ್ತದೆ.  `ಸಮಯಾಸಮಯವುಂಟೇ ಭಕ್ತವತ್ಸಲ ನಿನಗೆ'  ಎಂದು ಭಗವಂತನಿಗಂದಂತೆ, `ಸಮಯಾಸಮಯವುಂಟೆ ಕೋಪಭಾವವು ನಿನಗೆ' ಎಂದೆನ್ನ ಬೇಕಾದೀತು! ಎದುರಿರುವವನಿಗೆ ಯಾವಾಗ ಕೋಪ ಬಂದಿದೆಯೆಂದು  ನಿಖರವಾಗಿ ಹೇಳುವಂಥ  ಜ್ಞಾನ ನರಮಾನವರಿಗಿನ್ನೂ ಪ್ರಾಪ್ತವಾಗಿಲ್ಲ! – ಯಾರೂ PHD ಕೂಡ ಮಾಡಿಲ್ಲ.  ಆದರೂ ಕೋಪ ಬರುವುದರ ಸೂಚನೆಯನ್ನು ಪಡೆದುಕೊಳ್ಳುವಷ್ಟು ಮುಂದುವರೆದಿದೆ, ನಮ್ಮೀ ಮಾನವ ಜನಾಂಗ.  ಕೋಪದ ಆವಾಸಸ್ಥಳ ಮೂಗಿನ ತುದಿ.  ಅದಕ್ಕೇ ಮುಂಗೋಪ  ಅನ್ನೋದು.  ಇದಕ್ಕೆ ಅಧಿದೇವತೆ – ದೂರ್ವಾಸ ಮಹರ್ಷಿ. ಅವನ ಕೋಪಕ್ಕೆ ಸಿಲುಕಿದ ಪುರಾಣ ಪುರುಷರು ಅಸಂಖ್ಯ.
ಕೋಪಭಾವದಲ್ಲಿ ಮಕ್ಕಳದ್ದು ರಕ್ಷಣಾತ್ಮಕ ಆಟ.  ದೈಹಿಕ  ದಾಳಿಯ ಸಂಭವನೀಯತೆಯಿಂದಾಗಿ ಮಕ್ಕಳು ತಮಗಿಂತ `ಬಲಿಷ್ಠ'ರು  (ಉದಾ: ತಂದೆ-ತಾಯಿ, ಹಿರಿ-ಹುಡು-ತುಡುಗರು) ಕೋಪಗೊಂಡಾಗ  ಹಿಂದೆ ಸರಿಯುವ ತಂತ್ರಕ್ಕೆ ಮೊರೆ ಹೋದರೆ, ತಮಗಿಂತ ಕಿರಿಯರಿಗೆ ಕೋಪ ಭಾವ ಪ್ರದರ್ಶಿಸಿ ತಮ್ಮ `ಸರಿದಾರಿ'ಗೆ  ತರುತ್ತಾರೆ.   ತಮಗಿಂತ ಶಕ್ತಿವಂತರಿಗೆ  ತಾವೇನು ಮಾಡಬೇಕೆಂದುಕೊಂಡಿರುತ್ತೀವೋ ಅದನ್ನು ನಮಗಿಂತ  ಬಲಹೀನರಿಗೆ ವರ್ಗಾಯಿಸುವುದನ್ನೇ ಕೋಪದ definition ಅಂತೆನ್ನಬಹುದು ಅಲ್ಲವೇ?! ಆಫೀಸುಗಳಲ್ಲಿ  ಇದನ್ನು ಬಹಳ ಚೆನ್ನಾಗಿ ಗಮನಿಸಬಹುದು.  ತನ್ನ ಬಾಸಿನಿಂದ ಅವಮಾನಿತನಾದ ನಮ್ಮ ಬಾಸು ನಮ್ಮ ಮೇಲೆ ಕ್ರುದ್ಧನಾಗಿ  ವ್ಯವಹರಿಸುವುದು ನಮಗಷ್ಟೇ  ವಿನಾಕಾರಣ  ಅನ್ನಿಸುತ್ತದೆ – ಆದರೆ ಅವನ ಮನಸ್ಥಿತಿಗಲ್ಲ. ಇದು ಮನೆಗಳಲ್ಲಿಯೂ ಇರುವಂಥದ್ದೇ.  ಮನೆಯಲ್ಲಿ ಜಗಳವಾಡಿ ಬಂದಾತ, ಆಫೀಸಿನಲ್ಲಿ ಇತರರ ಮೇಲೆ ವಿನಾಕಾರಣ ರೇಗೋಲ್ಲವೇ? ಹಾಗೆಯೇ, ಆಫೀಸಿನಲ್ಲಿಯೋ, ಅಂಗಡಿಯಲ್ಲಿಯೋ  ಗಿರಾಕಿಯೊಡನೆ ಬಿಸಿ ವಾಗ್ವಾದವಾಗಿ (ಕೆಲವೊಮ್ಮೆ ಕೋಪದ ತಾಪವೇರಿ ಕೈ ಕೈ  ಮಿಲಾಯಿಸಿಯೂ ಆಗಿ!) ಮನೆಗೆ ಬಂದಾಗ  ಮಡದಿಯನ್ನು ಮುದ್ದಾಡಲಾದೀತೇ?  ಆಗ ನೀವೆಷ್ಟೇ ಅಮೃತೋಪಮವಾದ ಪೇಯ ಯಾ  ತಿನಿಸನ್ನು ಅವರ ಮುಂದಿಟ್ಟರೂ, ಆತ ಅದನ್ನು  ಕುಡಿದು/ತಿಂದು, ವಿಷ ತಿಂದಂತೆ ಮುಖ ಮಾಡಿ, ನಿಮ್ಮ ಸಹಸ್ರನಾಮಾರ್ಚನೆ ಮಾಡದಿದ್ದರೆ ನೋಡಿ! ಹಾಗೆ ವಾಗ್ತಾಡನದಿಂದ ಜರ್ಝರಿತಳಾದ ಆಕೆ ಮಕ್ಕಳನ್ನು ತಾಡನಾತ್ಮಕವಾಗಿ ದಂಡಿಸುವುದು ಶತಸ್ಸಿದ್ಧ.  ಇನ್ನು ಮಕ್ಕಳಿಗೆ  ಯಾರು ಸಿಕ್ಕಾರು?- ತಮ್ಮ ಕೋಪ ವರ್ಗಾವಣೆಗೆ! ಆಗ ಬೀದಿನಾಯಿಗಳಿಗೆ ಕಲ್ಲೇಟು ತಪ್ಪಿದ್ದಲ್ಲ! `ಜೀವೋ ಜೀವಸ್ಯ ಜೀವನಂ' ಎಂದಂತೆ, ಇಲ್ಲಿ `ಕೋಪೋ  ಕೋಪಸ್ಯ ಕಾರಣಂ'  ಅಂದ್ರೆ ತಪ್ಪಾಗಲಾರ‌ದಷ್ಟೇ.

    ಮನಃಶಾಸ್ತ್ರಜ್ಞರು  ಕೋಪವನ್ನು ಮನುಷ್ಯನಿಗವಶ್ಯವಿರಬೇಕಾದ  ಮನೋವಿಕಾರವೆಂದು ಪರಿಗಣಿಸುತ್ತಾರೆ.  ಅದು ಮನೋವಿಕಾರವೇಕೆಂದರೆ,  ಅದು ನಿಮ್ಮ ಸಹಜ ನಡೆಯಲ್ಲ.  (ಕೆಲವರಿಗಿದು ಅನ್ವಯಿಸದು, ಬಿಡಿ!) ನಮಗಿಷ್ಟವಾಗದ ಕೆಲ ಕ್ರಿಯೆಗಳಿಗೆ  ಪ್ರತಿಕ್ರಿಯಾತ್ಮಕವಾದ ನಡೆ ಅದು. ಪ್ರತಿಕ್ರಿಯೆ  ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆಯಾಗಿ, ಕೋಪಭಾವದ ತೀವ್ರತೆಯೂ ವ್ಯಕ್ತಿ ವ್ಯಕ್ತಿಶಃ  ವಿಭಿನ್ನವಾಗಿರುತ್ತದೆ.  ಒಂದೇ ಪರಿಸ್ಥಿತಿಗೆ, ಒಬ್ಬೊಬ್ಬರು  ಒಂದೊಂದು ರೀತಿ ಪ್ರತಿಕ್ರಿಯಿಸುವುದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.  ಕ್ರಿ`ಕೆಟ್ಟಾಟ'ದಲ್ಲಿ ಬಾಲು ತಗುಲಿ  ಟಿ.ವಿ. ಒಡೆಯಿತೆನ್ನಿ – ಮೊದಲಿಗೆ, ಅಪ್ಪ-ಅಮ್ಮಂದಿರ ಬೈಗುಳ/ಹೊಡೆತಗಳ ಭಯದಲ್ಲಿ `ನನ್ನಿಂದಲ್ಲ, ನಿನ್ನಿಂದಾದದ್ದು'  ಅಂತ ಬಯ್ದಾಡಿಕೊಳ್ಳೋ  ಮಕ್ಕಳ ಪರಿ – ತನ್ನ ಪ್ರೀತಿಯ ಧಾರಾವಾಹಿ  ಕನಿಷ್ಠ ಇನ್ನೊಂದು ವಾರ ಸಿಕ್ಕಲಾರದೆಂಬ, ಅಮ್ಮನ ಕೋಪದ ಪರಿ – ಮತ್ತೆ ಟಿ.ವಿ.ಗೆ  ದುಡ್ಡು ಹೊಂದಿಸಬೇಕಲ್ಲಾ ಅನ್ನುವ ಅಪ್ಪನ ಕೋಪದ ಪರಿ.  ಸಾಮಾನ್ಯತಃ ಎಲ್ಲರ ಮನೆಯಲ್ಲಿಯೂ ಇದೇ ತರಹವಾದರೂ, ಒಬ್ಬೊಬ್ಬರ  ಕೋಪದ ತೀವ್ರತೆ  ಒಂದೊಂದು ಮಾದರಿಯದ್ದಾಗಿರುತ್ತದೆ.  ಕೆಲವು ಮನೆಗಳಲ್ಲಿ ಅಮ್ಮನ ಕೋಪ ಜಾಸ್ತಿಯಿದ್ದರೆ, ಕೆಲವೆಡೆ ಅಪ್ಪನ ತಾಪ ಜಾಸ್ತಿಯಿರುತ್ತದೆ.  ಹೀಗೆ ಈ ಕೋಪಭಾವವು ವ್ಯಕ್ತಿಯಿಂದ  ವ್ಯಕ್ತಿಗೆ  ಭಿನ್ನವಾಗಿರುವುದರಿಂದಲೇ ಮನಃಶಾಸ್ತ್ರಜ್ಞರು ಇದನ್ನೊಂದು ಮನೋವಿಕಾರ ಎಂದಿರುವುದು.

    ಹಾಗಂತ ಕೋಪವನ್ನು ಸಂಪೂರ್ಣ ಬಿಡುವುದೂ ಸಲ್ಲ, ಹಿತಮಿತದಲ್ಲಿ ಅದು ಅವಶ್ಯವಾಗಿ ಬೇಕು.  ಕಾಡಿನಲ್ಲಿ ಪಯಣಿಸುವಾಗ, ಶ್ರೀರಾಮಕೃಷ್ಣರಿಗೆ ಒಂದು ಸರ್ಪ ಎದುರಾಯ್ತಂತೆ.  ನೊಂದಿದ್ದ ಅದು,  ರಾಮಕೃಷ್ಣರಲ್ಲಿ `ಸ್ವಾಮಿ, ಎಲ್ಲರೂ ನನ್ನನ್ನು, ದುರ್ಜನನೆಂದು ದೂರುತ್ತಾರೆ.  ನಾನು ಸಜ್ಜನನಾಗುವ ಪರಿಯೆಂತು?' ಎಂದು ಕೇಳುತ್ತದೆ.  ಅದಕ್ಕೆ ರಾಮಕೃಷ್ಣರೆಂದರು - `ಸರ್ಪವೇ,  ಎಲ್ಲರನ್ನೂ ಕಚ್ಚುವುದೇ ನಿನ್ನ ದುರ್ಗುಣ.  ಇದನ್ನು ಬಿಟ್ಟಲ್ಲಿ ನೀನು ಸಜ್ಜನನಾದೀಯೆ'.  ಹಾಗೆಯೇ ಆ ಸರ್ಪ ಕಚ್ಚುವುದನ್ನು ಬಿಟ್ಟಿತು. ನಿಧಾನವಾಗಿ, ಈ ಸರ್ಪ ಕಚ್ಚುವುದಿಲ್ಲವೆಂಬುದನ್ನು ಅರಿತ ಜನ ಮೋಜಿಗಾಗಿ  ಅದರತ್ತ ಕಲ್ಲು ತೂರಲಾರಂಭಿಸಿದರು. ಮತ್ತೆ ರಾಮಕೃಷ್ಣರು ಆ ಹಾದಿಯಲ್ಲಿ ವಾಪಸ್ ಬರುವಷ್ಟರಲ್ಲಿ ಈ ಸರ್ಪ ಕಲ್ಲೇಟುಗಳಿಂದ ಜರ್ಝರಿತವಾಗಿತ್ತು.  ಅದು ರಾಮಕೃಷ್ಣರಿಗೆ  ಕೇಳಿತು – `ಒಳ್ಳೆಯತನಕ್ಕಿದೇನಾ ಬೆಲೆ?’. ಆಗ ರಾಮಕೃಷ್ಣರೆಂದರು - `ಸರ್ಪವೇ, ನಿನಗೆ ನಾನು ಕಚ್ಚಬೇಡಾ ಅಂದೆ ನಿಜ, ಆದರೆ, ಕಲ್ಲೆಸೆಯುವ ಜನರಿಗೆ ಬುಸುಗುಟ್ಟಿ ಹೆದರಿಸಬೇಡಾ ಅಂದಿದ್ನೇ?’. ಹೀಗೆ ಸಾತ್ವಿಕ ಕೋಪ ಮನುಜನಿಗೆ ಅತ್ಯವಶ್ಯ‌. ಇಲ್ಲವಾದಲ್ಲಿ ನಮ್ಮ ಇರುವಿಕೆಗೇ ತೊಂದರೆ.
    
    ಸಾಮಾನ್ಯವಾಗಿ ಗಮನಿಸಿ, ಕೋಪಭಾವ ನಮ್ಮ ಅಸಹಾಯಕತೆಯ ಮತ್ತೊಂದು ಅಭಿವ್ಯಕ್ತಿ.  ನಾವು ವಾದದಲ್ಲಿ ಸೋಲುತ್ತಿದ್ದೇವೆಂಬುದು  ಖಚಿತವಾಗುತ್ತಿದ್ದಂತೆಯೇ, ನಮಗೆ ತಿಳಿಯದಂತೆಯೇ (?) ನಮಗೆ ಕೋಪ ಆವರಿಸಿ ವಿತಂಡವಾದಕ್ಕಿಳಿಯುತ್ತೇವೆ.  ಹಿಂದಿನ ಕಾಲದಲ್ಲಿ ಗಂಡ ಹೆಂಡತಿಯ ಮೇಲೆ ಕೈಮಾಡುತ್ತಿದ್ದುದಕ್ಕೂ  (ಹಾಗೂ ಈಗ ಹೆಂಡತಿ ಗಂಡನ ಮೇಲೆ ಕೈ ಮಾಡುವುದಕ್ಕೂ!) ಕಾರಣ, ವಾಗ್ವಾದದಲ್ಲಿ ಸರಿಯಾದ law point ಗಳನ್ನು ಹಾಕಿ ಗೆಲ್ಲಲಾಗದ ಅಸಹಾಯಕತೆಯೇ! `ಯೇನಕೇನ ಪ್ರಕಾರೇಣ’ ಇತರರು ನಮ್ಮ ಮಾತು ಕೇಳಬೇಕೆಂಬ ನಮ್ಮೊಳಗಿನ  ಅಹಂಭಾವ ಮನುಷ್ಯನನ್ನು ಈ ಥರ ಆಡಿಸುತ್ತದೆಯಂತೆ. `ಸಾಮ ಭೇದ ದಾನ’ ಗಳ ನಂತರ `ದಂಡ’ಕ್ಕಿಳಿಯುತ್ತೆ ಈ Ego. ಈ ಕೈ-ದೌರ್ಜನ್ಯದ ಮುನ್ನಾ ಆಗುವ ಬಾಯ್-ದೌರ್ಜನ್ಯವೇ `ಕೋಪಭಾವ’.

    ಹಾಗಂತ ನೀವು ಕೋಪ ಅನರ್ಥಕಾರಿ ಅಂತ ಭಾವಿಸುವುದೂ  ತಪ್ಪೇ.  ಕೋಪದ ಅನೇಕ ಪ್ರಕಾರಗಳಲ್ಲಿ ಹುಸಿಗೋಪ ಯಾ ಹುಸಿಮುನಿಸೂ ಒಂದು.  ಎಲ್ಲೆಡೆ ಇದ್ದರೂ ಇದು, ನವವಿವಾಹಿತರಲ್ಲಿ ಜಾಸ್ತಿ.  (ಕ್ಷಮಿಸಿ, ನಾನು ನನ್ನ ಗತಕಾಲದ ಬಗ್ಗೆ ಹೇಳ್ತಿರೋದು.  ಈಗಿನ ಕಾಲಕ್ಕಿದು ಅನ್ವಯಿಸೋದಿಲ್ಲ. ಸಣ್ಣ ಕೋಪವೂ  ವಿಚ್ಛೇದನದಲ್ಲಿ  ಕೊನೆಗೊಳ್ಳೋ ಕಾಲ ಇದು!) ಆ ಕಾಲ, ವಧೂ ವರರು ಪರಸ್ಪರ ನಾಚುತ್ತಿದ್ದ ಕಾಲ! ಬಾಯ್ಬಿಟ್ಟು ಹೇಳಿದರೂ ಅರ್ಥವಾಗದ ಈ ಗಂಡಸರಿರುವಾಗ‌, ಆ ನವ-ವಿವಾಹಿತೆ ತನ್ನ ಗೂಢ-ಇಂಗಿತಗಳನ್ನು ಮುಂದಿಟ್ಟರೆ, ಆತನ ಗತಿಯಾದರೂ ಏನು? ಮೊದಲೇ ಏನು ಮಾಡಿದರೆ, ಏನಾದೀತೋ ಅನ್ನುವ  confusion ನಲ್ಲಿ ಮುಳುಗಿ, ಏಳಲು ಪರದಾಡುವಾತ, ತನ್ನ ಚಕೋರಿಯ ಕೋರಿಕೆಯಲ್ಲಿ ಎಲ್ಲಿ ಚ್ಯುತಿಯಾದೀತೋ ಅಂತ ಅಲವತ್ತುಕೊಳ್ಳುವವನೇ. ಅವನ ಈ ಸ್ಥಿತಿ ನೋಡಿ ಆಕೆ ಒಳಗೊಳಗೇ ಖುಷಿಪಟ್ಟರೂ, ಹೊರಗೆ ಮಾತ್ರ ಹುಸಿಮುನಿಸು  ತೋರುತ್ತಾಳೆ.  ಆ  ತಾಪಕ್ಕೇ ಆಫು ಈ ಭೂಪ! ಅದು ತೋರುಗೋಪ-ತೋರಿಕೆಗಷ್ಟೇ ಕೋಪ.  ಅದು ಎಂದೂ ಎದುರಿರುವವ‌ನನ್ನು ಸುಡದು.  ರಸಿಕ ಶಿಖಾಮಣಿಗಳಿಗಷ್ಟೇ ಅರ್ಥವಾಗುವ ಈ ಹುಸಿಮುನಿಸು ಭಾಷೆ - `ಬೇಡ’ ವೆಂದುಲಿದರೂ `ಬೇಕು’ ಎಂಬರ್ಥ ಹೊಮ್ಮುವ ಪ್ರಕ್ರಿಯೆ! - ಭಾಷಾ ವಿಜ್ಞಾನಿಗಳಿಗೆ ಕಬ್ಬಿಣದ ಕಡಲೆಯೇ.

    ತಾಯಿ ಮಕ್ಕಳಲ್ಲೂ  ಈ ಹುಸಿಗೋಪ ಇದ್ದದ್ದೇ. `ಲಾಲಯೇತ್ ಪಂಚವರ್ಷಾಣಿ’ ಎಂದಂತೆ, ಇದು ಸಣ್ಣ ಮಕ್ಕಳಿಗಷ್ಟೇ  ಲಾಗೂ ಆಗುವುದು. ಕಾಲ-ಕ್ಷೇತ್ರ ಭೇದವೆಣಿಸದೇ ಉಚ್ಚೆ ಹೊಯ್ಯುವ ಶಿಶುಗಳಿಗೆ ಬಯ್ಯುವವರುಂಟೇ? ಆದರೆ, ಸಾಮಾನ್ಯತಃ ಹೊಸ ಬಟ್ಟೆಯುಟ್ಟು ಬಂದ ಅತಿಥಿಗಳ ಮೇಲೇ, ಈ ಶಿಶುಗಳು ಮೂತ್ರವಿಸರ್ಜನೆಗೆ ಸ್ಥಳದಾಯ್ಕೆ ಮಾಡಿಕೊಳ್ಳುವುದರ ಹಿಂದೆ ಅದಾವ ಕಾರಣವಿದೆಯೋ ಆ ಭಗವಂತನೇ ಬಲ್ಲ! ನಾವೆಷ್ಟೇ ಕಾಕತಾಳೀಯ ಎಂದರೂ ಅತಿಥಿಗಳು ಹಾಗಂದುಕೊಳ್ಳಲಾರರು! ಆಗವರು, ತಮ್ಮೆಲ್ಲ ತುಮುಲ‌ಗಳನ್ನ ಒಳಕ್ಕದುಮಿ, `ಹುಸಿಗೋಪ’ (?) ಪ್ರದರ್ಶಿಸಿ, ಮಗುವಿಗೆ `ಬಯ್ಯು’ವುದುಂಟು.  ತಂದೆ ತಾಯ್ಗಳೂ ಸಣ್ಣಮಕ್ಕಳು ಎದೆಗೊದ್ದಾಗ ಹುಸಿಮುನಿಸಿನ ಪ್ರದರ್ಶನ ಮಾಡುತ್ತಾರೆ.  ಮಕ್ಕಳ ಈ ಕೃತ್ಯದಿಂದ  ಕೋಪ ಬಂದರೆ ತಾನೇ? ಸಣ್ಣ  ಮಕ್ಕಳ ಎಣಿಕೆಯ ವರ್ತುಲದಿಂದಾಚೆ ಬಂದ ಮಕ್ಕಳು ಈ ಧೈರ್ಯ‌ ತೋರಬಾರದು - ಪರಿಣಾಮ ಕಠಿಣವಾಗಿರಬಹುದು!! ಈ ತೋರುಗೋಪಕ್ಕೆಂದೇ ಬಂದ ಗಾದೆ - `ಸಣ್ಣ ಮಕ್ಕಳು ಒದೀತಾವಂತ, ಕಾಲು ಕತ್ತರಿಸಲಿಕ್ಕಾಯ್ತದಾ?’.

    ಕೋಪ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಅಂತ ಹೇಳಿದೆನಷ್ಟೇ. ಈ ತೋರುಗೋಪವೂ  ಹಾಗೆಯೇ! ಈ ತೋರುಗೋಪ ನವ-ವಿವಾಹಿತರಲ್ಲಷ್ಟೇ ಕಾಣಸಿಗುವುದು.  ಮದುವೆಯಾಗಿ 5-6 ವರ್ಷಗಳ  ನಂತರ, ಗಂಡ-ಹೆಂಡತಿಯರಿಗೆ  ಈ ಬಗ್ಗೆ  ಕೇಳಿದರೆ, ಒಂದು ದೊಡ್ಡ ನಿಟ್ಟುಸಿರೇ ನಿಮ್ಮ ಪ್ರಶ್ನೆಗೆ ಉತ್ತರವಾದೀತು. `ಅತಿ ಪರಿಚಯಾದವಜ್ಞಾ’ ಅನ್ನುವ ಸಂಸ್ಕೃತ  ಸೂಕ್ತಿಗನುಗುಣವಾಗಿ, ದಂಪತಿಗಳಲ್ಲಿ ತೋರುಗೋಪ ಕ್ರಮೇಣ ನಿಜಗೋಪವಾಗಿ  ಮಾರ್ಪಾಡಾಗುತ್ತದೆ! `ಗಂಡ ಹೆಂಡಿರ ಜಗಳ  ಉಂಡು ಮಲಗುವ ತನಕ’.  ಇದು ನವ-ವಿವಾಹಿತರಲ್ಲಿ ಪೂರ್ಣಶಃ ಸರಿಹೊಂದಿದರೆ, ಹಳೆ-ವಿವಾಹಿತರಲ್ಲಿ ಭಾಗಶಃ ಸತ್ಯ – ಅಂದರೆ, ಈ ಗಾದೆಯಲ್ಲಿ ಯಾವತ್ತಿನ ಊಟ  ಅಂತ ಹೇಳಿಲ್ಲ ಅಷ್ಟೇ!!.  
ಗಂಡ ಹೆಂಡಿರ ಜಗಳ ಜೋರು ಮಾತಿನ ಜಗಳವೇ ಆಗಬೇಕಂತಿಲ್ಲ. ತೋರಿಕೆಯನ್ನು ದೂರವಿಟ್ಟು, ತಮಗನಿಸಿದಂತೆ ಜೀವಿಸುವ ಸಾಮಾನ್ಯರಲ್ಲಿ, ಜೋರು ಮಾತಿರಲಿ, ಗಂಡ ಹೆಂಡಿರ  ಜಗಳದಲ್ಲಿ ಕೈ-ಕೈ ಮಿಲಾವಣೆಗೂ ಕೊರತೆಯಿರದು.  ಇಲ್ಲಿ ಜೋರು ಮಾತಾಡದಾತ ಜೋರೂ ಕಾ ಗುಲಾಂ  ಅನ್ನಿಸಿಕೊಳ್ಳುತ್ತಾನೆ.  ಇತರ ತಥಾಕಥಿತ ಸುಸಂಸ್ಕೃತರಲ್ಲಿ ಗಂಡ-ಹೆಂಡಿರ ಜಗಳದ  ಸಪ್ಪಳ ಹಪ್ಪಳದಷ್ಟು. ಮೌನದಲ್ಲಿ ಇಷ್ಟೆಲ್ಲಾ ಅರ್ಥಗಳಿವೆಯಾ ಅಂತ ಹುಲುಮಾನವನಿಗೆ  ಅರಿವಾಗುವುದೇ ಇಂಥ ಸಂದರ್ಭಗಳಲ್ಲಿ ! ಇಲ್ಲಿ ಕೋಪದ ಅನಾವರಣ ಮಾತಿನಲ್ಲಲ್ಲ – ಆಂಗಿಕ  ಇಂಗಿತಗಳಲ್ಲಿ. ಹೆಂಡತಿಯ ಕೋಪದ ತೀವ್ರತೆಯನ್ನು ಆಕೆ ಮಾಡುವ  ಪಾತ್ರೆಯ ಕುಕ್ಕುವಿಕೆಯ ಶಬ್ದ‌ದ ಆಧಾರದಲ್ಲಿ  ಅಳೆಯಬಹುದು. ಕೆಲವೊಮ್ಮೆ ಗಂಡ, ಈ ಶಬ್ದ‌ ತನ್ನ  ಮೇಲೇನೂ  ಪರಿಣಾಮ ಬೀರದೆಂದು ತೋರಿಸಲೋಸುಗ, ತಾನು ನೋಡುತ್ತಿರುವ ಟಿ.ವಿ.ಯ  ಶಬ್ದ‌ವನ್ನು ಜಾಸ್ತಿ ಮಾಡುತ್ತಾನಾದರೂ, ಈ ಶಬ್ದ‌ದೇರಿಕೆಯ ಜಗಳದಲ್ಲಿ  ಆತ ಅಂತಿಮವಾಗಿ  ಸೋಲೊಪ್ಪುತ್ತಾನೆ.  ಏಕೆಂದರೆ ಟಿ.ವಿ.ಯ ಶಬ್ದ‌ ಗರಿಷ್ಠ ಮಟ್ಟ ತಾಕಿರುತ್ತದೆ ಮತ್ತು ಮುಖ್ಯವಾಗಿ ಇನ್ನೂ ಹೆಚ್ಚಿನ ಕುಕ್ಕುವಿಕೆಯಿಂದ ಆರ್ಥಿಕ ನಷ್ಟ ಆತನಿಗೇ ಎಂಬ ಜ್ಞಾನೋದ‌ಯವಾಗಿರುತ್ತದೆ!

    ಒಮ್ಮೆ ಒಂದು ಮನೆಯಿಂದ ಗಂಡ-ಹೆಂಡಿರ  ಜೋರು ನಗೆಯ ಶಬ್ದ‌ವನ್ನು ಕೇಳಿದ ಗುಂಡ, ಮರುದಿನ ಗಂಡ‌ನನ್ನು ಪ್ರಶ್ನಿಸಿದ - `ತಮ್ಮದು  ಅನುರೂಪ ದಾಂಪತ್ಯ ಬಿಡಿ.  ಗಂಡ-ಹೆಂಡಿರಿಬ್ಬರೂ ಸುಖವಾಗಿ  ನಗೆಯಾಡಿಕೊಂಡಿದ್ದೀರಿ.’ ಅದಕ್ಕವನೆಂದ `ಅಯ್ಯೋ, ಅನುರೂಪ ದಾಂಪತ್ಯ ಮುಂಡಾಮೋಚ್ತು! ನಮ್ಮ ಜಗಳದಲ್ಲಿ, ನನ್ನ ಹೆಂಡತಿ ಸಿಟ್ಟಿನಿಂದ  ನನ್ನತ್ತ ಪಾತ್ರೆ ಎಸೆಯುತ್ತಾಳೆ. ಗುರಿ ತಾಕಿದರೆ, ಅವಳು ನಗುತ್ತಾಳೆ. ಗುರಿ ಮಿಸ್ಸಾದ್ರೆ  ನಾನು ನಗುತ್ತೇನೆ ಅಷ್ಟೇ!’  ಏನೇ ಹೇಳಿ, ಎಲ್ಲರ ಮನೆ ದೋಸೇನೂ ತೂತೇ.  ಇದೇ ಕೋಪದ ಮಹಾತ್ಮೆ.

    ಕೆಲವರಿಗೆ ಕೋಪ ಎನ್ನುವುದು ತಮ್ಮ ಪಾರಮ್ಯ ಅಭಿವ್ಯಕ್ತಿಸುವ ಶಂಖದೂದು. ತಾವಷ್ಟೇ ಸರಿ, ಉಳಿದವರೆಲ್ಲರೂ ಅಜ್ಞರು ಅನ್ನುವ ಮನೋವಿಕಾರದಿಂದ ಕೆಲವರು ಯಾವಾಗಲೂ ಕೋಪದ ತಾಪಾಸ್ತ್ರವನ್ನು ಎಲ್ಲರ ಮೇಲೆ ಪ್ರಯೋಗಿಸುತ್ತಲೇ ಇರುತ್ತಾರೆ.   ಇದರಿಂದ ಎಲ್ಲರೂ ತಮ್ಮನ್ನು great   ಅಂತ ಅಂದ್ಕೋತಾರೆ ಅಂತ ಅವರ ಅಂಬೋಣ. ಆದರೆ ಜನ ಅಂಥವರನ್ನು  ದೂರ ಸರಿಸುತ್ತಾರೆಂಬ  ಕನಿಷ್ಠ ಜ್ಞಾನ ಅವರಲ್ಲಿರುವುದಿಲ್ಲ.  ಕೋಪದ ಮಹಿಮೆಯೇ ಅಂಥದ್ದು! ಕೋಪ ಮನುಷ್ಯ‌ನನ್ನು  ಸಂಪೂರ್ಣ ಒಂಟಿಯನ್ನಾಗಿಸುತ್ತದೆ.

    ಇಂಥದ್ದೇ ಒಂದು ಮಹಿಳಾ ಮಣಿಯನ್ನು ನೋಡಿದ್ದೇನೆ.  ಆಕೆ ತನ್ನ ಮಕ್ಕಳಿಗೆ ಬಯ್ಯುವುದನ್ನು ನೋಡಿ, ಮೊದಮೊದಲು ನನಗೆ, ಆಕೆ ಹೇಳುತ್ತಿರುವುದು  ಮಕ್ಕಳಿಗೋ ಅಥವಾ ನಮ್ಮ  ಶತ್ರು ಪಾಕೀಸ್ತಾನೀ ಸೈನಿಕರಿಗೋ, ಅಂತ ಅನುಮಾನವಾಯ್ತು! ಆಗ, ನನ್ನ ವಾಕ್-ಭಂಡಾರದ  ದಾರಿದ್ರ್ಯ  ಕಂಡು ನನಗೆ ಕಸಿವಿಸಿಯಾಯ್ತು! ಇಂಥ ಆಕೆ, ಮಗದೊಮ್ಮೆ ಅಂಗಡಿಯಲ್ಲಿ ವೃಥಾ ಗಲಾಟೆ ಮಾಡಲೆತ್ನಿಸಿದ  ಗಿರಾಕಿಯ ಜೊತೆ ವಾಗ್ವಾದಕ್ಕಿಳಿದಾಗ ತಿಳಿಯಿತು – ಆಕೆ ಅಂದು ತನ್ನ ಮಕ್ಕಳೊಂದಿಗೆ ಮಾತನಾಡಿದ್ದು `ಸುಸಂಸ್ಕೃತ’ವಾಗಿಯೇ ಇತ್ತೆಂಬುದು! ಭಂಡಗಂಡ ಯಾ ಭಂಡ ಗಂಡಸರನ್ನು  ಹದ್ದುಬಸ್ತಿನಲ್ಲಿಡಲು  ಈ ಪಾಟಿ ಕೋಪದ ನಾಲಿಗೆ ಅತ್ಯವಶ್ಯ ಅಂತ ನಾನಂದು ಮನಗಂಡೆ.

    ನಾವು ಕೆಲವೊಮ್ಮೆ ನಮ್ಮ ಕೋಪವನ್ನು ಕಾರಣಾಂತರಗಳಿಂದ ಬೇರೊಬ್ಬರಿಗೆ ವರ್ಗಾಯಿಸುತ್ತೇವೆ - `ಅತ್ತೆಯ ಮೇಲಿನ ಕೋಪ, ಕೊತ್ತಿಯ ಮೇಲೆ’  ಅಂತ. ಅತ್ತೆ-ಮಾವಂದಿರು ಜೊತೆಯಲ್ಲಿರುವ ಮನೆಗಳಲ್ಲಿ ಗಮನಿಸಿ, ಸೊಸೆಯಂದಿರು, ಮಕ್ಕಳ ಮೇಲೆ ವಿನಾಕಾರಣ ರೇಗಾಡುತ್ತಿರುತ್ತಾರೆ.  ಗಂಡನ ಪಾಡಂತೂ ಬಿಡಿ, ಮೂರಾಬಟ್ಟೆ. ತನ್ಮೂಲಕ ಪ್ರಕಾರಾಂತವಾಗಿ, ನಿಮ್ಮ ಇರುವಿಕೆ ತನಗೆ ಇಷ್ಟವಿಲ್ಲ ಎನ್ನುವ ಇಂಗಿತವನ್ನು ತನ್ನ ಅತ್ತೆ-ಮಾವಂದಿರಿಗೆ  ಆಕೆ ದಾಟಿಸುತ್ತಿರುತ್ತಾಳೆ! ಇದನ್ನು ನೋಡಲಾಗದೇ ಗಂಡನೆನ್ನುವ ಪ್ರಾಣಿ, ತನ್ನ ತಂದೆ ತಾಯಿಯ `ಶಾಂತಿ-ನೆಮ್ಮದಿ’ಗಾಗಿ ಬೇರೆ ಮನೆ ಮಾಡುವುದಿದೆ! ಹೀಗೆ, ಕೋಪದ ಗುರಿ ನೆಟ್ಟ ನೋಟದಂತೆ ನೇರವಾಗಿರಬೇಕೆಂದೇನೂ ಇಲ್ಲ. ವಕ್ರವಾದರೂ ಗುರಿಸಾಧ‌ನೆಯೇ ಕೋಪದ ಮೂಲ ಮಂತ್ರ.

    ಸುಸಂಸ್ಕೃತರ‌ಲ್ಲಿ ಕೋಪದ ನಂತರದ ಭಾವವೇ ಪಶ್ಚಾತ್ತಾಪ.  ಹೌದು, ಅಸಂಸ್ಕೃತರಲ್ಲಿ  ನೀವು ಪಶ್ಚಾತ್ತಾಪ ಭಾವವನ್ನು ಕಾಣಲಾರಿರಿ.  ಅದನ್ನು ನೀವು ಅಪೇಕ್ಷಿಸಿದ್ದೇ ಆದಲ್ಲಿ, ನಿಮ್ಮಷ್ಟು ಮೂರ್ಖರು ಈ ಜಗದಲ್ಲೇ ಸಿಗರು! ಕೋಪದ ಅಮಲಿನಲ್ಲಿ ತಾವಾಡಿದ ಮಾತು, ಕೃತಿಗಳಿಂದ ಎಷ್ಟು ಆಭಾಸವಾಗಿರುತ್ತೆ, ಯಾ ಎದುರಿರುವವರಿಗೆ ಎಷ್ಟು ಹಾನಿ ಉಂಟು  ಮಾಡಿರುತ್ತದೆ ಎನ್ನುವ ಅರಿವು ನಮಗೆ ಉಂಟಾದಾಗ‌ ಮೂಡುವ ಅಪರಾಧೀ ಭಾವವೇ ಪಶ್ಚಾತ್ತಾಪ. `ಮಾತು ಆಡಿದರೆ ಆಯ್ತು, ಮುತ್ತು ಒಡೆದರೆ ಹೋಯ್ತು’ ಅನ್ನುವಂತೆ, ಕೋಪದಲ್ಲಿ ಆಡಿದ ಮಾತನ್ನು ಹಿಂತೆಗೆದುಕೊಳ್ಳಲಾಗದೇ `ತುಂಬಲಾರದ ನಷ್ಟ’ವನ್ನು  ಮಾಡಿಬಿಟ್ಟಿರುತ್ತೇವೆ.  ಬಿಟ್ಟ ಬಾಣ,  ಆಡಿದ ಮಾತು ಎರಡೂ ವಾಪಸ್ಸಾಗದು ಅನ್ನುವುದೇ ಕೋಪದ ಕರಾಳತೆ.

    ಹೀಗೆ ಕೋಪವು ಉಂಟು ಮಾಡುವ ಅನಾಹುತಗಳು  ಗೊತ್ತಿರುವ ಕೆಲ ಜಾಣರು, ಪಂದ್ಯ ಗೆಲ್ಲಲು, `ಕೋಪ’ವನ್ನೇ ಪಣಕ್ಕಿಡುತ್ತಾರೆ – ತಾವು ಕೋಪಿಸಿಕೊಂಡಲ್ಲ, ಬದಲಿಗೆ ನಿಮ್ಮನ್ನು ಕೋಪದ ಕೂಪಕ್ಕೆ ನೂಕಿ! ತಾವು ನಿಯಂತ್ರಣದಲ್ಲಿದ್ದು, ನಿಮಗೆ ಸಿಟ್ಟೇರಿಸಿ ಕೋಪಗೊಳ್ಳುವಂತೆ ಮಾಡುತ್ತಾರೆ.  ನೀವು ಕೋಪಕ್ಕೆ ಬುದ್ಧಿಯನ್ನು ಕೊಟ್ಟಿರೋ ನಿಮ್ಮ ಕಥೆ ಮುಗಿಯಿತು.  ಅವರಂದುಕೊಂಡಂತೇ  ಆಗುತ್ತದೆ! ಇದಕ್ಕೇ ಹೇಳುವುದು – ಕಾಲ್ಕೆರೆದು ಜಗಳಕ್ಕೆ ಬರೋದು ಅಂತ.  ನಿಮ್ಮ ಕೋಪದಿಂದ  ಅವರು ತಮ್ಮ ಕಾರ್ಯ ಸಾಧ‌ನೆ ಮಾಡಿಕೊಳ್ಳುತ್ತಾರೆ.  ಈ ಹಿಂದೆ, ಆಸ್ಟ್ರೇಲಿಯಾದ ಕ್ರಿಕೆಟಿಗರು ಈ ತಂತ್ರವನ್ನು ಸಮರ್ಥವಾಗಿ ಬಳಸುತ್ತಿದ್ದರು.  ಇಂಥವರಿಗೆ  ಎದುರಿರುವವನಿಗೆ ಎಷ್ಟು ಕೋಪ ಬಂದಿದೆ ಅಂತ ತಿಳಿಯುವ ಕಲೆ ಅಂತರ್ಗತವಾಗಿರುತ್ತದೆ.  ಎಲ್ಲರಿಗೂ ಬಾರದು ಈ ಕಲೆ! ಪರಿಸ್ಥಿತಿ  ವಿ`ಕೋಪ’ಕ್ಕೆ ತಿರುಗದಂತೆ manage ಮಾಡುತ್ತಾರೆ ಈ ಕೋಪಿಷ್ಠರು!

    ಮಡದಿಯ ಕೋಪವನ್ನರಿಯುವ ಕಲೆ ಬಡಪಾಯಿ ಗಂಡಂದಿರೆಲ್ಲರಿಗೂ ಜನ್ಮತಃ ಬಂದಿರುತ್ತದೆ.  ಇಂಥ ಗಂಡಂದಿರನ್ನು ಇಂತೆ ವಿಂಗಡಿಸಬಹುದು - ಹೆಂಡತಿಯ  ಕೋಪವನ್ನು ಬಿರುನೋಟದಲ್ಲಿಯೇ ಗುರ್ತಿಸುವವನು ಉತ್ತಮನು.  ಆಕೆಯ ಕೋಪವನ್ನು ನುಡಿ-ನಡೆಗಳಿಂದ ಗುರ್ತಿಸುವವನು ಮಧ್ಯ‌ಮನು. ನೋಟ-ನುಡಿ-ನಡೆಗಳಲ್ಲಿಯೂ ಹೆಂಡತಿಯ ಕೋಪವನ್ನು ಅರಿಯದಾತ ಅಧ‌ಮನು, ಮರ್ಮಜ್ಞ! ಇಂಥ ಅಧ‌ಮನ  ಗತಿ ಅಧೋಗ‌ತಿಯಾಗಲಾರದೆಂದು ವಿವಾಹಿತರಾರಾದರೂ ಎದೆ ತಟ್ಟಿ ಹೇಳಲಿ ನೋಡೋಣ!

    ಒಟ್ಟಿನಲ್ಲಿ, ಸಿಟ್ಟು, ಸೆಡವು, ಮುನಿಸು ಇತ್ಯಾದಿ ಬಿರುದಾಂಕಿತವಾದ ಕೋಪ, ನಮ್ಮ ಅರಿವಿಗೇ  ಬಾರದಂತೆ ಬರುವ ತಾಪಭಾವ – ಆದರೆ ಮಾಡುವ ನಷ್ಟ-ಕೊಡುವ ಕಷ್ಟ ಅಷ್ಟಿಷ್ಟಲ್ಲ.

    ಒಮ್ಮೆ ತಿಮ್ಮ, ಸ್ವಾಮಿಯೊಬ್ಬರನ್ನು ಕೇಳಿದನಂತೆ `ಸ್ವಾಮಿ, ನಿಮಗೆ ಕೋಪವೇ ಬರೋದಿಲ್ವೇ?’. ಸ್ವಾಮಿ ನಗುತ್ತ ಹೇಳಿದರು - `ಇಲ್ಲಪ್ಪಾ, ಕೋಪವನ್ನು ಕಾಶಿಯಲ್ಲಿ ಬಿಟ್ಟು ಬಂದಿದ್ದೀನಿ, ನನಗೆ ಕೋಪಾನೇ ಬರೋಲ್ಲ.’ 10 ನಿಮಿಷದ ನಂತರ ತಿಮ್ಮ ಕುತೂಹಲದಿಂದ ಪ್ರಶ್ನಿಸಿದ `ಸ್ವಾಮೀ, ನಿಜವಾಗ್ಯೂ  ನಿಮಗೆ ಕೋಪ ಬರೋದಿಲ್ವೇ?’. ಸ್ವಾಮಿ ನಿರುಮ್ಮಳರಾಗಿ ಇಲ್ಲವೆಂದುತ್ತರಿಸಿದರು. ಇದೇ ಪ್ರಶ್ನೆಮಾಲಿಕೆ ತಿಮ್ಮನ ಕುತೂಹಲಕ್ಕಾಗಿ ಹತ್ತಾವರ್ತಿಯಾದಾಗ, ಸ್ವಾಮೀಜಿಯ ಮಂದಹಾಸ ಮಂದವಾಯ್ತು.  ಆದರೆ, ತಿಮ್ಮನ ಕುತೂಹಲ ತಣಿಯಲಾರದ್ದು.  ಅವನಿಗೆ ತನ್ನ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯುವ ತನಕ – ದೈವ ಸಾಕ್ಷಾತ್ಕಾರವಾದರೂ ಸೈ – ವಿರಮಿಸಲಾರ! ಅಷ್ಟ ಶತೋತ್ತರ ನಾಮಾವಳಿ ಮುಗಿಸಿ ಎದ್ದ  ಸ್ವಾಮಿಗೆ, ಮತ್ತೆ ತಿಮ್ಮ ಅದೇ ಪ್ರಶ್ನೆಯನ್ನು 108ನೇ ಬಾರಿ ಹಾಕಿದಾಗ, ಕೆಂಡಾಮಂಡಲವಾಗೆಂದರು ಸ್ವಾಮಿ - `ಅಯ್ಯೋ ಅನಿಷ್ಟ ಮುಂಡೇದೇ, ಎಷ್ಟು ಸರ್ತಿ ಬೊಗಳಲಿ ನಿನಗೆ, ನನಗೆ ಕೋಪ ಬರಲ್ಲಾಂತ, ಕತ್ತೆ ಭಡವಾ!”

    ಕೋಪ ಅಂದ್ರೆ ಇದು, ಏನಂತೀರಾ?

---------