ಕೋಮು ಹಿಂಸೆಗೆ ರಾಜಕೀಯ ಪ್ರಚೋದನೆ ನಿಲ್ಲಲಿ

ಕೋಮು ಹಿಂಸೆಗೆ ರಾಜಕೀಯ ಪ್ರಚೋದನೆ ನಿಲ್ಲಲಿ

ಸಾಮಾಜಿಕ ಶಾಂತಿಗೆ ಬಹುದೊಡ್ಡ ಬೆದರಿಕೆ ಹಾಗೂ ಕಳಂಕವಾಗಿರುವ ಕೋಮು ಹಿಂಸಾಚಾರ ಎಲ್ಲಿಯೂ ಘಟಿಸಬಾರದು, ದುರದೃಷ್ಟವೆಂದರೆ, ದೇಶದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮರುಕಳಿಸುತ್ತ ನಾಗರಿಕ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ ಮಾಡುತ್ತಿರುವುದು ಆಘಾತಕಾರಿ. ವಕ್ಫ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ಈಗ ಕೋಮು ಸಂಘರ್ಷದ ಜ್ವಾಲೆಗೆ ಸಿಲುಕಿರುವುದು ಘೋರ ವಿದ್ಯಮಾನ ತಿದ್ದುಪಡಿಯ ಅಂಶಗಳ ವಿರುದ್ಧದ ಒಂದು ಸಾಮಾನ್ಯ ಪ್ರತಿಭಟನೆಯ ಆಕ್ರೋಶವು ಇದ್ದಕ್ಕಿದ್ದಂತೆ ಕೋಮು ದ್ವೇಷಕ್ಕೆ ತಿರುಗಿ, ಹಿಂಸಾಸ್ವರೂಪ ತಳೆದಿದ್ದರಿಂದಾಗಿ ನೂರಾರು ಹಿಂದೂ ಕುಟುಂಬಗಳು ಮನೆಗಳನ್ನು ತೊರೆದಿರುವ ದೃಶ್ಯಗಳು ೯೦ರ ಘಟ್ಟದ ಕಾಶ್ಮೀರ ಕಣಿವೆಯ ರೌದ್ರಾವಸ್ಥೆಯನ್ನೇ ನೆನಪಿಸುತ್ತಿವೆ. ಮೂರು ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ, ನೂರಾರು ಮಂದಿ ಸ್ಥಳಾಂತರ ಮಾತ್ರವೇ ಉದ್ವಿಘ್ನತೆಯ ಕಥೆ ಹೇಳುತ್ತಿಲ್ಲ. ಗಲಭೆಯ ನೆಲದಲ್ಲಿ ಸೃಷ್ಟಿಯಾಗಿರುವ ಬೂದಿ ಮುಚ್ಚಿದ ಕೆಂಡದ ಸ್ಥಿತಿಯು 'ನಾಳೆಯ ದಿನ ಇಲ್ಲಿ ಬಾಳುವುದು ಹೇಗೆ?' ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಪಶ್ಚಿಮ ಬಂಗಾಳ ಕ್ಷಿಪ್ರ ಪ್ರತಿಕ್ರಿಯೆಗೆ ತವರಾಗಿತ್ತು. ಅದೊಂದು ರೀತಿಯಲ್ಲಿ ಆರೋಗ್ಯಕರ ಆಕ್ರೋಶ. ನಂತರ ಕೃಷಿ, ಕಾರ್ಮಿಕ ಚಳವಳಿ ಹೆಸರಿನಲ್ಲಿ ಹಿಂಸಾ ಚಳುವಳಿಗೂ ವೇದಿಕೆ ಆಯಿತು. ಆದರೆ, ಕಳೆದ ಕೆಲವು ದಶಕಗಳಿಂದ ರಾಜಕೀಯ, ಕೋಮು ವಿಚಾರಗಳಿಗೆ ಟ್ಯಾಗೋರರ 'ಸಾಮರಸ್ಯದ ನೆಲ' ಪ್ರತಿಕ್ರಿಯಿ ಸುತ್ತಿರುವ ರೀತಿ ಗಮನಿಸಿದಾಗ ಅಲ್ಲಿನ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದು ಬಹಳ ಸ್ಪಷ್ಟವಿದೆ. ರಾಜ್ಯ ಸರಕಾರದ ಮೈಮರೆವೂ ಪದೇಪದೆ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ.

ಮುರ್ಷಿದಾಬಾದ್‌ನಲ್ಲಿ ಪ್ರತಿಭಟನಾಕಾರರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವುದು ಖಂಡನಾರ್ಹ, ವಕ್ಫ್ ತಿದ್ದುಪಡಿ ವಿರೋಧಿಗಳು ಪೊಲೀಸ್ ವ್ಯಾನ್‌ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸ್ ಬೂತ್ ಗಳನ್ನೂ ಸುಟ್ಟಿರುವುದು ಅಕ್ಷಮ್ಯ. ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆಸಿದ ಕಲ್ಲುತೂರಾಟದ ಹಿಂದಿರುವ ಕೈಗಳಾವುವು? ಇದು ರಾಜಕೀಯಪ್ರೇರಿತವೇ? ಇವು ಸದ್ಯ ಎದ್ದಿರುವ ಪ್ರಶ್ನೆಗಳು.

ವಕ್ಫ್ ತಿದ್ದುಪಡಿ ನೀತಿ ಬಗ್ಗೆ ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. "ಯಾರ ಭೂಮಿಯನ್ನೂ ನಾವು ಕಸಿದುಕೊಳ್ಳುವುದಿಲ್ಲ. ಇದರಿಂದ ಬಡ ಮುಸ್ಲಿಮರಿಗೆ ಒಳಿತಾಗಲಿದೆ,'' ಎಂಬ ಭರವಸೆಯನ್ನೂ ನೀಡಿದೆ. ಪ್ರತಿಭಟನಾಕಾರರಲ್ಲಿ ಬಹುತೇಕರಿಗೆ ತಿದ್ದುಪಡಿ ಅಂಶಗಳ ಬಗ್ಗೆ ಹೆಚ್ಚಿನ ಅರಿವೂ ಇರುವುದಿಲ್ಲ, ಯಾರದ್ದೋ ಪ್ರಚೋದನೆಯಿಂದ ಹೀಗೆ ರಂಪಾಟ ಸೃಷ್ಟಿಯಾಗಿದ್ದರೆ, ಅಂಥ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

ವಕ್ಫ್ ತಿದ್ದುಪಡಿ ವಿರುದ್ಧದ ಈ ಆಕ್ರೋಶದ ಜ್ವಾಲೆ ಆಸ್ಸಾಂನ ಕೆಲವು ಭಾಗಗಳಿಗೂ ವ್ಯಾಪಿಸಿದ್ದು, ಈ ಕೋಮುದ್ವೇಷ ಕಾಳ್ಗಿಚ್ಚು ಹರಡದಂತೆ ಈಶಾನ್ಯ ರಾಜ್ಯಗಳು ಎಚ್ಚರ ವಹಿಸಬೇಕಿದೆ. ಪಶ್ಚಿಮ ಬಂಗಾಳದ ನೆಲವಲ್ಲದೆ, ಈಶಾನ್ಯ ರಾಜ್ಯಗಳಲ್ಲೂ ಅಕ್ರಮ ಒಳನುಸುಳುವಿಕೆಯ ಸಮಸ್ಯೆ ಗಂಭೀರವಾಗಿದೆ. ಅಕ್ರಮ ವಲಸಿಗರಿಗೆ ಆಮಿಷವೊಡ್ಡಿ, ಅವರನ್ನು ರಾಜಕೀಯ ದಾಳ ಮಾಡಿಕೊಳ್ಳುವ ಪ್ರಯತ್ನಗಳೂ ಈ ಸಂದರ್ಭದಲ್ಲಿ ನಡೆಯಕೂಡದು, ಕೇಂದ್ರ ಸರಕಾರ ಕೂಡ ವಕ್ಫ್ ತಿದ್ದುಪಡಿ ಮಾಡಿದ್ದೇವೆ, ನಮಗೆ ಗೆಲುವಾಗಿದೆ ಎಂದು ಭಾವಿಸದೆ, ತಿದ್ದುಪಡಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಅಭಿಯಾನದಂತೆ ಕೈಗೊಳ್ಳಬೇಕಿದೆ. ದೇಶದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಹೆಚ್ಚಿಸಿ, ಶಾಂತಿಗೆ ಆದ್ಯತೆ ಕಲ್ಪಿಸಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೫-೦೪-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ