ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...

ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...

ಶ್ರಾವಣ ಮಾಸದ ಜೊತೆ ಹಬ್ಬಗಳ ಸರಮಾಲೆಯೂ ಪ್ರಾರಂಭವಾಗಿದೆ. ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ವರ್ಷದ ಕೊನೆಯ ತನಕ ವಿವಿಧ ಹಬ್ಬಗಳಿವೆ, ಅವುಗಳ ಆಚರಣೆಯೂ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡುವ ಮೂಲಕ ಹೇಗೂ ಆಚರಣೆ ಮಾಡಿದ್ದೇವೆ. ಆದರೆ ಈ ವರ್ಷವೂ ಹಾಗೇ ಆಚರಣೆ ಮಾಡಬೇಕಾ? ಎನ್ನುವುದು ಹಲವು ಭಕ್ತರ ಪ್ರಶ್ನೆ. ಇಲ್ಲಿ ಹಬ್ಬದ ಆಚರಣೆ ಜೊತೆಗೆ, ಆ ಹಬ್ಬಗಳನ್ನು ಆಚರಣೆ ಮಾಡದೇ ಇದ್ದರೆ ಆಗುವ ಆರ್ಥಿಕ ನಷ್ಟಕ್ಕೆ ಯಾರು ಪರಿಹಾರ ನೀಡುತ್ತಾರೆ ಎನ್ನುವುದೇ ಇಲ್ಲಿರುವ ದೊಡ್ಡ ಪ್ರಶ್ನೆ.

ಒಂದು ಹಬ್ಬ ಹತ್ತಿರ ಬರುತ್ತಿದೆ ಎಂದಾಕ್ಷಣ ಹೂವು ಮಾರಾಟಗಾರರು, ಅಲಂಕಾರ ಮಾಡುವವರು, ಲೈಟಿಂಗ್ ಮಾಡುವವರು, ಪುರೋಹಿತರು, ಹಬ್ಬಕ್ಕೆ ಬೇಕಾದ ಸಲಕರಣೆ, ಸಾಮಾಗ್ರಿಗಳನ್ನು ಮಾರಾಟ ಮಾಡುವವರು, ಮಂಟಪ, ವೇದಿಕೆ ತಯಾರು ಮಾಡುವವರು, ದೇವರ ಮೂರ್ತಿ ಮಾಡುವವರು, ಸಾಗಾಟದ ವ್ಯವಸ್ಥೆಯವರು, ಅಡಿಗೆ, ತಿಂಡಿ ತಯಾರಕರು ಹೀಗೆ ಹತ್ತು ಹಲವಾರು ವಿಧದ ಜನರಿಗೆ ತೊಂದರೆಯಾಗುತ್ತದೆ. ಒಂದಿಡೀ ವರ್ಷ ಈ ಹಬ್ಬದ ದಿನಕ್ಕಾಗಿ ಕಾದಿರುವವರ ಸಂಖ್ಯೆ ಬಹುದೊಡ್ಡದಿದೆ. ಈ ಸಮಯ ಅಂಥವರಿಗೆ ವ್ಯಾಪಾರವಾಗದಿದ್ದರೆ ಅವರು ತಮ್ಮ ಬದುಕನ್ನು ಸಾಗಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಜೀವ ಮುಖ್ಯ ಎನ್ನುತ್ತಾರೆ. ಆದರೆ ಜೀವನ ಸಾಗಿಸಲೇ ಅಸಾಧ್ಯ ಪರಿಸ್ಥಿತಿಯಾದರೆ ಕೊನೆಗೆ ಜೀವ ಉಳಿದರೂ ಸತ್ತಂತೆಯೇ ಅಲ್ಲವೇ? ಎನ್ನುತ್ತಾರೆ ಈ ಮಾರಾಟಗಾರರು. 

ಈ ವರ್ಷವೂ ಸರಳ ಆಚರಣೆಗೇ ಸರಕಾರ ಮನಸ್ಸು ಮಾಡಿರುವಂತಿದೆ. ಅವರ ಪ್ರಕಾರ ಇದು ಸರಿಯಾದ ಮಾರ್ಗ. ಕೋವಿಡ್ ನಿಯಂತ್ರಣಕ್ಕೆ ಇಂತಹ ಕ್ರಮಗಳು ಅಗತ್ಯ ಎನ್ನುತ್ತಾರೆ. ಸರಿ, ಹಬ್ಬದ ಸಮಯದಲ್ಲಿ ವ್ಯಾಪಾರ ಕಳೆದುಕೊಂಡವನಿಗೆ ಆಗುವ ನಷ್ಟವನ್ನು ಯಾರು ಭರಿಸುತ್ತಾರೆ? ಇದಕ್ಕೇನಾದರೂ ಪರಿಹಾರವಿದೆಯೇ? ಗೊತ್ತಿಲ್ಲ. ಅವರನ್ನು ಬಹುಷಃ ದೇವರೇ ಕಾಪಾಡಬೇಕು ಅನಿಸುತ್ತೆ. ನೋಡುವ, ಏನಾಗುತ್ತದೆ ಎಂದು. ಆದರೂ ಅನಾವಶ್ಯಕವಾಗಿ ಹೊರಗಡೆ ತಿರುಗಾಡದೇ, ಹಬ್ಬವನ್ನು ಸರಳವಾಗಿ, ಸುರಕ್ಷಿತವಾಗಿ ಆಚರಿಸಿ ಎಂಬುವುದೇ ಈ ಲೇಖನದ ಕಳಕಳಿ.

***

ಶ್ರೀಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಜನ್ಮದಿನ. ಭೂಲೋಕದಲ್ಲಿ ಸಂಕಷ್ಟಗಳು ಬಂದಾಗ ದೇವರು ಮಾನವ ಅವತಾರವೆತ್ತಿ ಬಂದು ರಕ್ಷಣೆ ಮಾಡುತ್ತಾರೆ ಎಂಬುವುದು ಧಾರ್ಮಿಕರ ನಂಬಿಕೆ. ಶ್ರೀಕೃಷ್ಣನ ಜನ್ಮದಿನವಾದ ಇಂದು ನಾನು ಕೃಷ್ಣ ಹುಟ್ಟುವಾಗ ನಡೆದ ಪುಟ್ಟ ಘಟನೆಯ ಕುರಿತು ತಿಳಿಸಲಿರುವೆ.

ದೇವಕಿ-ವಾಸುದೇವರ ಎಂಟನೇ ಪುತ್ರನಿಂದಲೇ ತನ್ನ ಹತ್ಯೆಯಾಗುತ್ತದೆ ಎಂದು ತಿಳಿದ ಕಂಸ ಅವರನ್ನು ಬಂಧಿಸಿ ಸೆರೆಮನೆಯಲ್ಲಿಡುತ್ತಾನೆ. ಈ ಕಥೆ ನಿಮಗೆಲ್ಲಾ ಗೊತ್ತೇ ಇದೆ. ದೇವಕಿಗೆ ಹುಟ್ಟಿದ ಸಾಲು ಸಾಲು ಮಕ್ಕಳನ್ನು ಕಂಸ ಕೊಂದದ್ದು, ಕೃಷ್ಣ ಹುಟ್ಟಿದಾಗ ಅವನನ್ನು ಮಥುರೆಗೆ ಕೊಂಡುಹೋಗಿ ಯಶೋಧೆಯ ಮಡಿಲಿನಲ್ಲಿ ಹಾಕಿ ಬಂದದ್ದು ಎಲ್ಲವೂ ನಿಮಗೆ ಗೊತ್ತಿರುವ ಕಥೆ. ಕೃಷ್ಣ ಹುಟ್ಟಿದ್ದು ರಾತ್ರಿಯ ಸಮಯ. ಯಾವುದೇ ಸಮಯದಲ್ಲೂ ಮಗು ಹುಟ್ಟಿದರೆ ತನಗೆ ತಿಳಿಸಬೇಕು ಎನ್ನುವುದು ಕಂಸನ ಆಜ್ಞೆಯಾಗಿತ್ತು. ಆ ಕಾಲದಲ್ಲಿ ಮಗು ಹುಟ್ಟುವ ಸಂದರ್ಭದಲ್ಲಿ ಕತ್ತೆಯು ಅರಚಿ ಮಗುವಾಗುವ ಸುದ್ದಿ ಊರಿಗೆಲ್ಲಾ ತಿಳಿಯಪಡಿಸುತ್ತಿತ್ತೆಂದು ನಂಬಿಕೆ ಇತ್ತು. ಈ ವಿಷಯ ಕಂಸನಿಗೆ ಬಹಳ ಚೆನ್ನಾಗಿ ತಿಳಿದಿತ್ತು. ಇದೇ ಕಾರಣದಿಂದ ಪ್ರತೀ ಬಾರಿ ದೇವಕಿಗೆ ಮಗುವಾಗುವ ಸಂದರ್ಭದಲ್ಲಿ ಕತ್ತೆಯ ಅರಚುವಿಕೆ (ಕೂಗು) ಯಿಂದ ಕಂಸನಿಗೆ ವಿಷಯ ತಿಳಿಯುತ್ತಿತ್ತು. ಅವನು ಕೂಡಲೇ ಸೆರೆಮನೆಗೆ ಬಂದು ಮಗುವನ್ನು ಕೊಂದು ಹಾಕುತ್ತಿದ್ದ.

ಈ ವಿಷಯ ವಾಸುದೇವನಿಗೆ ತಿಳಿಯಿತು. ತನ್ನ ಎಂಟನೇ ಮಗುವನ್ನೂ ಕಂಸ ಕೊಂದರೆ ಮತ್ತೆ ಜಗತ್ತಿಗೇ ಉಳಿಗಾಲವಿಲ್ಲ ಎಂದು ಭಾವಿಸಿದ ವಾಸುದೇವ ಆ ಕತ್ತೆಯನ್ನು ಸ್ಮರಿಸಿ, ಅದರ ಬಳಿ ತನ್ನ ಮುಂದಿನ ಮಗುವಿನ ಜನ್ಮದ ಸಮಯದಲ್ಲಿ ನೀನು ಅರಚಾಡಿ ಕೂಗಿ ಕಂಸನನ್ನು ಎಚ್ಚರಿಸಬಾರದು ಎಂದು ಮನವಿಯನ್ನು ಮಾಡಿಕೊಳ್ಳುತ್ತಾನೆ. ಕತ್ತೆ ಅವನ ಮಾತನ್ನು ಒಪ್ಪಿಕೊಳ್ಳುತ್ತದೆ. 

ಅಷ್ಟಮಿಯ ರಾತ್ರಿ ಕೃಷ್ಣ ಜನ್ಮ ತಾಳಿದಾಗ ಕತ್ತೆಗೆ ವಿಷಯ ತಿಳಿದರೂ ಅದು ತಾನು ಕೊಟ್ಟ ಮಾತಿನಂತೆ ಅರಚಾಡದೇ ಸುಮ್ಮನಿರುತ್ತದೆ. ಈ ಕಾರಣದಿಂದ ಕಂಸನಿಗೆ ತಕ್ಷಣ ಮಗು ಹುಟ್ಟಿದ ವಿಷಯ ತಿಳಿಯುವುದಿಲ್ಲ. ಹುಟ್ಟಿದ ಮಗುವನ್ನು ವಾಸುದೇವ ಮಥುರೆಗೆ ಕೊಂಡು ಹೋಗಿ ಅಲ್ಲಿ ಬಿಟ್ಟು, ಅಲ್ಲಿ ಯಶೋಧೆಗೆ ಹುಟ್ಟಿದ ಹೆಣ್ಣು ಮಗುವನ್ನು ತಂದು ದೇವಕಿಯ ಬಳಿ ಇಡುತ್ತಾನೆ. ನಂತರ ಕೂಡಲೇ ಆ ಕತ್ತೆಯನ್ನು ಸ್ಮರಿಸಿದ ವಾಸುದೇವನು ಅದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾನೆ. ನಿನ್ನ ದಯೆಯಿಂದ ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ಮಹಾವಿಷ್ಣುವು ಬದುಕಿಕೊಂಡನು ಎಂದು ಕೃತಜ್ಞತೆಯನ್ನು ತಿಳಿಸುತ್ತಾನೆ.

ಕತ್ತೆಯು ಮಹಾ ಸಂವೇದನಾಶೀಲ ಪ್ರಾಣಿ. ಆದರೆ ನಾವಿಂದು ಉಪಯೋಗಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ನಿಜವಾಗಿ ನೋಡಲು ಹೋದರೆ ಕತ್ತೆ ಬಹಳ ಶ್ರಮ ಜೀವಿ. ಗುಡ್ಡಗಾಡು ಪ್ರದೇಶದಲ್ಲಿ ಸಾಮಾಗ್ರಿಗಳನ್ನು ಸಾಗಿಸಲು ಕತ್ತೆಯನ್ನು ಬಳಸುತ್ತಾರೆ. ಇದು ಶ್ರೀಕೃಷ್ಣನು ಹುಟ್ಟಿದ ಸಂದರ್ಭದಲ್ಲಿ ನಡೆದ ಘಟನೆ ಎಂದು ಕೆಲವೊಂದು ಪುರಾಣಗಳಲ್ಲಿ ವಿವರಣೆ ಇದೆ. ನಿಮಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

(ಆಧಾರ: ಆರ್ಟ್ ಆಫ್ ಲಿವಿಂಗ್ ನ ಒಂದು ಉಪನ್ಯಾಸ)