ಕೋವಿಡ್ ಸಮಯದಲ್ಲಿ ಜೀವವಾಯು ಆಮ್ಲಜನಕದ ಅಗತ್ಯತೆ

ಕೋವಿಡ್ ಸಮಯದಲ್ಲಿ ಜೀವವಾಯು ಆಮ್ಲಜನಕದ ಅಗತ್ಯತೆ

ಮಾನವನ ಉಸಿರಾಟಕ್ಕೆ ಅತ್ಯವಶ್ಯಕವಾದದ್ದು ಆಮ್ಲಜನಕ. ಇದು ನಮ್ಮ ಜೀವ ಉಳಿಸುವ ಪ್ರಾಣವಾಯುವೆಂದರೂ ತಪ್ಪಾಗಲಾರದು. ಸಹಜವಾಗಿ ವಾತಾವರಣದಲ್ಲಿ ಸಿಗುವ ಗಾಳಿಯಿಂದ ನಮ್ಮ ಶ್ವಾಸಕೋಶವು ಆಮ್ಲಜನಕವನ್ನು ಸಹಜವಾಗಿಯೇ ಬೇರ್ಪಡಿಸಿಕೊಳ್ಳುತ್ತದೆ. ವಾತಾವರಣದಲ್ಲಿರುವ ಗಾಳಿಯಲ್ಲಿರುವ ಆಮ್ಲಜನಕದ ಪ್ರಮಾಣ ಕೇವಲ ಶೇ. ೨೧ರಷ್ಟು ಮಾತ್ರ. ಆದರೆ ಆರೋಗ್ಯವಂತ ವ್ಯಕ್ತಿಯ ಶ್ವಾಸಕೊಶ ಇದರಿಂದಲೇ ತನಗೆ ಬೇಕಾದಷ್ಟು ಆಮ್ಲಜನಕವನ್ನು ಬೇರ್ಪಡಿಸಿ ಬಳಸಿಕೊಳ್ಳುತ್ತದೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಅಂದರೆ ಕೋವಿಡ್ ಮುಂತಾದ ಸಾಂಕ್ರಾಮಿಕ ರೋಗಗಳು ಬಂದು, ಉಸಿರಾಟದ ತೊಂದರೆ ಎದುರಾದಾಗ ವಾತಾವರಣದಲ್ಲಿ ಲಭ್ಯವಿರುವ ಆಮ್ಲಜನಕವನ್ನು ನೇರವಾಗಿ ಬಳಸಿಕೊಳ್ಳಲು ಆಗುವುದಿಲ್ಲ.

ಈಗ ಕೊರೋನಾ ಮಹಾಮಾರಿಯ ಸಮಯ. ಎಲ್ಲೆಡೆ ಆಮ್ಲಜನಕ (ಆಕ್ಸಿಜನ್) ಕೊರತೆ ಕಂಡು ಬಂದಿದೆ. ನಮ್ಮಲ್ಲಿರುವ ಹಲವಾರು ಕೈಗಾರಿಕೆಗಳಿಗೂ ಆಮ್ಲಜನಕದ ಅವಶ್ಯಕತೆಯಿದೆ. ಅದಕ್ಕಾಗಿ ಆಮ್ಲಜನಕ ಉತ್ಪಾದನಾ ಘಟಕಗಳನ್ನೂ ಸ್ಥಾಪಿಸಿದ್ದಾರೆ. ನಮ್ಮ ಸುತ್ತಲಿರುವ ಗಾಳಿಯನ್ನು ನೇರವಾಗಿ ಸಿಲಿಂಡರ್ (ಜಾಡಿ) ಒಳಗೆ ಸೇರಿಸಿ ಅಗತ್ಯವಿರುವ ರೋಗಿಗೆ ಕೊಡಲು ಆಗುವುದಿಲ್ಲ. ಅದಕ್ಕಾಗಿ ಗಾಳಿಯಿಂದ ವೈಜ್ಞಾನಿಕ ರೀತಿಯಿಂದ ಶುದ್ಧ ಆಮ್ಲಜನಕವನ್ನು ಬೇರ್ಪಡಿಸಬೇಕಾಗುತ್ತದೆ. ಹೀಗೆ ಬೇರ್ಪಡಿಸಿದ ವೈದ್ಯಕೀಯ ಆಮ್ಲಜನಕವನ್ನು ರೋಗಿಗೆ ನೀಡಲಾಗುತ್ತದೆ. ನಮ್ಮ ವಾತಾವರಣದಲ್ಲಿರುವ ಗಾಳಿಯಲ್ಲಿ ಬಹುಪಾಲು ಇರುವುದು ಸಾರಜನಕ (೭೮%), ಆಮ್ಲಜನಕ (೨೧%) ಮತ್ತು ಉಳಿದ ಶೇ ೧ ರಷ್ಟು ಆರ್ಗಾನ್, ನಿಯಾನ್, ಹೀಲಿಯಂ, ಕ್ರಿಪ್ಟಾನ್, ಜಿನೋನ್ ಮುಂತಾದ ಅನಿಲವಿರುತ್ತದೆ. ಈ ಎಲ್ಲಾ ಅನಿಲಗಳ ಕುದಿಯುವ ಅಥವಾ ಶೀತಲೀಕರಣವಾಗುವ (Boiling or Melting Point) ಹಂತವು ಭಿನ್ನವಾಗಿರುತ್ತದೆ. ಈ ಕಾರಣದಿಂದ ಗಾಳಿಯಲ್ಲಿರುವ ಬೇರೆ ಬೇರೆ ಅನಿಲಗಳನ್ನು ಅದರ ಕುದಿಯುವ ಹಂತದ ಪ್ರಕಾರ ಒಂದೊಂದಾಗಿ ಬೇರ್ಪಡಿಸಬೇಕಾಗುತ್ತದೆ. ಆಮ್ಲಜನಕವು -೧೮೩ ಡಿಗ್ರಿಯಲ್ಲಿ ದ್ರವ ರೂಪಕ್ಕೆ ಬರುತ್ತದೆ. ಈ ದ್ರವ ರೂಪದ ಆಮ್ಲಜನಕವನ್ನು ದೊಡ್ಡ ದೊಡ್ಡ ಟ್ಯಾಂಕರ್ ಗಳಲ್ಲಿ ಸಂಗ್ರಹಿಸಿ ಸಾಗಿಸಲಾಗುತ್ತದೆ. ಅತ್ಯಂತ ಶೀತಲೀಕರಣ ವ್ಯವಸ್ಥೆ ಇರುವ ಕ್ರಯೋಜೆನಿಕ್ ಟ್ಯಾಂಕರ್ ಗಳಲ್ಲಿ ಇದನ್ನು ವಿತರಕರಿಗೆ ತಲುಪಿಸಲಾಗುತ್ತದೆ. 

ಹೀಗೆ ತಲುಪಿದ ದ್ರವ ಆಮ್ಲಜನಕದ ಒತ್ತಡ (ಪ್ರೆಶರ್) ವನ್ನು ಕಡಿಮೆ ಮಾಡಿ ವಿತರಕರು ಅದನ್ನು ಅನಿಲ ರೂಪಕ್ಕೆ ತಂದು ವಿವಿಧ ರೀತಿಯ ಜಾಡಿಗಳಲ್ಲಿ ಸಂಗ್ರಹಿಸುತ್ತಾರೆ. ಈ ಜಾಡಿಗಳನ್ನು ಆಸ್ಪತ್ರೆ ಅಥವಾ ಸಿಲಿಂಡರ್ ಪೂರೈಕೆದಾರರಿಗೆ ತಲುಪಿಸಲಾಗುತ್ತದೆ. ಕೆಲವೊಂದು ಆಸ್ಪತ್ರೆಗಳು ತಮ್ಮದೇ ಆದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅಲ್ಲಿರುವ ರೋಗಿಗಳಿಗೆ ನಿರಂತರವಾಗಿ ಪೈಪ್ ಲೈನ್ ಮೂಲಕವೇ ನೇರವಾಗಿ ಆಮ್ಲಜನಕ ಸರಬರಾಜು ಆಗುತ್ತದೆ.

ವಾತಾವರಣದ ಗಾಳಿಯಿಂದ ಬೇರೆ ಬೇರೆ ಅನಿಲಗಳನ್ನು ಬೇರ್ಪಡಿಸುವ ವಿಧಾನಕ್ಕೆ ‘ಕ್ರಯೋಜೆನಿಕ್ ತಂತ್ರ' ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ಆಮ್ಲಜನಕವನ್ನು ಬೇರ್ಪಡಿಸಿದಾಗ ಶೇ.೯೯.೫ರಷ್ಟು ಶುದ್ಧ ದ್ರವ ಆಮ್ಲಜನಕ ಸಿಗುತ್ತದೆ. ಗಾಳಿಯಲ್ಲಿರುವ ಧೂಳು, ತೇವಾಂಶ, ತೈಲಾಂಶ ಮತ್ತಿತರ ಬೇಡದ ಕಲ್ಮಶಗಳನ್ನು ಮೊದಲೇ ಬೇರ್ಪಡಿಸಲಾಗಿರುತ್ತದೆ. ಇದಕ್ಕಾಗಿ ಗಾಳಿಯನ್ನು ಮೊದಲು ತಂಪಾಗಿಸಲಾಗುತ್ತದೆ. ನಂತರ ವಿವಿಧ ಹಂತಗಳಲ್ಲಿ ಒತ್ತಡವನ್ನು ಬಳಸಿ ಶುದ್ಧ ದ್ರವ ಆಮ್ಲಜನಕವನ್ನು ಪಡೆಯಲಾಗುತ್ತದೆ. 

ನಿಮಗೆ ಗೊತ್ತೇ? ಒಬ್ಬ ಆರೋಗ್ಯವಂತ ವ್ಯಕ್ತಿಗೆ ಪ್ರತೀ ನಿಮಿಷಕ್ಕೆ ೭ ರಿಂದ ೮ ಲೀಟರ್ ಗಾಳಿಯ ಅವಶ್ಯಕತೆ ಇದೆ. ಅಂದರೆ ಪ್ರತೀದಿನ ಸುಮಾರು ೧೧ ರಿಂದ ೧೨ ಸಾವಿರ ಲೀಟರ್ ಗಾಳಿ ನಮ್ಮ ಉಸಿರಾಟದ ಮೂಲಕ ಶ್ವಾಸಕೋಶವನ್ನು ತಲುಪಿದಾಗ ಅಲ್ಲಿ ಆ ಗಾಳಿಯಲ್ಲಿ ೨೦ ಶೇಕಡಾ ಆಮ್ಲಜನಕವಿದ್ದರೆ, ಹೊರ ಹೋಗುವ ಗಾಳಿಯಲ್ಲಿ ೧೫ ಶೇಕಡಾ ಆಮ್ಲಜನಕವಿರುತ್ತದೆ. ಅಂದರೆ ನಾವು ಬಳಸಿಕೊಳ್ಳುವ ಪ್ರಮಾಣ ೫ ಶೇಕಡಾ ಮಾತ್ರ. ಒಬ್ಬ ಆರೋಗ್ಯವಂತ ವ್ಯಕ್ತಿ ಒಂದು ದಿನದಲ್ಲಿ ಸುಮಾರು ೫೦೦-೫೫೦ ಲೀಟರ್ ಶುದ್ಧ ಆಮ್ಲಜನಕವನ್ನು ಉಪಯೋಗಿಸಿಕೊಳ್ಳುತ್ತಾನೆ. ವ್ಯಾಯಾಮ, ದೈಹಿಕ ಶ್ರಮ ಬಯಸುವ ಕೆಲಸಗಳನ್ನು ಮಾಡುವಾಗ ಅಧಿಕ ಪ್ರಮಾಣದ ಆಮ್ಲಜನಕ ಬೇಕಾಗುತ್ತದೆ.

ನಾವು ಉಸಿರಾಡುವಾಗ ನಿಮಿಷಕ್ಕೆ ೧೨ರಿಂದ ೨೦ ಬಾರಿ ಉಸಿರಾಡುತ್ತಾನೆ. ಪ್ರತೀ ನಿಮಿಷಕ್ಕೆ ೧೨ಕ್ಕಿಂತಲೂ ಕಮ್ಮಿ ಅಥವಾ ೨೦ ಕ್ಕೂ ಹೆಚ್ಚು ಸಲ ಉಸಿರಾಡಿದರೆ ಇದು ಅಸ್ವಸ್ಥತೆಯ ಸಂಕೇತ. ಗೊಂದಲ ಪಟ್ಟುಕೊಳ್ಳಬೇಡಿ ಇದು ಹೃದಯದ ಬಡಿತದ ಸಂಖ್ಯೆ ಅಲ್ಲ. 

೨೦೧೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆಗೊಳಿಸಿರುವ ಅತ್ಯಗತ್ಯ ಔಷಧಿಗಳ ಪಟ್ಟಿಯಲ್ಲಿ ಆಮ್ಲಜನಕವೂ ಸೇರಿದೆ. ಎಲ್ಲಾ ಹಂತದ (ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ) ಆರೋಗ್ಯ ರಕ್ಷಣೆಗೆ ಇದು ಅತ್ಯವಶ್ಯಕವಾಗಿದೆ. ವೈದ್ಯಕೀಯ ಆಮ್ಲಜನಕವು ಶೇಕಡಾ ೯೮ರಷ್ಟು ಶುದ್ಧವಾಗಿರುತ್ತದೆ. ಇದರಲ್ಲಿ ಯಾವುದೇ ಬೇರೆ ಅನಿಲಗಳು ಹಾಗೂ ಧೂಳು, ತೇವಾಂಶಗಳು ಇರುವುದಿಲ್ಲ. 

ಈ ಜೀವವಾಯುವನ್ನು ಸಂಗ್ರಹಿಸುವ ಸಿಲಿಂಡರ್ ಗಳು ಸುಮಾರು ೪ ರಿಂದ ೬ ಆಡಿ ಎತ್ತರವಿರುತ್ತದೆ. ಆಸ್ಪತ್ರೆಗಳು ಸಾಮಾನ್ಯವಾಗಿ ೭ ಘನ ಮೀಟರ್ ಸಾಮರ್ಥ್ಯದ ಆಮ್ಲಜನಕ ಸಿಲಿಂಡರ್ ಗಳನ್ನು ಬಳಸುತ್ತಾರೆ. ಇದರ ಸಾಮರ್ಥ್ಯ ೪೭ ಲೀಟರ್ ಮಾತ್ರ. ಆದರೆ ಸುಮಾರು ೭ಸಾವಿರ ಲೀಟರ್ ಆಮ್ಲಜನಕವನ್ನು ಇದರಲ್ಲಿ ಒತ್ತಡ ಕ್ರಮ ಅನುಸರಿಸಿ ತುಂಬಲಾಗುತ್ತದೆ. ಈ ೭ ಘನ ಮೀಟರ್ ಸಿಲಿಂಡರ್ ನಲ್ಲಿರುವ ಆಮ್ಲಜನಕವನ್ನು ರೋಗಿಯೊಬ್ಬನಿಗೆ ನಿರಂತರವಾಗಿ ಸುಮಾರು ೨೦-೨೨ ಗಂಟೆಗಳವರೆಗೆ ನೀಡಬಹುದಾಗಿದೆ. 

ನಮ್ಮ ಸುಂದರ ಭೂಮಿಯ ಪರಿಸರವೂ ಈಗ ಕಲುಷಿತಗೊಳ್ಳುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ಶುದ್ಧ ಗಾಳಿಯ ಪ್ರಮಾಣ ಕಮ್ಮಿಯಾಗುತ್ತಿದೆ. ಇದಕ್ಕೆ ಕಾರಣ ನಗರೀಕರಣದ ನೆಪದಲ್ಲಿ ನಾವು ಕಡಿದು ಹಾಕಿದ ಅರಣ್ಯ ಸಂಪತ್ತು. ಒಂದು ಮರ ಬಹಳಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ನಾವು ಇನ್ನಷ್ಟು ಗಿಡಗಳನ್ನು ನೆಡಬೇಕು. ಇದರಿಂದ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಸುಧಾರಣೆಯಾಗುತ್ತದೆ. ಕಾಲ ಕಾಲಕ್ಕೆ ಮಳೆಯೂ ಆಗುತ್ತದೆ. ಬೆಳೆಯೂ ಬೆಳೆಯುತ್ತದೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ