ಕೋವಿಡ್ ಸಮಯದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ..!
ವಾರ್ತಾ ಪತ್ರಿಕೆಯೊಂದರಲ್ಲಿ ನಾನು ಇಂದು ಮಂಗಳೂರಿನ ಸಮುದ್ರ ತೀರಕ್ಕೆ ಬಂದ ತ್ಯಾಜ್ಯಗಳ ರಾಶಿಯ ಚಿತ್ರ ಕಂಡು ಗಾಬರಿ ಪಟ್ಟುಕೊಂಡೆ. ಸುಮಾರು ಕಿಲೋ ಮೀಟರ್ ಈ ತ್ಯಾಜ್ಯಗಳು ಹರಡಿಕೊಂಡಿವೆ ಎಂದು ಬರೆಯಲಾಗಿದೆ. ಅವುಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳದ್ದೇ ಸಿಂಹಪಾಲು. ಉಳಿದಂತೆ ಕಸ ಕಡ್ಡಿ, ಬಟ್ಟೆ ಬರೆಗಳಿವೆ. ಇತ್ತೀಚೆಗೆ ಸಮುದ್ರ ಎಂಬುವುದು ಬಹಳಷ್ಟು ಮಂದಿಗೆ ‘ಡಂಪ್ ಯಾರ್ಡ್' ನಂತೆ ಕಸ ಬಿಸಾಕುವ ತಾಣವಾಗಿ ಹೋಗಿದೆ. ಈ ಕಾರಣದಿಂದಲೇ ಸಮುದ್ರದಲ್ಲಿರುವ ಅಸಂಖ್ಯಾತ ಜೀವಿಗಳ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ನಮ್ಮ ಪೌಷ್ಟಿಕ ಆಹಾರವಾದ ಮೀನುಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಸಿಕ್ಕ ಮೀನುಗಳ ರುಚಿಯೂ ಮೊದಲಿನಂತಿಲ್ಲ ಎನ್ನುತ್ತಾರೆ ಮೀನು ತಿನ್ನುವವರು.
ಹಲವಾರು ತಳಿಯ ಮೀನುಗಳ ಲಭ್ಯತೆಯೇ ಈಗ ಇಲ್ಲ. ಕಾರ್ಖಾನೆಗಳಿಂದ ಹೊರ ಬರುವ ರಾಸಾಯನಿಕ ಮಿಶ್ರಿತ ತ್ಯಾಜ್ಯಗಳು, ಪ್ಲಾಸ್ಟಿಕ್, ಹಾಳಾದ ವಸ್ತುಗಳು ಎಲ್ಲವೂ ಇದಕ್ಕೆ ಕಾರಣೀಭೂತವಾಗಿವೆ. ಜಲಚರಗಳು ಬಹಳ ಸೂಕ್ಷ್ಮ ಸಂವೇದಿ ಜೀವಿಗಳು. ತಮಗೆ ಒಂದು ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ ಎಂದರೆ ಅವುಗಳು ಹಿಂಡು ಹಿಂಡಾಗಿ ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಕಳೆದ ಕೆಲವು ವರ್ಷಗಳ ಹಿಂದೆ ಸುನಾಮಿ ಅಲೆ ಬಂದಾಗ ಹಲವಾರು ಜಲಚರಗಳು ತಮ್ಮ ಪಥವನ್ನು ಬದಲಿಸಿ ಬೇರೆಡೆ ಹೋಗಿದೆ ಎನ್ನುತ್ತಾರೆ ಮೀನುಗಾರಿಕಾ ತಜ್ಞರು. ಮೀನು ಹಿಡಿಯುವ ಮಂದಿಯೂ ಈ ವಿಚಾರವನ್ನು ಅನುಮೋದಿಸುತ್ತಾರೆ.
ಕೆಲವು ವರ್ಷಗಳ ಹಿಂದೆ ಪ್ಲಾಸ್ಟಿಕ್ ನಿಷೇಧ ಎಂಬ ಒಂದು ಕಾನೂನು ಜಾರಿಗೆ ಬಂತು. ಅದಕ್ಕೂ ಮೊದಲು ೪೦ ಮೈಕ್ರಾನ್ ಗಿಂತಲೂ ಕಮ್ಮಿಯ ಪ್ಲಾಸ್ಟಿಕ್ ಕೈಚೀಲಗಳು ನಿಷೇಧ ಪಟ್ಟಿಯಲ್ಲಿದ್ದವು. ಸ್ವಲ್ಪ ಸಮಯ ೪೦ ಮೈಕ್ರಾನ್ ಗಿಂತ ಅಧಿಕ ಪ್ಲಾಸ್ಟಿಕ್ ಗಳೇ ಉತ್ಪತ್ತಿಯಾಗುತ್ತಿದ್ದವು. ನಿಷೇಧ ಎಂಬ ಸಂಗತಿ ಜಾರಿಗೆ ತರಲು ಕೆಲವು ರಾಜ್ಯಗಳು ಪ್ರಯತ್ನ ಪಡುತ್ತಿರುವಾಗ ಕೋವಿಡ್ ಎಂಬ ಸಂಕ್ರಾಮಿಕ ಕಾಯಿಲೆ ವಿಶ್ವದಾದ್ಯಂತ ಹರಡಲು ಪ್ರಾರಂಭವಾಯಿತು. ಈ ಕಾರಣದಿಂದ ಭಾರತವೂ ಈ ಕಾಯಿಲೆಯ ಕಪಿಮುಷ್ಟಿಗೆ ಸಿಲುಕಿತು. ಯಾರಿಗೆ ಲಾಭವಾಯಿತೋ, ನಷ್ಟವಾಯಿತೋ ಪ್ಲಾಸ್ಟಿಕ್ ಉದ್ಯಮಕ್ಕಂತೂ ಲಾಭವೇ ಲಾಭವಾಯಿತು. ಈ ಸಮಯದ ಲಾಭ ಪಡೆದ ಇವರು ಎಲ್ಲಾ ಬಗೆಯ (ಕಮ್ಮಿ ದಪ್ಪದ, ವಿವಿಧ ಬಣ್ಣಗಳ) ಪ್ಲಾಸ್ಟಿಕ್ ಕೈಚೀಲಗಳ ಉತ್ಪಾದನೆಯನ್ನು ಮಾಡಿದರು. ಕಾನೂನುಗಳು ಗಾಳಿಗೆ ತೂರಲ್ಪಟ್ಟವು. ೫೦ ಮೈಕ್ರಾನ್ ಗಿಂತಲೂ ದಪ್ಪವಾಗಿರುವ ಪ್ಲಾಸ್ಟಿಕ್ ಉತ್ಪಾದನೆ ಮಾಡಬೇಕೆಂಬ ಕಾನೂನು ಮರೆತೇ ಹೋಯಿತು. ಈಗ ಪ್ರಸ್ತುತ ಕೋವಿಡ್ ಬಂದು ಸುಮಾರು ಒಂದೂವರೆ ವರ್ಷಗಳ ಬಳಿಕವೂ ನಿಷೇಧಿಕ ಪ್ಲಾಸ್ಟಿಕ್ ಕೈಚೀಲಗಳು ಮಾರುಕಟ್ಟೆಯಲ್ಲಿದೆ. ಮೊದಲು ಕೇವಲ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದವು. ಈಗ ಯಾವ ಬಣ್ಣದ್ದೂ ಬೇಕಾದರೂ ಸಿಗುತ್ತದೆ. ನೀಲಿ, ಹಸಿರು, ಕೆಂಪು, ಗುಲಾಬಿ ಹೀಗೆ ವರ್ಣಮಯ ಪ್ಲಾಸ್ಟಿಕ್ ಕೈಚೀಲದ ಲೋಕವಾಗಿದೆ.
ಈ ಎಲ್ಲಾ ಪ್ಲಾಸ್ಟಿಕ್ ಚೀಲದ ದಪ್ಪ ಬಹಳ ಕಮ್ಮಿ. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಚೀಲಗಳು ನಿಷೇಧವಾಗಿ ಹಲವಾರು ವರ್ಷಗಳೇ ಆಗಿವೆ. ಅದರಿಂದ ನಾವು ತರಕಾರಿ, ಜಿನಸಿ ಸಾಮಾನು, ಮೀನು, ಮಾಂಸ ತರುವ ಪ್ಲಾಸ್ಟಿಕ್ ಚೀಲಗಳು ಮತ್ತೊಮ್ಮೆ ಬಳಸಲು ಆಗದೇ ಕಸದ ತೊಟ್ಟಿ ಸೇರುತ್ತಿವೆ. ಅಲ್ಲಿಂದ ಪರಿಸರಕ್ಕೆ ಸೇರಿ ಪೆಡಂಭೂತಗಳಂತೆ ನಿರಂತರ ಗೋಚರವಾಗುತ್ತಿವೆ. ಹಲವಾರು ಪ್ಲಾಸ್ಟಿಕ್ ಚೀಲಗಳು ಸಮುದ್ರ ಸೇರಿಕೊಂಡಿವೆ. ಪಶುಗಳ ಹೊಟ್ಟೆಯನ್ನೂ ಸೇರಿವೆ. ಸೇರಿದ ಬಳಿಕ ಅವುಗಳ ಜೀವವನ್ನೂ ಹಿಂಡಿವೆ.
ಇದರ ಜೊತೆಗೆ ನೀರಿನ, ತಂಪು ಪಾನೀಯಗಳ ಬಾಟಲಿಗಳೂ ಕಸಕ್ಕೆ ಸೇರುತ್ತಿವೆ. ಯಾವುದೂ ಮಣ್ಣಿನಲ್ಲಿ ಕರಗುವುದಿಲ್ಲ. ನಗರ ಸೌಂದರ್ಯವನ್ನು ಹಾಳು ಮಾಡುತ್ತದೆ. ಅಷ್ಟೇ. ಇದಕ್ಕೆಲ್ಲಾ ಕಾರಣ ಏನು? ಕಾನೂನು ಹಾಗೇ ಇದೆ. ಆದರೆ ಪಾಲನೆ ಮಾಡುವವರು ಹಾಗೂ ಮಾಡಿಸುವವರು ಕಣ್ಣು ಮುಚ್ಚಿಕುಳಿತುಕೊಂಡಿದ್ದಾರೆ. ಇದೇ ಸಮಸ್ಯೆ. ಯಾವುದೇ ಕಾನೂನು ಅನುಷ್ಟಾನವೇ ಕಷ್ಟ.
ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಸರಿ ಎಂದು ಅಂದುಕೊಳ್ಳುವ. ಆದರೆ ಅದಕ್ಕೆ ಪರ್ಯಾಯವಾಗಿ ನಾವು ಏನನ್ನು ತಂದಿದ್ದೇವೆ? ಇದನ್ನೂ ಗಮನಿಸಬೇಕಲ್ಲವೇ? ಮನೆಯಿಂದ ಹೊರಟು ಸಾಮಗ್ರಿಗಳನ್ನು ತರುವುದಾದರೆ ಬಟ್ಟೆಯ ಚೀಲವನ್ನು ಮನೆಯಿಂದಲೇ ತೆಗೆದುಕೊಂಡು ಹೋಗಬಹುದು. ಆದರೆ ನಾವು ಮನೆಯಿಂದ ಹೊರಗಡೆ ಇದ್ದು, ಅನಿರೀಕ್ಷಿತವಾಗಿ ಏನಾದರೂ ತರಬೇಕಾದರೆ ಎಲ್ಲಿ ಚೀಲ ಹುಡುಕುವುದು? ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಅಥವಾ ಪರ್ಯಾಯ ವಸ್ತುಗಳ ಶೋಧನೆ ಇನ್ನೂ ಏಕೆ ಸಮರ್ಪಕವಾಗಿ ಆಗಿಲ್ಲ? ಆಗಿದ್ದರೂ ಅದು ಇನ್ನೂ ಸಾರ್ವಜನಿಕವಾಗಿ ಬಳಕೆ ಏಕೆ ಆಗುತ್ತಿಲ್ಲ? ಇವೆಲ್ಲಾ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಕನಿಷ್ಟ ೫೦ ಮೈಕ್ರಾನ್ ದಪ್ಪದ ಚೀಲಗಳಾದರೆ ಹಲವಾರು ಸಲ ಉಪಯೋಗವಾಗುತ್ತವೆ.
ಹಿಂದೊಮ್ಮೆ ಯಾರೋ ಜೋಳ ಮತ್ತಿತರ ಪದಾರ್ಥಗಳಿಂದ ಗಂಜಿ (Starch) ಯನ್ನು ತೆಗೆದು ಅದರ ಚೀಲಗಳನ್ನು ತಯಾರು ಮಾಡಿದ್ದರು. ಇವುಗಳನ್ನು ಬಿಸಿನೀರಿನಲ್ಲಿ ಹಾಕಿದರೆ ಕರಗಿ ಬಿಡುತ್ತಿತ್ತು. ಈ ಚೀಲಗಳು ಬಹಳ ಗಟ್ಟಿಯಾಗಿಲ್ಲದಿದ್ದರೂ ಉಪಯೋಗಿಸಬಹುದಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರೋತ್ಸಾಹ ದೊರೆಯದ ಕಾರಣ ಬಹುಷಃ ಇವುಗಳು ಈಗ ಎಲ್ಲೂ ಕಾಣಿಸುತ್ತಿಲ್ಲ. ಬಹುಷಃ ತಯಾರಿಕಾ ವೆಚ್ಚವೂ ದುಬಾರಿಯಾಗಿರಬಹುದು. ಸರಕಾರ ಮನಸ್ಸು ಮಾಡಿದ್ದರೆ ಇಂತಹ ಸಂಶೋಧನೆ ನಡೆಸಿದವರನ್ನು ಅಥವಾ ತಯಾರಿಕಾ ಸಂಸ್ಥೆಯವರನ್ನು ಕರೆಸಿ, ಮಾತನಾಡಿ ಅವರಿಗೆ ಬೇಕಾದ ಸಹಕಾರ ನೀಡಬಹುದಾಗಿತ್ತು. ಇಲ್ಲವೇ ಅವರಿಂದ ಈ ತಂತ್ರಜ್ಞಾನವನ್ನು ಖರೀದಿಸಿ, ಸರಕಾರವೇ ಇದನ್ನು ಅನುಷ್ಟಾನಕ್ಕೆ ಬರಬಹುದೇನೋ? ನೂರಾರು ವರ್ಷವಾದರೂ ಕರಗದ ಪ್ಲಾಸ್ಟಿಕ್ ಪೆಡಂಭೂತವನ್ನು ಹೊಡೆದೋಡಿಸುವತ್ತ ನಾವು ಇನ್ನಾದರೂ ಯೋಚನೆ ಮಾಡಬೇಕಾಗಿದೆ. ಕೋವಿಡ್ ಸಮಯ ಎಂದು ಕಾನೂನುಗಳನ್ನು ಬೇಕಾಬಿಟ್ಟಿ ಗಾಳಿಗೆ ತೂರಿ ತೆಳುವಾದ, ಬಣ್ಣ ಬಣ್ಣದ ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ಇನ್ನಾದರೂ ನಿಲ್ಲಿಸಲೇ ಬೇಕಾಗಿದೆ.
ಕೇಂದ್ರ ಸರಕಾರವೂ ಇತ್ತೀಚೆಗೆ ಮುಂದಿನ ಜುಲೈ ೨೦೨೨ರಿಂದ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡುವ ಪ್ರಸ್ತಾವ ಮುಂದಿಟ್ಟಿದೆ. ೧೦೦ ಮೈಕ್ರಾನ್ ಗಿಂತಲೂ ಅಧಿಕ ದಪ್ಪದ ಪ್ಲಾಸ್ಟಿಕ್ ಬಳಕೆ ಮಾಡಬೇಕೆಂದು ಈ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ನಿಷೇಧದ ಜೊತೆಗೆ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಏನು ಬಳಸಬಹುದೆಂದು ಯೋಜನೆಗಳು ತಯಾರಾಗಬೇಕಾಗಿದೆ. ಕೆಲವೊಂದು ಅನಿವಾರ್ಯ ಕಡೆಗಳಲ್ಲಿ ಪ್ಲಾಸ್ಟಿಕ್ ಅಗತ್ಯವಾಗಿದೆ. ಆಸ್ಪತ್ರೆಯಲ್ಲಿ ಬಳಕೆಯಾಗುವ ಆರೋಗ್ಯ ಸಾಮಾಗ್ರಿಗಳು, ಹಾಲಿನ ತೊಟ್ಟೆಗಳು ಮೊದಲಾದ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಅನಿವಾರ್ಯವೇ ಆಗಿದೆ. ಸಾಧ್ಯವಾದಷ್ಟು ಈ ಬಳಕೆಯನ್ನು ಕನಿಷ್ಟ ಮಿತಿಗೆ ತರುವ ಕೆಲಸ ಆಗಲಿ. ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಉತ್ಪಾದನೆಯ ಬಗ್ಗೆ ಯೋಚನೆ ಮಾಡೋಣ. ಪರಿಸರವು ಈಗಾಗಲೇ ಬಹಳಷ್ಟು ತ್ಯಾಜ್ಯ ವಸ್ತುಗಳಿಂದ ತುಂಬಿದೆ. ಮುಂದಿನ ಜನಾಂಗಕ್ಕಾದರೂ ಸ್ವಲ್ಪ ನೆಮ್ಮದಿಯ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಅಲ್ಲವೇ?
(ಈ ವಿಷಯಗಳು ನನ್ನ ಮನಸ್ಸಿಗೆ ಹೊಳೆದ ವೈಯಕ್ತಿಕ ವಿಷಯಗಳು. ಓದುಗರು ಈ ವಿಚಾರದಲ್ಲಿ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರೆ ಸ್ವಾಗತ…)
ಚಿತ್ರ ಕೃಪೆ: ಇಂಟರ್ನೆಟ್ ತಾಣ