ಕೌಶಲ
ಇಂದು ನಾವು ಕೌಶಲದ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಲೇಖನದಲ್ಲಿ ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಂಡಿದ್ದೇವೆ. ಶ್ರೇಷ್ಠ ಕರ್ಮ ಎಂದರೆ ನನಗೆ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವ, ಸಂತೋಷವನ್ನುಂಟು ಮಾಡುವ ಕರ್ಮ. ನನಗೆ ಮತ್ತು ಸಮಾಜಕ್ಕೆ ಹಿತ ಹಾಗೂ ಸಂತೋಷ ಉಂಟು ಮಾಡಬೇಕಾದರೆ ಏನು ಬೇಕು?. ಕೌಶಲಬೇಕು. ಕೌಶಲ /ಕುಶಲತೆ ಎಂದರೆ ಮಾಡುವ, ನೋಡುವ, ಕೇಳುವ, ರುಚಿಸುವ, ಸ್ಪರ್ಶಿಸುವ, ಮಾತನಾಡುವ, ವಿಚಾರ ಮಾಡುವ, ಭಾವಿಸುವ, ಕಲ್ಪಿಸುವ ಮತ್ತು ತಿಳಿಯುವ ಎಲ್ಲಾ ಕೆಲಸದಲ್ಲಿ ಸೌಂದರ್ಯ, ಮಾಧುರ್ಯ ಮತ್ತು ಸವಿಯನ್ನ ತುಂಬುವುದು. ಸ್ವಚ್ಛ, ಅಚ್ಚುಕಟ್ಟು ಮತ್ತು ಶಿಸ್ತು ಮಾಡುವುದು. ಸೌಂದರ್ಯ, ಮಾಧುರ್ಯ ಮತ್ತು ಸವಿ ತುಂಬಲು ಎದೆಯಲ್ಲಿ ಪ್ರೀತಿ ಇರಬೇಕಾಗುತ್ತದೆ.
ಜಗತ್ತಿನಲ್ಲಿ ನಾವು ವಸ್ತು ಅಂತ ಏನು ಹೇಳ್ತಿವಿ ಅದೆಲ್ಲ ಅಣುಗಳಿಂದ ಆಗಿರುವುದು. ಅಣುಗಳು ಕೂಡಿ ವಸ್ತುಗಳಾಗುತ್ತದೆ. ವಸ್ತು ಸಣ್ಣದೊ, ದೊಡ್ಡದೊ ಅದು ಅಖಂಡವಾಗಿ ಇರುವುದಿಲ್ಲ. ಏಕೆಂದರೆ ಅದು ಸಂಗಾತ. ಒಂದು ಹೂವು ಅಖಂಡ ಅಲ್ಲ. ಇದರಲ್ಲಿ ವಿವಿಧ ಭಾಗಗಳಿವೆ. ಇದರಲ್ಲಿ ತೊಟ್ಟು, ಹಸಿರು ಎಲೆ, ಪುಷ್ಪ ದಳ, ಪುಷ್ಪಪಾತ್ರೆ, ಕೇಸರ, ಶಲಾಕಾಗ್ರ ಮತ್ತು ಪರಾಗ ಎಲ್ಲಾ ಸೇರಿ ಹೂವಾಗಿದೆ. ಹೂವು ಅಖಂಡ. ಆದರೆ ಅದನ್ನು ಬಿಡಿಸಿ ಬೇರ್ಪಡಿಸಬಹುದು. ಮನೆ ಅಂದಾಗ ವ್ಯಕ್ತಿ ಹೆಂಡತಿ, ಮಕ್ಕಳು, ತಂದೆ ಮತ್ತು ತಾಯಿ ಎಲ್ಲಾ ಸೇರಿ ಮನೆ ಆಗುತ್ತದೆ. ಯಾವುದೇ ಆದರೂ ಭಾಗ ಭಾಗಗಳಿಂದ ಕೂಡಿಕೊಂಡಿರುತ್ತದೆ. ಮನಸ್ಸು ಕೂಡ ಅಖಂಡವಲ್ಲ. ಒಳ ಹೋದರೆ ಬೇರೆ ಬೇರೆ ಭಾವನೆಗಳು, ಬೇರೆ ಬೇರೆ ವಿಚಾರಗಳು, ಬೇರೆ ಬೇರೆ ನೆನಪು, ಕಲ್ಪನೆಗಳು ಇವೆಲ್ಲ ಬೇರೆ ಬೇರೆನೇ. ಅವುಗಳ ಸಂಗಾತ ಮನಸ್ಸು. ಹಾಗೆ ಜೀವನ ಒಂದು ನೂರು ವರ್ಷದ ಜೀವನ ಅಖಂಡವಾಗಿಲ್ಲ. ಅದು ಕ್ಷಣ ಕ್ಷಣ ಸೇರಿ ನೂರು ವರ್ಷದ ಜೀವನವಾಗಿದೆ. ಪ್ರತಿ ಕ್ಷಣಕ್ಷಣ ಹಾಗೆ ಇರುವುದಿಲ್ಲ. ಯಾವುದಾದರೂ ಒಂದು ಘಟನೆ ನಡೀತಿದೆ. ನೋಡುವ ಕ್ರಿಯೆ, ಕೇಳುವ ಕ್ರಿಯೆ, ಮುಟ್ಟುವ ಕ್ರಿಯೆ, ರುಚಿಸುವ ಕ್ರಿಯೆ ಏನಾದರೂ ಒಂದು ಘಟನೆ ನಡೆಯುತ್ತದೆ. ಜೀವನ ಅಂದರೆ ಕ್ಷಣ ಕ್ಷಣಗಳ ಪ್ರವಾಹ. ಜೀವನದಲ್ಲಿ ಕೊನೆಯವರೆಗೆ ಘಟನೆಗಳು ನಡೀತಾ ಹೋಗುತ್ತವೆ. ಘಟನೆಗಳ ಪ್ರವಾಹದ ಸಮೂಹ ಜೀವನ. ಈ ಘಟನೆಗಳನ್ನು ಪ್ರತ್ಯೇಕಿಸಲು ಬರುವುದಿಲ್ಲ. ಪ್ರತಿ ಘಟನೆ ಜೀವನದ ಅಂಗವೇ. ಇಂತಹ ಜೀವನ ಚಂದ ಆಗಬೇಕಾಗಿತ್ತು ಅಂದರೆ ಪ್ರತಿ ಕ್ಷಣ ಕ್ಷಣವು ಚಂದಾಗಬೇಕು. ಬಹಳಷ್ಟು ಕ್ಷಣ ಚಂದ ಇರಬೇಕಾಗುತ್ತದೆ. ಘಟನೆ ಒಳ್ಳೆಯದು ಇದ್ದರೆ ಜೀವನ ಒಳ್ಳೆಯದು. ಎಷ್ಟು ಕ್ಷಣಗಳು ಅಷ್ಟು ಘಟನೆಗಳು, ಅದರಲ್ಲಿ ಬಹಳಷ್ಟು ಘಟನೆಗಳು ಸುಖ ಕೊಟ್ಟರೆ ಜೀವನ ಸುಖಮಯ ವಾಗುತ್ತದೆ. ಬಹಳಷ್ಟು ಘಟನೆಗಳು ಅಹಿತವಾಗಿದ್ದರೆ ಜೀವನ ಕೆಟ್ಟು ಹೋಗಿದೆ. ಆದ್ದರಿಂದ ಪ್ರತಿ ಕ್ಷಣದ ಘಟನೆಗೆ ಬೆಲೆ ಕೊಡಬೇಕು.
ನಾಳೆ ಜೀವನ ಕಟ್ಟೋದಲ್ಲ. ನಾಡಿದ್ದು ಜೀವನ ಕಟ್ಟೋದ್ದಲ್ಲ. ಈ ಕ್ಷಣ ಜೀವನ ಕಟ್ಟಬೇಕು. ಹಿಂದೆ ಆಗಿ ಹೋದದ್ದು ಮುಖ್ಯ ಅಲ್ಲ. ನಾಳೆ ಅದು ಮುಖ್ಯ ಅಲ್ಲ. ಇಂದು ಈ ಕ್ಷಣ ಮುಖ್ಯ. ಈ ಕ್ಷಣದ ಘಟನೆ ಸುಂದರ ಮಾಡಿದರೆ, ಮುಂದಿನ ಕ್ಷಣ ಸುಂದರವಾಗುತ್ತಾ ಹೋಗುತ್ತದೆ. ಈ ಕ್ಷಣದ ಘಟನೆ ಬಗ್ಗೆ ಕಾಳಜಿ ಇರಬೇಕು. ಇಂದು ಈ ಕ್ಷಣ , ಸುಂದರ ಕೆಲಸ ಮಾಡೋದು. ನಾಳೆದು ನಾಳೆಗೆ. ಈ ಕ್ಷಣದ ಘಟನೆ ಕೆಟ್ಟಿತು ಅಂದರೆ ಮುಂದಿನ ಕ್ಷಣ ದ ಘಟನೆ ಚಂದ ಆದೀತು ಅಂತ ಹೇಳೋದಿಕ್ಕೆ ಆಗೋದಿಲ್ಲ. ಏನೇ ಮಾಡಿದರೂ ಈ ಕ್ಷಣ ಮಾಡುವುದು. ನಾವು ಏನು ಮಾಡಬೇಕು ಅದನ್ನು ಈ ಕ್ಷಣವೇ ಮಾಡಬೇಕು. ಯಾವ ಕನಸು ಕಾಣಬೇಕು ಅದನ್ನು ಈ ಕ್ಷಣವೇ ಕಾಣಬೇಕು. ಮುಂದೆ ಹಾಕಬಾರದು.
ಪಾಶ್ಚಿಮಾತ್ಯರು ಹೇಳುತ್ತಾರೆ. ಮುಂದೆ ಮುಂದೆ ಹಾಕುವುದು ಸಮಯ ಕಳ್ಳತನ ಮಾಡಿದಂತೆ. ಅಂದರೆ ಜೀವನ ಕಳ್ಳತನ ಮಾಡಿದಂತೆ. ಜೀವನ ನಮ್ಮ ಕೈಯಲ್ಲಿ ಉಳಿಯುವುದಿಲ್ಲ. ಜೀವನ ಹೋಗೇ ಬಿಡುತ್ತದೆ. ಆದ್ದರಿಂದ ಈ ಕ್ಷಣದ ಬಗ್ಗೆ ಕಾಳಜಿ, ಶ್ರದ್ಧೆ ಇರಬೇಕಾಗುತ್ತದೆ. ಈ ಕ್ಷಣದ ಹೆಜ್ಜೆ ತಪ್ಪಿದರೆ ದಿಕ್ಕು ತಪ್ಪಿದಂತೆ. ಈ ಕ್ಷಣ ಸುಂದರ ಮಾಡುವುದು, ಈ ಕ್ಷಣದ ಘಟನೆ ಚೆನ್ನಾಗಿರಬೇಕು. ಈ ಕ್ಷಣ ಕಲ್ಲು ಹೊಡೆದರೆ ಮುಂದಿನ ಕ್ಷಣದಲ್ಲಿ ಹೂ ಬರುವುದಿಲ್ಲ. ಈ ಕ್ಷಣದಲ್ಲಿ ಬೀಜ ಹಾಕಿದರೆ ಮುಂದೆ ಹೂವು ಹಣ್ಣು ಬರುತ್ತದೆ. ಮುಂದೆ ಏನಾಗುತ್ತದೆ ಅಂತ ತಿಳಿದು ಈ ಕ್ಷಣ ಸುಂದರ ಮಾಡುವುದು. ಶ್ರೀಮಂತ ಮಾಡೋದು. ಒಬ್ಬ ತಾಯಿಗೆ ಒಂದು ಮಗುವಾಗಿದೆ. ಆಕೆ ಆ ಮಗು ಮುಂದೆ ಏನಾಗುತ್ತೆ ಅಂತ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಹಾಲು ಕುಡಿಯುತ್ತದೆಯೋ ಇಲ್ಲವೋ ಅಷ್ಟೇ ಗಮನ ಹರಿಸುತ್ತಾಳೆ. ಈಗ ಅದು ಚೆನ್ನಾಗಿ ಮಲಗುತ್ತೋ ಇಲ್ಲವೋ, ಅಷ್ಟೇ ಯೋಚನೆ. ಹಾಗಿದ್ದಾಗ ಮಾತ್ರ ಆಕೆಯ ಜೀವನ ಸುಂದರವಾಗುತ್ತದೆ. ಅದು ಬಿಟ್ಟು ಈತ ಮುಂದೆ ದೊಡ್ಡ ನೌಕರಿದಾರ ಆಗಿ, ರಕ್ಷಿಸುತ್ತಾನೆ ಅಂತ ಯೋಚಿಸುತ್ತಾ ಇದ್ದರೆ, ಕನಸಿನಲ್ಲಿ ಹೋಗಬೇಕಾಗುತ್ತದೆ. ಹಾಲು ಮೈಗೆ ಹತ್ತುವುದಿಲ್ಲ. ನಿದ್ರೆ ಕಣ್ಣಿಗೆ ಬರುವುದಿಲ್ಲ . ಮಗುವಿನ ಆರೋಗ್ಯ ಕೆಡುತ್ತದೆ. ಆ ಬಳಿಕ ತಾಯಿಗೆ ಅಸಂತೋಷವಾಗುತ್ತದೆ. ಆ ಕ್ಷಣ ಎಲ್ಲಾ ಮರೆತು ಮಾಡುವುದು. ಬಹಳ ನಿರೀಕ್ಷೆ ಮಾಡುತ್ತಾ ಇದ್ದರೆ ಆ ಕ್ಷಣದ ಸೌಂದರ್ಯ ಕೆಡುತ್ತದೆ. ಏನು ಮಾಡ್ತೀವಿ ಅದು ಸುಂದರವಾಗಿರಬೇಕು. ನಾವು ಒಂದು ಸಮಾರಂಭಕ್ಕೆ ಹೋಗ್ತೀವಿ. ಅಲ್ಲಿ ಟೇಬಲ್ ಹಾಕ್ತಾರೆ. ಅದರ ಮೇಲೆ ಬಟ್ಟೆ ಹಾಕಿರುತ್ತಾರೆ. ಆ ಬಟ್ಟೆಯಲ್ಲಿ ಒಂದು ನೆರಿಗೆ ಕೂಡ ಇರದಂತೆ ಹಾಕಿರುತ್ತಾರೆ. ಅದರ ಮೇಲೆ ಹೊಲಸು ಇರುವುದಿಲ್ಲ. ಹೂಗಳನ್ನು ಜೋಡಿಸಿ ಇಟ್ಟಿರುತ್ತಾರೆ. ಇದು ಮಾಡಿರುವವರಿಗೆ ನೋಡುವವರಿಗೆ ಸಂತೋಷ ಕೊಡುತ್ತದೆ. ಇದಕ್ಕೆ ಕೌಶಲ, ಕುಶಲತೆ ಎನ್ನುವರು. ನೋಡಿದರೆ ಆನಂದವಾಗಬೇಕು. ಅದರ ಬದಲು ಟೇಬಲ್ ಅಸ್ತವ್ಯಸ್ತ, ಬಟ್ಟೆ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಆಗಿದ್ದು, ಹೊಲಸು ತುಂಬಿದ್ದರೆ, ಸಂತೋಷವಾಗುತ್ತದೆಯೇ ?. ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ, ಮನಸ್ಸಿಗೆ ಸಂತೋಷ ಕೊಡುವ ಹಾಗೆ, ಆ ಕೆಲಸ ಮಾಡುತ್ತಿರಬೇಕು. ಕೇವಲ ನನಗಲ್ಲ, ನೋಡಿದವರಿಗೆಲ್ಲ.
ಒಂದು ಗೀಜಗನ ಪಕ್ಷಿ ಗೂಡುಕಟ್ಟುತ್ತದೆ .ಏನು ಗೂಡು?. ಎಷ್ಟು ಕಲಾತ್ಮಕವಾಗಿ ಕಟ್ಟುತ್ತದೆ? ಹೇಗೇಗೊ ಎಲ್ಲಿಂದಲೋ ಎಲೆ ತಂದು, ಹೇಗೇಗೊ ಇಡುವುದಿಲ್ಲ. ಒಬ್ಬ ಇಂಜಿನಿಯರ್ ಕೂಡ ಹಾಗೆ ಮಾಡಲು ಸಾಧ್ಯವಿಲ್ಲ. ಅಷ್ಟು ಸುಂದರವಾಗಿ ಕಟ್ಟುತ್ತದೆ. ಅದರ ಹತ್ತಿರ ಏನು ಇಲ್ಲ. ಅಳತೆ ಪಟ್ಟಿ ಇಲ್ಲ. ಸೂಜಿ ಇಲ್ಲ. ಆದರೆ ಹೇಗೆ ತಯಾರು ಮಾಡುತ್ತದೆ?. ಅದನ್ನು ಹೆಣೆಯುವ ರೀತಿ ಹೇಗೆ? ಹೇಗಾದರೂ ಮಾಡುವುದಿಲ್ಲ, ಅದ್ಭುತ ಮಾಡುತ್ತದೆ. ಆದರೆ ಅದು ಅದಕ್ಕೆ ಸಂತೋಷಪಡುತ್ತದೆ. ಮನುಷ್ಯ ಏನೇ ಮಾಡಲಿ ಹೊಲ ಉಳುವುದೇ ಇರಲಿ, ಮನೆ ನಿರ್ಮಾಣ ಮಾಡುವುದೆ ಇರಲಿ, ವ್ಯಾಪಾರವೇ ಮಾಡಲಿ, ಆಫೀಸಲನ್ನೇ ನಡೆಸಲಿ, ಸಾಮಾನು ಇಡುವುದು, ಕೊಡೋದು ಹೇಗಿರಬೇಕೆಂದರೆ ಅದರಲ್ಲಿ ಕೌಶಲ ವ್ಯಕ್ತವಾಗಬೇಕು. ಹೇಗಾದರೂ ಮಾಡುವುದಲ್ಲ. ಚೆನ್ನಾಗಿ ಮಾಡುವುದು. ಅದಕ್ಕೆ ಪ್ರೀತಿ ಬೇಕಾಗುತ್ತದೆ.
ತಾಯಿ ಚಪಾತಿ ಮಾಡುತ್ತಾಳೆ, ಹೇಗೇಗೊ ಮಾಡುವುದಿಲ್ಲ. ಒಳ್ಳೆಯ ವೃತ್ತಾಕಾರದಲ್ಲಿ ಮಾಡುತ್ತಾಳೆ. ಊಟಕ್ಕೆ ಕುಳಿತರೆ ಶಿಸ್ತಾಗಿ ಕೂರಬೇಕು. ಇದರಿಂದ ಜೀವನ ಅರಳುತ್ತದೆ . ನೋಡಿದರೆ ಕಣ್ಣಿಗೆ ಆನಂದ ಇರಬೇಕು. ಕೇಳಿದರೆ ಕಿವಿಗೆ ಸಂತೋಷ ಆಗಬೇಕು. ಹಾಗೆ ಶಬ್ದ ಬಳಸುವುದು. ಹಾಗೆ ಮಾತನಾಡುವುದು. ಯಾವ ಯಾವುದೇ ಪದ ಬಳಸಿ, ಕೇಳುವರಿಗೆ ದುಃಖ, ನಮಗೆ ತ್ರಾಸ ಆದರೆ ಕೌಶಲ ಇಲ್ಲ ಅಂತ ಅರ್ಥ ಆಗುತ್ತದೆ. ಒಂದು ಸಣ್ಣ ಮಾತು ಏನೋ ಅನ್ನೋದು. ಇನ್ನೇನು ಆಗುತ್ತದೆ. ಪಾಂಡವರು ಕೌರವರನ್ನು ಹಬ್ಬಕ್ಕೆ ಆಹ್ವಾನಿಸಿದರು. ಅವರ ಅರಮನೆ ವಿಭಿನ್ನವಾಗಿತ್ತು. ನೀರು ಇರಲಿಲ್ಲ ಆದರೆ ನೀರಿನಂತೆ ಭಾಸವಾಗುತ್ತಿತ್ತು. ಆಗ ದುರ್ಯೋಧನ ಕಾಲು ಮೇಲೆ ಎತ್ತಿದ. ಆಗ ದ್ರೌಪದಿ ಹೇಳಿದ ಮಾತು ಒಂದು ಸಣ್ಣ ಮಾತು, ಕುರುಡನ ಮಗ ಕುರುಡ. ಮಹಾಭಾರತ ಯುದ್ಧಕ್ಕೆ ಕಾರಣವಾಯಿತು. 17 ಅಕ್ಷೋಹಿಣಿ ಸೈನ್ಯ ನಾಶ ವಾಯಿತು. ಅಯ್ಯಾ ಎಂದರೆ ಸ್ವರ್ಗ. ಎಲವೋ ಎಂದರೆ ನರಕ, ಅಂತ ಬಸವಣ್ಣ ಹೇಳಿದರು.
ಬನ್ನಿ ಒಂದು ಕಪ್ ಹಾಲು ಕುಡಿಯಿರಿ, ಅಂದ್ರೆ ಮಿತ್ರ ಆಗುತ್ತಾರೆ. ಮಿತ್ರನಿಗೆ ಏನಾದರೂ ಅಂದರೆ ವೈರಿ ಆಗುತ್ತಾನೆ. ಅದಕ್ಕೆ ಮಾತಿನಲ್ಲಿ ಕೌಶಲ್ಯ, ಕ್ರಿಯೆಯಲ್ಲಿ ಕೌಶಲ್ಯ, ನೋಟದಲ್ಲೂ ಕೌಶಲ್ಯ, ಕೇಳುವುದರಲ್ಲೂ ಕೌಶಲ್ಯ, ನಡೆಯುವುದರಲ್ಲಿ ಕೌಶಲ್ಯ, ಜೀವನವೇ ಕುಶಲತೆಯಿಂದ ಕೂಡಿದರೆ ಸಂತೋಷ ಕೊಡುತ್ತದೆ. ಪ್ರತಿ ಕ್ಷಣ ಯಾವ ಕೆಲಸ ಮಾಡುತ್ತೀರಿ ಅದನ್ನು ಮಧುರ ಮಾಡುವುದು ಕುಶಲ. ಮಾಡುವುದನ್ನು ಚೆನ್ನಾಗಿ ಮಾಡುವುದು. ಎಂಗಾರ ಯಾಕೆ ಮಾಡುವುದು. ನಾವು ಈ ಜಗತ್ತಿಗೆ ಬಂದ ಬಳಿಕ ಈ ಜಗತ್ತನ್ನು ಶೃಂಗರಿಸುವುದಕ್ಕೆ ಒಂದು ಅವಕಾಶ. ಜಗತ್ತನ್ನು ಕೆಡಿಸಬಾರದು. ಜಗತ್ತನ್ನ ಸುಂದರ ಮಾಡಿ ಹೋಗುವುದು. ಯಾವ ಕರ್ಮ ಮಾಡಿದರೆ ನನಗೆ ಹಿತವಾಗುತ್ತದೆ, ಯಾವ ರೀತಿ ಮಾಡಿದರೆ ನನಗೆ ಹಿತವಾದೀತು ಎನ್ನುವುದನ್ನು ಮರೆತರೆ ಕುಶಲತೆ ಇಲ್ಲ. ರೈಲು ಭೋಗಿಯಲ್ಲಿ ಶೇಂಗಾ ತಿಂದು ಅಲ್ಲೇ ಉಗಿಯುತ್ತೇವೆ, ಅದು ಕೌಶಲ ಅಲ್ಲ .ಕೌಶಲ ಅಂದರೆ ಯಾವ ಕೆಲಸದಿಂದ, ಯಾವ ಮಾತಿನಿಂದ, ನನಗೆ ಇತರರಿಗೆ ದುಷ್ಟ ಪರಿಣಾಮ ಆಗೋದಿಲ್ಲ ಅದು. ಸಾಧ್ಯ ಆಗುವಷ್ಟು ಮಾಡುವುದು
ಕಟ್ಟೋದು ಇದ್ದರೆ ಚೆನ್ನಾಗಿ ಕಟ್ಟುವುದು. ವಿಶ್ವೇಶ್ವರಯ್ಯನವರು ವಿದೇಶಕ್ಕೆ ಹೋದಾಗ ಅಲ್ಲಿ ಏನೇನು ಒಳ್ಳೆಯದು ಇದೆ?. ಯಾವುದು ಮಾಡಿದರೆ ಭಾರತಕ್ಕೆ ಅನುಕೂಲವಾಗುತ್ತದೆ?. ಪ್ರತಿದಿನ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ನಮ್ಮ ಕೆಲಸ ಹಸಿವು ಇಂಗಿಸಬೇಕು, ದಾಹ ತಣಿಸಬೇಕು. ದುಃಖಿತರ ಕಣ್ಣೀರು ಒರೆಸಬೇಕು. ಆಸರೆ ಆಗಬೇಕು. ಆರೋಗ್ಯ ವಿಚಾರಿಸಿರಬೇಕು. ಇದು ಸುಂದರ ಕೆಲಸ. ದುಃಖಿತರ ಮುಖದಲ್ಲಿ ನಗು ಅರಳಿರಬೇಕು. ನಿಸರ್ಗ ಪ್ರತಿಯೊಂದನ್ನೂ ಅಷ್ಟು ಕೌಶಲ್ಯದಿಂದ ಮಾಡಿರುತ್ತದೆ. ಹೂವು ಹಣ್ಣು ನೋಡಿರಿ. ಅದರ ಜೋಡಣೆ ಹೊಂದಾಣಿಕೆ ಬಣ್ಣ, ಅದರ ಪ್ಯಾಕಿಂಗ್, ಎಲ್ಲಾ ಕುಶಲತೆಯಿಂದ ಕೂಡಿದೆ. ಅಷ್ಟು ಅಚ್ಚುಕಟ್ಟಾಗಿ ಮಾಡಿರುತ್ತದೆ. ಹೇಗೆ ಮಾಡಬೇಕೊ ಹಾಗೆ ಮಾಡಿರುತ್ತದೆ. ಜಗತ್ತಿನ ಎಲ್ಲಾ ಕೆಲಸ ಕುಶಲತೆಯಿಂದ ಕೂಡಿದೆ. ಯಾರ ಮನೆ ಮುಂದೆ ಕಸ ಚೆಲ್ಲಬಾರದು. ಮನೆ ಒಳಗೂ ಕಸ ಇರಬಾರದು. ಅರಿವೇ ಚೆನ್ನಾಗಿ ಮಡಚಿ, ಶಿಸ್ತಾಗಿ ಇಡುವುದು. ಅಸ್ತವ್ಯಸ್ತ ಇದ್ದರೆ ಮನಸ್ಸು ಅಸ್ತವ್ಯಸ್ತವಾಗುತ್ತದೆ. ಮನಃಶಾಸ್ತ್ರಜ್ಞರು ಹೇಳುತ್ತಾರೆ "ಕೋಣೆ ನೋಡಿದರೆ ನಮ್ಮ ಮನಸ್ಸು ಹೇಗಿದೆ ಅಂತ ಗೊತ್ತಾಗುತ್ತದೆ" ಅಂದರು. ವಧು ನೋಡೋದಕ್ಕೆ ಹೋಗುವಾಗ ಅಥವಾ ವರನನ್ನು ನೋಡಲು ಹೋದಾಗ, ಮನೆ ನೋಡುತ್ತಾರೆ. ಮನೆ ಮಹತ್ವದ್ದು. ನಾಳೆ ಬದುಕುವುದು ಮನೆಯಲ್ಲಿ. ಮನೆ ಸ್ವಚ್ಛ ಇತ್ತು ಅಂದರೆ ನಮ್ಮ ಮನೆಯೂ ಸ್ವಚ್ಛ ಇರ್ತದೆ ಅಂತ ಗೊತ್ತಾಗುತ್ತದೆ. ಮನೆಯಲ್ಲಿ ಹೊಲಸಿದ್ದರೆ ಇವರು ನಮ್ಮ ಮನೆಗೆ ಬಂದರೆ ಇದನ್ನು ಹೊಲಸು ಮಾಡೋದು ಅಂತ ತಿಳಿತಿದ್ರು. ಜೀವನವನ್ನ ಚೆಂದ ಮಾಡಿಕೊಳ್ಳುವುದೆ ಕುಶಲತೆ, ಕೌಶಲ ಅಲ್ಲವೆ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ