ಕ್ಷತ್ರಿಯ ಕುಲಾವತಂಸ
ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹಲವಾರು ಪುಸ್ತಕಗಳು ಈಗಾಗಲೇ ಹೊರಬಂದಿವೆ. ಆದರೆ 'ಕ್ಷತ್ರಿಯ ಕುಲಾವತಂಸ' ಎಂಬ ಈ ಹೊಸ ಕೃತಿ ಶಿವಾಜಿಯ ಭಿನ್ನ ವ್ಯಕ್ತಿತ್ವವನ್ನು ವಿಭಿನ್ನ ದೃಷ್ಟಿಕೋನದಿಂದ ಬಿಂಬಿಸುತ್ತದೆ. ಲೇಖಕಿ ಶೋಭಾ ರಾವ್ ಅವರು ಈ ಕೃತಿಯನ್ನು ಹುಲಿಯ ಹೆಜ್ಜೆಯ ಗುರುತು... ಎಂದು ಹೆಸರಿಸಿದ್ದಾರೆ. ಖ್ಯಾತ ಲೇಖಕ ಸೇತುರಾಮ್ ಅವರು ತಮ್ಮ ಮುನ್ನುಡಿಯಲ್ಲಿ ".... ಸಹಜವಾಗಿ ಇಲ್ಲಿಯ ಜನ ಸಮುದಾಯ ದಾಸ್ಯ ಮನಸ್ಥಿತಿಯಲ್ಲಿಯೇ ಮುಂದುವರೆದಿದೆ. ಆಳುವವರಿಗೆ ಅವಶ್ಯಕತೆ ಕಂಡಿಲ್ಲ. ಹಾಗಾಗಿ ಆಳ್ವಿಕೆಗೆ ಒಳಗಾದವರು ಪ್ರಬುದ್ಧರು ಅನ್ನೋದೇ ಆದರೆ, ಸತ್ಯ ಇತಿಹಾಸದ ದಾಖಲಾತಿ ಜನ ಸಮುದಾಯದ ಜವಾಬ್ದಾರಿ ಆಗುತ್ತೆ. ಈ ನಿಟ್ಟಿನಲ್ಲಿ ಶ್ರೀಮತಿ ಶೋಭಾ ರಾವ್ ಅವರ ಸಫಲ ಪ್ರಯತ್ನ ಛತ್ರಪತಿ ಶಿವಾಜಿಯ ಬದುಕು, ಘಟನೆಗಳು ಸಾಹಸಗಳ ದಾಖಲಾತಿ, ಮೊಘಲರ, ಕೊನೆಯ ಹೆಸರು ಹೇಳುವಂತಹ ಬಾದಶಹ ಔರಂಗಜೇಬ್ ನ ಸಕ್ರಿಯ ಕಾಲಮಾನದ ಪೂರ್ತಾ ಎದುರಿಸಿ ನಿಂತು, ಸೆಡ್ಡು ಹೊಡೆದು ವಿಂಧ್ಯ ದಾಟಿ ಬರದ ಹಾಗೆ ತಡೆಯಾದ ಚರಿತ್ರಾರ್ಹ ಪುರುಷ. ಈತ ಚರಿತ್ರಾರ್ಹ. ಹಾಗಾಗಿ ಶಿವಾಜಿಯ ದಾಖಲಾತಿಯ ಅವಶ್ಯಕತೆ ಇದೆ. ಈ ಪುಸ್ತಕದ ಮೂಲಕ ಅದು ಸಂಪನ್ನವಾಗಿದೆ.
ಬದುಕಿದ್ದು ಕೇವಲ ೫೦ ವರ್ಷ. ಆದರೆ ೫೦ ವರ್ಷ ಪೂರ್ತಾ ಬದುಕಿದ್ದೇ ಪರಕೀಯರ ಆಳ್ವಿಕೆಯಲ್ಲಿ. ಈ ದೇಶ ಕಂಡ ಮೊದಲ ರಾಷ್ಟ್ರವಾದಿ ಶಿವಾಜಿ. 'ಶಿವಾಜಿ ಜಾತ್ಯಾತೀತ, ಔರಂಗಜೇಬ್ ಅಲ್ಲ' ಅದು ನನ್ನ ಮಾತಲ್ಲ. ಡಿಸ್ಕವರೀ ಆಫ್ ಇಂಡಿಯಾದ ಉಲ್ಲೇಖ. ಆಯಾ ವ್ಯಕ್ತಿಯ ಗುಣವಾ ಅಥವಾ ಅವರವರ ಧರ್ಮದ ಮೂಲ ಪ್ರಕೃತಿಯಾ ಅನ್ನುವುದಕ್ಕೆ ಹೆಚ್ಚು ಮಾತುಗಳು ಬೇಕಿಲ್ಲ. ವರ್ತಮಾನದ ಎಷ್ಟೋ ಘಟನೆಗಳು ಸಾಕ್ಷಿಯಾಗಿವೆ. ಯಾವ ಧರ್ಮೀಯರು ಜಾತ್ಯಾತೀತರು ಅನ್ನುವುದು, ಯಾರ ಮನಸ್ಥಿತಿ ಬದಲಾಗಬೇಕು ಅನ್ನುವುದು ಸ್ಪಷ್ಟವಾಗಿದೆ.
ಚರಿತ್ರೆಯ ಯೋಗ್ಯತೆ ಇರುವುದು ಶಿವಾಜಿಗೆ, ಔರಂಗಜೇಬನಿಗಲ್ಲ. ಸಚ್ಚಾರಿತ್ರರಿಗೆ ಚರಿತ್ರೆ, ಅಲ್ಲದವರಿಗಲ್ಲ. ದಾಖಲೆಯ ಯೋಗ್ಯತೆಯ ಬದುಕನ್ನು ದಾಖಲಿಸಬೇಕು. ಅದು ಚರಿತ್ರೆಯಾಗಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕದ ಅವಶ್ಯಕತೆಯಿತ್ತು. ಅದಾಗಿದೆ. ಚರಿತ್ರೆ ಬದಲಾಗಬೇಕಿದೆ, ಮೊಘಲರ ದೃಷ್ಟಿಕೋನದ್ದಲ್ಲ. ಬ್ರಿಟೀಷರ ದೃಷ್ಟಿಕೋನದ್ದಲ್ಲ. ಅವರನ್ನೇ ಓಲೈಸಿದವರ ದೃಷ್ಟಿಕೋನದ್ದಲ್ಲ. ಭಾರತೀಯರ ದೃಷ್ಟಿಕೋನದ ಭಾರತದ ಚರಿತ್ರೆ ದಾಖಲಾಗಬೇಕಿದೆ. ಈ ದೃಷ್ಟಿಕೋನದ ಚರಿತ್ರೆ ಒಪ್ಪದವರು ಭಾರತೀಯರಲ್ಲ ಅನ್ನುವುದು ಮನದಟ್ಟಾಗಬೇಕಿದೆ." ಎಂದು ಅಭಿಪ್ರಾಯ ಪಡುತ್ತಾರೆ.
ಈ ಕೃತಿಯ ಲೇಖಕಿ ಶೋಭಾ ರಾವ್ ಅವರು ತಮ್ಮಲ್ಲಿ ಶಿವಾಜಿ ಬಗ್ಗೆ ಬರೆಯ ಬೇಕೆಂಬ ತುಡಿತ ಹುಟ್ಟಿದ್ದು ಹೇಗೆ ಎಂಬುದನ್ನು ಲೇಖಕರ ಮಾತಿನಲ್ಲಿ ವಿವರವಾಗಿ ತಿಳಿಸಿದ್ದಾರೆ. "... ಶಿವಾಜಿಯ ಬಗ್ಗೆ ನೀವು ಪುಸ್ತಕ ಬರೆದು ಕೊಡಬಹುದಾ ಅಂದಿದ್ದ ಅದನ್ನು (ಮೈಲ್) ನೋಡಿ ತಕ್ಷಣಕ್ಕೆ ಬಂದಿದ್ದು ನಗು. ನಾನಾ ಅದೂ ಶಿವಾಜಿಯ ಬಗ್ಗೆ ಖಂಡಿತಾ ಸಾಧ್ಯವಿಲ್ಲ ಅಂದವಳಿಗೆ, 'ಗಡಿಬಿಡಿ ಏನೂ ಇಲ್ಲ ಮುಂದಿನ ವರ್ಷದ ಶಿವಾಜಿ ಜಯಂತಿಯ ಹೊತ್ತಿಗೆ ಕೊಟ್ಟರೆ ಸಾಕು' ಎಂದಿದ್ದರು. ಹೇಗೂ ಅದನ್ನು ಬರೆಯಲು ಸಾಧ್ಯವಿಲ್ಲ ಎಂದು ನಕ್ಕು ಸುಮ್ಮನಾಗಿದ್ದೆ. ಯಾವುದಾದರೊಂದು ಕೆಲಸವನ್ನು ಹಿಡಿದರೆ ಅದರಲ್ಲಿ ಮುಳುಗಿ ಹೋಗುವುದು ನನ್ನ ಬಲವೂ ಹೌದು, ಬಲಹೀನತೆಯೂ ಹೌದು. ಕೋವಿಡ್ ಸಮಯದಲ್ಲಿ ಅಂತಹದೊಂದು ಕೆಲಸದಲ್ಲಿ ಮುಳುಗಿ ಹೋಗುತ್ತಿದ್ದವಳು ಅರ್ಧದಲ್ಲೇ ನಿಲ್ಲಿಸಿ ಬರಬೇಕಾದ ವಾತಾವರಣ ಸೃಷ್ಟಿಯಾಗುತ್ತಿದೆ ಅನ್ನಿಸಿದಾಗ ತಕ್ಷಣವೇ ಹೊರಬಂದವಳಿಗೆ, ಎದುರಿಗಿದ್ದ ಸಮಯ ಖಾಲಿತನ ಹುಟ್ಟಿಸಬಹುದಾ ಎಂಬ ಪ್ರಶ್ನೆ ಮೂಡಿತ್ತು. ಆಗ ಮತ್ತೆ ಶಿವಾಜಿ ನೆನಪಾಗಿದ್ದರು.
ಹೆಸರು ಏನು ಎಂಬ ಗೊಂದಲ ಶುರುವಾದಾಗ, 'ಪುಟ್ಟಿ, ಯಾವುದೋ ಸಾಮಾನ್ಯ ಹೆಸರು ಬೇಡ' ಎಂದು ಈ ಹೆಸರು ಸೂಚಿಸಿದ್ದು ಅಣ್ಣ ಸತೀಶ್. 'ಕ್ಷತ್ರಿಯ ಕುಲಾವತಂಸ' ಎಂದರೆ 'ಕ್ಷತ್ರಿಯ ಕುಲಕ್ಕೆ ಮುಕುಟ ಪ್ರಾಯ' ಎಂದು ಅದರ ಹಿನ್ನಲೆ ವಿವರಿಸುವಾಗ ಇದಕ್ಕಿಂತ ಸೂಕ್ತ ಹೆಸರು ಬೇರೆ ಯಾವುದೂ ಇಲ್ಲವೆನಿಸಿತ್ತು. 'ನೀವು ಬರೆದು ಕೊಡಿ ಸಾಕು ಉಳಿದದ್ದು ನನ್ನ ಜವಾಬ್ದಾರಿ' ಎಂದು ವಿಘ್ನ ವಿನಾಶಕ ಗಣಪನ ಫೊಟೋ ಕೊಟ್ಟು ಬರೆಯಲು ಹಚ್ಚಿದ್ದು 'ಅವನಿ ಪ್ರಕಾಶನ' ದ ಶ್ರೀಪತಿ ಆಚಾರ್ಯ." ಎಂದು ಪುಸ್ತಕದ ಹೆಸರಿನ ಬಗ್ಗೆ ಇರುವ ಸಂಶಯವನ್ನು ನಿವಾರಣೆ ಮಾಡಿದ್ದಾರೆ.
ಪುಸ್ತಕಕ್ಕೆ ಬೆನ್ನುಡಿ ಬರೆದವರು ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಇವರು. ಇವರು ತಮ್ಮ ಚುಟುಕಾದ ಬೆನ್ನುಡಿಯಲ್ಲಿ "ಒಬ್ಬ ವ್ಯಕ್ತಿಯಾಗಿ ಅಥವಾ ಇತಿಹಾಸದ ಒಂದು ಭಾಗವಾಗಿ ಶಿವಾಜಿಯನ್ನು ಪರಿಗಣಿಸುವುದು ತಪ್ಪಾಗುತ್ತದೆ. ಮನುಷ್ಯನ ಸರ್ವಾಂಗೀಣ ಬೌದ್ಧಿಕ ವಿಕಾಸದ ಸಾಧ್ಯತೆಗಳನ್ನೆಲ್ಲಾ ತಳ್ಳಿ ಹಾಕಿ, ಅವನನ್ನು ಅರ್ಥಹೀನ ನಂಬಿಕೆಗಳ ದಾಸನನ್ನಾಗಿ ಮಾಡಿ, 'ಈ' ನಂಬಿಕೆಗಳೇ ಸರ್ವಶ್ರೇಷ್ಟ, ಇಲ್ಲಿ ಹೇಳಿದ ದೇವರನ್ನು ಬಿಟ್ಟು, ಇನ್ಯಾರನ್ನೂ ಪೂಜಿಸಬಾರದು; ಹಾಗೆ ಮಾಡುವವರನ್ನು ಕತ್ತರಿಸಿ ಹಾಕಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ' ಎಂದು ಹೇಳಿದ್ದಷ್ಟೇ ಅಲ್ಲ, ದೇಶವಿದೇಶಗಳಲ್ಲಿ ಈ ದ್ವೇಷಚಿಂತನೆಯನ್ನು ಬೆಳೆಸಿದ ಮಾನವವೈರಿಗಳ ಅಲೆಯನ್ನು ತಡೆದು ನಿಲ್ಲಿಸಿದ ಶಕ್ತಿ -ಶಿವಾಜಿ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಕೃತಿಯನ್ನು ಪ್ರಕಾಶಿಸಿದ ಅವನಿ ಪ್ರಕಾಶನದ ಶ್ರೀಪತಿ ಆಚಾರ್ಯ ಅವರು ತಮಗೆ ಈ ಪುಸ್ತಕವನ್ನು ಹೊರತರಲು ಪ್ರೇರಣೆಯಾದವರ ಬಗ್ಗೆ ಹಾಗೂ ಸಹಕಾರ ನೀಡಿದವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭರತ್ ರಾಜ್ ಬೈಕಾಡಿ ಅವರು ಬಹಳ ಸೊಗಸಾದ ಮುಖಪುಟವನ್ನು ರಚಿಸಿದ್ದಾರೆ. ಒಳಪುಟಗಳಲ್ಲಿ ಮೂಡಿ ಬಂದ ಶ್ರೀದೇವಿ ಎಸ್ ಆಚಾರ್ಯ ಅವರ ರೇಖಾಚಿತ್ರಗಳೂ ಮುದ್ದಾಗಿವೆ. ಪುಸ್ತಕದ ಕೊನೆಯಲ್ಲಿ ಶಿವಾಜಿಗೆ ಸಂಬಂಧಿಸಿದ ಹಲವಾರು ಛಾಯಾ ಚಿತ್ರಗಳನ್ನು ನೀಡಿದ್ದಾರೆ.
ಸುಮಾರು ೨೮೫ ಪುಟಗಳ ಈ ಪುಸ್ತಕವನ್ನು ಶೋಭಾ ರಾವ್ ಅವರು ತಮ್ಮ ಅಪ್ಪ ಶ್ರೀನಿವಾಸ ರಾವ್ ಎಸ್. ಕಟ್ಟಿಗೇರಿ ಹಾಗೂ ತಮ್ಮ ಪತಿ ಸುಜಿತ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಬಹಳ ಸೊಗಸಾಗಿ ನಿರೂಪಿತವಾದ ಈ ಕೃತಿಯನ್ನು ಸರ್ವರೂ ಓದುವುದು ಈಗಿನ ಕಾಲಘಟ್ಟದಲ್ಲಿ ಅತ್ಯವಶ್ಯಕ.