ಕ್ಷಮಿಸಿ ರಾಷ್ಟ್ರಪತಿಯವರೇ....!

ಕ್ಷಮಿಸಿ ರಾಷ್ಟ್ರಪತಿಯವರೇ....!

ನಾವು‌ ಇನ್ನೂ ನಾಗರಿಕರಾಗುವ ಹಾದಿಯಲ್ಲಿದ್ದೇವೆ ಅಷ್ಟೇ, ಸಂಪೂರ್ಣ ನಾಗರಿಕರಾಗಿಲ್ಲ. ಭಾರತದ ರಾಷ್ಟ್ರಪತಿಯವರ ಬಣ್ಣದ ಬಗ್ಗೆ ಸಾರ್ವಜನಿಕ ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳೇ 2022 ಈ ಸಮಯದಲ್ಲೂ ಅಪಹಾಸ್ಯ ಮಾಡುತ್ತಿದ್ದಾರೆ ಎಂದರೆ ಅವರ ಮನಸ್ಸಿನ ವಿಕೃತಗಳು ಯಾವ ಮಟ್ಟದಲ್ಲಿ ಇರಬಹುದು ಎಂದು ಊಹಿಸಲೂ‌ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಬಹಿರಂಗವಾದ ವಿಷಯವೆಂದರೆ, ಕರ್ನಾಟಕದ ಒಬ್ಬ ಹಿರಿಯ ಮತ್ತು ಜನಪ್ರಿಯ ಪತ್ರಕರ್ತರು ಹಾಗು ಪಶ್ಚಿಮ ಬಂಗಾಳದ ರಾಜಕೀಯ ನಾಯಕರು ಅಸಹ್ಯಕರವಾಗಿ ಮಾತನಾಡಿದ್ದಾರೆ. ಇನ್ನೊಬ್ಬರು‌ ರಾಷ್ಟ್ರ ಪತ್ನಿ ಎಂದು ಅವಹೇಳನ ಮಾಡಿದರು. 

ಆ ಪತ್ರಕರ್ತರು ಮಹಿಳಾ ಆಯೋಗದ ಒತ್ತಡದ ಮೇಲೆ ಕ್ಷಮಾಪಣೆ ಕೇಳಿದ್ದಾರೆ ಎಂದು ಸುದ್ದಿ. ಹಾಗೆಯೇ ತಮ್ಮ ಪಕ್ಷದ ನಾಯಕರ ಪರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕ್ಷಮಾಪಣೆ ಕೇಳಿದ್ದಾರೆ. ಈ ವಿಷಯದಲ್ಲಿ ಇನ್ನೂ ಸಾಕಷ್ಟು ಸುದ್ದಿಗಳು ಇರಬಹುದು. ಈ ತಪ್ಪುಗಳು ಕ್ಷಮಾಪಣೆಗೆ ಅರ್ಹವಲ್ಲ. ಇದು ಒಂದು ವಿಕೃತ ಮನಸ್ಥಿತಿ. ಇದು ಕೇವಲ ಈ‌ ವಿಷಯಕ್ಕೆ ಮಾತ್ರವಲ್ಲ. ಈ ರೀತಿಯ ಅನೇಕ ಜನಾಂಗೀಯ ತಾರತಮ್ಯಗಳಿಗೆ ಈ ಮನೋಭಾವವೇ ಕಾರಣ.

ಇದು ಕೆಲವೊಮ್ಮೆ ಬಹಿರಂಗವಾಗುತ್ತದೆ. ಆದರೆ ಅಂತರಂಗದಲ್ಲಿ ಪ್ರವಾಹವಾಗಿ ಅನೇಕರಲ್ಲಿ ಹರಿಯುತ್ತಲೇ ಇರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿನಲ್ಲಿ ಆತನ ಅಥವಾ ಆಕೆಯ ಜಾತಿ ಧರ್ಮ ಭಾಷೆ ಪ್ರದೇಶ ಆಕಾರ ಎತ್ತರ ಯಾವುದರಲ್ಲೂ ಅವರ ಪಾತ್ರವಿರುವುದಿಲ್ಲ. ಅದು ಸ್ವಾಭಾವಿಕ ಮತ್ತು ಆಕಸ್ಮಿಕ. ಅದನ್ನು ಇದ್ದಂತೆಯೇ ಸ್ವೀಕರಿಸಬೇಕು. ಅದರ ಆಧಾರದ ಮೇಲೆ ತಾರತಮ್ಯ ಅಥವಾ ನಿಂದನೆ ಅಥವಾ ಶ್ರೇಷ್ಠ ಕನಿಷ್ಠದ ಮಾನದಂಡ ಮಾನವೀಯತೆಗೆ ಮಾಡುವ ದ್ರೋಹ. 

ನಮ್ಮ ದೈಹಿಕ ರಚನೆ ಹೇಗೇ ಇರಲಿ ನಾವು ಇತರರಿಗೆ ಉಪಕಾರ ಮಾಡಿದರೆ ಅಥವಾ ಅವರ ಪ್ರೀತಿಗೆ ಪಾತ್ರರಾದರೆ ಅವರಿಗೆ ನಾವು ಸುಂದರವಾಗಿಯೇ ಕಾಣುತ್ತೇವೆ. ಒಂದು ವೇಳೆ ನಾವು ಇತರರಿಗೆ ಮೋಸ ಮಾಡಿದರೆ ಅಥವಾ ಅವರ ಪ್ರೀತಿಗೆ ದ್ರೋಹ ಬಗೆದರೆ ಅವರ ದೃಷ್ಟಿಗೆ ನಾವು ವಿಕೃತವಾಗಿಯೇ ಕಾಣುತ್ತೇವೆ. ಅಂದರೆ ಸೌಂದರ್ಯ ಪ್ರಜ್ಞೆ ಕೇವಲ ದೈಹಿಕ ನೋಟ ಮಾತ್ರವಲ್ಲ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ನಾವು ಸೌಂದರ್ಯ ಎಂದು ಭ್ರಮಿಸುವ ಒಬ್ಬ ಅತ್ಯಂತ ಸುಂದರ ಯುವಕ/ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ನಮಗೆ ಸುಂದರವಾಗಿಯೇ ಕಾಣುತ್ತಾರೆ. ಆದರೆ ಏನೋ ಕಾರಣದಿಂದಾಗಿ  ಆ ಭ್ರಮಿಸಿರುವ ಸುಂದರ ವ್ಯಕ್ತಿಯಿಂದ ನಮಗೆ ಮೋಸವಾಗುತ್ತದೆ ಎಂದು ಭಾವಿಸಿ. ಆಗ ಯಾವ ಸುಂದರ ವ್ಯಕ್ತಿ ಎಂದು ತನ್ನ ಸೌಂದರ್ಯದಿಂದ ನಮ್ಮ ಮನ ಗೆದ್ದಿದ್ದರೋ ಅದೇ ವ್ಯಕ್ತಿ ಈಗ ನಮಗೆ ಕೆಟ್ಟದಾಗಿ ಕುರೂಪಿಯಾಗಿ ಕಾಣತೊಡಗುತ್ತಾರೆ. ಅವರ ಮುಖ ನೋಡಲೇ ಅಸಹ್ಯವಾಗುತ್ತದೆ‌. ಅದೇ ಬಾಹ್ಯ ಸೌಂದರ್ಯ ವ್ಯಾವಹಾರಿಕ ವ್ಯತ್ಯಾಸದಿಂದ ನಮಗೆ ಆ ರೀತಿಯ ಭಾವನೆ ಉಂಟು ಮಾಡುತ್ತದೆ.

ಅದೇ ರೀತಿ ನಾವು ಸೌಂದರ್ಯ ಎಂದು ಭ್ರಮಿಸಿರುವ ಒಬ್ಬ ಕುರೂಪಿ ವ್ಯಕ್ತಿ ಅಥವಾ ನೋಡಲು ಅಷ್ಟೇನು ಚಂದವಿಲ್ಲದ ವ್ಯಕ್ತಿ ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ನಮಗೆ ಸಹಾಯ ಮಾಡಿದರೆ ಅದೇ ಭ್ರಮೆಯ ಕುರೂಪಿ ವ್ಯಕ್ತಿಯ ಚಿತ್ರಣ ನಮ್ಮ ಮನಸ್ಸಿನಲ್ಲಿ ಬದಲಾವಣೆ ಹೊಂದಿ ಸುಂದರವಾಗಿ ಕಾಣತೊಡಗುತ್ತಾರೆ. ಅವರ ನಡವಳಿಕೆಗಳು ನಮಗೆ ಆತ್ಮೀಯತೆಯ‌ ಅನುಭವ ನೀಡುತ್ತದೆ.

ಅಂದರೆ ವ್ಯಕ್ತಿಯ  ಸೌಂದರ್ಯ ಆತ ನಮ್ಮೊಡನೆ ಹೊಂದಿರುವ ಸಂಬಂಧದಿಂದ ಮತ್ತು ಆತನ ಬಗೆಗಿನ ನಮ್ಮ ಅಭಿಪ್ರಾಯದಿಂದ ನಿರ್ಧರಿಸಲ್ಪಡುತ್ತದೆ ಎಂದಾಯಿತು. ಹಾಗಾದರೆ ಮೇಲ್ನೋಟದ ಸೌಂದರ್ಯವನ್ನು ದೀರ್ಘಕಾಲದಲ್ಲಿ ನಿರ್ಧರಿಸುವುದು ನಮ್ಮ ಗುಣ - ನಡವಳಿಕೆ ಎಂದು ಭಾವಿಸಬಹುದಲ್ಲವೇ.?

ಇದೇ ಆಧಾರದ ಮೇಲೆ ಬಹುತೇಕ ಸಿನಿಮಾಗಳು, ಅದರಲ್ಲಿ ನಟಿಸುವ ನಟ ನಟಿಯರ ಗುಣ ರೂಪಗಳು ಸೃಷ್ಟಿಯಾಗಿವೆ. ಒಬ್ಬ  ಯುವತಿಯನ್ನು 5/6 ಜನ ಯುವಕರು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾರೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿರುತ್ತಾಳೆ. ಅದೇ ಸಮಯಕ್ಕೆ ಆಪದ್ಭಾಂದವನಂತೆ ಪ್ರತ್ಯಕ್ಷವಾಗುವ  ನಾಯಕ ಆಕ್ರೋಶದಿಂದ ಆ ಎಲ್ಲಾ ಜನರನ್ನು ಹೊಡೆದು ನಾಯಕಿಯನ್ನು ರಕ್ಷಿಸುತ್ತಾನೆ. ನೋಡುವ ಪ್ರೇಕ್ಷಕನಿಗೆ ಅವನ ಒಳ್ಳೆಯತನದಿಂದಲೇ ಸುಂದರ ನಾಯಕನಾಗಿ ಕಾಣುತ್ತಾನೆ. ಆ ಯುವಕರು ನೋಡಲು ಸುಂದರವಾಗಿದ್ದರೂ ವಿಲನ್ ಗಳಂತೆ ಕೆಟ್ಟದಾಗಿ ಕಾಣುತ್ತಾರೆ. ಅಂದರೆ ಬಾಹ್ಯ ಸೌಂದರ್ಯ ಭ್ರಮೆ ಮತ್ತು ತಾತ್ಕಾಲಿಕ. ಆತನ ಒಳ್ಳೆಯತನವೇ ನಿಜ ಮತ್ತು ಶಾಶ್ವತ ಸೌಂದರ್ಯ ಎಂದು ಪರಿಗಣಿಸಬಹುದಲ್ಲವೇ.?

ಇದೇ ಸತ್ಯವಾದಲ್ಲಿ ಎಷ್ಟೊಂದು ಚೆಂದ ಅಲ್ಲವೆ. ಒಂದು ವೇಳೆ ನಮ್ಮ ಸೌಂದರ್ಯವನ್ನು ನಮ್ಮ ಒಳ್ಳೆಯ ನಡತೆ ನಿರ್ಧರಿಸುವುದಾದರೆ ಅದು ಅನೇಕರಿಗೆ ಉತ್ತಮ ನಾಗರೀಕ ನಡವಳಿಕೆಯನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಬಹುದಲ್ಲವೇ. ಬಾಹ್ಯ ಸೌಂದರ್ಯ ಕೇವಲ ಮೊದಲ ನೋಟದ Physical ಅಪಿಯರೆನ್ಸ್ ಮಾತ್ರ ಮತ್ತು ಭ್ರಮೆ. ನಿಮ್ಮ ಗುಣವೇ ಶಾಶ್ವತ ಸೌಂದರ್ಯ. 

ಈ ನಿಟ್ಟಿನಲ್ಲಿ ನಮ್ಮಲ್ಲಿ ಯಾರಾದರೂ ಬಣ್ಣದ ಅಥವಾ ಜಾತಿಯ ಅಥವಾ ಹಣ ಆಸ್ತಿಯ ಆಧಾರದ ಮೇಲೆ ಇನ್ನೊಬ್ಬರನ್ನು ನಿಂದಿಸುವ ಮೊದಲು ದಯವಿಟ್ಟು ಒಮ್ಮೆ ದೀರ್ಘವಾಗಿ ಆಲೋಚಿಸಿ. ಅದು ನಿಂದಿಸುವವರ ಅಯೋಗ್ಯತನವನ್ನು ಸೂಚಿಸುತ್ತದೆಯೇ ಹೊರತು ನಿಂದನೆಗೆ ಒಳಗಾದವರ ಯೋಗ್ಯತೆಯನ್ನಲ್ಲ ಎಂಬ ಪ್ರಜ್ಞೆ ಸದಾ ಜಾಗೃತವಾಗಿರಲಿ. ಸಮಾಜದ ಎಲ್ಲರ ಮನಸ್ಸು - ಆತ್ಮ - ವ್ಯಕ್ತಿತ್ವಗಳಲ್ಲಿ ಇದು ನೆಲೆಗೊಳ್ಳಲಿ ಎಂದು ಆಶಿಸುತ್ತಾ....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ