ಕ್ಷಮಿಸು ಬಿಡು ಕಂದ...

ಕ್ಷಮಿಸು ಬಿಡು ಕಂದ ನನ್ನನ್ನು,
ನನಗೂ ಉಳಿದಿರುವುದು
ಸ್ವಲ್ಪವೇ ನೀರು,
ಅದನ್ನೂ ಕುಡಿದು ಮುಗಿಸುತ್ತಿದ್ದೇನೆ.
ಮನ್ನಿಸು ಬಿಡು ಕಂದ ನನ್ನನ್ನು
ನಾನು ಉಸಿರಾಡುತ್ತಿರುವುದೂ ಮಲಿನಗೊಂಡ
ಗಾಳಿಯನ್ನು ,
ನಿನಗೆ ಉಳಿದಿರುವುದು ವಿಷಗಾಳಿ ಮಾತ್ರ.
ಮರೆತು ಬಿಡು ಕಂದ ನನ್ನನ್ನು,
ನಾನು ನೋಡಿರುವುದು ಕೆಲವೇ
ಪ್ರಾಣಿ ಪಕ್ಷಿಗಳನ್ನು,
ನಿನಗೆ ಉಳಿದಿರುವುದು ಅವುಗಳ ಚಿತ್ರಗಳು ಮಾತ್ರ.
I am sorry ಪುಟ್ಟ,
ಗಿಡಮರಗಳ ಗೊಂಚಲುಗಳು ಕಾಡೆಂದು ನಮ್ಮಪ್ಪ
ತೋರಿಸುತ್ತಿದ್ದರು,
ಆದರೆ ಸಿಮೆಂಟ್ ಕಟ್ಟಡಗಳೆ ಕಾಡೆಂದು ನಿನಗೆ ಅರ್ಥಮಾಡಿಸಿದ್ದಕ್ಕೆ.
ಬಿಟ್ಟುಬಿಡು ಕಂದ ಈ ಪಾಪಿಯನ್ನು,
ಪ್ರೀತಿ ವಿಶ್ವಾಸಗಳೇ ಮನುಷ್ಯ ಗುಣ ಎಂದು
ಹೇಳಬೇಕಾಗಿದ್ದವನು,
ಹಣವೇ ನಿನ್ನಯ ಗುಣ ಎಂದು ಕಲಿಸಿಕೊಟ್ಟಿದ್ದಕ್ಕೆ.
ಕೊಂದು ಬಿಡು ಕಂದ ನನ್ನನ್ನು,
ಅಮ್ಮನಿಗೂ ಹೆಂಡತಿಗೂ ವ್ಯತ್ಯಾಸ ಗೊತ್ತಿಲ್ಲದ,
ರಾಜಕಾರಣಿಗಳ ಜೊತೆ ವಾಸಮಾಡುವ ಪರಿಸ್ಥಿತಿಯಲ್ಲಿ ನಿನ್ನನ್ನು ಬಿಟ್ಟಿರುವುದಕ್ಕೆ.
ಚಪ್ಪಲಿಯಲ್ಲಿ ಹೊಡೆ ಕಂದ ನನ್ನನ್ನು,
ಈ ತಲೆಹಿಡುಕ, ಲಂಚಬಾಕ, ಅಮಾನವೀಯ,
ಆಡಳಿತ ವ್ಯವಸ್ಥೆಯನ್ನು ನಿನಗೆ ಬಳುವಳಿಯಾಗಿ ನೀಡಿದ್ದಕ್ಕೆ.
ಸುಟ್ಟುಬಿಡು ಕಂದ ನನ್ನನ್ನು,
ಈ ಬೇಜವಾಬ್ದಾರಿ ಅಸಹ್ಯದ, ಕ್ರೂರ ರೀತಿಯ,
ನಿನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವ್ಯವಸ್ಥೆಯನ್ನು ನಿನಗೆ ನೀಡಿದ್ದಕ್ಕೆ.
I am extremely sorry ಕಂದ,
ನಾನೂ ಅಸಹಾಯಕ, ನಾನೂ ಬಲಿಪಶುವೇ,
ಆದರೆ ,
ನನ್ನ ಮುದ್ದು ಬಂಗಾರ,
ನೀನು ಮನಸ್ಸು ಮಾಡಿದರೆ,
ನಿನ್ನ ಮಕ್ಕಳಿಗೆ,
ಶುದ್ಧ, ಸ್ವಚ್ಛ, ಸುಂದರ ನಾಡನ್ನು,
ಸರಳ, ಸಮಾನ, ಮಾನವೀಯ ಅಂತಃಕರಣದ, ಸಮಾಜನ್ನು ಕಟ್ಟಲು ನಿನಗೆ ಸಾಧ್ಯವಿದೆ. ಅದೊಂದೇ ಭರವಸೆ ನನಗೆ ಉಳಿದಿರುವುದು. ನಾ ಎಲ್ಲೇ ಇದ್ದರೂ ನನ್ನ ಹಾರೈಕೆ ನಿನ್ನೊಂದಿಗೆ ಇರುತ್ತದೆ ಚಿನ್ನ.
ಮತ್ತೊಮ್ಮೆ ಕ್ಷಮಿಸು ಕಂದ,
ಮಾಡುವುದನ್ನೆಲ್ಲಾ ಮಾಡಿ ಕಣ್ಣೀರು ಸುರಿಸುತ್ತಿರುವ ಈ ಲಫಂಗನನ್ನು.
ಇಂತಿ,
ಆತ್ಮಸಾಕ್ಷಿಯ ಕಣ್ಣೀರಿನೊಂದಿಗೆ,
ನಿನ್ನ ಅಪ್ಪ...
- ಜ್ಞಾನ ಭಿಕ್ಷಾ ಪಾದಯಾತ್ರೆಯ 152 ನೆಯ ದಿನ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಊರಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ