ಖಲೀಲ್ ಗಿಬ್ರಾನ್ ಕಥೆಗಳು

ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ.
ಹುಚ್ಚು ಮನುಷ್ಯ
ಮಾನಸಿಕ ರೋಗಿಗಳಿಗೆಂದೇ ಇದ್ದ ಆ ಚಿಕಿತ್ಸಾಲಯದ ಕೈದೋಟದಲ್ಲಿ ಒಂದು ದಿನ ನಾನು ಇಬ್ಬ ಯುವಕನನ್ನು ಕಂಡೆ. ಆತನ ಮುಖ ಬಿಳುಚಿಹೋಗಿತ್ತು. ಆದರೂ ಮುದ್ದುಮುದ್ದಾಗಿತ್ತು. ಜೊತೆಗೆ ಮುಖದ ತುಂಬಾ ಅಚ್ಚರಿ ತಾಂಡವವಾಡುತ್ತಿತ್ತು.
ತೋಟದಲ್ಲೊಂದು ಕಡೆ ಇದ್ದ ಒರಗುಮಂಚದ ಮೇಲೆ ಕುಳಿತಿದ್ದ ಅವನ ಬಳಿ ನಾನೂ ಹೋಗಿ ಕುಳಿತೆ. ನೀನು ಇಲ್ಲಿರಲು ಕಾರಣವೇನಯ್ಯ ಎಂದು ವಿಚಾರಿಸಿದೆ. ಆತ ಚಕಿತನಾಗಿ ಒಂದು ಕ್ಷಣ ನನ್ನನ್ನೇ ನೋಡಿದ. ಆಮೇಲೆ ಹೇಳಿದ - ಇದುವರೆಗೂ ಯಾರೂ ಕೇಳದ ಪ್ರಶ್ನೆ ಇದು! ನನ್ನ ತಂದೆ, ನಾನು ಅವರಂತೆಯೇ ಆಗಬೇಕೆಂದು ಹಠ ಹಿಡಿದಿದ್ದರು. ನನ್ನ ಸೋದರಮಾವನೂ ಹೀಗೇ ಬಯಸಿದ್ದರು. ನನ್ನ ಅಮ್ಮನಿಗೋ, ಅವಳ ಈಗಿಲ್ಲದ ತಂದೆಯ ಪಡಿಯಚ್ಚಿನಂತೆ ನನ್ನನ್ನು ರೂಪಿಸುವ ಆಸೆ. ನನ್ನ ಅಕ್ಕನಿಗೋ, ಅವಳ ಗಂಡನಂತೆಯೇ ನಾನೂ ಒಬ್ಬ ನಾವಿಕನಾಗಬೇಕೆಂಬ ಬಯಕೆ. ನನ್ನ ಅಣ್ಣನಿಗೆ, ಒಳ್ಳೆಯ ಕ್ರೀಡಾಪಟುವಾಗಿರುವ ಅವನಂತೆಯೇ ನಾನೂ ಆಗಬೇಕೆಂಬ ಇಚ್ಛೆ.
ಯುವಕ ಮಾತು ಮುಂದುವರೆಸಿ ಹೇಳಿದ - ಇನ್ನು , ನನ್ನ ಶಿಕ್ಷಕರಲ್ಲಿ ಒಬ್ಬರು ತತ್ವಶಾಸ್ತ್ರ ಪಂಡಿತರು. ಇನ್ನೊಬ್ಬರು ಶ್ರೇಷ್ಟ ಸಂಗೀತಕಾರರು. ಮತ್ತೊಬ್ಬರು ತರ್ಕಶಾಸ್ತ್ರ ವಿಧ್ವಾಂಸರು. ಇವರಿಗೂ ನಾನು ಇವರದೇ ಪ್ರತಿಬಿಂಬವಾಗಬೇಕೆಂಬ ಒಳ ಆಸೆ. ಇಷ್ಟು ಹೇಳಿದ ಆತ ಕೊಂಚ ಹೊತ್ತು ಏನೋ ಯೋಚಿಸುತ್ತಿರುವಂತೆ ಸುಮ್ಮನಾದ. ಬಳಿಕ ಹೇಳಿದ -
ಹಾಗಾಗಿಯೇ ನಾನು ನೇರವಾಗಿ ಇಲ್ಲಿಗೆ ಬಂದೆ. ಇಲ್ಲಿ ಇದ್ದರೆ ನನ್ನ ಬುದ್ದಿ ಹೆಚ್ಚು ನೆಟ್ಟಗಿರುತ್ತದೆ ಅನ್ನಿಸುತ್ತೆ. ಏನಿಲ್ಲದಿದ್ದರೂ ನಾನು ನಾನಾಗಿಯೇ ಇರಬಹುದು ನೋಡಿ!
ಬಳಿಕ, ಆತ ಇದ್ದಕ್ಕಿದ್ದಂತೆ ನನ್ನತ್ತ ಮುಖ ತಿರುಗಿಸಿ ಹೇಳಿದ -ಹೇಳಿ, ನೀವು ಕೂಡ ಓದಿನ ಹುಚ್ಚಾಟ ಮತ್ತು ಸಲಹೆ ನೀಡುವವರ ಕಾಟ ತಾಳಲಾರದೆ ಇಲ್ಲಿಗೆ ಬಂದಿರಾ?
ನಾನಂದೆ - ನಾನು ಒಬ್ಬ ಸಂದರ್ಶಕನಾಗಿ ಬಂದೆ ಅಷ್ಟೆ.
ಓ. ಹಾಗಾದರೆ ನೀವು ಇಲ್ಲಿನ ತಡೆಗೋಡೆಯ ಆಚೆ ಇರುವ ಇನ್ನೊಂದು ಹುಚ್ಚಾಸ್ಪತ್ರೆಯಲ್ಲಿರುವವರು ಅನ್ನಿ!
***
ಇಬ್ಬರು ಬೇಟೆಗಾರರು’
ಮೇ ತಿಂಗಳ ಒಂದು ದಿನ ಸಂತೋಷ ಹಾಗೂ ದುಃಖ ಎರಡೂ ಒಂದು ಸರೋವರದ ತೀರದಲ್ಲಿ ಭೇಟಿಯಾದವು. ಬಳಿಕ ಸರೋವರದ ಪ್ರಶಾಂತ ಜಲದ ಸಮೀಪದಲ್ಲಿಯೇ ಮಾತಿಗಿಳಿದವು. ಸಂತೋಷವು ಭೂಮಿಯ ಚೆಲುವಿನ ಬಗ್ಗೆ ಹೇಳಿತು. ಕಾಡಿನೊಳಗಿನ ಹಾಗೂ ಬೆಟ್ಟಗಳ ತಪ್ಪಲಿನ ಅಚ್ಚರಿಗಳ ಬಗ್ಗೆ ಹೇಳಿತು. ಮುಂಜಾವು ಹಾಗೂ ಸಂಜೆಗಳ ಹೊತ್ತಿನಲ್ಲಿ ಕೇಳಿಬರುವ ಹಾಡುಗಳ ಬಗ್ಗೆ ಹೇಳಿತು.
ದುಃಖವು ಸಂತೋಷ ಹೇಳಿದ ಮಾತಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿತು. ಕಾರಣ, ಅದಕ್ಕೆ ಕ್ಷಣ ಕ್ಷಣಕ್ಕೂ ಜರಗುವ ಪ್ರಕೃತಿಯ ಚಮತ್ಕಾರ ಹಾಗು ಚೆಲುವಿನ ಅರಿವಿತ್ತು. ಅದು ಮೇ ತಿಂಗಳ ದಿನಗಳಲ್ಲಿನ ಹೊಲಗಳ ಬಗ್ಗೆ, ಬೆಟ್ಟಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿತು.
ಹೀಗೆ ಅವೆರಡರ ನಡುವಿನ ಮಾತುಕತೆ ತುಂಬಾ ದೀರ್ಘವಾಗಿತ್ತು. ತಮಗೆ ಗೊತ್ತಿದ್ದ ಎಲ್ಲದರ ಬಗೆಗೂ ಅವು ತಮ್ಮ ಒಪ್ಪಿಗೆಯನ್ನು ಪ್ರಕಟಿಸಿದವು. ಅದೇ ಸಮಯದಲ್ಲಿ ಆ ಸರೋವರದ ಆಚೆಯ ದಡದಲ್ಲಿ ಇಬ್ಬರು ಬೇಟೆಗಾರರು ನಡೆದು ಹೋಗುತ್ತಿದ್ದರು. ಅವರಲ್ಲೊಬ್ಬ ಈಚೆಯ ದಡದ ಮೇಲೆ ಕಣ್ಣು ಹಾಯಿಸಿದಾಗ ಇಬ್ಬರು ವ್ಯಕ್ತಿಗಳು ಕಣ್ಣಿಗೆ ಬಿದ್ದು, ‘ಯಾರಿರಬಹುದು ಆ ಇಬ್ಬರು?’ ಎಂದು ಇನ್ನೊಬ್ಬನನ್ನು ಕೇಳಿದ.
‘ಇಬ್ಬರು ಎಂದೆಯಾ? ನನಗಂತೂ ಒಬ್ಬನೇ ಕಾಣಿಸುತ್ತಿದ್ದಾನೆ ಎಂದ ಇನ್ನೊಬ್ಬ.’
ಇಲ್ಲ, ಇಬ್ಬರಿದ್ದಾರೆ’ ಎಂದ ಮೊದಲನೆಯ ಬೇಟೆಗಾರ.
‘ಇಲ್ಲ, ನಾನು ಕಾಣುತ್ತಿರುವುದು ಒಬ್ಬನನ್ನೇ. ಸರೋವರದಲ್ಲಿ ಬಿದ್ದಿರುವ ಪ್ರತಿಬಿಂಬವೂ ಒಬ್ಬನದ್ದೇ’ ಎಂದ ಎರಡನೆಯ ಬೇಟೆಗಾರ.
‘ಇಲ್ಲ, ಅಲ್ಲಿರುವವರು ಇಬ್ಬರು’ ಎಂದ ಮೊದಲನೆಯವನು. ನೀರಿನಲ್ಲಿ ಕಾಣಿಸುತ್ತಿರುವ ಪ್ರತಿಬಿಂಬ ಇಬ್ಬರದ್ದು ಎಂದು ಅವನು ವಾದಕ್ಕಿಳಿದ.
ಆದರೆ ಎರಡನೆಯವನು ಪಟ್ಟು ಹಿಡಿದು ಹೇಳಿದ - ‘ಅಲ್ಲಯ್ಯ, ನಾನು ನೋಡುತ್ತಿರುವುದು ಒಬ್ಬನನ್ನೇ.’
ಮೊದಲನೆಯವನು ಮತ್ತೆ ಹೇಳಿದ ‘ಆದರೆ ನನಗೆ ಸ್ಪಷ್ಟವಾಗಿ ಕಾಣಿಸುತ್ತಿದೆಯಲ್ಲಾ, ಇಬ್ಬರಿದ್ದಾರೆ ಅಲ್ಲಿ.’
‘ಇಂದಿಗೂ ಒಬ್ಬ ಬೇಟೆಗಾರ ಹೇಳುತ್ತಿದ್ದಾನೆ - ‘ಇನ್ನೊಬ್ಬನಿಗೆ ಇಬ್ಬಿಬ್ಬರು ಕಾಣಿಸುತ್ತಿದ್ದಾರೆಂದು. ಆದರೆ ಇನ್ನೊಬ್ಬ ಹೇಳುತ್ತಿದ್ದಾನೆ -ತನ್ನ ಗೆಳೆಯ ಹೆಚ್ಚು ಕಮ್ಮಿ ಕುರುಡನೇ ಆಗಿಬಿಟ್ಟಿದ್ದಾನೆಂದು’.
(ಸಂಗ್ರಹಾನುವಾದ)
ಚಿತ್ರ ಕೃಪೆ: ಅಂತರ್ಜಾಲ ತಾಣ