ಖಾಲಿಯಾದರೆ ಅಖಾಡ..

ಖಾಲಿಯಾದರೆ ಅಖಾಡ..

ಅನಂತದಲಿ ಲೀನ
ಆದ ತಕ್ಷಣ 
ಹೆಸರು ಕೀರ್ತಿ ಕಿತಾಪತಿ
ಜತೆಗೇ ಬರುವವನಾ ? ||

ಕಾಲ್ಜಾಡಿಸಿ ಒದ್ದೆಲ್ಲಾ ಬಿಟ್ಟು
ಹೋದಾ ಮೇಲೂ
ನೆನೆಯೊ ಮಂದಿಗೆ ನೆನಪು
ಗುದ್ದೊ ಸುದ್ದೀನಾ? ||

ಗಳಿಸಿದ್ದು ಉಳಿಸಿದ್ದು
ಕಪಾಟಲಿ ಬೀಗ
ಬೀಗವಿರದ ಬಾಯಿಗೆ ಮಾತ್ರ
ನೆನಪಲಿ ಜಾಗಾನಾ? ||

ವಿಚಾರ, ವಾದ ಮಂಡನೆ
ಪರ, ವಿರೋಧ ಗುಲ್ಲು
ತಾತ್ವಿಕಕು ಸಾತ್ವಿಕ ಘನತೆ ಸುತ್ತು
ಇನ್ನು ಚರ್ಚೆಗೂ ಮೂರ್ಛೆನಾ? ||

ನಂಬಿಕೆಯ ಹೊಡೆದಾಟದಲಿ
ವಾದ-ವಿವಾದ-ವಿರೋಧ
ಮಟ್ಟಿಯ ಕಿಲಾಡಿಯೆ ಖಾಲಿ 
ಅಖಾಡಕೆ ನಿರಾಸೆಯಾ? ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------

Comments

Submitted by kavinagaraj Mon, 08/25/2014 - 09:35

ಗೊತ್ತಿಲ್ಲದೆ ಹುಟ್ಟಿ, ಗೊತ್ತಿಲ್ಲದೆ ಬೆಳೆದು, ಗೊತ್ತಿಲ್ಲದನ್ನು ಗೊತ್ತು ಮಾಡಿಕೊಳ್ಳಲಾಗದೆ, ಗೊತ್ತಿಲ್ಲದೆ ಅಳಿಯುವ ಪರಿ! ಇದಕ್ಕೆ ಏನೆನ್ನಬೇಕೋ ಗೊತ್ತಿಲ್ಲ!

Submitted by H A Patil Mon, 08/25/2014 - 20:56

ನಾಗೇಶ ಮೈಸೂರು ರವರಿಗೆ ವಂದನೆಗಳು
ಅನಂತ ಮೂರ್ತಿ ಯವರನ್ನು ಕುರಿತು ನಿಮ್ಮದೆ ಆದ ದೃಷ್ಟಿ ಕೋನದಲ್ಲಿ ಬರೆದ ಕವನ ಚೆನ್ನಾಗಿದೆ. ಧನ್ಯವಾದಗಳು.

Submitted by nageshamysore Wed, 08/27/2014 - 20:48

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ತಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಪರಿಭ್ರಮಣದ ದೆಸೆಯಿಂದ ಪ್ರತಿಕ್ರಿಯೆಗೆ ಮಾರುತ್ತರ ಬರೆಯಲು ತಡವಾಯಿತು , ಕ್ಷಮೆಯಿರಲಿ. ನಿಮ್ಮ ಲೇಖನವನ್ನು ಓದಿದೆ - ಚೆನ್ನಾಗಿ ಬಂದಿದೆ. ಗುರುತರವಾಗಿ ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರ ವಿದಾಯ ಉಂಟುಮಾಡುವ ಶೂನ್ಯ ಭಾವ ಎಲ್ಲಾ ತರದ ಭಾವನೆಗಳ ಮಿಶ್ರಣವೆನಿಸಿದಾಗ ಹೊರಟ ಕವಿತೆಯಿದು. ಅನಂತಮೂರ್ತಿಗಳ ನೆನಪಿಗೆಂದೆ ನೇರ ಬರೆಯದಿದ್ದರು, ಅವರ ಸಾವಿನ ಸುದ್ಧಿ ಈ ಭಾವಕ್ಕೆ ಪ್ರೇರೇಪಣೆಯಾದದ್ದಂತೂ ನಿಜ. ಮತ್ತೆ ಧನ್ಯವಾದಗಳು.