ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯ ಪುಣ್ಯಸ್ಮರಣೆ

ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯ ಪುಣ್ಯಸ್ಮರಣೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತವರು ಹಲವಾರು ಮಂದಿ. ಕ್ರಾಂತಿಕಾರಿಗಳ ಪ್ರತಾಪಕ್ಕೆ ಯಾವಾಗಲೂ ಬ್ರಿಟೀಷ್ ಸರಕಾರ ಅಂಜುತ್ತಲೇ ಇತ್ತು. ತನ್ನ ೧೮ನೇ ವಯಸ್ಸಿನಲ್ಲೇ ಬ್ರಿಟೀಷರ ನಿದ್ರೆ ಕೆಡಿಸಿದ ಕ್ರಾಂತಿಕಾರಿಯೇ ಖುದೀರಾಮ ಭೋಸ್. ಹದಿಹರೆಯದ, ಆಟವಾಡಿಕೊಂಡು ಇರಬೇಕಾದ ಪ್ರಾಯದಲ್ಲಿ ಭಾರತ ಮಾತೆ ಪರಕೀಯರ ಆಳ್ವಿಕೆಯಿಂದ ಸ್ವತಂತ್ರಳಾಗಬೇಕೆಂಬ ಹಂಬಲದಿಂದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಗಲ್ಲು ಶಿಕ್ಷೆಗೆ ಗುರಿಯಾದ ಮಹಾನ್ ಚೇತನವೇ ಖುದೀರಾಮ ಭೋಸ್.

ಖುದೀರಾಮ ಭೋಸ್ ಇವರನ್ನು ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಬಲಿದಾನ ನೀಡಿದ ಸಣ್ಣ ವಯಸ್ಸಿನ ಕ್ರಾಂತಿಕಾರಿ ಎಂದು ಇತಿಹಾಸಕಾರರು ನೆನಪು ಮಾಡಿಕೊಳ್ಳುತ್ತಾರೆ. ಬಂಗಾಳದ ಅಲೀಪೊರಾದ ಪ್ರಸಿಡೆನ್ಸಿ ಕೋರ್ಟ್ ನ ನ್ಯಾಯಾಧೀಶರೂ, ಮ್ಯಾಜಿಸ್ಟ್ರೇಟರೂ ಆಗಿದ್ದ ಡಗ್ಲಾಸ್ ಕಿಂಗ್ಸ್ ಫೋರ್ಡ್ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ಖುದೀರಾಮ ಭೋಸ್ ಹಾಗೂ ಅವರ ಸಹಚರನಾಗಿದ್ದ ಪ್ರಫುಲ್ಲ ಚಾಕಿ ನ್ಯಾಯಾಧೀಶರ ವಾಹನದ ಮೇಲೆ ಬಾಂಬ್ ಎಸೆಯುತ್ತಾರೆ. ಅದರೆ ಆ ವಾಹನದಲ್ಲಿ ನ್ಯಾಯಾಧೀಶರು ಇರುವುದಿಲ್ಲ. ಅದರಲ್ಲಿ ಅವರ ಸಂಬಂಧಿಕರಾದ ಮಹಿಳೆಯರಿಬ್ಬರು ಇರುತ್ತಾರೆ. ಅವರು ಈ ಬಾಂಬ್ ದಾಳಿಯಿಂದ ಮರಣಹೊಂದುತ್ತಾರೆ. ನ್ಯಾಯಾಧೀಶ ಡಗ್ಲಾಸ್ ಕಿಂಗ್ ಫೋರ್ಡ್ ಬೇರೊಂದು ವಾಹನದಲ್ಲಿ ಬರುತ್ತಿದ್ದುದರಿಂದ ಬಚಾವ್ ಆಗಿಬಿಡುತ್ತಾರೆ. ಖುದೀರಾಮ ಭೋಸ್ ಮತ್ತು ಪ್ರಫುಲ್ಲ ಚಾಕಿ ಪೋಲೀಸರಿಂದ ಪಾರಾಗಲು ಬೇರೆ ಬೇರೆಯಾಗಿ ಓಡುತ್ತಾರೆ. ಆದರೆ ಅವರಿಬ್ಬರೂ ಬೇರೆ ಬೇರೆ ಕಡೆ ಸಿಕ್ಕಿ ಬಿದ್ದರೂ, ಪ್ರಫುಲ್ಲ ಚಾಕಿ ತನ್ನ ರಿವಾಲ್ವರ್ ನಿಂದ ತಾನೇ ಗುಂಡು ಹಾರಿಸಿ ಮರಣವನ್ನಪ್ಪುತ್ತಾನೆ. ಖುದೀರಾಮ ಮಾತ್ರ ಜೀವಂತವಾಗಿ ಬಂಧನಕ್ಕೆ ಒಳಗಾಗುತ್ತಾನೆ. ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆದು ಆಗಸ್ಟ್ ೧೧, ೧೯೦೮ರಂದು ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯನ್ನು ಗಲ್ಲಿಗೇರಿಸುತ್ತಾರೆ. ತನ್ನ ಕೇವಲ ೧೮ರ ಹರೆಯದಲ್ಲಿ ಭಾರತದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಖುದೀರಾಮ ಭೋಸ್ ಗಲ್ಲಿಗೇರುವಾಗ ಅವನ ಕೈಯಲ್ಲಿ ಇದ್ದುದು ಭಗವದ್ಗೀತೆಯ ಪುಸ್ತಕ ಹಾಗೂ ನಾಲಗೆಯಲ್ಲಿ ‘ವಂದೇ ಮಾತರಂ’ ಉದ್ಘೋಷ. ಇವರ ಗಲ್ಲು ಶಿಕ್ಷೆಯ ಬಗ್ಗೆ ಮಹಾತ್ಮಾ ಗಾಂಧೀಜಿಯವರು ತಮ್ಮ ಲೇಖನದಲ್ಲಿ ಕ್ರಾಂತಿಕಾರಿಗಳ ಹತ್ಯಾ ನೀತಿಯನ್ನು ಖಂಡಿಸುತ್ತಾರೆ. ಇಬ್ಬರು ಮಹಿಳೆಯರ ಸಾವಿನ ಬಗ್ಗೆ ದುಃಖ ವ್ಯಕ್ತ ಪಡಿಸುತ್ತಾರೆ. ಖುದೀರಾಮ ಭೋಸ್ ಇವರಂತಹ ಕ್ರಾಂತಿಕಾರಿಗಳ ಈ ನಡೆಯಿಂದ ಭಾರತಕ್ಕೆ ಸ್ವಾತಂತ್ಯ ಸಿಗಲಾರದು ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಬಾಲಗಂಗಾಧರ್ ತಿಲಕರು ತಮ್ಮ ‘ಕೇಸರಿ' ಪತ್ರಿಕೆಯ ಸಂಪಾದಕೀಯದಲ್ಲಿ ಈ ಇಬ್ಬರು ಯುವಕರ ಕೃತ್ಯವನ್ನು ಬೆಂಬಲಿಸಿ ಲೇಖನ ಬರೆಯುತ್ತಾರೆ. ಸ್ವರಾಜ್ಯದ ಕನಸು ಇಂತಹ ಕ್ರಾಂತಿಕಾರಿಗಳಿಂದಲೇ ನನಸಾಗಲಿದೆ ಎಂದು ಹೊಗಳಿ ಬರೆದ ಲೇಖನವು ಬ್ರಿಟೀಷ್ ಸರಕಾರದ ಕಣ್ಣು ಕೆಂಪಗಾಗಿಸುತ್ತೆ. ತಿಲಕರನ್ನು ಕೂಡಲೇ ಬಂಧಿಸಲಾಗುತ್ತದೆ.  

ಇಂತಹ ಕೆಚ್ಚದೆಯ ಕ್ರಾಂತಿಕಾರಿ ಖುದೀರಾಮ ಭೋಸ್ ಹುಟ್ಟಿದ್ದು ೧೮೮೯ರ ಡಿಸೆಂಬರ್ ೩ರಂದು ಬಂಗಾಳದ ಮೇದಿನಿಪುರದ ಒಂದು ಸಣ್ಣ ಊರಾದ ಮಹೋಬನಿಯಲ್ಲಿ. ಖುದೀರಾಮರ ತಂದೆ ತಹಶೀಲ್ದಾರರಾಗಿದ್ದರು. ತ್ರೈಲೋಕನಾಥ ಭೋಸ್ ಹಾಗೂ ಲಕ್ಷ್ಮೀಪ್ರಿಯ ದೇವಿ ಇವರ ಮೂರು ಮಂದಿ ಹೆಣ್ಣು ಮಕ್ಕಳ ಬಳಿಕ ಹುಟ್ಟಿದ ಮುದ್ದು ಮಗುವೇ ಖುದೀರಾಮ. ಇವನ ಜನ್ಮದ ಬಗ್ಗೆಯೂ ಒಂದು ರೋಚಕ ಕತೆ ಇದೆ. ತ್ರೈಲೋಕನಾಥ ಭೋಸ್ ದಂಪತಿಗಳಿಗೆ ಖುದೀರಾಮ ಹುಟ್ಟುವುದಕ್ಕೂ ಮೊದಲು ಇಬ್ಬರು ಗಂಡು ಮಕ್ಕಳು ಹುಟ್ಟಿದ್ದರು. ಆದರೆ ಅವರು ಅಕಾಲವಾಗಿ ಮರಣ ಹೊಂದಿದ್ದರು. ಆ ಕಾರಣದಿಂದ ಖುದೀರಾಮ ಹುಟ್ಟಿದ ಕೂಡಲೇ ಅವನನ್ನು ಅವನ ದೊಡ್ಡ ಅಕ್ಕನಿಗೆ ಮೂರು ಬೊಗಸೆ ಧಾನ್ಯಗಳಿಗೆ ಮಾರಾಟ ಮಾಡಿದರು. ಅವರಲ್ಲಿ ಇದೊಂದು ಸಂಪ್ರದಾಯವಾಗಿತ್ತು. ಮೊದಲು ಹುಟ್ಟಿದ ಮಕ್ಕಳು ಬದುಕದೇ ಹೋದರೆ ನಂತರ ಹುಟ್ಟಿದ ಮಗುವನ್ನು ಮಾರಾಟ ಮಾಡಿದರೆ ಆ ಮಗು ಬದುಕುತ್ತೆ ಅಂತ. ಆ ರೀತಿ ಖುದೀರಾಮನನ್ನು ಅವನದೇ ಅಕ್ಕ ತೆಗೆದುಕೊಂಡಳು. ಅವಳು ಅವನ ಬೆಲೆಯಾಗಿ ಕೊಟ್ಟದ್ದು ಸ್ಥಳೀಯವಾಗಿ ಬೆಳೆಯಲಾಗುತ್ತಿದ್ದ 'ಖುದ್' ಎಂಬ ಧಾನ್ಯ. ಆ ಕಾರಣದಿಂದಲೇ ಆ ಮಗುವಿಗೆ ಖುದೀರಾಮ ಎಂಬ ಹೆಸರು ಇಡಲಾಯಿತಂತೆ. 

ಬಾಲಕ ಖುದೀರಾಮ ಬದುಕಿದರೂ ಅವನ ಅಮ್ಮ ಹೆಚ್ಚು ಸಮಯ ಬದುಕಲಿಲ್ಲ. ಆರನೇ ವಯಸ್ಸಿಗೆ ಅಮ್ಮನನ್ನೂ , ಅದರ ಮುಂದಿನ ವರ್ಷವೇ ಅಪ್ಪನನ್ನೂ ಕಳೆದುಕೊಂಡ ಖುದೀರಾಮನನ್ನು ಅಕ್ಕನಾದ ಅಪರೂಪ ರಾಯ್ ಸಾಕಿದಳು. ಅಕ್ಕನ ಗಂಡನಾದ ಅಮೃತಲಾಲ್ ರಾಯ್ ಖುದೀರಾಮನನ್ನು ಹ್ಯಾಮಿಲ್ಟನ್ ಪ್ರೌಢ ಶಾಲೆಗೆ ಸೇರಿಸಿದರು. ಆದರೆ ಖುದೀರಾಮನ ಆಸಕ್ತಿಯೇ ಬೇರೆ ಇತ್ತು. ೧೯೦೨-೦೩ರಲ್ಲಿ ಶ್ರೀ ಅರಬಿಂದೋ ಹಾಗೂ ಸಹೋದರಿ ನಿವೇದಿತಾ ಮಿಡ್ನಾಪುರ ಊರಿಗೆ ಬರುತ್ತಾರೆ. ಅವರ ಸಾರ್ವಜನಿಕ ಭಾಷಣಗಳಿಂದ ಖುದೀರಾಮ ಆಕರ್ಷಿತನಾಗಿ ಸ್ವಾತಂತ್ರದ ಹೋರಾಟಕ್ಕೆ ಧುಮುಕುತ್ತಾನೆ. ತನ್ನ ೧೫ನೇ ವಯಸ್ಸಿನಲ್ಲೇ ‘ಅನುಶಾಲೀನ್ ಸಮಿತಿ' ಯ ಸದಸ್ಯನಾಗುತ್ತಾನೆ. ಕೊಲ್ಕತ್ತಾದ ಸ್ವಾತಂತ್ರ್ಯ ಹೋರಾಟಗಾರರಾದ ಬರೀಂದ್ರ ಕುಮಾರ್ ಘೋಷ್ ಜೊತೆ ಸೇರಿ ಬ್ರಿಟೀಷ್ ಸರಕಾರದ ವಿರುದ್ಧ ಕರಪತ್ರಗಳನ್ನು ಹಂಚುತ್ತಾನೆ. ಆ ಕಾರಣದಿಂದ ಖುದೀರಾಮ ಬಂಧಿತನಾಗುತ್ತಾನೆ. ಬಿಡುಗಡೆಯಾದ ನಂತರ ತನ್ನ ಸಮಿತಿಯ ಸದಸ್ಯರ ಜೊತೆ ಸೇರಿ ನಾಡ ಬಾಂಬ್ ತಯಾರಿಕೆಯನ್ನು ಕಲಿತುಕೊಳ್ಳುತ್ತಾನೆ. 

೧೯೦೭ರಲ್ಲಿ ಬರೀಂದ್ರ ಕುಮಾರ್ ಘೋಷ್ ಭಾರತೀಯರನ್ನು ನಿರಂತರ ವಿರೋಧಿಸುತ್ತಿದ್ದ ಹಾಗೂ ಶಿಕ್ಷೆ ವಿಧಿಸುತ್ತಿದ್ದ ನ್ಯಾಯಾಧೀಶರಾದ ಡಗ್ಲಾಸ್ ಕಿಂಗ್ಸ್ ಫೋರ್ಡ್ ರನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಖುದೀರಾಮನನ್ನು ಆಯೋಜಿಸುತ್ತಾರೆ. ಅದನ್ನು ಖುದೀರಾಮ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ. ಪ್ರಫುಲ್ಲ ಚಾಕಿ ಎಂಬ ಇನ್ನೊರ್ವ ಕ್ರಾಂತಿಕಾರಿ ಸೇರಿಕೊಳ್ಳುತ್ತಾನೆ. 

ಕಿಂಗ್ಸ್ ಫೋರ್ಡ್ ರನ್ನು ಕೊಲ್ಲಲು ಈ ಮೊದಲೇ ಒಂದು ಪ್ರಯತ್ನ ಮಾಡಲಾಗಿತ್ತು. ಬಾಂಬ್ ಒಂದನ್ನು ಪುಸ್ತಕದಲ್ಲಿ ಅಡಗಿಸಿ ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ಕಿಂಗ್ಸ್ ಫೋರ್ಡ್ ನಿವಾಸಕ್ಕೆ ಕಳುಹಿಸಲಾಗಿತ್ತು. ಇದನ್ನು ಹೇಮಚಂದ್ರ ಎನ್ನುವವರು ತಯಾರಿಸಿದ್ದರು. ಅದನ್ನು ನ್ಯಾಯಾಧೀಶರ ಮನೆಗೆ ತೆಗೆದುಕೊಂಡು ಹೋದವನು ಪರೇಶ್ ಮಲ್ಲಿಕ್ ಎಂಬ ಯುವ ಕ್ರಾಂತಿಕಾರಿ. ಆದರೆ ಅಂದು ಆ ಪ್ಯಾಕೆಟ್ ನ್ನು ನ್ಯಾಯಾಧೀಶರು ತೆಗೆದುನೋಡಲಿಲ್ಲ. ಆದುದರಿಂದ ಅವರ ಜೀವ ಉಳಿಯಿತು. ಆ ಪ್ಯಾಕೆಟ್ ನ್ಯಾಯಾಧೀಶರ ಪುಸ್ತಕಗಳ ಕಪಾಟಿನಲ್ಲೇ ಉಳಿದುಹೋಯಿತು. ಅವರಿಗೆ ಬಿಹಾರದ ಮುಜಫರ್ ಪುರಕ್ಕೆ ವರ್ಗವಾದಾಗ ಅವರ ಸಾಮಾನಿನ ಜೊತೆಯೇ ಆ ಬುಕ್ ಬಾಂಬ್ ಕೂಡಾ ಹೋಗಿತ್ತು. ಆದರೆ ಅದು ಸ್ಫೋಟವಾಗಲೇ ಇಲ್ಲ. ಇದು ನಡೆದದ್ದು ೧೯೦೮ರ ಮಾರ್ಚ್ ತಿಂಗಳಲ್ಲಿ. 

ಎರಡನೇ ಪ್ರಯತ್ನ ಮಾಡಲು ಖುದೀರಾಮ ಮತ್ತು ಪ್ರಫುಲ್ಲ ತಯಾರಾದರು. ಮುಜಫರ್ ಪುರಕ್ಕೆ ಬಂದಿಳಿದ ಖುದೀರಾಮ ಮತ್ತು ಪ್ರಫುಲ್ಲರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಹರೇನ್ ಸರ್ಕಾರ್ ಹಾಗೂ ದಿನೇಶ್ ಚಂದ್ರ ರಾಯ್ ಎಂಬ ಹೆಸರಿನಲ್ಲಿ ಇವರಿಬ್ಬರೂ ಧರ್ಮಶಾಲೆಯಲ್ಲಿ ಉಳಿದುಕೊಳ್ಳುತ್ತಾರೆ. ಕೊಲ್ಕತ್ತಾ ಪೋಲೀಸರು ಮುಜಫರ್ ಪುರದ ಪೋಲೀಸರಿಗೆ ನ್ಯಾಯಾಧೀಶರ ಹತ್ಯಾ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿನ ಪೋಲೀಸರು ಅಪರಿಚಿತ, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಿದರೂ ಖುದೀರಾಮರನ್ನು ಪತ್ತೆ ಹಚ್ಚಲು ಅಸಫಲರಾಗುತ್ತಾರೆ. ಖುದೀರಾಮ ಮತ್ತು ಪ್ರಫುಲ್ಲ ಇವರು ಮೂರು ವಾರಗಳವರೆಗೆ ಅಲ್ಲೇ ಧರ್ಮಶಾಲೆಯಲ್ಲಿ ತಂಗುತ್ತಾರೆ. ನ್ಯಾಯಾಧೀಶರು ಬರುವ ದಾರಿಯಲ್ಲಿ ಅವರ ವಾಹನವನ್ನು ಅಡ್ಡಗಟ್ಟಿ ಬಾಂಬ್ ಹಾಕುವ ಯೋಜನೆ ರೂಪಿಸುತ್ತಾರೆ. ಅದರಂತೆ ಎಪ್ರಿಲ್ ೨೯, ೧೯೦೮ರಂದು ನ್ಯಾಯಾಧೀಶರು ಸಾಗುತ್ತಿರುವ ಗಾಡಿಯ ಮೇಲೆ ಬಾಂಬ್ ಎಸೆಯುತ್ತಾರೆ. ಆದರೆ ಖುದೀರಾಮರ ಅಂದಾಜು ತಪ್ಪಿರುತ್ತದೆ. ಆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರುವವರು ನ್ಯಾಯಾಧೀಶರ ಸಂಬಂಧೀ ಮಹಿಳೆಯರಾಗಿರುತ್ತಾರೆ. ಈ ಬಾಂಬ್ ದಾಳಿಯಲ್ಲಿ ಎರಡು ಮಂದಿ ಮಹಿಳೆಯರು ಮರಣವನ್ನಪ್ಪುತ್ತಾರೆ. 

ಅಲ್ಲಿಂದ ಪಾರಾಗಲು ಖುದೀರಾಮ ಹಾಗೂ ಪ್ರಫುಲ್ಲರು ಬೇರೆ ಬೇರೆ ದಾರಿ ಹಿಡಿಯುತ್ತಾರೆ. ಆಗಲೇ ಇಡೀ ನಗರದಾದ್ಯಂತ ಈ ಹತ್ಯೆಯ ಸುದ್ದಿ ಪ್ರಚಾರವಾಗಿರುತ್ತದೆ. ಆದರಿಂದ ಖುದೀರಾಮರು ಸುಮಾರು ೨೫ ಮೈಲು ನಡೆದುಕೊಂಡು ವೈನಿ (Waini) ರೈಲು ನಿಲ್ದಾಣ ತಲುಪುತ್ತಾರೆ. ಇವರ ಧೂಳು ತುಂಬಿದ ಬಟ್ಟೆ, ಕೈಕಾಲುಗಳಿಂದ ನಿಲ್ದಾಣದಲ್ಲಿದ್ದ ಪೋಲೀಸರಿಗೆ ಇವರ ಮೇಲೆ ಸಂಶಯ ಉಂಟಾಗುತ್ತದೆ. ಇವರನ್ನು ಪ್ರಶ್ನಿಸಿದಾಗ ಅನುಮಾನ ಅಧಿಕವಾಗುತ್ತದೆ. ಅವರನ್ನು ಅಲ್ಲಿಯೇ ದಸ್ತಗಿರಿ ಮಾಡುತ್ತಾರೆ. ಪೋಲೀಸರ ಬಲದ ಎದುರು ಹದಿಹರೆಯದ ಬಾಲಕನಾದ ಖುದೀರಾಮ ಪಾರಾಗಲು ಸಾಧ್ಯವಾಗುವುದಿಲ್ಲ. ಆ ರೈಲು ನಿಲ್ದಾಣಕ್ಕೆ ಈಗ ಖುದೀರಾಮ ಭೋಸ್ ಪುಸಾ ನಿಲ್ದಾಣ ಎಂದು ಹೆಸರಿಸಲಾಗಿದೆ. (ಕೋಲ್ಕತ್ತಾದ ಮೆಟ್ರೋ ನಿಲ್ದಾಣಕ್ಕೂ ಶಹೀದ್ ಖುದೀರಾಮ ನಿಲ್ದಾಣ ಎಂದು ಹೆಸರಿಸಲಾಗಿದೆ) ಮತ್ತೊಬ್ಬ ಕ್ರಾಂತಿಕಾರಿ ಪ್ರಫುಲ್ಲ ಇವರು ಇನ್ನೊಂದು ರೈಲು ನಿಲ್ದಾಣದ ಮೂಲಕ ಪಾರಾಗಲು ಯತ್ನಿಸುತ್ತಾರೆ. ಆದರೆ ರೈಲಿನಲ್ಲಿ ಅವರ ಸಹ ಪ್ರಯಾಣಿಕರಾಗಿದ್ದ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ನಂದಲಾಲ್ ಬ್ಯಾನರ್ಜಿ ಇವರನ್ನು ಗುರುತಿಸುತ್ತಾರೆ ಮತ್ತು ಬಂಧನಕ್ಕೆ ಪ್ರಯತ್ನಿಸುತ್ತಾರೆ. ಆಗ ಪ್ರಫುಲ್ಲರು ತಮ್ಮ ರಿವಾಲ್ವರ್ ಹೊರ ತೆಗೆದು ಹೋರಾಡಿ ಕೊನೆಗೆ ಅದರಲ್ಲಿ ಉಳಿದ ಅಂತಿಮ ಬುಲೆಟ್ ನಿಂದ ತನ್ನ ಬಾಯಿಯೊಳಗೇ ಶೂಟ್ ಮಾಡಿ ವೀರ ಮರಣಹೊಂದುತ್ತಾನೆ.

ಬಂಧನಕ್ಕೆ ಒಳಗಾದ ಖುದೀರಾಮ ಭೋಸ್ ಮೇಲೆ ಎರಡು ಮಂದಿ ಮಹಿಳೆಯರ ಹತ್ಯೆಯ ಮೊಕದ್ದಮೆ ದಾಖಲಾಗುತ್ತದೆ. ಸ್ವಲ್ಪ ಸಮಯ ವಿಚಾರಣೆ ನಡೆದು ಕೊನೆಗೆ ಖುದೀರಾಮ ಭೋಸ್ ಗೆ ಆಗಸ್ಟ್ ೧೧, ೧೯೦೮ರಂದು ಮರಣದಂಡನೆ ಶಿಕ್ಷೆ ಜಾರಿಯಾಗುತ್ತದೆ. ಸಾವಿರಾರು ಜನ ಖುದೀರಾಮನ ಅಂತಿಮ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅವರ ಪಾರ್ಥಿವ ಶರೀರ ಸಾಗುತ್ತಿದ್ದ ದಾರಿಯ ಇಕ್ಕೆಲಗಳಲ್ಲಿ ಸಹಸ್ರಾರು ಜನ ನಿಂತು ಹೂವನ್ನು ಹಾಕಿ ತಮ್ಮ ನಮನಗಳನ್ನು ಸಲ್ಲಿಸುತ್ತಾರೆ. ಕೇವಲ ೧೮ನೇ ವಯಸ್ಸಿನಲ್ಲಿ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಧೀರ ಕ್ರಾಂತಿಕಾರಿಯ ಪುಣ್ಯ ತಿಥಿ ಇಂದು. ಖುದೀರಾಮ ಭೋಸ್ ಇವರ ತ್ಯಾಗ ಮತ್ತು ಬಲಿದಾನವನ್ನು ನಾವೆಂದೂ ಮರೆಯಬಾರದು.     

ಚಿತ್ರ ಕೃಪೆ: ಅಂತರ್ಜಾಲ ತಾಣ