ಗಂಡು ಕರು ಸಾಕಿದರೆ ಲಾಭವಿದೆ !
ಹಸು ಗಂಡು ಕರು ಹಾಕಿತೆಂದರೆ ತಲೆಬಿಸಿ ಮಾಡಿಕೊಂಡು ಅದನ್ನು ತರಾತುರಿಯಲ್ಲಿ ಕಸಾಯಿಗೆ ೫೦೦-೧೦೦೦ರೂ. ಗಳಿಗೆ ಮಾರಬೇಡಿ. ಅದರಿಂದ ತಿಂಗಳಿಗೆ ಕನಿಷ್ಟ ೧೫೦೦ ರೂ. ಆದಾಯ ಇದೆ ಎಂದರೆ ನಂಬುತ್ತೀರಾ? ನಿಜವಾಗಿಯೂ ಇದೆ. ಒಂದು ಗಂಡು ಕರು ದಿನಕ್ಕೆ ಒಂದು ಬುಟ್ಟಿ ಗೊಬ್ಬರ ಹಾಕುತ್ತದೆ. ಇಷ್ಟು ಗೊಬ್ಬರವನ್ನು ನಾವು ಖರೀದಿಸುವುದೇ ಆದರೆ ಅದಕ್ಕೆ ರೂ.೫೦ ಕೊಡಬೇಕು. ನಾವೇ ಅದನ್ನು ಸಾಕಿದರೆ ಕೊಡುವ ರೂ.೫೦ ಉಳಿಯುತ್ತದೆ. ವಾರ್ಷಿಕ ೧೮,೦೦೦ ರೂ. ಗಳ ಗೊಬ್ಬರ ನಮ್ಮಲ್ಲೇ ಉತ್ಪಾದಿಸಬಹುದು.
ಬಹಳ ಜನ ಗಂಡು ಕರು ಸಾಕುವುದಿಲ್ಲ. ಮೊನ್ನೆ ಯಾಕೋ ನನ್ನ ಮನೆಯ ಗಂಡು ಕರುವನ್ನು ಯಾವುದೋ ಗೋಶಾಲೆಗೆ ಕೊಡೋಣ ಎಂದು ಹುಡುಕುತ್ತಾ ಉಪ್ಪಿನಂಗಡಿ ಸಮೀಪದ ಕೊಯಿಲದ ಸರಕಾರಿ ಗೋ ಶಾಲೆಗೆ ಭೇಟಿ ಕೊಟ್ಟೆ. ನೋಡಿದರೆ ಅಲ್ಲಿ ಇರುವ ಸ್ಥಳಾವಕಾಶಕ್ಕಿಂತ ಹೆಚ್ಚು ಗಂಡು ಕರುಗಳಿವೆ. ಒಂದಕ್ಕೊಂದು ತಾಗಿಕೊಂಡು ಬದುಕುವ ಸ್ಥಿತಿ. ಆಹಾರಕ್ಕೂ ಕೊರತೆ ಇರಬಹುದು. ಮೇಲ್ವಿಚಾರಣೆಗೂ ಕಷ್ಟ ಇರಬಹುದು. ಅಂದೇ ನಿರ್ಧಾರ ಮಾಡಿದೆ ನನ್ನ ಗಂಡು ಕರುವನ್ನು ಗೋ ಶಾಲೆಗೆ ಸಾಗಿಸುವ ಬದಲು ಅದನ್ನು ಸಾಕಿ, ಅದರ ಗೊಬ್ಬರವನ್ನು ಹೊಲಕ್ಕೆ ಬಳಸುವುದು ಎಂದು. ನಿಜಕ್ಕೂ ಇದು ಸತ್ಯ. ನಾವು ಮನುಷ್ಯರು. ಸಾಕು ಪ್ರಾಣಿಗಳನ್ನು ನಾವೇ ಸಾಕಬೇಕು. ಅವು ಸಾಕುವವರ ಆಶ್ರಯದಲ್ಲೇ ಬದುಕುವ ಜೀವಿಗಳು. ಗಂಡು ಕರು ಆದರೇನಂತೆ. ಅದರ ಜೀವಿತಾವಧಿಯ ತನಕ ಒಂದು ಕೊಟ್ಟಿಗೆ ಮಾಡಿ ಸಾಕಿದರೆ ನಮ್ಮ ಬದುಕಿನ ಸಾರ್ಥಕತೆಯೂ ಆಗುತ್ತದೆ. ಅದಕ್ಕೆ ಹುಲ್ಲು, ಅಡಿಕೆ ಹಾಳೆ, ಸೋಗೆ ಹಾಕಿದರೆ ತಿಂದು ಬದುಕುತ್ತದೆ. ಸಾಧ್ಯವಿದ್ದರೆ ಹಿಂಡಿ ಕೊಡಬಹುದು. ಇಲ್ಲವಾದರೂ ಅದು ಬದುಕುತ್ತದೆ. ಸಾಕಿದ್ದಕ್ಕೆ ಅದರ ಸಾಮರ್ಥ್ಯಕ್ಕನುಗುಣವಾಗಿ ಪ್ರತಿಫಲ ಕೊಡುತ್ತದೆ. ಅದು ಸಗಣಿ ರೂಪದಲ್ಲಿ ಒಂದು ಬುಟ್ಟಿ ಸಗಣಿ.
ಹಸುಗಳಿಗೆ ಆಹಾರ ಅದು ನಾವು ತಿನ್ನಿಸಿದ ರೀತಿಯಲ್ಲಿ: ಹೋರಿ ಕರು ಸಾಕಿದರೆ ಅದರಿಂದ ಲಾಭ ಏನೆಂದರೆ ಅದು ಕರು ಹಾಕುವುದಿಲ್ಲ. ಕರು ಹಾಕಿದರೆ ಮತ್ತೆ ಅದರ ವಿಲೇವಾರಿ ಸಮಸ್ಯೆ. ಇದ್ಯಾವುದರ ರಗಳೆಯೂ ಇಲ್ಲ. ಒಂದು ಬದಿಯಲ್ಲಿ ಸಾಧಾರಣ ನಿಗಾದಲ್ಲಿ ಸಾಕಿದರೆ ಸಾಕು. ಹೊಟ್ಟೆ ತುಂಬಾ ಆಹಾರ ಕೊಡುತ್ತಿದ್ದರೆ ಸಾಕಾಗುತ್ತದೆ. ಇನ್ನು ನಾವು ಹೋರಿ ಸಾಕುವ ಉದ್ದೇಶವೇ ಗೊಬ್ಬರ ಮಾಡುವುದು ಆದ ಕಾರಣ ಅವುಗಳಿಗೆ ನಮ್ಮ ಹೊಲದ ಹಸುರು ಕಳೆಗಳನ್ನೆಲ್ಲಾ ತಿನ್ನಿಸುವ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಆಹಾರ ಅಭ್ಯಾಸ ಎಂದರೆ ಎಲ್ಲಾ ತರಹದ ಹುಲ್ಲುಗಳನ್ನೂ ಮಿಶ್ರಣ ಮಾಡಿ ತಿನ್ನಲು ಕೊಡುವುದು. ಒಂದೊಂದೇ ಬಗೆಯ ಹುಲ್ಲನ್ನು ತಿನ್ನಲು ಹಾಕಿದರೆ ಅದನ್ನು ತಿರಸ್ಕರಿಸಬಹುದು. ಮಿಶ್ರಣ ಮಾಡಿಕೊಟ್ಟರೆ ಹಾಗೆ ಆಗುವುದಿಲ್ಲ. ಹಸಿವು ಆದಾಗ ಉಳಿದದ್ದನ್ನು ತಿನ್ನಲಾರಂಭಿಸುತ್ತವೆ. ಅಡಿಕೆ ತೋಟ ಉಳ್ಳವರು ಅಡಿಕೆ ಹಾಳೆ, ಹೊಂಬಾಳೆ, ಅಡಿಕೆಯ ಆಗ ತಾನೇ ಬಿದ್ದ ಗರಿಗಳನ್ನು ತಿನ್ನಿಸಬಹುದು. ಬಾಳೆಯ ಹಸುರು ಎಲೆಗಳನ್ನು ತಿನ್ನುತ್ತವೆ. ಹಾಗೆಯೇ ಕೊಕ್ಕೋ ಇದ್ದರೆ ಕೊಕ್ಕೋ ಸೊಪ್ಪು ಹಾಗೂ ಕೊಕ್ಕೋ ಕೋಡಿನ ಸಿಪ್ಪೆಯನ್ನೂ ತಿನ್ನುತ್ತವೆ. ಅನನಾಸು ಬೆಳೆ ಇದ್ದರೆ ಅದರ ಗರಿಯನ್ನೂ ತಿನ್ನುತ್ತದೆ. ತೋಟದಲ್ಲಿ ಬೆಳೆಯುವ ಎಲ್ಲ ನಮೂನೆಯ ಕಳೆಗಳನ್ನೂ ತಿನ್ನುವ ಕಾರಣ ಅದನ್ನು ಕಿತ್ತು ಹಾಕಿದರೆ ಕಳೆ ನಿಯಂತ್ರಣ ಸುಲಭವಾಗಿ ಆಗುತ್ತದೆ. ಬೆಳೆ ಉಳಿಕೆಗಳನ್ನು ಪಶುಗಳು ಇಷ್ಟಪಟ್ಟು ತಿನ್ನುತ್ತವೆ. ಕಾರಣ ಅವುಗಳಲ್ಲಿ ಬೆಳೆಗೆ ಬಳಕೆ ಮಾಡಿದ ಪೋಷಕಾಂಶಗಳ ಉಳಿಕೆ ಇರುತ್ತದೆ. ಕಳೆ ಹುಲ್ಲುಗಳು ಗೊಬ್ಬರ ಕಬಳಿಸಿ ಬೆಳೆದಿದ್ದರೆ ಅದನ್ನು ಇಷ್ಟಪಟ್ಟು ತಿನ್ನುತ್ತದೆ. ನಮ್ಮ ಹೊಲ ಹಿತ್ತಲಲ್ಲಿ ಇರುವ ತ್ಯಾಜ್ಯ ವಸ್ತುಗಳನ್ನು ಒಂದೇ ದಿನದಲ್ಲಿ ಗೊಬ್ಬರ ಮಾಡಿಕೊಡುವ ಒಂದು ವ್ಯವಸ್ಥೆ ಇದ್ದರೆ ಅದು ಹಸು ಅಥವಾ ಹೋರಿ ಸಾಕಾಣಿಕೆ ಮಾತ್ರ. ಕೊಂಡು ತರುವ ಗೊಬ್ಬರದ ಲೆಕ್ಕಾಚಾರ ಹಾಕಿದರೆ ಇದು ಅದಕ್ಕಿಂತ ಕಡಿಮೆಯಾಗುತ್ತದೆ.
ಸಗಣಿ ಗೊಬ್ಬರ ಬೇಕೇ ಬೇಕು: ಮಣ್ಣಿನ ರಚನೆ ಸುಧಾರಣೆಗೆ ಅಂದರೆ ಸಾವಯವ ಇಂಗಾಲ ಬೇಕಾದರೆ ಅದಕ್ಕೆ ಸಗಣಿ ಗೊಬ್ಬರ ಬೇಕು. ಇದನ್ನು ಸ್ಥೂಲ ಗೊಬ್ಬರ ಎನ್ನುತ್ತಾರೆ. ಇದನ್ನು ಹಾಕಿದಾಗ ಮಣ್ಣಿನಲ್ಲಿ ಜೀವಾಣುಗಳಿಗೆ ಆಹಾರ ದೊರೆಯುತ್ತದೆ. ಅವು ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಣ್ಣು ಸಡಿಲವಾಗಿ ಫಲವತ್ತಾಗುತ್ತದೆ. ಇಂದು ರೈತರೆಲ್ಲರೂ ಅನುಭವಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವುದು. ಯಾವಾಗಲೂ ನಿರಂತರ ಮಾನವ ಹಸ್ತಕ್ಷೇಪ ಇರುವ ಬೆಳೆ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುತ್ತಲೇ ಇರುತ್ತದೆ. ಒಂದು ಬುಟ್ಟಿ ಗೊಬ್ಬರವನ್ನು ಬೆಳೆಯ ಬೇರುಗಳ ಸನಿಹ ಹಾಕಿ ವರ್ಷ ಕಳೆದ ತರುವಾಯ ಅಲ್ಲಿ ಉಳಿದಿರುವುದು ಅದರ ನಾರು ಮಾತ್ರ. ಫಲವತ್ತತೆಯನ್ನು ಸಸ್ಯಗಳು ಬಳಸಿ ಮುಗಿಸಿರುತ್ತವೆ. ವರ್ಷದುದ್ದಕ್ಕೂ ನೀರಾವರಿ ಮಾಡುತ್ತಿರುವ ಫಸಲು ಪಡೆಯುತ್ತಿರುವ ಹೊಲ ಕ್ರಮೇಣ ಫಲವತ್ತತೆ ಕಳೆದುಕೊಳ್ಳುತ್ತದೆ. ಉದಾ. ಅಡಿಕೆ ತೋಟವನ್ನು ಕಡಿದು ಹೊಸ ತೋಟ ಮಾಡುವಾಗ ಹೊಸ ಮಣ್ಣಿನಲ್ಲಿ ಬೆಳೆದಂತೆ ಬೆಳೆಯುವುದಿಲ್ಲ. ಕಾರಣ ಫಲವತ್ತೆತೆ ಕೊರತೆ. ಭತ್ತದ ಗದ್ದೆಯಲ್ಲಿ ಹಾಗಾಗುವುದಿಲ್ಲ. ಬೆಳೆ ಬೆಳೆದು ಸ್ವಲ್ಪ ಸಮಯ ಆ ಹೊಲವನ್ನು ಬಿಸಿಲಿಗೆ ತೆರೆದಿರುವ ಕಾರಣ ಅದು ಮತ್ತೆ ಫಲವತ್ತತೆಯನ್ನು ಹೊಂದುತ್ತದೆ. ಈ ಫಲವತ್ತತೆ ಕ್ಷೀಣವಾಗುವುದನ್ನು ಸ್ವಲ್ಪವಾದರೂ ತಡೆಯಬೇಕಾದರೆ ಮಣ್ಣಿಗೆ ಸಗಣಿ ಗೊಬ್ಬರದಂತಹ ಸ್ಥೂಲ ಸಾವಯವ ಗೊಬ್ಬರವನ್ನು ನಿರಂತರವಾಗಿ ಸೇರಿಸುತ್ತಾ ಇರಬೇಕು.
ಹಟ್ಟಿ ತೊಳೆದು ಬಿಡುವಂತಿದ್ದರೆ ಬಹಳ ಲಾಭ: ಹೋರಿ ಸಾಕುವ ಹಟ್ಟಿಯನ್ನು (ಶೆಡ್) ಆದಷ್ಟೂ ಹೊಲದ ಎತ್ತರದ ಸ್ಥಳದಲ್ಲಿ ಮಾಡಬೇಕು. ಮುಂದಿನ ದಿನಗಳಲ್ಲಿ ಕೆಲಸದವರ ಸಮಸ್ಯೆ ಹೆಚ್ಚಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಶೆಡ್ ಅನ್ನು ಎತ್ತರದ ಸ್ಥಳದಲ್ಲಿ ವ್ಯವಸ್ಥಿತವಾಗಿ ತೊಳೆದು ಬಿಡುವಂತೆ ಮಾಡಿದರೆ ಅದರ ತ್ಯಾಜ್ಯಗಳನ್ನು ದ್ರವ ರೂಪದಲ್ಲಿ ತೋಟಕ್ಕೆ ಹರಿಯಬಿಡಬಹುದು. ತೋಟಕ್ಕೆ ನೀರೂ ಆಗುತ್ತದೆ. ಪ್ರಾಣಿಯ ಮಲ, ಮೂತ್ರ ಎಲ್ಲದರ ಪ್ರಯೋಜನವೂ ಮಣ್ಣಿಗೆ ಸಿಕ್ಕಂತಾಗುತ್ತದೆ. ಎತ್ತರದ ಜಾಗದಲ್ಲಿ ಶೆಡ್ ಇದ್ದರೆ ಪೈಪಿನ ಮೂಲಕ ಎಲ್ಲಾ ಕಡೆಗೂ ಗುರುತ್ವ ಶಕ್ತಿಯ ಮೂಲಕ ತೊಳೆದ ನೀರನ್ನು ಸಾಗಿಸಬಹುದು.ಪ್ರಾಣಿಗಳಿಗೆ ಬೆಳಗ್ಗಿನ ಹೊತ್ತಿನ ಬಿಸಿಲು ಬೀಳುವಂತೆ ಶೆಡ್ ನಿರ್ಮಾಣ ಮಾಡಿದರೆ ಅವುಗಳ ಎಲುಬಿನ ಗಟ್ಟಿತನಕ್ಕೆ ಉತ್ತಮ.
ತೋಟದ ಕಳೆ ನಿಯಂತ್ರಣಕ್ಕೆ ಉತ್ತಮ: ಕಳೆ ನಿಯಂತ್ರಣಕ್ಕೆ ಏಕೈಕ ಸುರಕ್ಷಿತ ಉಪಾಯ ಕಳೆಗಳನ್ನು ಮರು ಬಳಕೆ ಮಾಡುವುದು. ಅದನ್ನು ಹಾಗೆಯೇ ಕೊಚ್ಚಿ ಮಣ್ಣಿಗೆ ಸೇರಿಸಿದರೆ ನೀರಾವರಿ ಮಾಡುವ ಕಾರಣ ಅದು ಮತ್ತೆ ಹುಟ್ಟಿಕೊಳ್ಳುತ್ತದೆ. ಕಾಂಪೋಸ್ಟು ಮಾಡಿದರೂ ಕಳೆಯ ಸಸ್ಯಗಳ ಬೀಜಗಳ ಉಳಿಕೆಯಿಂದ ಮತ್ತೆ ಅವು ಬಳಕೆ ಮಾಡಿದಲ್ಲಿ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಅದನ್ನು ಮತ್ತೆ ಹುಟ್ಟದಂತೆ ಮಾಡಬೇಕಾದರೆ ಕಳೆ ಸಸ್ಯಗಳು ಹೂ ಬಿಡುವ ಮುಂಚೆಯೇ ಅವುಗಳನ್ನು ಕಿತ್ತು ಪ್ರಾಣಿಗಳಿಗೆ (ಹಸು ಅಥವಾ ಹೋರಿ) ತಿನ್ನಿಸುವುದು ಸೂಕ್ತ. ಹೂ ಬಂದ ನಂತರ ತಿನ್ನಿಸಿದರೆ ಸಗಣಿಯಲ್ಲಿ ಬೀಜಗಳು ಉಳಿದು ಹುಟ್ಟಿಕೊಳ್ಳುತ್ತವೆ. ಸಾಧಾರಣವಾಗಿ ಕಳೆ ನಿಯಂತ್ರಣ ಮಾಡುವವರು ಕಳೆ ಸಸ್ಯದ ಸೂಕ್ತ ಬೆಳವಣಿಗೆ ಹಂತದಲ್ಲಿ ಅದನ್ನು ನಿಯಂತ್ರಣ ಮಾಡದೆ ಇರುವ ಕಾರಣ ಕಳೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಕಳೆ ನಾಶಕ ಸಿಂಪಡಿಸುವಾಗಲೂ ಸಸ್ಯವು ಹೂ ಬಿಡುವ ಮುಂಚೆ ಸಿಂಪರಣೆ ಮಾಡಬೇಕು. ಕಳೆ ನಾಶಕ ತಾತ್ಕಾಲಿಕ ಕಳೆ ನಿಯಂತ್ರಕವಾದ ಕಾರಣ ಇದರ ಬಳಕೆ ಕಡಿಮೆಮಾಡುವುದೇ ಸೂಕ್ತ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕೊಯಿಲಿನ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ನೆಲದಲ್ಲಿ ಕಳೆ ಇರಲೇಬೇಕು. ಪ್ರಾಣಿಗಳನ್ನು ಸಾಕುವಾಗ ನಿತ್ಯವೂ ಮೇವು ಬೇಕಾಗುವ ಕಾರಣ ನಿರಂತರ ಕಟಾವು ಮಾಡುತ್ತಿರುತ್ತಾರೆ. ಹಾಗಾಗಿ ಕಳೆ ಹೂ ಬಿಡಲು ಅವಕಾಶ ಕಡಿಮೆಯಾಗುತ್ತದೆ. ಕಳೆ ನಿಯಂತ್ರಣದಲ್ಲಿ ಇರುತ್ತದೆ.
ಇಂದಿನ ಕಾಲ ಸ್ಥಿತಿಯಲ್ಲಿ ಹಳ್ಳಿಗಳಲ್ಲೂ ಹಸುಗಳ ಹಾಲು ಕರೆಯಲು ಯಾರಿಗೂ ತಿಳಿಯದ ಸ್ಥಿತಿ ಉಂಟಾಗುತ್ತಿದೆ. ಹಾಲು ಉತ್ಪಾದನೆಗಾಗಿ ಹಸು ಸಾಕುವಾಗ ಅವನಿಗೆ ಸ್ವಾತಂತ್ರ್ಯ ಇಲ್ಲದಾಗುತ್ತದೆ. ಇಂತಹ ತೊಂದರೆಗಾಗಿ ಜನ ಹಸು ಸಾಕಣಿಕೆ ಬೇಡ ಎನ್ನುವ ಸ್ಥಿತಿಗೆ ಬಂದಿದ್ದಾರೆ. ಹಸು ಸಾಕಾಣಿಕೆ ಮಾಡುವವರು ಮಾಡಲಿ. ಆದರೆ ಹೊಲ ತೋಟ ಇದ್ದವರು ಮಾತ್ರ ಹೋರಿ ಕರುಗಳನ್ನಾದರೂ ಸಾಕಿ ಸ್ವಲ್ಪ ಮಟ್ಟಿಗೆಯಾದರೂ ಗೊಬ್ಬರದ ಉತ್ಪಾದನೆ ಮಾಡಿಕೊಳ್ಳಿ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ