ಗಝಲ್ ಗಳ ಪ್ರೇಮಲೋಕ !

ಗಝಲ್ ಗಳ ಪ್ರೇಮಲೋಕ !

ಕವನ

ಗಝಲ್ - ೧

ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ

ನಿನ್ನ ಹೃದಯ ಬಡಿತದ ಏರಿಳಿತಗಳಿಗೆ ಗುರುವಾದೆ ನಲ್ಲೆ

 

ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿದೆಯಾ 

ಬಂಜರು ನೆಲದಲಿ ವಾಸಿಪ ಜನರ ಪಾಲಿಗೆ ವರವಾದೆ ನಲ್ಲೆ

 

ಸೂರ್ಯ ಸುಡುವಾಗ್ನಿ ಆದರೂ ಯೌವನಕ್ಕೂ ಅದಕ್ಕೂ ನಂಟಿದೆಯಲ್ಲವೆ

ಸಪ್ನಗಳ ಮಂದಿರವ ದಾಟಿದರೂ ಗುಲಾಬಿಯೊಳು ಚೆಲುವಾದೆ ನಲ್ಲೆ

 

ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿಯಂತಾದೆ ಏಕೆ

ಲಂಗರು ಹಾಕಿದ ಹಡಗಿನ ಒಡಲಿನ ಸೌಂದರ್ಯಕ್ಕೆ ಒಲವಾದೆ ನಲ್ಲೆ

 

ಸಾಧನೆಯೇ ನನ್ನ ಗುರಿಯೆಂದು ಸಾಗಿದವನು ನಿನಲ್ಲವೇ ಈಶಾ

ಬದುಕಿನಾಳದ ಬಾಳಿನಲ್ಲಿ ಪ್ರತಿಮೆಗಳ ಕೈಹಿಡಿದು ಬಲವಾದೆ ನಲ್ಲೆ

***

ಗಝಲ್-೨

ನೆನಪುಗಳು  ಮನದಿಂದ ಆರಬಹುದು ಗೆಳೆಯ ಪ್ರೀತಿಸಿದ ದಿನಗಳು ಮಾಸಬಹುದೆ

ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಹೀಗೆಯೇ ಚಿಂತನೆಯ ರಶ್ಮಿಗಳು ಮಾಸಬಹುದೆ

 

ನಿಜವೆನ್ನುವ ಸಹನೆಯಲ್ಲಿಯೂ  ಕೆಲವೊಮ್ಮೆ ಕೋಪವದು ಉಕ್ಕುಕ್ಕಿ ಬರುವುದಲ್ಲ ಏಕೆ

ಆತುರದೊಳು ಓಡಿದರೆ ಜಾರುವವನ ನೋವಿನ ಧ್ವನಿಯ ಮಾತುಗಳು ಮಾಸಬಹುದೆ

 

ವಿಚಿತ್ರವಾದರೂ ಸತ್ಯವಿದು ಎನ್ನುವವನ ತಲೆಯದು ಹೆಬ್ಬಂಡೆಯಂತೆ ಮಣಭಾರ ಹೌದೆ

ಚಿತ್ತದೊಳಗಿನ ಸತ್ವಗಳ ಅರಿಯಲಾರದೆ ಇರುವವನ ಕುಟಿಲತೆಯ ಸಾಧನೆಗಳು ಮಾಸಬಹುದೆ

 

ಹಚ್ಚಲಾರದ ದೀಪಗಳ ನಡುವಿನಲ್ಲಿ ಓಡಾಡುವೆನೆಂದರೆ ನಿಜವಾಗಿಯೂ ನನಗೆ ಹುಚ್ಚಲ್ಲವೆ

ಚುಚ್ಚದಿರುವ ದಿನಗಳ ಬಗ್ಗೆಯೇ ನೆನಪಿಸಿಕೊಂಡ ಮೌನದ ಹೃದಯಗಳು ಮಾಸಬಹುದೆ

 

ಮಹಡಿಯ ಮನೆಯಲ್ಲಿದ್ದೆ ಎನ್ನುವ ಕಲ್ಪನೆಯನ್ನೇ ಇತ್ತೀಚೆಗೆ ಮರೆತಿರುವನು ಈಶಾ

ಗೊತ್ತಿರದಂತಹ ನೆಲದ ಮೇಲೆಯೆ ಮಲಗುತ್ತಲೇ ಹೊಂಗಿರಣದ ಕನಸುಗಳು ಮಾಸಬಹುದೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್