ಗಝಲ್ ಗಳ ಮಧುರ ಲೋಕ

ಗಝಲ್ ಗಳ ಮಧುರ ಲೋಕ

ಕವನ

೧.

ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ

ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದು ಹೋಯಿತಲ್ಲ

 

ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ

ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ

 

ಬೆಟ್ಟ ಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ ನೋಡು

ತಾಳ ತಪ್ಪಿ ಬೀಳುವಾಗ ಅಲ್ಲೇ ಮಡಿದು ಹೋಯಿತಲ್ಲ

 

ಬೇಸರದ ಸುಳಿಯ ಒಳಗೆ ಸಿಲುಕಿ ನರಳ ಬೇಕೆ ಬಾಳು

ಮನದೊಳಗೆ ಇರುವ ವಿಷವು  ಹೃದಯ ಅರೆದು ಹೋಯಿತಲ್ಲ

 

ನಡುರಾತ್ರಿಯ ಕತ್ತಲಲ್ಲಿ ಪ್ರೀತಿ ಒಪ್ಪಿ ಇರಲು ಸವಿಯು

ದ್ವೇಷ ವೇಷ ಕಳಚಿ ಇಡಲು ಮೋಹ ಸರಿದು ಹೋಯಿತಲ್ಲ

***

೨.

ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಚೆಲುವೆ

ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಚೆಲುವೆ

 

ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿದಿರೆಯನು

ಎದೆ ಬಯಕೆಯ ನಲಿವ ಉಲಿವ ಹೊಸ ಮನ್ವಂತರವ ಬಯಸುತ್ತಿದ್ದೇನೆ ಚೆಲುವೆ

 

ಅರಳಿರುವ ಕೆಂಪು ಹೂವಿನ ನೆತ್ತರು ಹರಡದಿರಲಿ ಸುತ್ತ ಮುತ್ತಲು ಸವಿ ಇರುವಾಗ

ಪ್ರೀತಿ ಉಕ್ಕುತ್ತಿರುವ ಸಮಯ ಸನಿಹವೇ ಇರು ನೀಯೆಂದು ಕೇಳುತ್ತಿದ್ದೇನೆ ಚೆಲುವೆ

 

ಅರಮನೆಯೊಳಗಿನ  ಒಲವಿನಾಸರೆಯ ಬದುಕು ಗೂಡೊಳಗೆ ಜೊತೆ  ಬಾರದಿರಲಿ

ಬಡವರ ಗುಡಿಸಲಿನಲ್ಲಿ ಸಿಗುವ ನನಸಿನಾಳದ ಪ್ರೇಮಗಳ ಹುಡುಕುತ್ತಿದ್ದೇನೆ ಚೆಲುವೆ

 

ಸಕಲ ವಾಲಗದೊಡನೆ ಹಸೆಮಣೆಯನ್ನೇರಿ ಶಾಸ್ತ್ರಗಳ ಮುಗಿಸಿ ಹೊರಟಿರುವೆ ಈಶಾ 

ನಲುಮೆಯ ಹೂವ ಮಂಚಕೆ ಮದನ ಇಂದ್ರನಾಗಿ ನಿನ್ನ ನಾ ಕರೆಯುತ್ತಿದ್ದೇನೆ ಚೆಲುವೆ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್