ಗಝಲ್ ಗಳ ಮೋಹಕ ಲೋಕ…

ಗಝಲ್ ಗಳ ಮೋಹಕ ಲೋಕ…

ಕವನ

ಗಝಲ್ ೧

ಮನಸು ಕರಗಿದೆಯೆಂದು ಒಲವು ಮೂಡುವುದೇ ಗೆಳತಿ

ಕನಸು ಬಿದ್ದಿದೆಯೆಂದು ನನಸು ಮೆರೆವುದೇ ಗೆಳತಿ

 

ತಂಪಿರುವ ಹೊತ್ತಲ್ಲಿ ಮಧುಜಾರಿತೇ ಏಕೆ

ಕಂಪಿದೆಯೆಂದು ಸ್ವರವು ಬರುವುದೇ ಗೆಳತಿ

 

ನೇಸರನ ಬೆಳಕಿನಲಿ ಸವಿಬಯಕೆಯೇ ಚೆಲುವೆ

ಚಂದ್ರನಾಸರೆಗೆ ಪ್ರೀತಿ ಚಿಮ್ಮುವುದೇ ಗೆಳತಿ

 

ಗುರಿಯಿರದ ಬಾಳಿನಲಿ ಬೆಸುಗೆಯದು ಇಹುದೇನು

ಮಾತಿರದ ಸಂಸಾರದಿಮೋಹ ತುಂಬುವುದೇ ಗೆಳತಿ

 

ಚಿಂತೆಯಿರದವಗೆ ಸಂತೆಯಲ್ಲೂ ನಿದ್ರೆಯಂತೆ ಈಶಾ

ಚಪಲವಿಲ್ಲದವನಿಗೆ ರಾತ್ರಿ ಕಾಣುವುದೇ ಗೆಳತಿ

***

ಗಝಲ್ ೨

ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ

ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ

 

ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ

ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ

 

ತಂಪು ಹನಿಸುವ ಚಂದ್ರ ಇನ್ನೂ ಮುಳುಗಿಲ್ಲ ನೋಡು

ಹಾಸಿಗೆಯ ತುಂಬೆಲ್ಲ ಹೊರಳಿಬಿಡೆ ನನ್ನವಳೆ

 

ಆಲಿಂಗನ ಚೆನ್ನಾಟ ಕುಡಿನೋಟದ ಪ್ರೇಮದೊಸಗೆ

ಮುತ್ತುಗಳ ಮತ್ತಿನಲ್ಲಿ ಸುರುಳಿಬಿಡೆ ನನ್ನವಳೆ

 

ಕೈಹಿಡಿದ ಚೆಲುವನೀಗ ಬಿಡುವನೇನು ಹೇಳು ಈಶಾ

ಹಗಲು ಕಳೆದು ರಾತ್ರಿಗೆಲ್ಲ ಮರಳಿಬಿಡೆ ನನ್ನವಳೆ

***

ಗಝಲ್ ೩

ಜೀವನದಲಿ ಸೋತರೂ ಮನಸೆ ಮುಂದೋಡುತಿದೆ ಗೆಳತಿ

ಸಂತೆಯಲಿ ಬೆಂದರೂ ತನುವದುವೆ ಚೆಲುವಾಗುತಿದೆ ಗೆಳತಿ

 

ತಪ್ಪಿನಲಿ ತೆಪ್ಪಗೆ ಕುಳಿತರೂ ಹೃದಯದಾಳವು ಹಸನ್ಮುಖಿಯಾಗಿದೆಯೆ 

ಒಪ್ಪಿನಲಿ ಸುಖವೆನ್ನುವುದರ ನಡು ನಡುವೆಯೆ ಬೆಳಕಾಗುತಿದೆ ಗೆಳತಿ

 

ನವಿರಿನಲಿ ಹಸಿರಿನೊಳಗಿನ ಭಾವನೆಗಳು ಸುಕ್ಕುಗಟ್ಟಲಾರವು ನಮ್ಮೊಳೆಂದು

ಒಲವಿನಲಿ ಜೀವಭಯವ ಒಳಗಿನಿಂದ ದೂಡುತಲೆ ಮೃದುವಾಗುತಿದೆ ಗೆಳತಿ

 

ಅಮೃತದಲಿ ವಿಷವಿದೆಯೆಂದು ಹೇಳುವವರ ನಡೆಯಿಂದ ದೂರವಿರು

ಗುರಿಯಿರಲಿ ಮಹತ್ತರವೆನಿಸಿದ ವಿಚಾರಗಳೆ ಮೊದಲಾಗುತಿದೆ ಗೆಳತಿ

 

ಮಸಲತ್ತಿನಲಿ ಏನು ಮಾಡಿದರೂ ಮುಂದೊಂದುದಿನ ನ್ಯಾಯಸಿಗಲಾರದು ಈಶಾ

ಬಣ್ಣದಲಿ ದೃಷ್ಟಾಂತಗಳನು ಮುಂದಿಟ್ಟು ಹೇಳಿ ಕೊಡುತ್ತಿದ್ದರೆ ಹಿತವಾಗುತಿದೆ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್