ಗಡಿಯಾರ ಬೆಳೆದು ಬಂದ ಹಾದಿ - ಭಾಗ ೫
ಸೂರ್ಯ ಗಡಿಯಾರ, ಚಂದ್ರ ಗಡಿಯಾರ, ಮರಳ ಗಡಿಯಾರ, ಜಲ ಗಡಿಯಾರದ ಬಳಿಕ ಅನ್ವೇಷಣೆಯಾದದ್ದು ಲೋಲಕದ ಗಡಿಯಾರ (ಪೆಂಡ್ಯುಲಮ್ ಗಡಿಯಾರ). ಮೇಲೆ ಉಲ್ಲೇಖಿತ ಎಲ್ಲಾ ಗಡಿಯಾರಗಳಲ್ಲಿರುವ ಸಾಮ್ಯತೆಯನ್ನು ನೀವು ಈಗಾಗಲೇ ಗಮನಿಸಿರಬಹುದು. ಅದೇನೆಂದರೆ ಸಮಯವನ್ನು ಅಳೆಯಲು ಒಂದು ನಿರಂತರ ಚಲನೆ ಅಗತ್ಯ ಇದೆ ಎಂಬ ವಿಷಯ ಮತ್ತು ಆ ಚಲನೆ ಹೊರಗಿನ ಭೌತಿಕ ಅಂಶಗಳಿಂದ ಎಷ್ಟು ಕಡಿಮೆ ಪರಿಣಾಮವನ್ನು ಅನುಭವಿಸುತ್ತದೆಯೋ ಅಷ್ಟು ಸಮಯ ನಿಖರವಾಗಿರುತ್ತದೆ. ಇದೇ ಅಂಶವನ್ನು ಪರಿಗಣಿಸಿ ೧೬೩೭ರಲ್ಲಿ ಇಟಲಿಯ ಭೌತ ವಿಜ್ಞಾನಿ ಗೆಲಿಲಿಯೊ ಲೋಲಕದ ತತ್ವವನ್ನು ಬಳಸಿ ಲೋಲಕ ಗಡಿಯಾರ ಅಥವಾ ಪೆಂಡ್ಯೂಲಮ್ ಗಡಿಯಾರವನ್ನು ನಿರ್ಮಿಸುವ ಪ್ರಯತ್ನ ಮಾಡುತ್ತಾರೆ. ಆದರೆ ತಮ್ಮ ಈ ಸಂಶೋಧನೆಯಲ್ಲಿ ಗೆಲಿಲಿಯೊ ಪೂರ್ಣ ಪ್ರಮಾಣದ ಯಶಸ್ಸು ಪಡೆಯುವಲ್ಲಿ ವಿಫಲರಾಗುತ್ತಾರೆ.
ಆದರೆ ಗೆಲಿಲಿಯೊ ಅವರ ಸಾಧನೆ ಮರೆಗೆ ಸರಿಯುವುದಿಲ್ಲ. ಏಕೆಂದರೆ ಡಚ್ ಗಣಿತ ಶಾಸ್ತ್ರಜ್ಞರಾದ ಕ್ರಿಶ್ಚಿಯಾನ್ ಹೈಗನ್ಸ್ (೧೬೨೯-೧೬೯೫) ಇವರು ಗೆಲಿಲಿಯೊ ಅರ್ಧಕ್ಕೆ ಕೈಬಿಟ್ಟ ಕೆಲಸದ ಮೇಲೆ ಇನ್ನಷ್ಟು ಪ್ರಯೋಗಗಳನ್ನು ನಡೆಸಿ ೧೬೫೬ರಲ್ಲಿ ಮೊದಲ ಪೆಂಡ್ಯುಲಮ್ ಗಡಿಯಾರದ ಆವಿಷ್ಕಾರ ಮಾಡುತ್ತಾರೆ. ಈ ಗಡಿಯಾರವು ಗೆಲಿಲಿಯೊ ಬಳಸಿದ ಲೋಲಕತ್ವದ ಆಧಾರದ ಮೇಲೆಯೇ ನಿರ್ಮಾಣ ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಉದ್ದದ ಲೋಲಕವನ್ನು ಯಾವುದೇ ದೂರಕ್ಕೆ ಎಳೆದು ಬಿಟ್ಟರೂ ಅದರ ಆಂದೋಲನದ ಅವಧಿ ಒಂದೇ ಆಗಿರುತ್ತದೆ. ಇಂಥದೊಂದು ಸರಳ ತತ್ವದ ಆಧಾರದ ಮೇಲೆ ನಿಂತಿರುವ ಲೋಲಕ ಗಡಿಯಾರದ ಕಾರ್ಯ ನಿರ್ವಹಣೆ ನಿಜಕ್ಕೂ ಅದ್ಭುತ. ಕ್ರಿಶ್ಚಿಯಾನ್ ಹೈಗನ್ಸ್ ನಿರ್ಮಿಸಿದ ಈ ಲೋಲಕ ಗಡಿಯಾರವು (ಚಿತ್ರ ಗಮನಿಸಿ) ಇಡೀ ಯುರೋಪ್ ನಲ್ಲಿ ಹೊಸ ಗಡಿಯಾರಗಳ ನಿರ್ಮಾಣಕ್ಕೆ ಮುನ್ನುಡಿಯನ್ನು ಬರೆಯಿತು. ನಂತರದ ದಿನಗಳಲ್ಲಿ ಈ ಬಗೆಯ ಗಡಿಯಾರಗಳು ಜಗತ್ತಿನಾದ್ಯಂತ ನಿರ್ಮಾಣಗೊಂಡವು. ಈಗಲೂ ನೂರಾರು ವರ್ಷಗಳ ಬಳಿಕ ಇಂತಹ ಗಡಿಯಾರಗಳು ಸರಿಯಾದ ಸಮಯವನ್ನು ತೋರಿಸುತ್ತಲೇ ಇವೆ. ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸುತ್ತಲೇ ಇವೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ