ಗಡಿಯಾರ ಸಾಗಿ ಬಂದ ಹಾದಿ - ಭಾಗ ೭

ಗಡಿಯಾರ ಸಾಗಿ ಬಂದ ಹಾದಿ - ಭಾಗ ೭

ಕ್ವಾರ್ಟ್ಸ್ ಗಡಿಯಾರ: ನಾವು ಈಗಾಗಲೇ ಪರಿಚಯ ಮಾಡಿಕೊಂಡ ಜಲ, ಮರಳು, ಸೂರ್ಯ, ಮೇಣದ ಬತ್ತಿ, ಚಂದ್ರ, ಪೆಂಡ್ಯೂಲಮ್, ಪಾಕೆಟ್ ಗಡಿಯಾರಗಳಲ್ಲಿ ಹಲವು ಸಮಯಗಳ ಕಾಲ ಬಳಕೆಯಾದದ್ದು ಪೆಂಡ್ಯೂಲಮ್ ಮತ್ತು ಪಾಕೆಟ್ ಗಡಿಯಾರಗಳು. ಇವುಗಳು ಶತಮಾನಗಳ ಕಾಲ ಬಳಕೆಯಲ್ಲಿದ್ದವು. ಈ ಎರಡು ಗಡಿಯಾರಗಳು ನಿಖರವಾದ ಸಮಯವನ್ನು ತೋರಿಸುತ್ತಿದ್ದರೂ ಇದರಲ್ಲಿ ಅಳವಡಿಕೆಯಾಗಿದ್ದ ಸ್ಪ್ರಿಂಗ್ ನ ಚಾಲನೆಗೆ ಮಾನವನೇ ಕೀ ಕೊಡಬೇಕಿತ್ತು. ಅಂದರೆ ಈ ಗಡಿಯಾರಗಳಿಗೆ ನಿರ್ದಿಷ್ಟ ಸಮಯದಲ್ಲಿ ಕೀ ಕೊಡುವುದರ ಮೂಲಕ ಮತ್ತೆ ಚಲಿಸುವಂತೆ ಮಾಡಬೇಕಿತ್ತು. ಕೀ ಕೊಡದೇ ಇದ್ದಲ್ಲಿ ಈ ಗಡಿಯಾರ ನಿರ್ದಿಷ್ಟ ಸಮಯದಲ್ಲಿ ನಿಂತು ಬಿಡುತ್ತಿತ್ತು. 

ಈ ಸಮಸ್ಯೆಯನ್ನು ಪರಿಹಾರ ಮಾಡಲು ಆವಿಷ್ಕಾರವಾದದ್ದೇ ಕ್ವಾರ್ಟ್ಸ್ ಬಳಸಿದ ಗಡಿಯಾರಗಳು. ೧೯೨೭ರಲ್ಲಿ ಜೋಸೆಫ್ ಹಾರ್ಟನ್, ನಾರ್ಮನ್ ರಿಕರ್ ಮತ್ತು ವಾರೆನ್ ಮ್ಯಾರಿಸನ್ ಎಂಬವರು ಸೇರಿ ಈ ಕ್ವಾರ್ಟ್ಸ್ ಗಡಿಯಾರವನ್ನು ಕಂಡು ಹಿಡಿದರು. ಈ ಗಡಿಯಾರವು ಯಾವುದೇ ಕೀ ಸಹಾಯವಿಲ್ಲದೇ ನಿರಂತರವಾಗಿ ನಡೆಯುತ್ತಿತ್ತು. ಕ್ವಾರ್ಟ್ಸ್ ಎಂಬುದು ಸಿಲಿಕಾನ್ ಮತ್ತು ಆಕ್ಸಿಜನ್ ಸಂಯೋಗದಿಂದ ರೂಪುಗೊಂಡ ಒಂದು ಖನಿಜ. ಇದಕ್ಕೆ ವಿದ್ಯುತ್ ನ್ನು (ಬ್ಯಾಟರಿ ಸೆಲ್ ಗಳ ಮೂಲಕ) ಹರಿಸಿದಾಗ ಇದು ಒಂದು ನಿರ್ದಿಷ್ಟ ಕಂಪನಾಂಕವನ್ನು ತೋರಿಸುತ್ತದೆ. ಈ ಕಂಪನದ ಆಧಾರದ ಮೇಲೆ ಸಮಯವನ್ನು ಅಳೆಯಬಹುದಾಗಿದೆ.

ಒಂದು ಚಿಕ್ಕ ಟ್ಯೂನಿಂಗ್ ಫೋರ್ಕ್ (ಶ್ರುತಿ ಕವಣೆ) ಆಕಾರದಲ್ಲಿ ಕ್ವಾರ್ಟ್ಸ್ ಅನ್ನು ರೂಪಿಸಿ ಅದಕ್ಕೆ ಬ್ಯಾಟರಿ ಸೆಲ್ ಮೂಲಕ ವಿದ್ಯುತ್ತನ್ನು ಹಾಯಿಸಲಾಗುತ್ತದೆ ಮತ್ತು ಅದು ೩೨,೭೬೮ ಬಾರಿ ಕಂಪಿಸಿದಾಗ ಅದನ್ನು ಒಂದು ಸೆಕೆಂಡ್ ಎಂದು ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಗಡಿಯಾರದ ಒಳಗಿರುವ ಚಕ್ರಗಳು ತಿರುಗಿ ಸಮಯವನ್ನು ತೋರಿಸುತ್ತವೆ. ನಿಮ್ಮ ವಾಚ್ ಅಥವಾ ಗಡಿಯಾರದಲ್ಲಿ ಕ್ವಾರ್ಟ್ಸ್ (Quartz) ಎಂದು ಬರೆದಿದ್ದರೆ ಅದು ಈ ಮೇಲೆ ಹೇಳಿದ ಕ್ವಾರ್ಟ್ಸ್ ಹರಳನ್ನು ಬಳಸಿ ತಯಾರಿಸಿದ ಗಡಿಯಾರ. ಈಗಲೂ ಸಹ ಹೆಚ್ಚಿನ ಕೈಗಡಿಯಾರ ಮತ್ತು ಗೋಡೆ ಗಡಿಯಾರಗಳಲ್ಲಿ ಬಳಕೆಯಾಗುವುದು ಕ್ವಾರ್ಟ್ಸ್ ಹರಳು. ಪ್ರತೀ ವರ್ಷ ಸುಮಾರು ೨೦೦ ಕೋಟಿಯಷ್ಟು ಕ್ವಾರ್ಟ್ಸ್ ಬಳಸಿ ತಯಾರಿಸಿದ ಗಡಿಯಾರಗಳು ಮಾರಾಟವಾಗುತ್ತವೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ