ಗಡಿಯಾರ ಸಾಗಿ ಬಂದ ಹಾದಿ - ಭಾಗ ೮

ಗಡಿಯಾರ ಸಾಗಿ ಬಂದ ಹಾದಿ - ಭಾಗ ೮

ಪರಮಾಣು ಗಡಿಯಾರ: ಇದು ಎಲ್ಲಾ ಗಡಿಯಾರಗಳ ಬಾಸ್ ಎನ್ನಬಹುದು. ಏಕೆಂದರೆ ಈ ಗಡಿಯಾರವು ಒಂದು ಸೆಕೆಂಡ್ ಸಹಾ ಮಿಸ್ ಆಗದ ರೀತಿಯಲ್ಲಿ ಸಮಯವನ್ನು ತೋರಿಸುತ್ತದೆ. ಕ್ವಾರ್ಟ್ಸ್ ಗಡಿಯಾರವೂ ಸಮಯ ಪಾಲನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಪರಮಾಣು ಗಡಿಯಾರಗಳ ಬಳಕೆ ಏಕೆ? ಎನ್ನುವ ಸಂಶಯ ನಿಮ್ಮ ಮನಸ್ಸಿನಲ್ಲಿರಬಹುದಲ್ಲವೇ? 

ಕ್ವಾರ್ಟ್ಸ್ ಗಡಿಯಾರವು ನಿಖರವಾಗಿ ಸಮಯವನ್ನು ತೋರಿಸಿದರೂ ಗಡಿಯಾರದಲ್ಲಿ ಬಳಕೆಯಾಗುವ ಕ್ವಾರ್ಟ್ಸ್ ಹರಳುಗಳು ಅತ್ಯಂತ ಚಿಕ್ಕದಾಗಿರುವ ಕಾರಣದಿಂದ ಕೆಲವು ಬಾರಿ ಈ ಗಡಿಯಾರ ನಿರ್ಮಾಣ ಸಮಯದಲ್ಲಿ ಅಳತೆಯ ತಪ್ಪಿನಿಂದಾಗಿ ಗಡಿಯಾರದ ಸಮಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕ್ವಾರ್ಟ್ಸ್ ಒಂದು ಖನಿಜವಾಗಿರುವುದರಿಂದ ಇದರ ಮೇಲೆ ವಾತಾವರಣವೂ ಪ್ರಭಾವ ಬೀರಲು ಸಾಧ್ಯವಿದೆ. ಇದನ್ನು ಅರಿತ ಸಂಶೋಧಕರು ಸಮಯವನ್ನು ಇನ್ನಷ್ಟು ನಿಖರವಾಗಿ ಅಳೆಯುವ ದೃಷ್ಟಿಯಿಂದ ಸುದೀರ್ಘ ಕಾಲ ಸಂಶೋಧನೆ ನಡೆಸಿ ೧೯೬೭ರಲ್ಲಿ ಪರಮಾಣು ಗಡಿಯಾರವನ್ನು ತಯಾರಿಸಿದರು.

ಪರಮಾಣು ಗಡಿಯಾರದ ಅನ್ವೇಷಣೆಗಳು ಈ ಮೊದಲೂ ನಡೆದದ್ದಿವೆ. ಆದರೆ ಕ್ವಾರ್ಟ್ಸ್ ಹರಳುಗಳನ್ನೇ ಬಳುಸಿಕೊಂಡು ಪರಮಾಣು ಗಡಿಯಾರವನ್ನು ತಯಾರು ಮಾಡಿದ್ದು ಮಾತ್ರ ಹೊಸ ವಿಷಯವಾಗಿತ್ತು. ಕ್ವಾರ್ಟ್ಸ್ ಹರಳುಗಳನ್ನು ಬಳಸಿಕೊಂಡ ಕಾರಣವೆಂದರೆ ಅವುಗಳು ನಿರ್ದಿಷ್ಟ ಕಂಪನಗಳನ್ನು ನೀಡುತ್ತವೆ. ಯಾವಾಗ ಕ್ವಾರ್ಟ್ಸ್ ಹರಳಿನ ಕಂಪನದಲ್ಲಿ ವ್ಯತ್ಯಾಸವಾಗುತ್ತೋ ಆಗ ಪರಮಾಣು ಗಡಿಯಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಸಿಸಿಯಮ್ ಧಾತು ಕ್ವಾರ್ಟ್ಸ್ ಹರಳಿನೆಡೆಗೆ ಒಂದಿಷ್ಟು ಪರಮಾಣುಗಳನ್ನು ತರಂಗದ ಮೂಲಕ ಕಳಿಸುತ್ತದೆ. ಯಾವಾಗ ಕ್ವಾರ್ಟ್ಸ್ ಹರಳು ೩೨,೭೬೮ ಹರ್ಟ್ಸ್ ಕಂಪನಾಂಕವನ್ನು ತಲುಪುತ್ತದೋ ಆಗ ಸಿಸಿಯಮ್ ಧಾತುವು ಪರಮಾಣುಗಳನ್ನು ಕಳಿಸುವುದನ್ನು ನಿಲ್ಲಿಸುತ್ತದೆ. ಸಿಸಿಯಮ್ ಗಡಿಯಾರ ಎಷ್ಟು ನಿಖರವಾದ ಸಮಯವನ್ನು ನೀಡುತ್ತದೆ ಎಂದರೆ ೩೦೦ ಮಿಲಿಯನ್ ವರ್ಷಗಳು ಕಳೆದರೂ ಕೂಡಾ ಈ ಗಡಿಯಾರದಲ್ಲಿ ಒಂದು ಸೆಕೆಂಡ್ ಸಮಯ ಕೂಡಾ ವ್ಯತ್ಯಾಸವಾಗುವುದಿಲ್ಲ. ಅತ್ಯಂತ ಹೆಚ್ಚಿನ ನಿಖರತೆಯನ್ನು ಬಯಸುವ ಜಿಪಿಎಸ್ ಬಗೆಯ ತಂತ್ರಜ್ಞಾನಗಳಲ್ಲಿ ಸಂಪೂರ್ಣವಾಗಿ ಸಿಸಿಯಮ್ ಗಡಿಯಾರಗಳನ್ನೇ ಬಳಸಲಾಗುತ್ತದೆ.

ನಮಗೆ ಒಂದು ಸಂಶಯ ಬರುವುದು ಸಹಜ. ಹಾಗಾದರೆ ನಮಗೆ ಇಷ್ಟೊಂದು ಕರಾರುವಕ್ಕಾಗಿ ಸಮಯ ನೀಡುವ ಗಡಿಯಾರ ಅಗತ್ಯತೆ ಏನಿದೆ. ಒಂದೆರಡು ನಿಮಿಷ ತಡವಾದರೂ ಚಿಂತಿಸುವ ಜೀವ ನಮ್ಮದಲ್ಲ. ಹಾಗಿರುವಾಗ ದುಬಾರಿ ಪರಮಾಣು ಗಡಿಯಾರದ ಅಗತ್ಯ ಇದೆಯೇ? ನಿಜ, ನಮಗೆ ಬಳಸಲು ಕೈಗಡಿಯಾರ, ಗೋಡೆ ಗಡಿಯಾರಗಳು ಸಾಕು. ಸ್ವಲ್ಪ ಸಮಯದಲ್ಲಿ ವ್ಯತ್ಯಾಸವಾದರೂ ನಡೆಯುತ್ತೆ. ಆದರೆ ರಾಕೆಟ್ ಉಡ್ಡಯನ, ಅಂತರಗ್ರಹ ಯಾನ, ಅಂತರ್ಜಾಲ ವ್ಯವಸ್ಥೆಯ ನಿರ್ವಹಣೆ, ಪರಮಾಣು ಸ್ಥಾವರಗಳ ನಿರ್ವಹಣೆ, ಶೇರ್ ಮಾರುಕಟ್ಟೆಯ ನಿಭಾಯಿಸುವಿಕೆಗಳಿಗೆ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಸಮಯ ತೋರಿಸುವ ವ್ಯವಸ್ಥೆ ಅಗತ್ಯವಿದೆ. ಒಂದೇ ಒಂದು ಸೆಕೆಂಡ್ ವ್ಯತ್ಯಾಸವಾದರೆ ಉಡಾಯಿಸಿದ ರಾಕೆಟ್ ತನ್ನ ಗಮ್ಯವನ್ನು ತಲುಪಲಾರದೇ ಹೋದೀತು. ಶೇರು ಮಾರ್ಕೆಟ್ ನಲ್ಲಿ ಅಲ್ಲೋಲ ಕಲ್ಲೋಲ ಆಗಿ ಹೋದೀತು. ಈ ಕಾರಣದಿಂದ ಪರಮಾಣು ಗಡಿಯಾರಗಳ ಅಗತ್ಯತೆ ಈಗಿನ ಯುಗದಲ್ಲಿ ಅಗತ್ಯವಾಗಿ ಬೇಕಾಗಿದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ