ಗಡಿಯಾರ ಸಾಗಿ ಬಂದ ಹಾದಿ - ಭಾಗ ೯

ಗಡಿಯಾರ ಸಾಗಿ ಬಂದ ಹಾದಿ - ಭಾಗ ೯

‘ಗಡಿಯಾರ ಸಾಗಿ ಬಂದ ಹಾದಿ' ಮಾಲಿಕೆಯಲ್ಲಿ ನಾವು ಈಗಾಗಲೇ ಮರಳು ಗಡಿಯಾರದಿಂದ ಹಿಡಿದು ಇತ್ತೀಚಿನ ಪರಮಾಣು ಗಡಿಯಾರದವರೆಗಿನ ಆವಿಷ್ಕಾರಗಳನ್ನು ಗಮನಿಸಿದೆವು. ಈ ಕಂತು ಗಡಿಯಾರ ಮಾಲಿಕೆಯ ಕೊನೆಯ ಭಾಗ. ಇದರಲ್ಲಿ ಗಂಟೆಯ ನೆಂಟರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಗಂಟೆಯ ನೆಂಟರು ಎಂದರೆ ಗೋಡೆ ಗಡಿಯಾರ ಹಾಗೂ ಕೈಗಡಿಯಾರದ ತಯಾರಕರು.

ಈ ಪ್ರಪಂಚದಲ್ಲಿ ಗಡಿಯಾರಗಳ ತಯಾರಕರ ಪಟ್ಟಿಯಲ್ಲಿ ಸ್ವಿಝರ್ ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಸ್ವಿಸ್ ವಾಚುಗಳ ಕಿಮ್ಮತ್ತೇ ಅಂತಹದ್ದು. ಆದರೆ ಭಾರತದಲ್ಲೂ ಹಲವಾರು ಗುಣಮಟ್ಟದ ವಾಚ್ ಕಂಪೆನಿಗಳು ಇವೆ. ಭಾರತೀಯರ ಗಡಿಯಾರದ ಪ್ರೇಮವೂ ದೊಡ್ದದೇ. ಭಾರತದಲ್ಲಿ ಮೊದಲ ಬಾರಿಗೆ ಗಡಿಯಾರಗಳ ತಯಾರಿಕೆಯ ಉದ್ದಿಮೆ ಸ್ಥಾಪನೆಯಾದುದು ನಮ್ಮ ರಾಜ್ಯದ ಬೆಂಗಳೂರಿನಲ್ಲೇ. ಈ ಬಗ್ಗೆ ಕನ್ನಡಿಗರಾದ ನಾವು ಹೆಮ್ಮೆ ಪಡಲೇಬೇಕು. ೧೯೬೧ರಲ್ಲಿ ಬೆಂಗಳೂರಿನಲ್ಲಿದ್ದ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (HMT) ಎಂಬ ಕಂಪೆನಿಯಲ್ಲಿ ವಾಚ್ ತಯಾರಿಕೆ ಪ್ರಾರಂಭವಾಯಿತು. ಇಲ್ಲಿ ತಯಾರಾಗುತ್ತಿದ್ದ ಗಡಿಯಾರಗಳು ಎಚ್ ಎಂ ಟಿ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದವು. ಜಪಾನಿನ ಸಿಟಿಜನ್ ಕಂಪೆನಿಯ ಸಹಭಾಗಿತ್ವದೊಂದಿಗೆ ಕ್ವಾರ್ಟ್ಸ್ ಗಡಿಯಾರಗಳನ್ನು ನಿರ್ಮಾಣ ಮಾಡುತ್ತಿದ್ದ ಎಚ್ ಎಂ ಟಿ ಕಂಪೆನಿಯು ಆ ಕಾಲಕ್ಕೆ ದೇಶದ ಶೇಕಡಾ ೯೦ ರಷ್ಟು ವಾಚ್ ಗಳನ್ನು ತಯಾರಿಸುತ್ತಿತ್ತು. ಆದರೆ ಕಾಲಕ್ರಮೇಣ ಹೊಸ ಹೊಸ ಪ್ರತಿಸ್ಪರ್ಧಿಗಳಿಗೆ ಸ್ಪರ್ಧೆ ನೀಡಲಾಗದೇ ಅಪಾರ ನಷ್ಟವನ್ನು ಅನುಭವಿಸಿ ೨೦೧೬ರಲ್ಲಿ ಬಾಗಿಲು ಮುಚ್ಚಿತು. ಆದರೆ ಹಲವಾರು ದಶಕಗಳ ಕಾಲ ಎಚ್ ಎಂ ಟಿ ಸಂಸ್ಥೆಯು ಕೈಗಡಿಯಾರಗಳಿಗೆ ಪರ್ಯಾಯ ಹೆಸರಂತಿತ್ತು ಎಂಬುವುದನ್ನು ಮರೆಯುವಂತಿಲ್ಲ.

ನಂತರ ೧೯೮೧ರಲ್ಲಿ ಜಪಾನಿನ ಸೀಕೋ ಎಂಬ ಕಂಪೆನಿಯ ಸಹಭಾಗಿತ್ವದಲ್ಲಿ ಪ್ರಾರಂಭವಾದ ಸಾರ್ವಜನಿಕ ಉದ್ದಿಮೆ ಸಂಸ್ಥೆಯಾದ ಆಲ್ವಿನ್ ಕೂಡಾ ಸುಮಾರು ಎರಡು ದಶಕಗಳ ಕಾಲ ಬಾಳಿಕೆಯಲ್ಲಿತ್ತು. ದೇಶದಲ್ಲಿ ಹೆಚ್ಚುತ್ತಿದ್ದ ಬೇಡಿಕೆಯನ್ನು ಪೂರೈಸಲು ಆಲ್ವಿನ್ ಕಂಪೆನಿಗೆ ಆಗಲಿಲ್ಲ. ಜನರಿಗೆ ಬೇಕಾದ ಹೊಸ ಹೊಸ ಮಾಡೆಲ್ ಗಳನ್ನೂ ತರಲು ಅದು ವಿಫಲವಾಯಿತು. ಆ ನಂತರ ಬಂದದ್ದೇ ಟಾಟಾ ಸಂಸ್ಥೆಯ ಟೈಟಾನ್ ವಾಚುಗಳು. ನೂರು ಶೇಕಡಾ ಇಲೆಕ್ಟ್ರಾನಿಕ್ ವಾಚುಗಳನ್ನೇ ತಯಾರಿಸುತ್ತೇವೆ ಎಂಬ ಧ್ಯೇಯೋದ್ದೇಶಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದ ಟೈಟಾನ್ ಕೆಲವೇ ವರ್ಷಗಳಲ್ಲಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿತು. ಬೆಲೆಯೂ ಇತರೆ ವಾಚುಗಳಿಗಿಂತ ಕಡಿಮೆ ಇದ್ದುದರಿಂದ ಜನಸಾಮಾನ್ಯರ ವಾಚು ಎಂಬ ಹೆಸರು ಗಳಿಸಿಕೊಂಡಿತು. ನಂತರದ ದಿನಗಳಲ್ಲಿ ಟಾಟಾ ಸಂಸ್ಥೆಯಿಂದ ‘ಸೊನಾಟಾ’ ಎಂಬ ಅಗ್ಗದ ದರದ ವಾಚುಗಳು ಮಾರುಕಟ್ಟೆಗೆ ಬಂದಾಗ ಟೈಟಾನ್ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಯಿತು. ಈಗ ಟೈಟಾನ್ ವಾಚುಗಳು ವಿದೇಶಕ್ಕೂ ರಫ್ತಾಗುತ್ತವೆ. 

ಅಗ್ಗದ ವಾಚುಗಳ ಹಿಂದೆ ಬಿದ್ದ ಜನರು ಹೆಚ್ಚಿನ ದರದ ಲಕ್ಷುರಿ ವಾಚುಗಳನ್ನು ಮರೆತು ಬಿಡಲಿಲ್ಲ. ಬೆಂಗಳೂರು ಮೂಲದ ಎಚ್ ಆಂಡ್ ಜಿ ಎಂಬ ಸಂಸ್ಥೆ ಸ್ವಿಝರ್ ಲ್ಯಾಂಡ್ ನ ಪ್ರತಿಷ್ಟಿತ ಲಾಂಜಿಕ್ ವಾಚ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಬೆಲೆಬಾಳುವ ಐಷಾರಾಮೀ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಜನರೂ ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ದುಬಾರಿ ವಾಚುಗಳನ್ನೂ ಕೊಳ್ಳಲು ಪ್ರಾರಂಭ ಮಾಡಿದರು. ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ವಾಚ್ ಒಂದು ಉತ್ತಮ ವಸ್ತುವಾಯಿತು. ಭಾರತದಲ್ಲಿ ಇಂದು ದುಬಾರಿಯಾದ ಸ್ವಿಜ್ ವಾಚುಗಳೂ ವಾರ್ಷಿಕ ೧೨೦೦ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುತ್ತವೆ ಎಂದಾಗ ನೀವೇ ಆಲೋಚನೆ ಮಾಡಿ ಈ ವಾಚ್ ನ ಮಾರುಕಟ್ಟೆ ಎಷ್ಟು ದೊಡ್ದದಿದೆ ಎಂದು.

ಇದು ಕೈಗಡಿಯಾರದ ಕಥೆಯಾದರೆ ಕೇವಲ ಗೋಡೆ ಗಡಿಯಾರಗಳನ್ನು ಮಾತ್ರ ತಯಾರಿಸಿ ಹೆಸರುವಾಸಿಯಾದ ಸಂಸ್ಥೆ ‘ಅಜಂತಾ’. ೧೯೭೧ರಲ್ಲಿ ಓಧವ್ ಜಿ ಪಟೇಲ್ ಎಂಬವರು ೧ ಲಕ್ಷ ರೂಪಾಯಿಗಳನ್ನು ಬಂಡವಾಳವನ್ನಾಗಿ ಹೂಡಿ ಹುಟ್ಟುಹಾಕಿದ ಅಜಂತಾ ಸಂಸ್ಥೆ ಈಗ ವಾರ್ಷಿಕ ೧೨೦೦ ಕೋಟಿ ವಹಿವಾಟು ನಡೆಸುತ್ತದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುವ ಗೋಡೆ ಗಡಿಯಾರಗಳ ಪಟ್ಟಿಯಲ್ಲಿ ಅಜಂತಾಗೆ ನಂ.೧ ಸ್ಥಾನ. ಮೊಬೈಲ್ ಬಂದ ಬಳಿಕ ವಾಚುಗಳ ಬಳಕೆ ಸ್ವಲ್ಪ ಕಡಿಮೆಯಾದುದ್ದೇನೋ ನಿಜ. ಆದರೆ ಮಾರುಕಟ್ಟೆ ಬಿದ್ದಿಲ್ಲ. ಮೊಬೈಲ್ ಬಳಕೆದಾರರೂ ಕೈಗೆ ವಾಚು ಕಟ್ಟಿಕೊಳ್ಳುತ್ತಾರೆ. ಮನೆಯಲ್ಲಿ ಸಮಯ ನೋಡಲು ಗೋಡೆ ಗಡಿಯಾರವನ್ನೇ ಬಳಸುತ್ತಾರೆ. ಈ ಕಾರಣದಿಂದ ಇದು ಇನ್ನೂ ಬೆಳೆಯಬಹುದಾದ ಉದ್ದಿಮೆ ಎಂದೇ ಪರಿಗಣಿಸಬಹುದು. 

(ಮುಗಿಯಿತು)

ಚಿತ್ರ ಕೃಪೆ: ಅಂತರ್ಜಾಲ ತಾಣ