ಗಡಿ ಪ್ರದೇಶ ಅಭಿವೃದ್ಧಿ ಯಾವಾಗ?

ಗಡಿ ಪ್ರದೇಶ ಅಭಿವೃದ್ಧಿ ಯಾವಾಗ?

ಹದಿನೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ನಮಗೆ ಹಸ್ತಾಂತರಿಸಬೇಕು. ಇದನ್ನು ನ್ಯಾಯಪೀಠವೇ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟೆ ಹತ್ತಿತ್ತು. ಈ ಪ್ರಕರಣದ ವಿಚಾರಣೆ ಇಂದು ಜರುಗಲಿದೆ.

ರಾಜರ ಕಾಲದಲ್ಲಿ ಒಂದು ಪ್ರದೇಶದ ಮೇಲೆ ದಂಡೆತ್ತಿ ಹೋಗಿ ಅದನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಅಲ್ಲಿನ ಸಂಪತ್ತನ್ನು ಸೂರೆ ಮಾಡಲಾಗುತ್ತಿತ್ತು. ಇಂಥ ರಾಜಶಾಹಿ ಧೋರಣೆಗೆ ಈಗಿನ ಪ್ರಜಾಪ್ರಭುತ್ವದ ಕಾಲದಲ್ಲಿ ನೆಲೆ ಬೆಲೆ ಇಲ್ಲ. ಆದರೆ 'ಭೌಗೋಳಿಕ ಎಲ್ಲೆ ವಿಸ್ತರಣೆ' ಎಂಬ ವಿಷಯವನ್ನು ರಾಜಕೀಯ ಸರಕಾಗಿಸಿಕೊಂಡು, ಅದನ್ನು ಮತ ಸೆಳೆಯುವ ಸಾಧನವಾಗಿಸಿಕೊಳ್ಳುವ ಪ್ರಯತ್ನವನ್ನು ಮಹಾರಾಷ್ಟ್ರದ ಶಿವಸೇನೆ ಮತ್ತು  ಎಂಇಎಸ್ ಶ್ರದ್ಧೆಯಿಂದ ಮಾಡುತ್ತಲೇ ಬಂದಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ನ್ಯಾಯಿಕ ಹೋರಾಟ ನಡೆಸುತ್ತಲೇ ಬಂದಿದೆ. ಎರಡು ರಾಜ್ಯಗಳು ಗಡಿ ಪ್ರದೇಶವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿ ಆ ಜನರ ಪ್ರೀತಿ, ಅಭಿಮಾನ ಗಳಿಸುವ ವಿಷಯದಲ್ಲಿ ಹಿಂದುಳಿದಿವೆ.

ಕರ್ನಾಟಕದ ಗಡಿಭಾಗದ ೮೫೦ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಮಹಾರಾಷ್ಟ್ರ ಸರಕಾರ ದಾಖಲೆ ಸಂಗ್ರಹಿಸುತ್ತಿದೆ. ಮೊದಲಿನಿಂದಲೂ ಇಂಥ ತಾಂತ್ರಿಕ ಹುನ್ನಾರಗಳಲ್ಲೇ ಅದು ತಲ್ಲೀನವಾಗಿದೆ. ಆದರೆ ಗಡಿಯಲ್ಲಿ ಶಿಕ್ಷಣ, ಉದ್ಯೋಗ, ಮೂಲಸೌಕರ್ಯ, ಆರೋಗ್ಯ, ಉದ್ದಿಮೆಗಳ ಸ್ಥಾಪನೆ ವಿಷಯದಲ್ಲಿ ಕರ್ನಾಟಕ ಕೊಂಚವೂ ಗಮನ ನೀಡಿಲ್ಲ ಎಂಬುದಕ್ಕಿಂತ ಇನ್ನಷ್ಟು ಕಾಳಜಿ ಮತ್ತು ಪರಿಶ್ರಮ ವಹಿಸಬೇಕಿತ್ತು. ಶಿಕ್ಷಣದ ವಿಷಯವನ್ನು ಗಮನಿಸುವುದಾದರೆ., ಬಹುತೇಕ ಗಡಿ ಗ್ರಾಮಗಳಲ್ಲಿ ಕನ್ನಡ ಮಾಧ್ಯಮದ ಪ್ರೌಢಶಾಲೆಗಳೇ ಇಲ್ಲ. ಬೆಳಗಾವಿ ತಾಲೂಕಿನ ಉಚಗಾವಿ, ಬೆಕ್ಕಿನಕೆರೆ, ಕುದ್ರೆಮನಿ, ಗೋಜಗಾ, ಮಣ್ಣೂರ, ಹಿಂಡಲಗಾ ಮತ್ತಿತರ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣಕ್ಕೆ ೧೦-೨೦ ಕಿ.ಮೀ. ದೂರದ ಬೆಳಗಾವಿ ನಗರಕ್ಕೆ ಬರಬೇಕಿದೆ. ಬಸ್ ಸೌಕರ್ಯವಿದೆಯೇ ಎಂದರೆ ಅದು ಶೂನ್ಯ. ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಯಾರೊಬ್ಬರೂ  ಇದರತ್ತ ಗಮನ ನೀಡದಿರುವುದು ದೊಡ್ಡ ದುರಂತ. ಪ್ರೌಢಶಾಲೆಗಳ ಇಲ್ಲ ಎಂಬುದು ಒಂದೆಡೆಯಾದರೆ ಇರುವ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಯನ್ನು ತುಂಬಿಸಿಯೇ ಇಲ್ಲ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಖಾನಾಪುರ ತಾಲೂಕಿನ ಬಹುಪಾಲು ಭಾಗ ಮಹಾರಾಷ್ಟ್ರ ಅಡಿಗೆ ಹೊಂದಿಕೊಂಡಿದ್ದು, ಇಲ್ಲಿ ೨೧೨ ಮರಾಠಿ ಮಾಧ್ಯಮ ಸರಕಾರಿ ಪ್ರಾಥಮಿಕ ಶಾಲೆಗಳು, ೫೦ಕ್ಕೂ ಹೆಚ್ಚು ಪ್ರೌಢಶಾಲೆಗಳಿವೆ. ಇಲ್ಲಿನ ವಿವಿಧ ಶಾಲೆಗಳಲ್ಲಿ. ೩೦೦ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ. ಇವುಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯೇ ಹೆಚ್ಚಿದೆ. ನಾಗರಗಾಳಿ, ಜಾಂಬೋಟಿ, ಭೀಮಗಡ, ಕಣಕುಂಬಿ, ಲೋಂಡಾ ಮೊದಲಾದ ಗ್ರಾಮಗಳ ಮರಾಠಿ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರು ಇಲ್ಲ. ಇಲ್ಲಿ ಮರಾಠ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸುವುದು ಕರ್ನಾಟಕವೇ ಆಗಿದೆ. ಇಂಥ ಸನ್ನಿವೇಶದಲ್ಲಿ ಕನ್ನಡ ಆಯ್ಕೆ  ವಿಷಯವಾಗಿರುತ್ತದೆ. ಇದರಿಂದ ದ್ವಿವಾರ್ಷಿಕ ಸಂಸ್ಕೃತಿ ಬೆಳೆಯುತ್ತದೆ. ಇಂಥ  ಜೀವನ ವಿಧಾನ ಬೆಳೆಸುವುದರಲ್ಲೂ ಕರ್ನಾಟಕ ಹಿಂದೆ ಬಿದ್ದಿದೆ. ಪ್ರದೇಶ ಸ್ವಾಮ್ಯ ನಮ್ಮದೇ ಎನ್ನುವ ನಮ್ಮ ಸರಕಾರ, ಅಭಿವೃದ್ಧಿ ಹೊಣೆ ಕೂಡ ನಮ್ಮದೇ ಎಂದು ತನ್ನ ಭಾಷೆಯನ್ನು ತಿದ್ದಿ ಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಕಾನೂನು ಹೋರಾಟಕ್ಕೆ ಅರ್ಥ ಇಲ್ಲ. ಅಭಿವೃದ್ಧಿ  ಸಂಗತಿಗಳು, ಮಾಡದ ವೆಚ್ಚ, ಪರಿಶ್ರಮ, ಜನರ ಅಭಿಮಾನ ಮತ್ತು ವಿಧಗಳನ್ನು ಕೋರ್ಟ್ ಕೂಡ ಪರಿಗಣಿಸುತ್ತದೆ ಎಂಬುದನ್ನು ಮರೆಯಬಾರದು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ,ದಿ:೨೩-೧೧-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ