ಗವಿ ಮಾರ್ಗ

ಗವಿ ಮಾರ್ಗ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎಂ.ಎಸ್. ಮಣಿ
ಪ್ರಕಾಶಕರು
ಐ ಎಚ್ ಎಸ್ ಪ್ರಕಾಶನ, ಮಾರುತಿನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ
ಪುಸ್ತಕದ ಬೆಲೆ
ರೂ. ೨೭೫.೦೦, ಮುದ್ರಣ: ೨೦೨೩

ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ...

“ಪ್ರಜಾಪ್ರಭುತ್ವದ ‘ವ್ಯವಸ್ಥೆ’ಯಲ್ಲಿ ಅನೇಕ ‘ಅವ್ಯವಸ್ಥೆ’ಗಳು ಅಂತರ್ಗತವಾಗಿವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಇವು ಜನ ತಂತ್ರ ವ್ಯವಸ್ಥೆಯ ನಾಲ್ಕು ಸ್ತಂಭಗಳು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಕಾರ‍್ಯನಿರ್ವಹಿಸುವ ಮೂಲಕ ಜನವಿಶ್ವಾಸ ಗಳಿಸಬೇಕಾದ ಸ್ತಂಭಗಳಿಂದು ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಜನವಿರೋಧಿ ನೀತಿ, ದೌರ್ಜನ್ಯ, ದಬ್ಬಾಳಿಕೆಗಳಿಂದ ಪ್ರಜಾತಂತ್ರದ ಆಶಯವನ್ನೇ ಬುಡಮೇಲಾಗಿಸುತ್ತಿವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ರಕ್ಷಿಸಬೇಕಾದ ವ್ಯವಸ್ಥೆಯಿಂದು ಅವರನ್ನೇ ಭಕ್ಷಿಸುವ ಹುನ್ನಾರದಲ್ಲಿದೆ. ‘ಸಮ ಸಮಾಜದ’ ಕಲ್ಪನೆಗೆ ವ್ಯತಿರಿಕ್ತವಾದ ವಿಚಾರಗಳಿಂದ ಘಟಿಸುತ್ತಿವೆ. ಜನ ‘ಪ್ರತಿನಿಧಿ’ಗಳು ಜನಪರತೆ ಮರೆತು ಮೆರೆಯುತ್ತಿದ್ದಾರೆ. ತಾವು ‘ಆಳುವವರು’, ಜನರು ‘ಆಳಿಸಿಕೊಳ್ಳುವವರು’ ಎಂಬ ಅಹಂಭಾವ ಇವತ್ತಿಗೂ ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಉಳ್ಳವರು-ನಿರ್ಗತಿಕರು... ಹೀಗೆ ಅಸಮತೆಯ ಕಂದಕ ದೊಡ್ಡದಾಗುತ್ತಿದೆಯೇ ಹೊರತು; ಪರಿಹರಿಸುವ ಇಚ್ಛಾಶಕ್ತಿ ಕೊರತೆ ಇರುವುದನ್ನು ಸುತ್ತಲಿನ ಸಮಾಜದ ‘ಅವಸ್ಥೆ’ಯೇ ಪ್ರತಿಬಿಂಬಿಸುತ್ತಿದೆ.

ನಮ್ಮಲ್ಲಿ ಸಾಕಷ್ಟು ಮಂದಿ ಇಂತಹ ‘ಅವಸ್ಥೆ’ಗೆ ಒಗ್ಗಿ; ಬಗ್ಗಿ ನಡೆಯುವುದನ್ನು ರೂಢಿಸಿಕೊಂಡುಬಿಟ್ಟಿದ್ದೇವೆ. ಆದರೆ ಕೆಲವರಲ್ಲಷ್ಟೇ ತಾವು ಕಾಣುವ ಸಮಾಜದ ಪ್ರತಿಯೊಂದು ‘ಘಟನೆ’ಗಳನ್ನು ಸಾಕ್ಷೀಕರಿಸುತ್ತ; ಅವುಗಳನ್ನು ಸಮಾಜದ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಹಾಗೆಯೆ, ಅವುಗಳೊಂದಿಗೆ ಸಂವಾದಿಸುತ್ತ; ಪರಿಹಾರದ ಜಾಡು ಕೆದಕುತ್ತ; ನೊಂದವರ ನೋವಿಗೆ ಧ್ವನಿಯಾಗುತ್ತಾ ನ್ಯಾಯದಾನ ಮಾಡುವ ಹಪಹಪಿಕೆಯಿರುತ್ತದೆ. ಹೋರಾಟದ ಜೊತೆ ಜೊತೆಗೆ ಅಕ್ಷರ ರೂಪದ ಜಾಗೃತಿಯ ಆ ಜೀವಗಳಿಗೆ ಅತ್ಯಗತ್ಯವೆನಿಸುತ್ತದೆ. ಇಂತಹ ವಿಶಿಷ್ಟ ಗುಣ ಲೇಖಕ ಡಾ. ಎಂ.ಎಸ್. ಮಣಿಯವರಲ್ಲೂ ಗೋಚರಿಸುತ್ತೆ. ಇದಕ್ಕೆ ನಿದರ್ಶನದಂತಿದೆ ಈ ‘ಗವಿ ಮಾರ್ಗ’ ಕೃತಿ.
ಇವತ್ತು ಜನತೆ ನ್ಯಾಯಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮೀರಿ ತಮ್ಮ ಆಸೆ, ಭರವಸೆ, ನಂಬಿಕೆ ಕಳೆದುಕೊಂಡರು ‘ನ್ಯಾಯಾಂಗ’ ಮೇಲೆ ಅವರದು ಅಪರಿಮಿತ ವಿಶ್ವಾಸ. ಆದರೆ ನ್ಯಾಯಾಂಗದಲ್ಲೂ ರಾಜಕೀಯದ ಕರಿನೆರಳು ನ್ಯಾಯ ವ್ಯವಸ್ಥೆಯ ಮೇಲೆಯೇ ಗುಮಾನಿ ಎಬ್ಬಿಸಿಬಿಟ್ಟಿದೆ. ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಿ; ದಿಟ್ಟತೆ ಮೆರೆಯುವ ಪ್ರಾಮಾಣಿಕ ನ್ಯಾಯವಾದಿಗಳ ವರ್ಗಾವಣೆ; ನ್ಯಾಯಾಧೀಶರ ಆಯ್ಕೆಯಲ್ಲೂ ರಾಜಕೀಯ ಪ್ರಭಾವ, ಕೊಲಿಜಿಯಂ ವ್ಯವಸ್ಥೆಯಲ್ಲೇ ಭ್ರಷ್ಟತೆಯ ಕಮಟು... ಇವೆಲ್ಲವೂ ನ್ಯಾಯಾಂಗ ವ್ಯವಸ್ಥೆಯಲ್ಲಿನ ನಂಬಿಕೆಯನ್ನೇ ಹುಸಿಗೊಳಿಸಿಬಿಡುತ್ತೆ. ನ್ಯಾ. ಕರ್ಣನ್, ನ್ಯಾ. ಎಚ್.ಪಿ. ಸಂದೇಶ್, ಜಸ್ಟೀಸ್ ವಿಜಯ ಕಮಲೇಶ್ ತಾಹಿಲ್‌ರಮಣಿ... ಮೊದಲಾದವರ ಪ್ರಕರಣಗಳನ್ನು ಉಲ್ಲೇಖಿಸುವ ಮೂಲಕ ಸಾದ್ಯಂತವಾಗಿ ವಿವರಿಸುತ್ತಾ ಹೋಗುತ್ತಾರೆ.
ಇನ್ನು ಶಾಸಕಾಂಗದಲ್ಲಿ ಭ್ರಷ್ಟಾಚಾರವೆಂಬುದು ಹಾಸುಹೊಕ್ಕಾಗಿದೆ. ತಮ್ಮ ಸ್ವಾರ್ಥಪರತೆಯಿಂದಾಗಿ ಅವೈಜ್ಞಾನಿಕ; ಜನವಿರೋಧಿ ನಿಲುವುಗಳ ಪರಿಣಾಮ ಜನಸಾಮಾನ್ಯರು ಅನುಭವಿಸಬೇಕಾದ ದುಸ್ಥಿತಿ ಬಂದೊದಗಿದೆ. ಶಿಕ್ಷಣ, ಆರೋಗ್ಯ, ವಸತಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಆಳುವ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದ ಫಲವಾಗಿ ಇಂದು ಆರೋಗ್ಯ ಕ್ಷೇತ್ರ ಶೋಚನೀಯ ಸ್ಥಿತಿಯಲ್ಲಿದೆ. ಕೊರೋನಾ ಮಹಾಮಾರಿ ಧುತ್ತೆಂದು ಮನುಕುಲದ ಆಪೋಶನಕ್ಕೆ ಕುಳಿತಾಗಲೇ ದೇಶದ, ರಾಜ್ಯದ ಆರೋಗ್ಯ ಕ್ಷೇತ್ರವೇ ಅನಾರೋಗ್ಯಗೊಂಡಿರುವ ವಿಚಾರ ಬೆತ್ತಲಾಯಿತು. ಪ್ರಾಣವಾಯು, ರೆಮ್‌ಡೆಸಿವರ್, ಮಾಸ್ಕ್, ವೈದ್ಯರು, ದಾದಿಯರು... ಹೀಗೆ ಪ್ರತಿಯೊಂದರ ಮಹತ್ವದ ಅರಿವಾಯಿತು. ಆದರೆ ಕಡೆಗೆ ಏನಾಯಿತು? ಕೊರೋನಾ ತಗ್ಗುತ್ತಲೇ ಮತ್ತದೇ ಗೀಳು ಮುಂದುವರೆಯಿತು. ಪರಿಣಾಮ ಬಡ ಜನರು ಇಂದಿಗೂ ‘ಆರೋಗ್ಯ ಭಾಗ್ಯ’ಕ್ಕಾಗಿ ಹಾತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಸ್ತನ ಕ್ಯಾನ್ಸರ್, ಕುಷ್ಠರೋಗ, ಕೆಮ್ಮಿನ ಸಿರಫ್‌ನಿಂದ ಕಂದಮ್ಮಗಳು ಸಾವು... ಇಂತಹ ಕರುಳು ಹಿಂಡುವ ವಿಚಾರಗಳ ಬಗ್ಗೆ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ.

ಮುಖ್ಯವಾಗಿ ಮಾಧ್ಯಮ ರಂಗದ ಒಳ ಹೊರಗಿನ ಅವರ ಅಕ್ಷರ ರೂಪ ಬೆರಗು ಮೂಡಿಸುತ್ತೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಬೇಕಿದ್ದ; ಜನಾಭಿಪ್ರಾಯ ಮೂಡಿಸಬೇಕಿದ್ದ ಮಾಧ್ಯಮಗಳು ಇಂದು ಅದೆಷ್ಟರ ಮಟ್ಟಿಗೆ ಭ್ರಷ್ಟಗೊಂಡಿವೆ; ಆಳುವ ಸರ್ಕಾರಗಳ ಕೈಗೊಂಬೆಗಳಾಗಿವೆ; ಜಾಹೀರಾತಿನ ಮರ್ಜಿಗೆ ಬಿದ್ದು ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಲೇಖಕರಲ್ಲಿ ಆತಂಕವಿದೆ. ಇಂದು ಮುದ್ರಣ, ದೃಶ್ಯ ಮಾಧ್ಯಮವನ್ನೂ ಮೀರಿ ಸೋಷಿಯಲ್ ಮೀಡಿಯಾಗಳು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿವೆ. ಜನಸಾಮಾನ್ಯರು ತಮ್ಮ ಅಭಿಪ್ರಾಯ ಮಂಡನೆಗೆ ಮಾಧ್ಯಮಗಳನ್ನು ಅವಲಂಬಿಸದೆ ತಮ್ಮದೆ ವೇದಿಕೆಗಳಲ್ಲಿ ವಿಚಾರ ಮಂಡಿಸುತ್ತಿದ್ದಾರೆ.
ಸ್ತ್ರೀ ಸಂಕುಲ ಎದುರಿಸುತ್ತಿರುವ ವೈಧವ್ಯ, ರಜಸ್ವಲೆಯಂತಹ ಸಮಸ್ಯೆಗಳ ಗಂಭೀರತೆಯನ್ನು, ಸಮಾಜದ ಮೂಢತೆಯನ್ನು ನಿರ್ದಾಕ್ಷಿಣ್ಯವಾಗಿ ಕೃತಿಯ ಕೆಲವು ಲೇಖನಗಳಲ್ಲಿ ಟೀಕಿಸಿ, ಖಂಡಿಸಿದ್ದಾರೆ. ತಂದೆಯಿಲ್ಲದ ತಬ್ಬಲಿತನದ ಬಾಲ್ಯ, ಗುರುಗಳ ಪ್ರೋತ್ಸಾಹ.. ಎಲ್ಲವನ್ನೂ ನೆನೆದಿರುವ ಡಾ. ಎಂ.ಎಸ್. ಮಣಿಯವರ ಬರಹದಲ್ಲಿ ಆಪ್ತತೆ; ಅಪ್ಯಾಯಮಾನತೆ ಇದೆ. ಏಕೆಂದರೆ ಅವರ ಈ ಬರಹಗಳಲ್ಲಿನ ಅಕ್ಷರಗಳು ಅನುಭಾವದ ಮೂಸೆಯಲ್ಲಿ ಮಿಂದೆದ್ದಿರುವಂತಹುವು. ಸಮಾಜದಲ್ಲಿ ತಾವು ಅನುಭವಿಸಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಒಂದು ಕಡೆ ಅವರೇ ಹೇಳುವಂತೆ ‘ತನಗೆ ಪ್ರೋತ್ಸಾಹ ಸಿಕ್ಕಿದ್ದರೆ; ಕೀಳರಿಮೆ ತೊರೆದಿದ್ದರೆ ಸರ್ಕಾರದ ಕಾರ್ಯದರ್ಶಿ ಮಟ್ಟಕ್ಕೆ ಬೆಳೆಯುತ್ತಿದೆ’ ಎನ್ನುವ ಅವರ ಮಾತುಗಳಲ್ಲಿ ನೋವಿದೆ; ಸಮಾಜದ ಅಸಮತೆಯ ಬಗ್ಗೆ ಸಾತ್ವಿಕ ಸಿಟ್ಟಿದೆ, ತಮ್ಮ ಬರಹಗಳಿಂದಾದರೂ ವ್ಯವಸ್ಥೆ ಅಣು ಮಾತ್ರದಷ್ಟದರೂ ಬದಲಾದಿತೇನೋ ಎಂಬ ಸಣ್ಣ ಆಸೆ. ಸಮಾಜದ ಶೋಷಿತರು, ನೊಂದವರು, ಬಡವರು, ನಿರ್ಗತಿಕರತ್ತ ಸದಾ ಅವರ ನೋಟ ನೆಟ್ಟಿರುತ್ತದೆ. ಇದಕ್ಕೆ ಅವರ ಬಾಲ್ಯದ ಕಷ್ಟದ ದಿನಗಳೂ ಕಾರಣವಿರಬಹುದು.
ಗವಿ ಮಾರ್ಗ ಅನೇಕ ವಿಚಾರಪೂರ್ಣ; ಅಧ್ಯಯನದಿಂದ ಮೂಡಿಬಂದಿರುವ ಲೇಖನಗಳ ಗುಚ್ಛ. ಆಯಾ ಕಾಲಘಟ್ಟದಲ್ಲಿ ತಮ್ಮ ಕಣ್ಣಿಗೆ ಬಿದ್ದದ್ದನ್ನು ವಿಮರ್ಶಿಸಿ; ಆತ್ಮಾವಲೋಕನಕ್ಕೊಡ್ಡಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಇದು ಗಾಢ ನಿದ್ರೆಯಲ್ಲಿರುವ ಸಮಾಜವನ್ನು ಬಡಿದೆಬ್ಬಿಸುವ ಪ್ರಾಮಾಣಿಕ ಪ್ರಯತ್ನ. ಇನಿತಾದರೂ ಇದು ಸಾಧ್ಯವಾದರೆ ಲೇಖಕರ ಈ ಕೃತಿ ಸಾರ್ಥಕ.”