ಗಾಂಟಿ - ಕೊಂಕಣಿ ನಾಟಕ

ಗಾಂಟಿ - ಕೊಂಕಣಿ ನಾಟಕ

ಪುಸ್ತಕದ ಲೇಖಕ/ಕವಿಯ ಹೆಸರು
ಕಾಸರಗೋಡು ಚಿನ್ನಾ
ಪ್ರಕಾಶಕರು
ಪದ್ಮಗಿರಿ ಪ್ರಕಾಶನ, ಕಾಸರಗೋಡು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೭

ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ ಪುಟ್ಟದಾಗಿದ್ದು ಲೇಖಕರಾದ ಡಾ.ನಾ,.ದಾಮೋದರ ಶೆಟ್ಟಿ ಇವರು ಇವರು ಬೆನ್ನುಡಿ ಬರೆದಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ “ಅರ್ಧ ಶತಮಾನದ ಹಿಂದೆ ಕಾಸರಗೋಡಿನ ಕನ್ನಡದ ನೆಲದಲ್ಲಿ ಹುಟ್ಟಿದ ಕೊಂಕಣಿಗ ಸುಜೀರ್ ಶ್ರೀನಿವಾಸ್ ರಾವ್, ಕಾಸರಗೋಡು ಚಿನ್ನಾ ಆಗಿ ಪಲ್ಲಟಗೊಳ್ಳದಿರುತ್ತಿದ್ದರೆ ಗಿರಿಧರ್ ಮೆಟಲ್ ಹೌಸ್ ನಲ್ಲಿ ತಂದೆಯವರು ತೊಡಗಿಟ್ಟ ಅಂಗಡಿಯಲ್ಲಿ ಸ್ಟೀಲ್ ವ್ಯಾಪಾರ ಮಾಡುತ್ತಲೇ ಇರುತ್ತಿದ್ದರು. ಇಂದಿಗೂ ಅದೇ ಅವರ ವೃತ್ತಿ. ಪ್ರವೃತ್ತಿಗಳು ಅನೇಕ. ರಂಗಭೂಮಿ, ಚಲನಚಿತ್ರ, ಧಾರವಾಹಿ ಇತ್ಯಾದಿ. ಯಕ್ಷತೇರು, ಸಂಗೀತ ರಥ, ಲಾರಿ ನಾಟಕ ಮುಂತಾದ ಮಹಾಸಾಧನೆಗಳನ್ನು ಸಾಧಿಸಿ, ರಾಜಧಾನಿಯ ಗೆಳೆಯರನ್ನು ಬೆಚ್ಚಿ ಬೀಳಿಸಿದ ಚಿನ್ನಾ, ನಿರಂತರ ತ್ರಿದಿನ ತ್ರಿಭಾಷಾ ನಾಟಕೋತ್ಸವ ಏರ್ಪಡಿಸಿದ್ದಾರೆ.

ಇತರ ಭಾಷೆಯ ಕೃತಿಗಳು ತನ್ನ ಮಾತೃಭಾಷೆಗೆ ಅನುವಾದಗೊಳ್ಳಬೇಕಾದ ಅನಿವಾರ್ಯತೆಯನ್ನು ಮನಗಂಡ ಚಿನ್ನಾರವರು ಬಂಗಾಳಿಯಿಂದ ಪ್ರೇಮ ಕಾರಂತ ಅವರ ಕುರುಡು ಕಾಂಚಾಣ ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ ಕೃತಿಯನ್ನು ಗಾಂಟಿಯಾಗಿಸಿ ನಿಮ್ಮ ಮುಂದಿರಿಸಿದ್ದಾರೆ.”

ಗಾಂಟಿ ನಾಟಕದ ಬಗ್ಗೆ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ‘ಕೊಂಕಣಿ ರಂಗಭೂಮಿಯ ಸ್ವರ್ಣ ಅಧ್ಯಾಯ ಕಾಸರಗೋಡು ಚಿನ್ನಾರ ‘ಗಾಂಟಿ' ಎಂದು ಬರೆಯುತ್ತಾರೆ. ಗಾಂಟಿ ನಾಟಕದ ಕಥಾ ವಸ್ತು ಬಗ್ಗೆ ಅವರು ಹೇಳುವುದು ಹೀಗೆ “ಒಂದು ಕುಟುಂಬ. ಆ ಕುಟುಂಬದ ವ್ಯಕ್ತಿಗಳೊಳಗಿನ ವೈರುಧ್ಯಗಳ ಒಳನೋಟ. ಆ ಕುಟುಂಬದ ನಡುವೆ ಇರುವ ಓರ್ವ ಮುಗ್ಧ ಕೆಲಸದವ ಮತ್ತು ಓರ್ವ ಬದ್ಧ ಕೆಲಸದಾಕೆ. ಕುಟುಂಬದ ವೈರುಧ್ಯಗಳೇನಿದ್ದರೂ ಈ ಇಬ್ಬರು ಅಸಾಹಯಕರ ಶೋಷಣೆಯಲ್ಲಿ ಅವರೆಲ್ಲಾ ಒಂದೇ ! ಆದರೆ ಹಣ ಎಂಬ ಒಂದಂಶ ಹೇಗೆ ಈ ಎಲ್ಲಾ ಸಂಬಂಧಗಳನ್ನು ಸ್ವಾರ್ಥಪರವನ್ನಾಗಿಸುತ್ತದೆ - ನಿಜವಾದ ಮಾನವೀಯ ಸಂಬಂಧ ಯಾವುದು? ಎಂಬ ಸೂಕ್ಷ್ಮ ವಿಚಾರಗಳನ್ನು ‘ಗಾಂಟಿ' ಅನಾವರಣಗೊಳಿಸುತ್ತಾ ಸಾಗುತ್ತದೆ. ಹಾಸ್ಯಮಯ ಸನ್ನಿವೇಶ ಮತ್ತು ಸಂಭಾಷಣೆಗಳ ಜತೆಯಲ್ಲೇ ನಾಟಕ ಸಾಗುತ್ತದೆ. ಆದರೆ , ಇದು ಮನರಂಜನೆಯ ಹಾಸ್ಯವಾಗಿರದೆ, ಬದುಕಿನ ವಾಸ್ತವಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಸಾಗುವ ಚಿತ್ರಿಕೆಗಳಾಗುತ್ತವೆ. ಮುಗ್ಧ ಶಿನ್ನಾನ ಪ್ರಾಮಾಣಿಕತೆಯೇ ಅನೇಕ ಬಾರಿ ಇಂತಹಾ ಹಾಸ್ಯಮಯ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ. ಆದರೆ, ಅದು ಬದುಕಿನ ಕಟು ವಾಸ್ತವಗಳೇ ಆಗಿರುತ್ತವೆ.”

ಕಾಸರಗೋಡು ಚಿನ್ನಾ ತಮ್ಮ ‘ದೋನಿ ಉತ್ರ..' (ಎರಡು ಮಾತು) ದಲ್ಲಿ ಗಾಂಟಿಯ ಬಗ್ಗೆ ಮತ್ತು ತಮಗೆ ಸಹಕಾರ ನೀಡಿದ ವ್ಯಕ್ತಿಗಳ ಬಗ್ಗೆ ಬರೆದಿದ್ದಾರೆ. ಸುಮಾರು ನೂರು ಪುಟಗಳ ಪುಸ್ತಕವು ನಾಟಕ ಪ್ರಿಯರನ್ನು ಮನರಂಜಿಸುವಲ್ಲಿ ಎರಡು ಮಾತಿಲ್ಲ.