ಗಾಂಧಿ ತತ್ವಗಳು ಮತ್ತು ಮಾರ್ಟಿನ್ ಲೂಥರ್ ಕಿಂಗ್
ಮಾರ್ಟಿನ್ಲೂಥರ್ಕಿಂಗ್ (೧೯೨೯-೧೯೬೮) ಗಾಂಧಿತತ್ವಗಳ ಆರಾಧಕ. ಅಮೆರಿಕಾದಲ್ಲಿನ ನೀಗ್ರೋ ಹೋರಾಟದ ಮಾರ್ಗದರ್ಶಕ ಕೂಡ. ಶಾಂತಿಗಾಗಿ ನೋಬಲ್ ಪ್ರಶಸ್ತಿ ಪಡೆದ ಮಾರ್ಟಿನ್ಲೂಥರ್ ಕಿಂಗ್ ನ ಈ ಚರಿತ್ರಾರ್ಹ ಭಾಷಣ, ಸೇಡು ಆದರ್ಶವಾಗಿರುವ ಇಂದಿನ ದಲಿತ ಚಳುವಳಿಯ ಪರ್ಯಾಯ ಚಿಂತನೆಗೆ ಮಾದರಿಯಾಗಬಹುದೇನೋ......?
"ಇಂದು ನಾವು ಯಾವ ಒಬ್ಬ ಪ್ರಸಿದ್ಧ ಅಮೆರಿಕಾದವನ (ಅಧ್ಯಕ್ಷ ಲಿಂಕನ್) ಸದಾಶಯದಲ್ಲಿ ನಾವಿದ್ದೇವೋ ಆ ಮಹಾಶಯನು ನೂರು ವರ್ಷಗಳ ಹಿಂದೆ ಬಂಧವಿಮೋಚನೆಯ ಪ್ರಕಟಣೆಗೆ ತನ್ನ ಸಹಿ ಮಾಡಿದ್ದ. ಜೀವಚೈತನ್ಯವನ್ನು ಹಿಂಡುವ ಅನ್ಯಾಯವೆಂಬ ಜ್ವಾಲೆಯಲ್ಲಿ ಕಮರಿದ್ದ ಲಕ್ಷಾನುಲಕ್ಷ ನೀಗ್ರೋಗಳಿಗೆ ಈ ಮಹತ್ವದ ತೀರ್ಪು ಆಶಾಕಿರಣವಾಗಿ, ದಾಸ್ಯದ ಕರಾಳ ರಾತ್ರಿಗೆ ಸಂತಸದ ಬೆಳಕನ್ನು ದರ್ಶಿಸುವ ಸಂತನಾಗಿ ಬಂದಿತು.
ಆದರೆ, ನೂರು ವರ್ಷಗಳ ನಂತರವೂ ಸಹ ನೀಗ್ರೋಗಳು ಮುಕ್ತರಾಗಿಲ್ಲ. ನೂರು ವರ್ಷಗಳ ನಂತರವೂ ನೀಗ್ರೋಗಳು ಪ್ರತ್ಯೇಕತೆಯ ಕೈಬೇಡಿಗಳಿಂದ, ತಾರತಮ್ಯದ ಸರಪಳಿಗಳಿಂದ ಬಂಧಿತರಾಗಿತೆವಳುತ್ತಿದ್ದಾರೆ.
ನೂರು ವರ್ಷಗಳ ನಂತರವೂ ಪ್ರಾಪಂಚಿಕ ಸಮೃದ್ಧಿಯ ಸಮುದ್ರದ ನಡುವೆ ಬಡತನವೆಂಬ ನಡುಗಡ್ಡೆಯಲ್ಲಿ ಒಬ್ಬೊಂಟಿಗನಾಗಿ ನೀಗ್ರೋಗಳು ವಾಸಿಸುತ್ತಿದ್ದಾರೆ. ನೂರು ವರ್ಷಗಳ ನಂತರವೂ ಅಮೆರಿಕಾ ಸಮಾಜದ ಬಿಗಿ ಹಿಡಿತದಲ್ಲಿ ನೀಗ್ರೋ ಸೊರಗಿದ್ದಾನೆ ಮತ್ತು ತನ್ನ ನೆಲೆಯಲ್ಲೇ ದೇಶ ಭ್ರಷ್ಟನಾಗಿದ್ದಾನೆ. ಈ ಎಲ್ಲಾ ನಾಚಿಕೆಗೇಡಿನ ಸಂಗತಿಗಳನ್ನು ನಾಟಕೀಕರಣಗೊಳಿಸಲು ನಾವಿಂದು ಇಲ್ಲಿ ಸೇರಿದ್ದೇವೆ.
ಒಂದು ರೀತಿಯಲ್ಲಿ ಹೇಳುವುದಾದರೆ, ರಾಷ್ಟ್ರದ ರಾಜಧಾನಿಗೆ ಒಂದು ಚೆಕ್ ಅನ್ನು ನಗದಾಗಿಸಿಕೊಳ್ಳಲು ನಾವಿಲ್ಲಿಬಂದಿದ್ದೇವೆ. ಗಣತಂತ್ರದ ಶಿಲ್ಪಿಗಳು ಸಂವಿಧಾನದ ರೂಪುರೇಷೆಗಳನ್ನು ರಚಿಸುವಾಗ, ಸ್ವಾತಂತ್ರ್ಯವನ್ನು ಘೋಷಿಸುವಾಗ ಸಹಿಹಾಕಿದ ಪ್ರಾಮಿಸರಿನೋಟ್ ಅದು. ಪ್ರತಿಯೊಬ್ಬ ಅಮೆರಿಕನ್ ಅದಕ್ಕೆ ಬದ್ಧನಾಗಲೇಬೇಕು. ಈ ಪ್ರಾಮಿಸರಿ ನೋಟ್ ಏನುಹೇಳುತ್ತದೆಂದರೆ, ಇಲ್ಲಿನ ಪ್ರತಿಯೊಬ್ಬನಿಗೂ, ಹೌದು ಪ್ರತಿಯೊಬ್ಬ ಬಿಳಿಯನ ಹಾಗೂ ಪ್ರತಿಯೊಬ್ಬ ಕರಿಯ ಮನುಷ್ಯನಿಗೂ ಪರದೇಶಿಯಾಗದ ಬದುಕು, ಸ್ವಾತಂತ್ರ್ಯ ಹಾಗೂ ಅಪರಿಮಿತ ಸಂತಸದ ಬದುಕನ್ನು ಹೊಂದುವ ಅಭಿವಚನವನ್ನು ಸಾರುತ್ತದೆ.
ತನ್ನಲ್ಲಿ ವಾಸಿಸುವ ನಾಗರೀಕರ ಬಣ್ಣದ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕಾ ತಾನು ಒಪ್ಪಿಕೊಂಡಂತಹ ದಸ್ತಾವೇಜಿಗೆ ಅಗೌರವ ತೋರಿಸಿ, ತಪ್ಪಿತಸ್ಥನಾಗಿದೆ. ಬರೆದ ಪವಿತ್ರ ಕರಾರಿಗೆ ತಲೆಬಾಗದೆ, ಸಾಕಷ್ಟು ಅನುದಾನವಿಲ್ಲ ಎಂಬ ಅಡಿಬರಹವಿರುವ ನಿಷ್ಪ್ರಯೋಜಕ ಆಜ್ಞಾ ಪತ್ರವೊಂದನ್ನು ಅಮೆರಿಕಾವು ನೀಗ್ರೋ ಜನಾಂಗಕ್ಕೆ ನೀಡಿರುವುದು ವಿಶದವಾಗಿದೆ.
ಆದರೆ ಪ್ರಾಮಾಣಿಕತೆಯ, ನ್ಯಾಯದ ಬ್ಯಾಂಕ್ ಇನ್ನೂ ಸಹ ದಿವಾಳಿಖೋರನಾಗಿಲ್ಲವೆಂಬ ವಿಶ್ವಾಸ ನಮಗಿದೆ. ಈ ರಾಷ್ಟ್ರದಲ್ಲಿನ ಅವಕಾಶಗಳ ಆಕಾಶದಲ್ಲಿ ಸಾಕಷ್ಟು ಅನುದಾನವಿಲ್ಲವೆಂಬುದನ್ನು ನಂಬುವುದಕ್ಕೆ ನಾವು ಸಿದ್ಧರಿಲ್ಲ. ಆದ್ದರಿಂದಲೇ ಸ್ವಾತಂತ್ರ್ಯದ ದ್ರವ್ಯ ಹಾಗೂ ನ್ಯಾಯದ ಭದ್ರತೆಯನ್ನು ನಾವು ಅಪೇಕ್ಷಿಸಲು ಸಹಕರಿಸುವಂತಹ ಈ ಆಜ್ಞಾಪತ್ರವನ್ನು ನಗದೀಕರಿಸಲು ಬಂದಿದ್ದೇವೆ.
ಪರಿಸ್ಥಿತಿಯ ತೀವ್ರತೆಯನ್ನು ಅಮೆರಿಕಾಕ್ಕೆ ಜ್ಞಾಪಿಸುವುದಕ್ಕಾಗಿ ನಾವಿಂದು ಈ ಸ್ಥಳದಲ್ಲಿ ಸೇರಿದ್ದೇವೆ. ಕಾಲವನ್ನು ನಂಬಿ ಸುಮ್ಮನಿರುವುದಕ್ಕಾಗಲೀ ಅಥವಾ ವಿಲಾಸಿ ಸ್ಥಿರವೃತ್ತಿಯನ್ನು ಹೊಂದುವುದಕ್ಕಾಗಲೀ ಈಗ ಸಮಯವಲ್ಲ. ಸ್ವಾತಂತ್ರ್ಯದ ಅಭಿವಚನವನ್ನು ಸತ್ಯಗೊಳಿಸುವ ಸಮಯವಿದು. ದಾಸ್ಯದ ಕತ್ತಲನ್ನು ದೂರಮಾಡುವ ಮತ್ತು ವರ್ಣಾಧಾರಿತ ನ್ಯಾಯದ ಪ್ರತ್ಯೇಕತೆಯ ಕಂದಕವನ್ನು ನಿರ್ಜನಗೊಳಿಸಬೇಕಾದ ಕಾಲವಿದು. ರಾಷ್ಟ್ರವನ್ನು ವರ್ಣಾಧಾರಿತ ನ್ಯಾಯವೆಂಬ ಕಳ್ಳುಸುಕಿನ ನೆಲದಿಂದ ಭ್ರಾತೃತ್ವದ ವಾಸ್ತವಿಕ ಹೆಬ್ಬಂಡೆಯಮೇಲಿರಿಸಬೇಕಾದ ಕಾಲವಿದು. ಭಗವಂತನ ಎಲ್ಲ ಮಕ್ಕಳಪಾಲಿಗೂ ನ್ಯಾಯವನ್ನು ಸಾಕಾರ ಗೊಳಿಸಬೇಕಾದ ಕಾಲವಿದು.
ಈ ಪ್ರಕ್ರಿಯೆಯ ಅವಶ್ಯಕತೆಯನ್ನು ಉದಾಸೀನಮಾಡುವುದಾಗಲೀ, ನೀಗ್ರೋ ಜನಾಂಗದ ಸಾಮರ್ಥ್ಯವನ್ನು ನಿರ್ಲಕ್ಷಿಸುವುದಾಗಲೀ ಆದರೆ, ಖಂಡಿತವಾಗಿಯೂ ಅದು ರಾಷ್ಟ್ರದ ದೃಷ್ಟಿಯಿಂದ ಅಪಾಯಕಾರಿಯಾಗಿ ಪರಿಣಮಿಸಬಹುದು. ನೀಗ್ರೋಗಳ ನ್ಯಾಯವಾದ ಅತೃಪ್ತಿಯ ಉರಿಬೇಸಿಗೆಯನ್ನು ಸಮಾನತೆ ಹಾಗೂ ಸ್ವಾತಂತ್ರ್ಯದ ಶರತ್ಕಾಲ ಮಾತ್ರ ತಣಿಸಬಹುದು. ೧೯೬೩ ಯಾವುದಕ್ಕೂ ಕೊನೆಯಲ್ಲ, ಆರಂಭವಷ್ಟೆ. ನೀಗ್ರೋಗಳು ಪ್ರತಿಭಟನೆಯ ಉಸಿರಾಡಬೇಕೆಂದು ಇಂದು ಕೆಲವರ ಅಪೇಕ್ಷೆ. ಒಂದುವೇಳೆ ರಾಷ್ಟ್ರ ನಮ್ಮನ್ನು ಉಪೇಕ್ಷಿಸಿ ಸಹಜಸ್ಥಿತಿಗೆ ಮರಳಿದ್ದೇ ಆದರೆ ಅದೇ ಜನ ಉಗ್ರ ಕ್ರಾಂತಿಯನ್ನು ಎದುರುನೋಡುತ್ತಾರೆ.
ಎಲ್ಲಿಯವರೆಗೆ ನೀಗ್ರೋಗಳಿಗೆ ನಾಗರಿಕತೆಯ ಹಕ್ಕು ದೊರೆಯುವುದಿಲ್ಲವೋ ಅಲ್ಲಿಯವರೆಗೆ ಅಮೆರಿಕಾದಲ್ಲಿ ನೆಮ್ಮದಿ ಹಾಗೂ ವಿಶ್ರಾಂತಿಯೆಂಬ ತಂಗಾಳಿ ಸುಳಿಯುವುದಿಲ್ಲ. ಎಲ್ಲಿಯವರೆಗೆ ನ್ಯಾಯದ ಹೊಸ ಹಗಲು ಉದಯಿಸುವುದಿಲ್ಲವೋ, ಅಲ್ಲಿಯವರೆಗೆ ದಂಗೆಯ ಸುಳಿಗಾಳಿ ರಾಷ್ಟ್ರದ ತಳಹದಿಯನ್ನು ಅಭದ್ರಗೊಳಿಸುವ ತನ್ನ ಕಾಯಕವನ್ನು ನಿಲ್ಲಿಸುವುದಿಲ್ಲ.
ಆದರೆ, ನ್ಯಾಯದರಮನೆಯ ಹೊಸ್ತಿಲಲ್ಲಿ ಕಾದಿರುವ ನನ್ನ ಜನಕ್ಕೆ ಕೆಲವು ಸಂಗತಿಗಳನ್ನು ಅವಶ್ಯಕವಾಗಿ ತಿಳಿಸುವುದಿದೆ. ನ್ಯಾಯಯುತ ಸ್ಥಾನವನ್ನು ತಲುಪುವ ನಮ್ಮ ಪ್ರಕ್ರಿಯೆಯಲ್ಲಿ ಸಂಭವಿಸಬಹುದಾದ ತಪ್ಪುನಡೆಗಳ ಕುರಿತಂತೆ ಅಪರಾಧ ಪ್ರಜ್ಞೆಯನ್ನು ಹೊಂದಬೇಕಾದ್ದಿಲ್ಲ.
ಸ್ವಾತಂತ್ರ್ಯದ ಬಾಯಾರಿಕೆಯನ್ನು ನಿಷ್ಠುರತೆ, ಹಗೆಯ ಬೊಗಸೆಯಿಂದ ಕುಡಿದು ನಿವಾರಿಸಿಕೊಳ್ಳುವುದು ನಮ್ಮ ಹುಡುಕಾಟದ ಸಾರ್ಥಕ್ಯವಲ್ಲ. ನಮ್ಮ ಹೋರಾಟ ನೆಲೆಗಟ್ಟು ಘನತೆ ಮತ್ತು ಸಂಯಮನದಿಂದ ಕೂಡಿರಬೇಕು. ನಮ್ಮ ರಚನಾತ್ಮಕ ಹೋರಾಟ ದೈಹಿಕ ಹಿಂಸೆಯಾಗಿ ರೂಪಾಂತರಗೊಂಡು ಕ್ಷೀಣಿಸಲು ನಾವು ಅವಕಾಶ ನೀಡಬಾರದು. ನಮ್ಮ ಹೋರಾಟವನ್ನು ಕಾಲಕಾಲಕ್ಕೆ ಘನತೆಯಮಟ್ಟಕ್ಕೇರಿಸಿ ದೇಹ ಶಕ್ತಿಯನ್ನು ಆತ್ಮ ಚೈತನ್ಯದೊಂದಿಗೆ ಸಮೀಕರಿಸಿಕೊಳ್ಳಬೇಕು.
ನೀಗ್ರೋ ಜನಾಂಗದ ಹುಟ್ಟಡಗಿಸಿದ ವಿಸ್ಮಯಕಾರಿಯಾದ ಹೊಸ ಸೈನ್ಯಶಕ್ತಿ, ಎಲ್ಲ ಬಿಳಿಯ ಜನಾಂಗದವರನ್ನು ಶಂಕಿಸುವತ್ತ ನಮ್ಮನ್ನು ಕೊಂಡೊಯ್ಯಬಾರದು. ಏಕೆಂದರೆ, ಇವರಲ್ಲಿ ಹಲವರು ನಮ್ಮೊಡನೆ ನಿರಂತರ ಭ್ರಾತೃತ್ವದ ಸಂಬಂಧವಿರಿಸಿಕೊಂಡವರು. ಅವರ ಗುರಿ ನಮ್ಮ ಗುರಿಯ ಜೊತೆ ಬೆಸೆದುಕೊಂಡಿದೆ ಮತ್ತು ಅವರ ಸ್ವಾತಂತ್ರ್ಯ ನಮ್ಮ ಸ್ವಾತಂತ್ರ್ಯದ ಜೊತೆ ಬಿಡಿಸಲಾಗದ ಬಂಧವಿರಿಸಿಕೊಂಡಿದೆ ಎಂದು ಅವರು ನಂಬಿರುವುದು ಇಲ್ಲಿ ಅವರ ಹಾಜರಿಯಿಂದ ಸ್ಪಷ್ಟವಾಗುತ್ತದೆ. ಅನ್ಯಾಯದ ಕೋಟೆಯ ಮೇಲೆ ಧಾಳಿಮಾಡಲು ಇಲ್ಲಿಯವರೆಗೆ ಸವೆಸಿರುವ ಹಾದಿಯನ್ನು ಬಿಳಿಯರ ಹಾಗೂ ನೀಗ್ರೋಗಳನ್ನೊಳಗೊಂಡ ಸೈನ್ಯದೊಂದಿಗೆ ಸಾಂಘಿಕವಾಗಿ ಮುಂದುವರೆಸಬೇಕೇ ವಿನಾ ಒಬ್ಬಂಟಿಗರಾಗಲ್ಲ.
ಈಗ ಹಿನ್ನಡೆಗೆ ಅವಕಾಶವಿಲ್ಲ. ನಾವು ನಿರಂತರ ಮುನ್ನಡೆಯನ್ನು ಕಾಯ್ದುಕೊಳ್ಳುತ್ತೇವೆಂಬ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಮಾಡಬೇಕಿದೆ. ಎಂದು ನೀವು ತೃಪ್ತರಾಗುತ್ತೀರಿ? ಎಂದು ನಾಗರಿಕ ಹಕ್ಕುಗಳ ಆರಾಧಕರಿಗೆ ಹಲವರು ಪ್ರಶ್ನಿಸಿದ್ದುಂಟು. ಎಲ್ಲಿಯವರೆಗೆ ನೀಗ್ರೋಗಳು ಮಾತಿಗೆ ನಿಲುಕದಂತಹ ಪೊಲೀಸರ ನಿರ್ದಯವೃತ್ತಿಗೆ ಬಲಿಪಶುಗಳಾಗಿರುತ್ತಾರೋ ಅಲ್ಲಿಯವರೆಗೆ ನಮಗೆ ತೃಪ್ತಿಯೆಂಬುದಿಲ್ಲ.
ಪ್ರಯಾಣದ ಬಳಲಿಕೆಯನ್ನು ತಣಿಸುವ ಹೆದ್ದಾರಿಯ ಮೋಟೆಲ್ಗಳಲ್ಲಿ, ನಗರದ ಹೊಟೆಲ್ಗಳಲ್ಲಿ ನೀಗ್ರೋಗಳಿಗೆ ಆಶ್ರಯ ದೊರೆಯುವುದಿಲ್ಲವೋ ಅಲ್ಲಿಯವರೆಗೆ ನಮಗೆ ತೃಪ್ತಿಯೆಂಬುದಿಲ್ಲ. ಅಲ್ಪಸಂಖ್ಯಾತರಾಗಿರುವ ನೀಗ್ರೋಗಳು ಬಹು ಸಂಖ್ಯಾತರಾಗುವವರೆಗೆ ನಮಗೆ ತೃಪ್ತಿಯೆಂಬುದಿಲ್ಲ.
ಬಿಳಿಯರಿಗೆ ಮಾತ್ರ ಎಂಬ ಬರಹದ ಫಲಕದೊಂದಿಗೆ ಎಲ್ಲಿಯವರೆಗೆ ನಮ್ಮ ಸಂತಾನಗಳ ಆತ್ಮಗೌರವ, ಘನತೆಯ ಸುಲಿಗೆ ನಡೆಯುತ್ತಿರುವುದೋ ಅಲ್ಲಿಯವರೆಗೆ ನಮಗೆ ತೃಪ್ತಿಯಿರುವುದಿಲ್ಲ. ಎಲ್ಲಿಯವರೆಗೆ ಮತದಾನದ ವಿಷಯದಲ್ಲಿ ಮಿಸ್ಸಿಸ್ಸಿಪಿಯ ನೀಗ್ರೋ ನಿರ್ಲಕ್ಷಿಸಲ್ಪಡುತ್ತಾನೋ, ನ್ಯೂಯಾರ್ಕ್ನ ನೀಗ್ರೋ ಮತದಾನದ ಕುರಿತು ತನ್ನದೇನು ಪಾತ್ರವಿಲ್ಲವೆಂದು ಭಾವಿಸುತ್ತಿರುತ್ತಾನೋ ಅಲ್ಲಿಯವರೆಗೆ ನಮಗೆ ತೃಪ್ತಿಯೆಂಬುದಿರುವುದಿಲ್ಲ. ನ್ಯಾಯದ ಚಿಲುಮೆಯ ನೀರು ಹರಿದು ನಮ್ಮನ್ನು ತಲುಪುವವರೆಗೂ ನಮಗೆ ಖಂಡಿತವಾಗಿಯೂ ತೃಪ್ತಿಯಿರುವುದಿಲ್ಲ. ನಿಮ್ಮಲ್ಲಿ ಕೆಲವರು ದಬ್ಬಾಳಿಕೆ ಹಾಗೂ ವಿಪರೀತ ಸಂಕಟದ ಹಾದಿಯನ್ನು ಸವೆಸಿ ಬಂದಿದ್ದೀರೆಂದು, ಮತ್ತೆ ಕೆಲವರು ಈಗಷ್ಟೇ ಸೆರೆಮನೆಯ ಹಿಂಸೆಯನ್ನನುಭವಿಸಿ ಬಂದಿದ್ದೀರೆಂದು ನನಗೆ ಅರಿವಿದೆ. ಮತಭೇದದ ಹಿಂಸೆಯಿಂದ, ಪೊಲೀಸರ ದೌರ್ಜನ್ಯದ ಬಿರುಗಾಳಿಯಿಂದ ತತ್ತರಿಸುತ್ತಾ ಸ್ವಾತಂತ್ರ್ಯವನ್ನು ಸಂಧಿಸಲಾಗದೇ ಮತ್ತೆಕೆಲವರು ಇಲ್ಲಿಗೆ ಬಂದಿದ್ದೀರಿ. ಸಮಾಜದ ಕಲ್ಪಿತ ನರಳಿಕೆಯಲ್ಲಿ ಪಳಗಿರುವ ನೀವು, ಪರಿಶ್ರಮದಿಂದ ಗಳಿಸದ ನರಳಿಕೆಯೇ ವಿಮೋಚನೆ ಎಂಬ ಮಿಥ್ಯೆಯ ನೆರಳಿನಲ್ಲಿ ಬದುಕುತ್ತಿದ್ದೀರಿ.
ಈ ಅವಸ್ಥೆ ಮುಂದೊಮ್ಮೆ ಬದಲಾಗಬಹುದು, ಬದಲಾಗುತ್ತದೆ ಎಂಬ ಆಸೆಯೊಂದಿಗೆ ಮಿಸ್ಸಿಸ್ಸಿಪಿಗೆ ಹಿಂದಿರುಗಿ, ಅಲಬಾಮಾಗೆ ಹಿಂದಿರುಗಿ, ದಕ್ಷಿಣ ಕರೋಲಿನಾಗೆ ಹಿಂದಿರುಗಿ, ಜಾರ್ಜಿಯಾಗೆ ಹಿಂದಿರುಗಿ, ಲ್ಯುಸೀನಾಗೆ ಹಿಂದಿರುಗಿ, ಉತ್ತರದ ನಗರಗಳ ನಿಮ್ಮ ಹೊಲಗೇರಿಗೆ ಹಿಂದಿರುಗಿ. ನಿರಾಶೆಯ ಕಂದಕದಲ್ಲಿ ಹೊರಳಾಡುವ ಅವಶ್ಯಕತೆಯಿಲ್ಲ.
ಆದ್ದರಿಂದ ಗೆಳೆಯರೇ, ಇಂದು ನಾವು ವರ್ತಮಾನದ ಹಾಗೂ ಭವಿಷ್ಯದ ಸಂಕಟಗಳನ್ನು ಎದುರು ನೋಡುತ್ತಿದ್ದೀವಿ ಎಂಬುದು ನಿಜವಾದರೂ ಸಹ ನನ್ನ ಕನಸು ನೇಪಥ್ಯಕ್ಕೆ ಸರಿದಿಲ್ಲ. ಮುಂದೊಂದುದಿನ ಈ ರಾಷ್ಟ್ರ ತಾತ್ವಿಕ ವೇದಿಕೆಯಲ್ಲಿ ಉದಯಿಸುತ್ತದೆ ಎಂಬ ಅಮೆರಿಕಾದ ಕನಸಿನಲ್ಲಿ ಬೇರೂರಿರುವ ಈ ನನ್ನ ಕನಸು ನನಸಾಗಿ ಸಮಾನತೆಯ ವೃಕ್ಷ ಮೊಳಕೆಯೊಡೆಯುವುದು.
ಮುಂದೊಂದುದಿನ ಗುಲಾಮರ ಮಕ್ಕಳು, ಹಿಂದೊಮ್ಮೆ ಗುಲಾಮರ ಯಜಮಾನರೆನಿಸಿಕೊಂಡಿದ್ದವರ ಮಕ್ಕಳು ಭಾತೃತ್ವದ ಮೇಜಿನಲ್ಲಿ ಜಾರ್ಜಿಯಾದ ಕೆಂಪುಬೆಟ್ಟದ ಮೇಲೆ ಕುಳಿತು ಸಂತಸವನ್ನನುಭವಿಸುತ್ತಾರೆಂಬ ನನ್ನದೊಂದು ಕನಸಿದೆ. ಅನ್ಯಾಯ ಹಾಗೂ ದಾಸ್ಯದ ಬೆಂಕಿಯಿಂದ ಬೇಯುತ್ತಿರುವ ಮಿಸ್ಸಿಸ್ಸಿಪಿಯಲ್ಲಿ ನ್ಯಾಯ ಹಾಗೂ ಸ್ವಾತಂತ್ರ್ಯದ ಒಯಸಿಸ್ ಆವಿರ್ಭವಿಸುವುದೆಂಬ ನನ್ನದೊಂದು ಕನಸಿದೆ.
ವ್ಯಕ್ತಿಯನ್ನು ಕೇವಲ ವರ್ಣದಿಂದ ಗುರುತಿಸಲ್ಪಡದೆ ಶೀಲ, ಚಾರಿತ್ರ್ಯದಿಂದ ನಿರ್ಣಯಿಸಲ್ಪಡುವುದೋ ಅಂತಹ ರಾಷ್ಟ್ರದಲ್ಲಿ ಮುಂದೆ ನನ್ನ ನಾಲ್ವರು ಮಕ್ಕಳು ವಾಸಿಸುವರೆಂಬ ನನ್ನದೊಂದು ಕನಸಿದೆ.
ದುಷ್ಟ ವರ್ಣಬೇಧವನ್ನು ಅನುಭವಿಸುತ್ತಿರುವ ಅಲಬಾಮಾದಲ್ಲಿನ ಗೌರ್ನರ್ನ ನಿರರ್ಥಕ ಆಡಳಿತದ ಹೊರತಾಗಿಯೂ ಸಹ ಮುದೊಂದುದಿನ ಪುಟ್ಟ ಪುಟ್ಟ ಕಪ್ಪು ಹುಡುಗ, ಹುಡುಗಿಯರು, ಪುಟ್ಟ ಪುಟ್ಟ ಬಿಳಿಯ ಹುಡುಗ, ಹುಡುಗಿಯರೊಂದಿಗೆ ಭ್ರಾತೃತ್ವದ ಸಂಕೋಲೆಯಿಂದ ಬಂಧಿತರಾಗುವರೆಂಬ ನನ್ನದೊಂದು ಕನಸಿದೆ. ಇಂದು ಆ ಕನಸನ್ನು ನಾನು ಕಾಣುತ್ತಿದ್ದೇನೆ.
ಮುಂದೊಂದುದಿನ ಎಲ್ಲ ಅಸಮಾನತೆಯ ಕಂದಕಗಳು ನಿವಾರಿಸಲ್ಪಡುವವು. ಎಲ್ಲ ಮೇಲ್ಮಟ್ಟದ ಜನಾಂಗೀಯ ಮನೋಭಾವನೆಗಳು ತಮ್ಮ ವಕ್ರತೆಯ ಹಾದಿಯನ್ನು ತೊರೆದು ಸಮಾನತೆಯ ಹಾದಿ ತುಳಿಯುವವು. ಭಗವಂತನ ನಿಜಪ್ರಭೆ ಸಾಕ್ಷಾತ್ಕರಿಸಲ್ಪಟ್ಟು ಎಲ್ಲೆಡೆ ಸಮಾನತೆಯ ಬೆಳಕುಹರಿಯುವುದೆಂಬ ನನ್ನದೊಂದು ಕನಸಿದೆ.
ಇದು ನಮ್ಮೆಲ್ಲರ ನಿರೀಕ್ಷೆ. ಈ ನಂಬಿಕೆಯೊಂದಿಗೆ ನಾನು ದಕ್ಷಿಣದೆಡೆಗೆ ಪಯಣಿಸಬಯಸುತ್ತೇನೆ. ಈ ನಿರೀಕ್ಷೆಯೊಂದಿಗೆ ನಿರಾಶೆಯ ಪರ್ವತದಿಂದ ಆಸೆಯೆಂಬ ರತ್ನವನ್ನು ಕಡೆದುತೆಗೆಯಲು ಸಾಧ್ಯವಾಗುತ್ತದೆ. ಇದೇ ನಿರೀಕ್ಷೆಯಿಂದಲೇ, ರಾಷ್ಟ್ರದಲ್ಲಿನ ಜನಾಂಗೀಯ ವೈಷಮ್ಯದ ಅಪಸ್ವರವನ್ನು ಭ್ರಾತೃತ್ವದ ಸ್ವರಮೇಲವನ್ನಾಗಿ ಪರಿವರ್ತಿಸಲು ಸಾಧ್ಯವಿದೆ.
ಮುಂದೊಂದುದಿನ ನಾವೆಲ್ಲರೂ ಮುಕ್ತರಾಗುತ್ತೇವೆಂಬ ನಿರೀಕ್ಷೆಯೊಂದಿಗೆ ನಾವೆಲ್ಲರೂ ಒಟ್ಟಿಗೆ ದುಡಿಯಲು, ಪ್ರಾರ್ಥಿಸಲು, ಹೋರಾಡಲು, ಸ್ವಾತಂತ್ರವನ್ನನುಭವಿಸಲು ಸಾಧ್ಯವಾಗುವುದು. ಆ ದಿನ ಭಗವಂತನ ಸಂತಾನವೆಲ್ಲವೂ ಈ ಹಾಡನ್ನು ಹೊಸ ಅರ್ಥದೊಂದಿಗೆ ಹಾಡುವವು....
ನನ್ನರಾಷ್ಟ್ರವಾಗಿಹುದು ನಿನ್ನಿಂದ
ಸ್ವಾತಂತ್ರ್ಯದ ಸುಂದರ ಬೀಡು
ನಿನ್ನಿಂದ ನಮ್ಮೀ ಹಾಡು
ನನ್ನ ತಂದೆಯ ಜೀವಿತದ ನಾಡು
ಯಾತ್ರಾರ್ಥಿಗಳ ನೆಚ್ಚಿನ ನೆಲೆವೀಡು
ಎಲ್ಲ ಪರ್ವತಗಳ ಒಡಲಿನಿಂದ
ಕೇಳುತ್ತಿದೆ
ಸ್ವಾತಂತ್ರ್ಯದ ಮಂಗಲ ನಿನಾದ.....
ಅಮೆರಿಕಾ ಶ್ರೇಷ್ಠ ರಾಷ್ಟ್ರವಾಗಬೇಕಾದರೆ ಈ ಹಾಡು ಸಾಕ್ಷಾತ್ಕರಿಸಬೇಕು.
ಆದ್ದರಿಂದ...ನ್ಯೂ ಹ್ಯಾಂಪಶೈರ್ನ ಅದ್ಭುತ ಶಿಖರಗಳಿಂದ, ನ್ಯೂಯಾರ್ಕ್ನ ಪವಿತ್ರ ಪರ್ವತಗಳಿಂದ, ಪೆನ್ಸೆಲ್ವೇನಿಯಾದ ಪ್ರಸ್ಥಭೂಮಿಯಿಂದ, ಕೊಲಾರ್ಡೋದ ಹಿಮಾಚ್ಛಾದಿತ ರಾಕೀ ಪ್ರರ್ವತ ಶ್ರೇಣಿಯಿಂದ, ಕ್ಯಾಲಿಫೋರ್ನಿಯಾದ ವಕ್ರ ಇಳಿಜಾರು ಪ್ರದೇಶದಿಂದ ಸ್ವಾತಂತ್ರ್ಯದ ನಿನಾದ ಕೇಳಿಬರಲಿ.
ಅಲ್ಲದೆ, ಜಾರ್ಜಿಯಾದ ಕಲ್ಲುಪರ್ವತದಿಂದ, ಟೆನ್ನಿಸ್ಸೀಯ ಬೆಟ್ಟಗಳಿಂದ, ಮಿಸ್ಸಿಸ್ಸಿಪಿಯ ಎಲ್ಲ ಪರ್ವತಗಳಿಂದ, ತೊಪ್ಪಲುಗಳಿಂದಲೂ ಸಹ ಈ ಸ್ವಾತಂತ್ರ್ಯದ ನಿನಾದ ಕೇಳಿಬರಲಿ.
ಎಂದು ಈ ನಿನಾದ ಪ್ರತಿಯೊಂದು ಗ್ರಾಮ, ನಗರ, ರಾಜ್ಯದಿಂದ ಕೇಳಿಬರುತ್ತದೆಯೋ, ಅಂದಿನ ದಿನವನ್ನು ನಾವು ಮುಕ್ತವಾಗಿ ಜೀವಿಸಬಹುದು. ಎಂದು ಭಗವಂತನ ಎಲ್ಲ ಸಂತಾನ - ಬಿಳಿಯ ಹಾಗೂ ಕರಿಯ ಜನಾಂಗ, ಯಹೂದಿಯರು, ಯಹೂದಿಯಲ್ಲದವರು, ರೋಮನ್ ಕ್ಯಾಥೋಲಿಕ್, ಪ್ರಾಟೆಸ್ಟಂಟ್ - ಎಲ್ಲರೂ ಕೈಗೂಡಿಸಿ ನೀಗ್ರೋ ಸಂಪ್ರದಾಯದ ಈ ಹಾಡನ್ನು ಹಾಡಲು ಸಾಧ್ಯವಾಗುತ್ತದೆ...
ಮುಕ್ತರಾದೆವು ಕಡೆಗೂ
ಮುಕ್ತರಾದೆವು ಕಡೆಗೂ
ಭಗವಂತನ ದಯೆಯಿಂದ
ನಾವು ಮುಕ್ತರಾದೆವು ಕಡೆಗೂ"
- ಮಾರ್ಟಿನ್ ಲೂಥರ್ ಕಿಂಗ್.
(ಕನ್ನಡಕ್ಕೆ: ನರಸಿಂಹಪ್ರಸಾದ್.ಎನ್.ಕೆ.)