ಗಾದೆ ಮಾತು ವಿಸ್ತರಣೆ- ಇಲ್ಲೇ ಸ್ವರ್ಗ ಇಲ್ಲೇ ನರಕ...

ಗಾದೆ ಮಾತು ವಿಸ್ತರಣೆ- ಇಲ್ಲೇ ಸ್ವರ್ಗ ಇಲ್ಲೇ ನರಕ...

‘ಮಾನವನಾಗಿ ಹುಟ್ಟುವುದು ಏಳೇಳು ಜನ್ಮದ ಪುಣ್ಯಫಲದಿಂದ’ ಅಂತೆ. ಭಗವಂತನ ಕೊಡುಗೆಯಾದ ಈ ಜೀವ ಮತ್ತು ಜೀವನವನ್ನು ಸ್ವರ್ಗ ಸಮಾನವಾಗಿಸದೆ ನರಕ ಸದೃಶವಾಗಿಸುತ್ತೇವೆ. ಒಂದು ಹಾಡು ಇದಕ್ಕೆ ಅನ್ವಯವಾಗುತ್ತದೆ 'ಇಲ್ಲೇ ಸ್ವರ್ಗ ಇಲ್ಲೇ ನರಕ, ಮೇಲೇನಿಲ್ಲ ಸುಳ್ಳು' ಸತ್ಯವಾದ ಸಾಲು.

ದೊಡ್ಡವರು ಹೇಳುತ್ತಾರೆ ಪುಣ್ಯ ಮಾಡಿದವರು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾರೆ, ಪಾಪ ಮಾಡಿದವರು ನರಕದ ಬಾಗಿಲು ತೆರೆದಿರುತ್ತದೆ ಎಂಬುದಾಗಿ. ಪುರಾಣಗಳಲ್ಲಿಯೂ ನಾವು ಓದಿದ್ದೇವೆ.'ಪಾಂಡವರ ಸ್ವರ್ಗಾರೋಹಣ' ಕಥೆ ನಾವೆಲ್ಲ ಓದಿದವರು.

ಇತ್ತೀಚೆಗಿನ ಬೆಳವಣಿಗೆ ನೋಡುವಾಗ ಸತ್ತಮೇಲೆ ಸ್ವರ್ಗ ನರಕ ಎರಡೂ ಅಲ್ಲ, ಜೀವನದ ರೀತಿ-ನೀತಿ, ಬದುಕಿನ ಆಳ-ಅಗಲ, ಗುಣ -ನಡತೆ,ವ್ಯವಹಾರ,ಮಾತುಕತೆ, ಸಂಬಂಧಗಳ ಬೆಸೆಯುವಿಕೆ, ಈ ಎಲ್ಲದರಲ್ಲೂ ಸ್ವರ್ಗ--ನರಕ ಎರಡೂ ಅಡಗಿದೆ ಎಂದರೆ ತಪ್ಪಾಗಲಾರದು.

ಮನೆಗೆ ಬಂದ ಹೆಣ್ಣು ಮಗಳು ಮನೆಯಲ್ಲಿ ಎಲ್ಲರೊಡನೆ ಹೊಂದಾಣಿಕೆಯಿಂದ ಬದುಕು ನಡೆಸಿದರೆ, ಅಲ್ಲಿರುವ ಕುಟುಂಬ ಸದಸ್ಯರು ಚೆನ್ನಾಗಿ ವ್ಯವಹರಿಸಿದರೆ ಆ ಮನೆ ಸ್ವರ್ಗ. ಏನಾದರೂ ಎಡವಟ್ಟಾಯಿತೋ ಅದೇ ನರಕ. ಮತ್ತೆ ಬೇರೆ ನರಕ ಬೇಡ. ನೆಮ್ಮದಿಯಿಲ್ಲ, ದಿನಾ ಜಗಳ, ಚಿಂತೆಯೇ ಬಾಳಿಡೀ ಆದರೆ ಮತ್ತೇನಿದೆ?

ಕಛೇರಿ, ಕೆಲಸ ಮಾಡುವಲ್ಲಿ ಹೊಂದಾಣಿಕೆಯಲ್ಲಿದ್ದರೆ ನೆಮ್ಮದಿಯ ತಾಣ. ಇಲ್ಲದಿರೆ ದಿನಾ ತಲೆನೋವು. ಎಷ್ಟೋ ಸಲ ಹೇಳುವುದು ಕೇಳಿದ್ದೇವೆ, ಕಛೇರಿ ಎಂದರೆ ನರಕ ಎಂಬುದಾಗಿ.

ನಾವು ಒಬ್ಬರಿಗೆ ಅನ್ಯಾಯ ಮಾಡಿದರೆ ಭಗವಂತ ನಮಗೆ ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತಾನಂತೆ. ಆತ ತನ್ನ ಚಕ್ಷುಗಳಿಂದ ಎಲ್ಲವನ್ನೂ ವೀಕ್ಷಿಸುತ್ತಾನಂತೆ. ಒಂದಲ್ಲ ಒಂದು ಅನ್ಯಾಯದ ಫಲ ಉಣ್ಣಲೇ ಬೇಕು. ಇದು ನರಕವೇ. ಒಳ್ಳೆಯದನ್ನೇ ಮಾಡಿದರೆ ಒಳ್ಳೆಯ ದೇ ಆಗುವುದು, ಅದುವೇ ಸ್ವರ್ಗ. ಮನಸ್ಸಿನ ಕೊಳೆಯನ್ನು ಹೊರಹಾಕಿ ಉತ್ತಮ ವಿಚಾರಗಳನ್ನು ತುಂಬಿ ನಡೆನುಡಿಯಲ್ಲಿ ತರುವುದೇ ಸ್ವರ್ಗ. ಬದುಕಿನ ಆಡೊಂಬಲದ ವ್ಯವಹಾರವೇ ಸ್ವರ್ಗ ನರಕದ ಸೃಷ್ಟಿ. ಇದೇ ‘ಇಲ್ಲೇ ಸ್ವರ್ಗ ಇಲ್ಲೇ ನರಕ’ ಗಾದೆ ಮಾತಿನ ಅಂತರಾಳ, ವಿಸ್ತರಣೆ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ