ಗಾನ ಮಾಂತ್ರಿಕನಿಗೆ ನುಡಿ ನಮನ
ಭಾವಜೀವಿ
ಧರೆಯಿಂದ ಕಳಚಿತು ಗಾಯನ ಕೊಂಡಿ
ಮರೆಯಲಿ ಇಣುಕುವ ಸಪ್ತಸ್ವರವು
ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ
ತೆರೆಮರೆ ಶೋಭಿತ ಸ್ವರಗಾನವು||
ಸಹೃದಯ ಪಂಡಿತ ಜ್ಞಾನ ವಿಶಾರದ
ಬಹಳದಿ ಮೆಚ್ಚುಗೆ ಪಡೆದಿಹರು
ಮಹಲಿನ ರಾಜರು ಸಂಗೀತ ಸಾಮ್ರಾಟ
ಕಹಳೆಯ ಊದುತ ಮೆರೆದಿಹರು||
ಮನೆಮನೆ ಗಾರುಡಿಗ ಸಂಗೀತ ಮಾಂತ್ರಿಕ
ಕೋಟ್ಯಾಂತರ ಮನಸು ಗೆದ್ದವರು
ಕನ್ನಡದ ಸ್ವರಲಹರಿ ಬರೆದಂತ ಗಾಯಕ
ಜ್ಞಾನದೀವಿಗೆಯ ಬೆಳಗಿದವರು||
ಕಂಚಿನ ಕಂಠದ ಕೋಗಿಲೆ ದನಿಯದು
ವಂಚನೆಯಿಲ್ಲದ ಮಧುರದನಿ
ಪಂಚಿನ ಅಭಿನಯ ಮರೆಯದ ಕಂಠವು
ಕೊಂಚವು ಸೊಕ್ಕಿಲದ ಇನಿದನಿ||
ಮೆಚ್ಚುಗೆ ಪಡೆಯುತ ಜನಮನ ಗೆದ್ದಿಹ
ನೆಚ್ಚಿನ ಗಾಯಕ ಅಭಿಯಾನ
ಕೆಚ್ಚೆದೆಯ ದಿವ್ಯಜ್ಯೋತಿ ಅಜರಾಮರ
ಬೆಚ್ಚನೆಯ ಕಾಶದಿ ನಾಕಯಾನ.||
-ಅಭಿಜ್ಞಾ ಪಿ ಎಮ್ ಗೌಡ
*******
ಗಾನ ಗಾರುಡಿಗ
ಮೋಹಕ ದನಿಯಲಿ ಹಾಡುವ ಕೊರಳೆ
ಇಂದೇತಕೆ ನೀ ಮೌನ/
ಸಾಕಾಯಿತೆ ನಿನಗೆ ಜಗದ ಸಹವಾಸ
ಮುಗಿಸಿದೆಯ ನಿನ್ನ ಗಾನ//
ಜಗದಗಲ ಪಸರಿಸಿದ ಇನಿದನಿಯು ಚಂದ
ಕೋಗಿಲೆಯ ಕಂಠ ವರದಾನ/
ಅಮೋಘ ರಸಧಾರೆ ಅದ್ಭುತ ಪ್ರತಿಭೆ
ಸಂಗೀತ ಮರೆತು ಮಲಗಿದೆಯಾ//
ಕನ್ನಡಿಗರ ಕಣ್ಮಣಿ ಗಾನ ಗಾರುಡಿಗ
ಮೌನಕ್ಕೆ ಶರಣಾದೆಯಾ/
ಹಾಡುವುದೆ ನಿನ್ನುಸಿರು ಭಾವನೆಯ ಸಾಗರ
ನಿನಗೆ ನನ್ನ ನಮನ//
-ರತ್ನಾ ಭಟ್ ತಲಂಜೇರಿ