ಗಾಳಿಪಟ (ಲಲಿತ ಪ್ರಬಂಧಗಳು)

ಗಾಳಿಪಟ (ಲಲಿತ ಪ್ರಬಂಧಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ರಾ. ಕು. (ಆರ್. ವಿ. ಕುಲಕರ್ಣಿ)
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ. ೧೦೦/-

"ರಾ. ಕು.” ಕಾವ್ಯನಾಮದಲ್ಲಿ ಬರೆಯುವ ಆರ್. ವಿ. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಮೊದಲ ಸಂಕಲನ ಇದು. ಇದರ ಸಂಪಾದಕರು ಲಲಿತ ಪ್ರಬಂಧಗಳ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಪ್ರಬಂಧದ ಜಾತಿ ಹೊರ ಜಗತ್ತಿನೊಡನೆ ಅತ್ಯಂತ ನಿಕಟ ಸಂಬಂಧವನ್ನಿಟ್ಟುಕೊಂದು ಬೆಳೆಯಬೇಕಾದದ್ದಿರುತ್ತದೆ. ಪತ್ರಿಕಾ ವ್ಯವಸಾಯಿಯೊಬ್ಬನನ್ನು ಬಿಟ್ಟರೆ ಸಾಹಿತ್ಯದಲ್ಲಿ ಪ್ರಬಂಧಕಾರನಷ್ಟು ಸಮೀಪದಲ್ಲಿ ಜೀವನವನ್ನು ಸಂದರ್ಶಿಸುವ ವ್ಯಕ್ತಿ ಬೇರೊಬ್ಬನಿರಲಾರನು. ಅಂತೆಯೇ ಇಂಥ ಬರವಣಿಗೆಗೆ ಬಂದೊದಗುವ ಗಂಡಾಂತರ ತೀರ ದೊಡ್ಡದಾಗಿರುತ್ತದೆ. ಲೇಖಕ ಇಲ್ಲಿ ಮುಖಾಮುಖಿಯಾಗಿ ಜೀವನವನ್ನು ನೋಡುತ್ತಾನೆ. ಓದುಗನೊದನೆ ಅದರ ಬಗ್ಗೆ ಮಾತನಾಡುತ್ತಾನೆ. ಶಿರೋನಾಮೆಯು ಸೂಚಿಸುವ ಮುಖ್ಯವಸ್ತುವನ್ನು ಧ್ರುವ ನಕ್ಷತ್ರವನ್ನಾಗಿಸಿ ಕೊಂಡು, ಸಂಸಾರದ ಪರಿಚಿತ ವಸ್ತುಗಳಲ್ಲಿ ತುಂಬು ಕಣ್ಣುಳ್ಳವನಾಗಿ, ಅವುಗಳಗುಂಟ ಇವನು ಪರಿಭ್ರಮಿಸುತ್ತಾನೆ. ತಿರುಗಾಟ, ವಿಷಯಾಂತರ ಈ ಸಾಹಿತ್ಯಪ್ರಕಾರದ ಮುಖ್ಯ ಗುಣವಾಗಿರುತ್ತದೆ ಮತ್ತು ಅಷ್ಟೇ ಅದು ಅವಗುಣವಾಗಿರುತ್ತದೆ. ಈ ಅವಗುಣವನ್ನು ರಾ. ಕು. ಕಲಾತ್ಮಕವಾಗಿ ಯಶಸ್ವಿಯಾಗಿ ಇಲ್ಲಿ ಎದುರಿಸಿದ್ದಾರೆ ಎಂದು ಹೇಳಬಹುದು……."

“ಗಾಳಿಪಟ"ಕ್ಕೆ “ಮೆಚ್ಚಿಕೆಯ ಮಾತು ಬರೆದವರು ಕನ್ನಡದ ಹೆಸರಾಂತ ಕವಿ ದ. ರಾ. ಬೇಂದ್ರೆ ಅವರು. ಅದರ ಆಯ್ದ ಭಾಗ ಹೀಗಿದೆ: “ಗಾಳಿಪಟ"ದಲ್ಲಿ ತಲೆದೋರಿ, “ಭೃಂಗವಿಲಾಸ"ದಲ್ಲಿ ಮುಗಿತಾಯಗೊಳ್ಳುವ ಈ ಲಘು-ಪ್ರಬಂಧದ ಸಿವುಡು ರಸಿಕರ ಚರ್ವಣಕ್ಕೆ ಅಪಾರ ವ್ಯಂಜನಸಾಮಗ್ರಿಯನ್ನು ಸಜ್ಜುಗೊಳಿಸಿದೆ. ಚರ್ವಿತಚರ್ವಣವೂ ಇಲ್ಲಿ ನೀರಸವೆನಿಸಲಾರದು. ದವಡಿಗೆ ಈಡೆನಿಸುವ ಅಡಕೆ, ಸುಡುವ ಸುಣ್ಣ, ಒಗರಿನ ಕಾಚು, ಕಚ್ಚುವ ಲಾವಂಗ, ಕಂಪಿನ ಯಾಲಕ್ಕಿ, ಮದತರುವ ಜಾಯಪತ್ರಿ-ಕಾಯಿ, ಅರ್ಕು-ಗಿರ್ಕಿನ ಮೋಜಿನ ಮಸಾಲೆ ಇಲ್ಲಿಯ ವೀಳ್ಯದ ಸುರುಳಿಯಲ್ಲಿದೆ. ಆಗಾಗ್ಗೆ, ಜರದಾ, ತಂಬಾಕದ ಖಾಟವೂ ಈ ವೀಟೀ-ರಸಕ್ಕೆ ತನ್ನ ಶಾಕ ಪೂರೈಸುವ ಭಾಸವಾಗುವದು. ….."

ಈ ಸಂಕಲನದಲ್ಲಿರುವ ಲಲಿತ ಪ್ರಬಂಧಗಳು: ಗಾಳಿಪಟ; ಇಸಪೇಟಿನ ಪಾಠ; ಉಗಿಬಂಡಿಯ ಓದು; ಸ್ನಾನ ಸಂಗೀತ; ಕಿರುಕುಳ ರಜೆ; ಹಸ್ತಪತ್ರಿಕೆ; ಆಯುಷ್ಕರ್ಮ; ಹೆಸರು; ನನ್ನ ತೋಟಗಾರಿಕೆ; ನಿದ್ರಾಭ್ಯಾಸ; ಟೊಪ್ಪಿಗೆ; ಕುರುಡು ಕಾಂಚಾಣ; ಪ್ರತರುತ್ಥಾನ; ಅಂಕಗಣಿತ; ಕವಿಜಿವ್ಹಾಬಂಧನ ಮತ್ತು ಭೃಂಗವಿಲಾಸ.

ಲಲಿತಪ್ರಬಂಧ ಬರೆಯುವುದು ಬಹಳ ಸುಲಭ ಅಂದುಕೊಳ್ಳುತ್ತಾರ ಕೆಲವರು. ಆದರೆ, ಅದನ್ನು ಬರೆಯಲು ಕುಳಿತಾಗ ಮಾತ್ರ ಅದರ ಕಷ್ಟ ಅರಿವಾಗುತ್ತದೆ. ಉದಾಹರಣೆಗೆ “ಆಯುಷ್ಕರ್ಮ". ದಿನದಿನವೂ ಗಡ್ಡ ಕೆರೆದುಕೊಳ್ಳುವವರು ಅದರಲ್ಲಿ ಬರೆಯಲಿಕ್ಕೇನಿದೆ? ಎಂದು ಪ್ರಶ್ನಿಸಬಹುದು. ಆದರೆ, ಇದರ ಬಗ್ಗೆಯೇ ರಾ. ಕು. ಐದು ಮುದ್ರಿತ ಪುಟಗಳ ಲಲಿತ ಪ್ರಬಂಧ ಬರೆದಿದ್ದಾರೆ! "ಉದ್ದವಾಗಿ ಕೂದಲು ನಿಮಿರ್ದು ಗಡ್ಡಂಗಳು ಬೆಳೆದಡೇನು ಹೇಳಾ ಗಡ್ಡಂಗಳು ಬೆಳೆಯವೇ ಹೇಳಿರಣ್ಣಾ …." ಎಂಬ ಶರಣರ ವಚನದಿಂದ ಅದನ್ನು ಶುರು ಮಾಡಿ, ಹೀಗೆ ಮುಂದುವರಿಸಿದ್ದಾರೆ: “ಅಲ್ಲರೀ, ನಿನ್ನೆ ನಡುಹಗಲಲ್ಲಿ ಕ್ಷೌರ ಮಾಡಿಸಿಕೊಂಡಿದ್ದೇನೆ. ಇನ್ನೂ ಇಪ್ಪತ್ತುನಾಲ್ಕು ಗಂಟೆ ಕೂಡ ಕಳೆದಿಲ್ಲ. ಬೆಳಿಗ್ಗೆ ಎದ್ದು ನೋಡುತ್ತೇನೆ. ಹಾಳು ಬೆಳೆ ಮತ್ತೆ ಮರುಕೊಳಸಿ "ಕಣ್ಗೆಡ್ಡಮಾಗಿ" ನಿಮಿರಿ ನಿಂತಿದೆ! ಹೀಗಾದರೆ ಏನು ಗತಿ ಎನ್ನುತ್ತೇನೆ. ದಿನೇ ದಿನೇ ಕ್ಷೌರಿಕನ ಬಾಗಿಲು ಕಾಯುವುದು ಸಾಧ್ಯವೆ? ನಾಪಿತನ ಸಹಾಯದಿಂದ ಏನಾದೀತು!" ಯಾಕೆಂದರೆ, ಮುನ್ನಾದಿನ ಮಧ್ಯಾಹ್ನದ ವರೆಗೂ ಅವರು ಹಜಾಮರಂಗಡಿಯನ್ನು ಹುಡುಕಾಡಿ ದಣಿದಿದ್ದರು. ಅಂದು ಭಾನುವಾರ. ಕೆಲವು ಅಂಗಡಿಗಳ ಎದುರು ಉದ್ದನೆಯ ಸರತಿಯ ಸಾಲು. ಇನ್ನು ಕೆಲವು ಅಂಗಡಿಗಳು ಮುಚ್ಚಿದ್ದವು. ಇವರು ಹಾಗೆ ಹುಡುಕುತ್ತಾ ಹೋಗಲು ಕಾರಣ, “ಯಾವನೋ ಒಬ್ಬ ನಾಗರಿಕ ಕಳ್ಳ ನನ್ನ ಸೇಪ್ಟಿ ಸಲಕೆಯನ್ನು ಹೊತ್ತುಬಿಟ್ಟ.” ಅಂತೂ ಹೊಸ ಸೇಫ್ಟಿ ಸಲಕೆ ಖರೀದಿಸಿ, ಅದನ್ನು ಬಳಸಿದಾಗಿನ ಖುಷಿಯನ್ನು "ಸಾಬೂನು ಸವರಿ ಸಲಕೆ ಎಳೆಯತೊಡಗಿದರೆ ಎಂತಹ ಲಲಿತ ಗತಿಯಿಂದ ಸರಿಯುತ್ತದೆ!" ಎಂದು ಬರೆದಿದ್ದಾರೆ.

“ಇಸಪೇಟಿನ ಪಾಠ” ಗೆಳೆಯನೊಬ್ಬ ಅವರಿಗೆ ಅದನ್ನು ಕಲಿಸುವಾಗಿನ “ಮಾತುಕತೆ"ಯ ಸರಮಾಲೆ.  “ಉಗಿಬಂಡೆಯ ಓದು” ಪ್ರಬಂಧ ರೈಲಿನಲ್ಲಿ ಪತ್ರಿಕೆ ಓದುವಾಗ ಎದುರಾಗುವ ಸನ್ನಿವೇಶಗಳ ಮನೋಜ್ನ ವಿವರಣೆ.