ಗಿಳಿಯು ಪಂಜರದೊಳಿಲ್ಲ

ಗಿಳಿಯು ಪಂಜರದೊಳಿಲ್ಲ

ಬರಹ

ಜನವರಿಯ ರಾತ್ರಿಯ ಚುಮು ಚುಮು ಚಳಿಯಲ್ಲಿ ಕೆಲಸದಿಂದ ಬಂದ ನನಗೆ ಸೋಫ಼ಾದ ಮೇಲೆ ಕುಳಿತಿರುತ್ತಿದ್ದ ಅಮ್ಮ ಕಾಣಲಿಲ್ಲ. ಒಳಗಿರಬಹುದು ಅನ್ನಿಸಿತು. ಆದರೆ ಮನೆಯಲ್ಲಿ ವಿಪರೀತ ಮೌನ ಇದ್ದಂತೆ ಇತ್ತು. ಹಿತ್ತಲಲ್ಲಿ ಊಟದ ಡಬ್ಬಿಯನ್ನು ಇಟ್ಟು ಬಟ್ಟೆ ಬದಲಿಸಲು ರೂಮಿನೊಳಗೆ ಬಂದ ನನ್ನನ್ನು ಹಿಂಬಾಲಿಸಿದ್ದು ನನ್ನ ಪತ್ನಿ. ’ಮಾವನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ’. ಮಾತುಗಳು ಕಿವಿಗೆ ಬೀಳುತ್ತಲೇ, ಕಾಲ ಕೆಳಗಿನ ನೆಲ ಕುಸಿದಂತೆ ಆಯಿತು. ಹಾಗೇ ಮಂಚದ ಮೇಲೆ ಕೂತೆ. ಅವಳ ಮಾತುಗಳು ಸಾಗಿತ್ತು "ಎಲ್ಲರೂ ಅಲ್ಲಿಯೇ ಇದ್ದಾರೆ. ನಿಮಗೆ ಫ಼ೋನ್ ಮಾಡಿ ಹೇಳುವುದು ಬೇಡ ಅಂತ ಅಮ್ಮ ಹೇಳಿದ್ದರು. ಅದಕ್ಕೆ ತಿಳಿಸಲಿಲ್ಲ. ಕಾಫ಼ಿ ಕುಡಿಯಿರಿ. ನಾವೂ ಹೋಗೋಣ’. ಸರಿ ಎಂಬಂತೆ ತಲೆ ತೂಗಿದ್ದೆ.

ಯಾರನ್ನೇ ಆಗಲಿ ಆಸ್ಪತ್ರೆಗೆ ಸೇರಿಸುವುದು ದೊಡ್ಡ ವಿಷಯವಲ್ಲ. ಆಸ್ಪತ್ರೆಗೆ ಸೇರಿದ ಮಾತ್ರಕ್ಕೆ ಕೆಟ್ಟದಾಗಬೇಕೆಂದೂ ಇಲ್ಲ. ಆದರೆ ತಮ್ಮ ಅರೋಗ್ಯವನ್ನು ವಿಶೇಷ ಕಾಳಜಿಯಿಂದ ಕಾಪಾಡಿಕೊಂಡು ಬಂದ ’ಅಣ್ಣ’ನನ್ನು ಆಸ್ಪತ್ರೆಗೆ ಸೇರಿದ್ದು ಮನಸ್ಸಿಗೆ ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು. ನಾವು ನಮ್ಮಪ್ಪನನ್ನು ’ಅಣ್ಣಾ’ ಎಂದೇ ಕರೆಯುತ್ತಿದ್ದೆವು.

ನಮ್ಮಿಬ್ಬರನ್ನು ಹೊತ್ತ ಗಾಡಿ ನರ್ಸಿಂಗ್ ಹೋಮಿನತ್ತ ಸಾಗಿತ್ತು ಅದರೊಡನೆ ನನ್ನ ಹಿಂದೆ ಕುಳಿತಿದ್ದ ನನ್ನ ಪತ್ನಿಯ ಮಾತುಗಳೂ ಸಹ.

ಬೆಳಿಗ್ಗೆ ಯಥಾಪ್ರಕಾರ ಸ್ನಾನ - ಸಂಧ್ಯಾವಂದನೆಗಳ ನಂತರ ಸ್ನೇಹಿತರ ಮನೆಯ ಪೂಜೆಗೆ ಹೊರಟಿದ್ದರು. ತಲೆ ಸುತ್ತಿ ಬಂದಂತಾಗಿ ಗೋಡೆ ಹಿಡಿದು ನಿಂತು ಹಾಗೆ ಸೋಫ಼ಾದ ಮೇಲೆ ಸ್ವಲ್ಪ ವಿಶ್ರಾಂತಿ ಪಡೆದರು. ಆರೋಗ್ಯದ ವಿಷಯದಲ್ಲಿ ತಮಗೇನೂ ಆಗುವುದಿಲ್ಲ ಎಂಬ ನಂಬಿಕೆ ಇದ್ದ ಅವರಿಗೆ ಇದೇನೂ ಅಷ್ಟು ದೊಡ್ಡ ವಿಷಯವಾಗಿ ಕಾಣಲಿಲ್ಲ. ನಂತರ ಎದ್ದು ಸೈಕಲ್ ತುಳಿದುಕೊಂಡು ಹೋದರು. ಒಪ್ಪಿಕೊಂಡ ಕೆಲಸ ಆಗಲೇಬೇಕೆಂಬ ಹಠ. ಪೂಜೆ ಮುಗಿದ ಮೇಲೆ ಹೊರಟು ನಿಂತವರು ಹಾಗೇ ಕುಸಿದರು. ಸ್ನೇಹಿತರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾ, ನಮ್ಮ ಮನೆಗೆ ವಿಷಯ ತಿಳಿಸುವಂತೆ ತಮ್ಮ ಮಡದಿಗೆ ತಿಳಿಸಿದರು. ತಪಾಸಣೆಯಲ್ಲಿ ತಿಳಿದು ಬಂದದ್ದು ಲಘು ಹೃದಯಾಘಾತವಾಗಿದೆ ಎಂದು. ಹೆಚ್ಚಿನ ತಪಾಸಣೆ ನೆಡಸಿದ ಮೇಲೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ಮಾಡಿದರು. ತಾನೊಬ್ಬ ಗಾಯಕ. ತಮ್ಮ ದನಿಗೆ ತೊಂದರೆ ಏನೂ ಆಗುವುದಿಲ್ಲ ತಾನೆ ಎಂಬ ಪ್ರಶ್ನೆ ಡಾಕ್ಟರ್‍ ಬಳಿ ಕೇಳಿದರು. ಆ ಸಮಯದಲ್ಲಿ ಡಾಕ್ಟರ್ ಏನು ಹೇಳಿದರೋ ತಿಳಿಯದು. ಅವರನ್ನು ನರ್ಸಿಂಗ್ ಹೋಮಿಗೆ ಸೇರಿಸಲಾಯಿತು. ಇದಿಷ್ಟು ನೆಡೆದ ವಿಷಯ.

ಆಸ್ಪತ್ರೆಯೊಳಗೆ ಹೋದಾಗ ಕೆಲವು ನೆಂಟರು ಆಗಲೇ ಬಂದಿದ್ದರು. ಎಲ್ಲರಿಗೂ ನಮ್ಮ ತಂದೆ ಆಸ್ಪತ್ರೆ ಸೇರಿದ್ದು ಆಘಾತವಾಗಿತ್ತು. ನನ್ನ ತಾಯಿಯ ಮುಖವನ್ನು ನೋಡಿ ಆಕೆಯ ಮನದಲ್ಲಿ ನೆಡೆದಿರಬಹುದಾದ ಮಾನಸಿಕ ತುಮುಲ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಎದೆಯಲ್ಲಿ ದುಗುಡವಿದ್ದರೂ ಅದನ್ನು ತೋರ್ಪಡಿಸದೆ ಸಮಾಧಾನ ಚಿತ್ತದಲ್ಲಿ ಇರಲು ಪ್ರಯತ್ನ ನೆಡೆಸಿದ್ದರು. ಕಂಗಳಲ್ಲೇ ಸಮಾಧಾನ ಹೇಳಿದೆ. ನನ್ನ ಮೌನ ಮುಂದುವರೆದಿತ್ತು.

ಡಾಕ್ಟರ್ ಅನುಮತಿಯಿಂದ ಸರದಿಗೆ ಒಬ್ಬರಂತೆ ಮಾತ್ರ ಒಳಗೆ ಹೋಗಬಹುದಿತ್ತು. ನಾನು ಒಳಗೆ ಹೋದೆ. ಸದಾ ಬಿಳಿಪಂಚೆ, ಬಿಳಿ ಶರಟು, ಬಾಯಲ್ಲಿ ದೇವರನಾಮ, ಕೈಯಲ್ಲಿ ಪುಸ್ತಕ-ಪೆನ್ನು ಹಿಡಿದು ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಇರುತ್ತಿದ್ದ ಆ ಚೇತನ ಇಂದು ಆಸ್ಪತ್ರೆಯ ಬಿಳಿ ವಸ್ತ್ರ ಹೊದ್ದು, ಅರೆನಿದ್ರೆಯಿಂದ ಬಾಯಿ ತೆರೆಯಲಾರದೆ, ಕೈಗಳಿಗೆ ಸೂಜಿ ಚುಚ್ಚಿಕೊಂಡು ಮಲಗಿರುವುದನ್ನು ನನಗೆ ನೋಡಲಾಗಲಿಲ್ಲ.

ಹಾಗೆ ನಿಂತಿದ್ದಾಗ ನನ್ನ ತಂದೆ ಕಣ್ಣು ತೆರೆದು ನನ್ನನ್ನು ನೋಡಿದರು. ಏನೋ ಕೇಳಿದರು. ಹೊರಟದ್ದು ಬರೀ ಗರ ಗರ ಸದ್ದು ಮಾತ್ರ. ಮಾತುಗಳು ಅರ್ಥ ಆಗಲಿಲ್ಲ. ಹಾಗೆ ಅವರ ಕೈಗಳನ್ನು ಹಿಡಿದುಕೊಂಡೆ. ಈ ಹಿಂದೆ ನಾನು ಆ ಕೈಗಳನ್ನು ಯಾವಾಗ ಹಿಡಿದಿದ್ದೆ ಎಂಬ ನೆನಪು ಇರಲಿಲ್ಲ. ಇದೇ ಕಡೇ ಬಾರಿ ಎಂಬುದೂ ನನಗೆ ಅರಿವಾಗಲಿಲ್ಲ. ನನಗೂ ಮಾತುಗಳು ಹೊರಡಲಿಲ್ಲ. ಹೃದಯದಲ್ಲೇ ಸಾಂತ್ವನ ಹೇಳಿದೆ. ಅವರು ಮನದಲ್ಲೇ ನಕ್ಕು ಹಾಗೆಯೇ ಮತ್ತೆ ನಿದ್ರಾದೇವಿಯ ವಶವಾದರು. ಸಹಸ್ರಾರು ದೇವರನಾಮಗಳನ್ನು ಹೊರಹೊಮ್ಮಿದ್ದ ಆ ಕಂಠ ಇಂದು ಮಾತುಗಳನ್ನು ಹೊರಹಾಕಲು ಸೋತಿತ್ತು. ಸಮಯವಾಯಿತೆಂದು ಯಾರೋ ಹೇಳಿದಾಗ ಭಾರವಾದ ಹೆಜ್ಜೆಗಳನ್ನು ಎತ್ತಿಕ್ಕುತ್ತಾ ಹೃದಯವನ್ನು ಗಟ್ಟಿ ಮಾಡಿಕೊಂಡು ಹೊರಬಂದೆ. ನನ್ನ ಮೌನ ಇನ್ನೂ ಮುಂದುವರೆದಿತ್ತು.

ಹೊರಗೆ ಬಂದು ಹಾಗೆ ಅಮ್ಮನ ಬಳಿ ಕೂತೆ. ಏನು ಹೇಳಬೇಕು ಎಂದೂ ತೋಚಲಿಲ್ಲ. ನನ್ನ ಹಿರಿಯಣ್ಣ ಅಲ್ಲೇ ಉಳಿದ. ಎಲ್ಲರೂ ಹೊರಟು ಮನೆಗೆ ಬಂದೆವು. ನಾವೆಲ್ಲರೂ ಇದ್ದೂ ಮನೆ ಏಕೋ ಬಿಕೋ ಎನ್ನುತಿತ್ತು. ಮೌನದ ಭೀಕರತೆಯ ಅರಿವು ಅಂದು ನನಗೆ ಆಗಿತ್ತು.

ಮಾರನೇ ದಿನವೂ ಹೇಳಿಕೊಳ್ಳುವಂತಹ ಚೇತರಿಕೆ ಕಾಣಲಿಲ್ಲ. ರಾತ್ರಿ ಅಲ್ಲೇ ಅಡ್ಡಾಡುತ್ತಿದ್ದ ನನ್ನ ಬಳಿ ಕಣ್ಣೀರು ತುಂಬಿಕೊಂಡ ಅಮ್ಮ ಬಂದು ’ನಾನು ಅವರನ್ನು ನೋಡಬೇಕು’ ಎಂದರು. ದೇವಾ, ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ. ಅಲ್ಲೇ ನಿಂತಿದ್ದ ಒಬ್ಬ ಡಾಕ್ಟರ್ ಅಮ್ಮನ ಮಾತು ಕೇಳಿ ನಮ್ಮಿಬ್ಬರನ್ನೂ ಒಳಗೆ ಬಿಟ್ಟರು.

ಒಳಗೆ ಹೋದ ಅಮ್ಮ, ನಮ್ಮಪ್ಪನ ಕೈಗಳನ್ನು ಹಿಡಿದು ಹಾಗೆ ನೋಡುತ್ತಾ ನಿಂತಿದ್ದರು. ಕಂಗಳನ್ನು ಬಿಟ್ಟ ನಮ್ಮ ತಂದೆಯೂ ಹಾಗೇ ನೋಡುತ್ತಿದ್ದರು. ನಲವತ್ತೈದು ವರ್ಷ ಒಟ್ಟಿಗೆ ಸಂಸಾರ ಮಾಡಿದ ಆ ದಂಪತಿಗಳ ಮಧ್ಯೆ ಏನು ಸಂಭಾಷಣೆ ನೆಡೆದಿದೆ ಎಂದು ನನಗೆ ಅರ್ಥ ಆಗಲಿಲ್ಲ. ದಾಂಪತ್ಯ ಜೀವನದಲ್ಲಿನ ಹಲವಾರು ಏರುಪೇರುಗಳನ್ನು ಒಟ್ಟಿಗೆ ಉಂಡ ಆ ಹಿರಿಯ ಜೀವಗಳ ಹೃದಯ ಸಂಭಾಷಣೆ ನನ್ನ ಲೇಖನಿಯಲ್ಲಿ ಮೂಡಿಸಲು ಸಾಧ್ಯವಿಲ್ಲ.

ಅಂದು ಜನವರಿ ಹತ್ತು. ಬೆಳಿಗ್ಗೆ ಏಳು ಘಂಟೆಗೆ ಮತ್ತೆ ಆಸ್ಪತ್ರೆಯತ್ತ ಪಯಣ. ಏನೂ ಬದಲಾವಣೆ ಇರಲಿಲ್ಲ. ಮತ್ತೊಂದು ಘಂಟೆಯಾದ ಮೇಲೆ ರಾತ್ರಿಯ ಪಾಳಿಯ ಡಾಕ್ಟರ್ ಒಬ್ಬರು ನಮ್ಮತ್ತಲೇ ಬರುತ್ತಿದ್ದರು. ಅವರು ತಂದ ಸುದ್ದಿ ಕಹಿಯಾಗಿತ್ತು. ’ಗಿಳಿಯು ಪಂಜರದೊಳಿಲ್ಲ’ ಎಂಬ ಸತ್ಯ ಕೇಳಲು ಕಠೋರವಾಗಿತ್ತು. ನಮ್ಮನ್ನು ಕೋಣೆಯೊಳಗೆ ಬಿಟ್ಟರು. ಮೀಟರ್ ಮೇಲಿನ ಹಸಿರು ರೇಖೆ ನೆಟ್ಟಗೆ ಮಲಗಿತ್ತು. ಜೀವನದ ರೇಖೆ ಸದಾ ಏರಿಳಿತದಿಂದ ಕೂಡಿದ್ದು ನೆಟ್ಟಗೆ ಇರುವುದು ಈವಾಗ ಮಾತ್ರ ಎಂಬ ಅನಿಸಿಕೆ ಮನದಲ್ಲಿ ಸುಳಿಯಿತು. ಜೀವವಿದ್ದಾಗ ಎಲ್ಲರೊಡನೆ ಇರುವ ಸಂಘಜೀವಿ ಮಾನವ, ಸಾಮಾನ್ಯವಾಗಿ ಜೀವ ಬಿಡುವಾಗ ಯಾವ ಬಂಧುವರ್ಗವೂ ಸಮೀಪದಲ್ಲಿ ಇರದಿರುವುದು ವಿಪರ್ಯಾಸವೇ ಸರಿ. ಅಂತ್ಯ ಕಾಲದಲ್ಲಿ ಎಲ್ಲರೂ ದಶರಥರೇ?

ವೃತ್ತಿಯಲ್ಲಿ ಶ್ರೇಷ್ಟ ಇಂಜಿನಿಯರ್ ಆಗಿ, ನಿವೃತ್ತಿ ಜೀವನದಲ್ಲಿ ಧರ್ಮ ಪ್ರಚಾರದಲ್ಲಿ ಹೆಸರು ಮಾಡಿದ್ದ ಆ ಮಹಾಚೇತನ ಹರಿಯ ಪಾದ ಸೇರಿತ್ತು. ನಿಸ್ತೇಜವಾದ ತಂದೆಯ ಮುಖವನ್ನು ನೋಡುತ್ತ ಮನದಲ್ಲೇ ನಾನು ಕೇಳಿದ ಪ್ರಶ್ನೆ ’ಅಣ್ಣಾ, ಎಲ್ಲಿಗೆ ಪಯಣ!’.