ಗಿಳಿಯು ಬಾರದೇ ಇರದು
ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಬಹಳ ಅಪರೂಪ. ಕೆಲವರು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿರುವವರು ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ತಮ್ಮ ಇಲಾಖೆಯ, ಸರಕಾರದ ಸಾಧನೆಗಳನ್ನು ಡಂಗೂರ ಸಾರಲು ಬೇರೆ ಲೇಖಕರಿಂದ ಲೇಖನಗಳನ್ನು ಬರೆಯಿಸಿ ಪತ್ರಿಕೆಗಳಿಗೆ ರವಾನಿಸುತ್ತಾರೆ. ಆದರೆ ರಾಜಕಾರಣಿಯಾಗಿ, ಮಹತ್ವದ ಹುದ್ದೆಗಳಲ್ಲಿ ಇರುವ ಕೆಲವೇ ಕೆಲವು ಅಪರೂಪದ ಬರಹಗಾರರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಪ್ರಮುಖರಾದವರು ಪ್ರಸ್ತುತ ಗೋವಾದ ರಾಜ್ಯಪಾಲರಾಗಿರುವ ಪಿ ಎಸ್ ಶ್ರೀಧರನ್ ಪಿಳ್ಳ ಇವರು. ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಮಲಯಾಳಂ ಭಾಷೆಯಲ್ಲಿ ಹಲವಾರು ಬರಹಗಳನ್ನು ಬರೆದಿದ್ದರು. ೧೯೭೨ರಲ್ಲಿ ಪಂದಳಂ ಎನ್ ಎಸ್ ಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ತರಗತಿಯಲ್ಲಿರುವಾಗ ಜನರಲ್ ಸೀಟ್ ನಲ್ಲಿ ಮಲಯಾಳ ಸಾಹಿತ್ಯವೇದಿ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದರು. ಇವರು ಮೊದ ಮೊದಲು ಬರೆದ ಬರಹಗಳು ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಣ್ಮರೆಯಾದವು. ಪೋಲೀಸರ ಭಯದಿಂದ ಇವರ ಮನೆಯವರೇ ಬರಹಗಳನ್ನು ನಾಶ ಮಾಡಿದ್ದರು. ನಂತರದ ದಿನಗಳಲ್ಲಿ ಇವರು ಲಾ ಕಲಿತು ವಕೀಲ ವೃತ್ತಿಯನ್ನು ನಡೆಸುತ್ತಾ ಬಂದಿದ್ದರು. ಈ ನಡುವೆ ಬಿಜೆಪಿ ಪಕ್ಷದ ಕಡೆಗೆ ಒಲವು ಬೆಳೆಸಿ, ಅಲ್ಲಿ ಹಲವಾರು ಪದಗಳನ್ನು ಅಲಂಕರಿಸಿದ್ದಾರೆ.
ಉನ್ನತ ಹುದ್ದೆಯಲ್ಲಿ ಇರುವವರು ತಮ್ಮ ಬರವಣಿಗೆಗೆ ಸಮಯ ಮೀಸಲಿಡುವುದು ಬಹಳ ಕಡಿಮೆ. ಆದರೆ ಶ್ರೀಧರನ್ ಪಿಳ್ಳ ಇವರು ಇದಕ್ಕೆ ಅಪವಾದ. ರಾಜಕೀಯದಲ್ಲಿ ವಿವಿಧ ಹುದ್ದೆಗಳಲ್ಲಿದ್ದಾಗ ಮತ್ತು ರಾಜ್ಯಪಾಲರಾಗಿದ್ದಾಗ ಇವರು ಬಹಳಷ್ಟು ಬರಹಗಳನ್ನು ಬರೆದಿದ್ದಾರೆ. ಉಪನ್ಯಾಸಗಳು, ಸಂಶೋಧನಾ ಅಧ್ಯಯನಗಳು, ಪ್ರವಾಸ ಕಥನಗಳು, ಕಾನೂನಿಗೆ ಸಂಬಂಧಿಸಿದ ಲೇಖನಗಳು, ರಾಜಕೀಯ ವಿಶ್ಲೇಷಣೆಗಳು, ಕವಿತೆಗಳು, ಕಥೆಗಳು ಸೇರಿದಂತೆ ಸುಮಾರು ೨೦೦ ಪುಸ್ತಕಗಳು ಪ್ರಕಟಗೊಂಡಿವೆ. ಪ್ರಸ್ತುತ ಗೋವಾದ ರಾಜ್ಯಪಾಲರಾಗಿರುವಾಗಲೇ “ಗಿಳಿಯು ಬಾರದೇ ಇರದು" ಎಂಬ ಕಥಾ ಸಂಕಲನವನ್ನು ಬರೆದಿದ್ದಾರೆ. ಇದನ್ನು ಮೇರಿ ಜೋಸೆಫ್ ಅವರು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಖ್ಯಾತ ಕಥೆಗಾರ ಕೇಶವ ಮಳಗಿ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ ಶ್ರೀಧರನ್ ಪಿಳ್ಳ ಅವರ ಕಥೆಗಳು ಮಾನವೀಯ ಅಂತಃಕರಣದ ಕಥೆಗಳು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ “ ಮಲಯಾಳಂ ಭಾಷೆಯ ಸೂಕ್ಷ್ಮ ಮತ್ತು ಸಂವೇದನಾಶೀಲ ಕಥೆಗಾರರಾದ ಶ್ರೀಧರನ್ ಪಿಳ್ಳ ಅವರ ಕಥೆಗಳನ್ನು ಹೊಂದಿರುವ ಈ ಸಂಕಲನ ಕಥೆಗಳ ಮಾರ್ದವತೆ, ಸರಳತೆ, ನೇರವಂತಿಕೆ ಮತ್ತು ಪ್ರತಿ ಕಥೆಯೂ ಹೊಮ್ಮಿಸುವ ಮಾನವೀಯ ಅಂತಃಕರಣದಿಂದ ಹೃದಯವನ್ನು ತಟ್ಟುವಂತಿವೆ. ಈ ಕಥೆಗಳಲ್ಲಿ ತೆರೆದುಕೊಳ್ಳುವ ಲೋಕ ಬಹಳ ಸಂಕೀರ್ಣವಾದುದಲ್ಲ. ಸಣ್ಣ ಸಂಗತಿಗಳಿಂದ ಹೆಕ್ಕಿ ತೆಗೆದು ಸಹಜ ಚೆಲುವಿನ ಸೊಬಗು ಮುಕ್ಕಾಗದಂತೆ, ಸರಳವಾಗಿ ನಿರೂಪಿಸಿರುವುದು ಈ ಸಂಕಲನದ ಮುಖ್ಯ ಗುಣ. ಇದ್ದರೂ ತಮ್ಮ ಭಾವಗೀತಾತ್ಮಕ ವಿವರಗಳಿಂದ, ಕಥೆಯ ಕೊನೆಯಲ್ಲಿ ಅಂತರ್ಜಲದಂತೆ ಚಿಮ್ಮುವ ಗುಣದಿಂದಾಗಿ ಮನಸ್ಸನ್ನು ತೇವಗೊಳಿಸುವ ಗುಣವನ್ನು ಹೊಂದಿರುವಂಥವು. ಮನುಷ್ಯಲೋಕದಲ್ಲಿ ಅಡಗಿರುವ ಕೌತುಕತೆ, ನಿಸರ್ಗದ ಚೆಲುವು, ಬದುಕಿನ ಸೌಂದರ್ಯದ ಅರ್ಥವನ್ನು ನವುರಾಗಿ ಬಗೆದು ನೋಡುವ ಕಥನ ಕುಶಲತೆಯಿಂದಾಗಿ ಓದುಗರಲ್ಲಿ ಮೆಚ್ಚುಗೆಯನ್ನು ಮೂಡಿಸಬಲ್ಲಂಥ ಕಥೆಗಳು. ಕಥೆಗಾರರ ಪಕ್ವ ಜೀವನದೃಷ್ಟಿ ಅನುಕಂಪಪೂರಿತ ನಿಲುವು, ನಮ್ಯತೆಗಳು ಕಥೆಗಳ ಓದನ್ನು ಹೃದ್ಯವಾಗಿಸಿವೆ.”
ಶ್ರೀಧರನ್ ಪಿಳ್ಳ ಅವರು ಮಲಯಾಳಂ ಭಾಷೆಯಲ್ಲಿ ಬರೆದ “ತತ್ತ ವರಾತಿರಿಕ್ಕಿಲ್ಲ" ಎಂಬ ಕಥಾ ಸಂಕಲನವನ್ನು ಕನ್ನಡಕ್ಕೆ ‘ಗಿಳಿಯು ಬಾರದೇ ಇರದು' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ ಪತ್ರಕರ್ತೆ, ಬರಹಗಾರ್ತಿ ಮೇರಿ ಜೋಸೆಫ್. ಅನುವಾದ ಎಂದು ಸ್ವಲ್ಪವೂ ಸುಳಿವೂ ಸಿಗದಂತೆ ಬಹಳ ಸೊಗಸಾಗಿ ಸಣ್ಣ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮೂಲ ಬರಹಗಾರ, ಪ್ರಸ್ತುತ ಗೋವಾ ರಾಜ್ಯದ ರಾಜ್ಯಪಾಲರೂ ಆಗಿರುವ ಶ್ರೀಧರನ್ ಪಿಳ್ಳ ಅವರು ತಮ್ಮ ಕಥಾ ಸಂಕಲನದ ಕುರಿತು ಹೇಳಿರುವುದು ಹೀಗೆ…
“ ಬರಹಗಾರನ, ಸಣ್ಣ ಕಥೆಗಾರನ ಜೀವನದಲ್ಲಿ ನಡೆದ ಒಂದು ಘಟನೆಯಿಂದಲೋ ಅಥವಾ ಅನುಭವದ, ಭಾವನೆಗಳ ಬೆನ್ನತ್ತಿ, ಅದನ್ನು ಮನೋಜ್ಞವಾಗಿ ವರ್ಣಿಸುವುದರ ಮೂಲಕವಲ್ಲದೇ ಸಣ್ಣಕಥೆಗಳು ಹುಟ್ಟಿಕೊಳ್ಳುವುದು. ಕಾದಂಬರಿಗಳಲ್ಲಿ ವಿಷಯಗಳನ್ನು ವಿವರಿಸಿ ಹೇಳುವಾಗ, ಕಥೆಗಳಲ್ಲಿ ಅದನ್ನು ಸಂಗ್ರಹಿಸಿ ಹೇಳಲಾಗುತ್ತದೆ. ಅಜ್ಜಿ ಕಥೆಗಳೇ ಕಥೆಗಳ ಮೊದಲ ರೂಪ. ಐತಿಹ್ಯಗಳಿಂದ, ಕಟ್ಟು ಕಥೆಗಳಿಂದ ವಿಭಿನ್ನವಾಗಿ ಒಬ್ಬ ಕಥೆಗಾರ ತನ್ನ ಕಥೆಗಳ ಮೂಲಕ ತನ್ನ ಭಾವನೆಗಳಿಗೆ ಸುಂದರವಾದ ರೂಪವನ್ನು ಕೊಡುತ್ತಾನೆ. ನನ್ನ ಕಥೆಗಳಲ್ಲೂ ಕೆಲವು ಅದೇ ಅಜ್ಜಿ ಕಥೆಗಳೊಂಡಿಗೆ ಸೇರಿಸಿಕೊಂಡು ಬರೆಯಲು ನಡೆಸಿದ ಪ್ರಯತ್ನಗಳಾಗಿವೆ.”
ಈ ಕಥಾ ಸಂಕಲನದಲ್ಲಿ ಐದು ಕಥೆಗಳಿವೆ. ಗಿಳಿಯು ಬಾರದೇ ಇರದು, ಸಂಧ್ಯಾಕಾಲ, ಆತ್ಮದ ನೆರಳು, ಹೆಣ್ತನ, ಮೀನು ಬರುವಾಗ. ಎಲ್ಲಾ ಕಥೆಗಳು ಬಹಳ ಹೃದಯಸ್ಪರ್ಶಿಯಾಗಿವೆ. ಕಥೆಗೆ ಪೂರಕವಾದ ರೇಖಾಚಿತ್ರಗಳೂ ಇದ್ದು ಅವುಗಳು ಮುದ್ದಾಗಿವೆ. ೭೨ ಪುಟಗಳ ಈ ಪುಸ್ತಕದ ಕಥೆಗಳನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸುವಷ್ಟು ಆಪ್ತವಾಗುತ್ತಾ ಹೋಗುತ್ತವೆ.