ಗೀತಾಮೃತ - 35

ಗೀತಾಮೃತ - 35

*ಅಧ್ಯಾಯ ೧೦*

       *ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತ: ಪರಸ್ಪರಮ್/*

*ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ //೯//*

       ನಿರಂತರವಾಗಿ ನನ್ನಲ್ಲಿ ಮನಸ್ಸನ್ನು ತೊಡಗಿಸಿರುವವರು ಮತ್ತು ನನ್ನಲ್ಲೇ ಪ್ರಾಣಗಳನ್ನು ಅರ್ಪಿಸುವ ಭಕ್ತಜನರು,ನನ್ನ ಭಕ್ತಿಯ ಚರ್ಚೆಯ ಮೂಲಕ ತಮ್ಮ ತಮ್ಮಲ್ಲಿ ನನ್ನ ಪ್ರಭಾವವನ್ನು ತಿಳಿಸಿಕೊಡುತ್ತಾ ಹಾಗೂ ಗುಣ ಮತ್ತು  ಪ್ರಭಾವ ಸಹಿತ ನನ್ನ ಕಥೆಗಳನ್ನು ಹೇಳಿಕೊಳ್ಳುತ್ತಲೇ ನಿರಂತರ ಸಂತುಷ್ಟರಾಗುತ್ತಾರೆ ಮತ್ತು ವಾಸುದೇವನಾದ ನನ್ನಲ್ಲಿಯೇ ನಿರಂತರ ರಮಿಸುತ್ತಾರೆ.

     *ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್/*

*ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ//೧೦//*

            ಆ ನಿರಂತರ ನನ್ನ ಧ್ಯಾನಾದಿಗಳಲ್ಲಿ ತೊಡಗಿರುವ ಮತ್ತು ಪ್ರೇಮಪೂರ್ವಕವಾಗಿ ಭಜಿಸುವ ಭಕ್ತರಿಗೆ ನಾನು ಯಾವುದರಿಂದ ಅವರು ನನ್ನನ್ನೇ ಪಡೆಯುತ್ತಾರೋ ಅಂತಹ ತತ್ವಜ್ಞಾನ ರೂಪವಾದ ಯೋಗವನ್ನು ಕೊಡುತ್ತೇನೆ.

***

*ತೇಷಾಮೇವಾನುಕಂಪಾರ್ಥ ಮಹಜ್ಞಾನಜಂ ತಮ:/*

*ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ//೧೧//*

         ಹೇ ಅರ್ಜುನನೇ ! ಅವರನ್ನು ಅನುಗ್ರಹಿಸುವುದಕ್ಕಾಗಿ ಅವರ ಅಂತ:ಕರಣದಲ್ಲಿ ಸ್ಥಿತನಾಗಿ ಸ್ವಯಂ ನಾನೇ ಅವರ ಅಜ್ಞಾನದಿಂದ ಉಂಟಾದ ಅಂಧಕಾರವನ್ನು ಪ್ರಕಾಶಮಯವಾದ,ತತ್ವಜ್ಞಾನ ರೂಪೀ ದೀಪದ ಮೂಲಕ ನಾಶಗೊಳಿಸುತ್ತೇನೆ.

     *ಅರ್ಜುನ ಉವಾಚ*

*ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮ್ ಭವಾನ್/*

*ಪುರುಷಂ  ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್//೧೨//*

       ಅರ್ಜುನನು ಹೇಳಿದನು _ ನೀನು ಪರಬ್ರಹ್ಮ,ಪರಮಧಾಮ ಮತ್ತು ಪರಮ ಪವಿತ್ರನಾಗಿದ್ದೀಯೇ,ಏಕೆಂದರೆ ನಿನ್ನನ್ನು ಎಲ್ಲ ಋಷಿಗಳು ಸನಾತನ ದಿವ್ಯ ಪುರುಷನೆಂದೂ,ಮತ್ತು ದೇವತೆಗಳಿಗೂ ಆದಿದೇವನೆಂದೂ,ಜನ್ಮರಹಿತನೆಂದೂ,ಸರ್ವವ್ಯಾಪಿಯೆಂದೂ ಹೇಳುತ್ತಾರೆ.

***

  *ಆಹುಸ್ತ್ವಾಮೃಷಯ: ಸರ್ವೇ ದೇವರ್ಷಿರ್ನಾರದಸ್ತಥಾ/*

*ಅಸಿತೋ ದೇವಲೋ ವ್ಯಾಸ: ಸ್ವಯಂ ಚೈವ ಬ್ರವೀಷಿ ಮೇ//೧೩//*

ದೇವರ್ಷಿಗಳಾದ ನಾರದರು ಹಾಗೂ ಅಸಿತರೂ ದೇವೃಷಿಗಳೂ ಹಾಗೂ ಮಹರ್ಷಿಗಳಾದ ವೇದವ್ಯಾಸರು ಕೂಡ ಹೇಳುತ್ತಾರೆ ಮತ್ತು ಸ್ವಯಂ ನೀನು ಕೂಡ ನನ್ನ ಬಳಿ ಹಾಗೆಯೇ ಹೇಳುತ್ತಿರುವೆ..

    *ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ/*

*ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾ://೧೪//*   ಹೇ ಕೇಶವಾ! ಏನೆಲ್ಲವನ್ನು ನನ್ನ ಬಳಿಯಲ್ಲಿ ನೀನು ಹೇಳುತ್ತಿರುವಿಯೋ ಆ ಎಲ್ಲ ಮಾತುಗಳನ್ನು ನಾನು ಸತ್ಯವೆಂದು ತಿಳಿಯುತ್ತೇನೆ.ಹೇ ಭಗವಂತಾ! ನಿನ್ನ ಲೀಲಾಮಯ ಸ್ವರೂಪವನ್ನು ದಾನವರಾಗಲೀ,ದೇವತೆಗಳಾಗಲೀ ತಿಳಿಯಲಾರರು.

***

*ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ/*

*/ಭೂತಭಾವನ ಭೂತೇಶ ದೇವದೇವ ಜಗತ್ಪತೇ//೧೫//*

    ಹೇ ಭೂತಗಳನ್ನು ಉತ್ಪತ್ತಿ ಮಾಡುವವನೇ! ಹೇ ಭೂತಗಳ ಒಡೆಯನೇ ! ಹೇ ದೇವತೆಗಳ ದೇವನೇ! ಹೇ ಜಗತ್ತಿನ ಸ್ವಾಮಿಯೇ! ಹೇ ಪುರುಷೋತ್ತಮನೇ! ನೀನು ಸ್ವಯಂ ತನ್ನಿಂದಲೇ ತನ್ನನ್ನು ಆರಿಸುತ್ತೀಯೆ.

*ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯ:/*

*ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ//೧೬//*       ಆದ್ದರಿಂದ ಹೇ ಭಗವಂತ! ಯಾವ ವಿಭೂತಿಗಳ ಮೂಲಕ ನೀನು ಈ ಎಲ್ಲ ಲೋಕಗಳನ್ನು ವ್ಯಾಪಿಸಿಕೊಂಡು ಸ್ಥಿತನಾಗಿರುವೆಯೋ ಆ ನಿನ್ನ ದಿವ್ಯ ವಿಭೂತಿಗಳನ್ನು ಸಂಪೂರ್ಣವಾಗಿ ಹೇಳಲು ನೀನೇ ಸಮರ್ಥನಾಗಿರುವೆ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ