ಗೀತಾಮೃತ - 65

ಗೀತಾಮೃತ - 65

*ಅಧ್ಯಾಯ ೧೮*

     *ಕಾರ್ಯಮಿತ್ಯೇವ  ಯತ್ಕರ್ಮ ನಿಯತಂ ಕ್ರಿಯತೇರ್ಜುನ/*

*ಸಂಗಂ ತ್ಯಕ್ತ್ವಾಫಲಂ ಚೈವ ಸ ತ್ಯಾಗ: ಸಾತ್ತ್ವಿಕೋ ಮತ://೯//*

ಹೇ ಅರ್ಜುನನೇ! ಯಾವ ಶಾಸ್ತ್ರ ವಿಹಿತವಾದ ಕರ್ಮವು ಮಾಡಲೇಬೇಕು ಎಂಬ ಕರ್ತವ್ಯ ಭಾವದಿಂದ ಆಸಕ್ತಿ ಮತ್ತು ಫಲವನ್ನು ತ್ಯಾಗಗೈದು ಮಾಡಲಾಗುತ್ತದೆಯೋ _ ಅದೇ ಸಾತ್ವಿಕ ತ್ಯಾಗವೆಂದು ತಿಳಿಯಲಾಗಿದೆ.

*ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನಷಜ್ಜತೇ/*

*ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಭಿನ್ನಸಂಶಯ://೧೦//*    ಯಾವ ಮನುಷ್ಯನು ಅಕುಶಲ ಕರ್ಮವನ್ನು ದ್ವೇಷಿಸುವುದಿಲ್ಲವೋ ಮತ್ತು ಕುಶಲ ಕರ್ಮದಲ್ಲಿ ಆಸಕ್ತನಾಗುವುದಿಲ್ಲವೋ _ ಅಂತಹ ಶುದ್ಧವಾದ ಸತ್ತ್ವಗುಣದಿಂದ ಯುಕ್ತನಾದ ಪುರುಷನು,ಸಂಶಯರಹಿತ,ಬುದ್ಧವಂತ ಮತ್ತು ನಿಜವಾದ ತ್ಯಾಗಿಯೂ ಆಗಿದ್ದಾನೆ.

***

*ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತ:/*

*ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ//೧೧//*

ಏಕೆಂದರೆ ಶರೀರಧಾರಿಯಾದ ಯಾವುದೇ ಮನುಷ್ಯನ ಮೂಲಕ ಸಂಪೂರ್ಣ ವಾಗಿ ಕರ್ಮಗಳೆಲ್ಲಾ ತ್ಯಾಗಮಾಡಲ್ಪಡುವುದು ಸಾಧ್ಯವಾಗುವುದಿಲ್ಲ,ಆದಕಾರಣ ಯಾರು ಕರ್ಮಫಲ ತ್ಯಾಗಿಯಾಗಿದ್ದಾನೋ ಅವನೇ ತ್ಯಾಗೀಯಾಗಿದ್ದಾನೆ ಎಂದು ಹೇಳಲಾಗುತ್ತದೆ.

*ಅನಿಷ್ಟಮಿಷ್ಟಂ ಮಿತ್ರಂ ಚ ತ್ರಿವಿಧಂ ಕರ್ಮಣಂ ಫಲಮ್/*

*ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್//೧೨//*

ಕರ್ಮಫಲವನ್ನು ತ್ಯಾಗಮಾಡದಿರುವ  ಮನುಷ್ಯರ ಕರ್ಮಗಳಾದರೂ ಒಳ್ಳೆಯ,ಕೆಟ್ಟ ಮತ್ತು ಮಿಶ್ರವಾದ ಹೀಗೆ ಮೂರೂ ವಿಧವಾದ ಫಲಗಳು ಮರಣಾನಂತರ ಅವಶ್ಯವಾಗಿ ಉಂಟಾಗುತ್ತವೆ, ಆದರೆ ಕರ್ಮಫಲವನ್ನು ತ್ಯಾಗಮಾಡಿಬಿಡುವ ಮನುಷ್ಯರ ಕರ್ಮಗಳ ಫಲವು ಯಾವ ಕಾಲದಲ್ಲಿಯೂ ಉಂಟಾಗುವುದಿಲ್ಲ.

***

*ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ/*

*ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್//೧೩//*

ಹೇ ಮಹಾಬಾಹುವೇ! ಸಂಪೂರ್ಣ ಕರ್ಮಗಳ ಸಿದ್ಧಿಗೆ ಈ ಐದು ಕಾರಣಗಳು ಕರ್ಮಗಳನ್ನು ಅಂತ್ಯಗೊಳಿಸುವುದಕ್ಕಾಗಿ ಉಪಾಯವನ್ನು ತಿಳಿಸುವ ಸಾಂಖ್ಯಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ; ಅವುಗಳನ್ನು ನೀನು ನನ್ನಿಂದ ಚೆನ್ನಾಗಿ ತಿಳಿದುಕೋ.

*ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್/*

*ವಿವಿಧಾಶ್ಚಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್//೧೪//*

   ಈ ವಿಷಯದಲ್ಲಿ ಅರ್ಥಾತ್ ಕರ್ಮಗಳ ಸಿದ್ಧಿಯಲ್ಲಿ ಅಧಿಷ್ಠಾನ ಮತ್ತು ಕರ್ತೃವು, ಭಿನ್ನ ಭಿನ್ನ ಪ್ರಕಾರದ ಕರಣಗಳು ಹಾಗೂ ನಾನಾ ಪ್ರಕಾರದ,ಬೇರೆ ಬೇರೆಯಾದ ಕ್ರಿಯೆಗಳು ಮತ್ತು ಹಾಗೆಯೇ ಐದನೆಯ ಕಾರಣವು ದೈವವಾಗಿದೆ.

***

*ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರ:/*

*ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವ://೧೫//*

ಮನುಷ್ಯನು ಮನಸ್ಸು  ವಾಣಿ ಮತ್ತು ಶರೀರದಿಂದ ಶಾಸ್ತ್ರಾನುಕೂಲವಾಗಲೀ ಅಥವಾ ವಿಪರೀತವಾಗಲೀ, ಯಾವುದೇ ಕರ್ಮವನ್ನು ಮಾಡುತ್ತಾನೋ ಅದಕ್ಕೆ ಈ ಐದೂ ಕಾರಣಗಳಾಗಿವೆ.

*ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯ:/*

*ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿ://೧೬//*

    ಆದರೆ, ಹೀಗಿದ್ದರೂ ಸಹ ಯಾವ ಮನಷ್ಯನು ಅಶುದ್ಧಬುದ್ಧಿಯವನಾದ ಕಾರಣ ಆ ವಿಷಯದಲ್ಲಿ ಎಂದರೆ ಕರ್ಮಗಳಾಗುವುದರಲ್ಲಿ ನಿರ್ವಿಕಾರ ಶುದ್ಧರೂಪೀ ಆತ್ಮನನ್ನು ಕರ್ತಾನೆಂದು ತಿಳಿಯುತ್ತಾನೋ ಆ ಮಲಿನ ಬುದ್ಧಿಯವನಾದ ಅಜ್ಞಾನಿಯು ಯಥಾರ್ಥವನ್ನು ಅರಿಯುವುದಿಲ್ಲ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ