ಗುಂಡ ಮೊಲದಮರಿಯ ಉಪಟಳ

ಗುಂಡ ಮೊಲದಮರಿಯ ಉಪಟಳ

ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ ಮಾಡುತ್ತಿತ್ತು. ಬೇರೆಯವರು ಏನಾದರೂ ಹೇಳಿದರೆ ಯಾವಾಗಲೂ ಎದುರುತ್ತರ ಕೊಡುತ್ತಿತ್ತು.

ಮುಳ್ಳುಹಂದಿ ಎದುರಾದಾಗ “ಮುಳ್ಳಿನ ಮುದ್ದೆಯೇ” ಎಂದು ಜೋರಾಗಿ ಕರೆಯಿತು ಗುಂಡ ಮೊಲದಮರಿ. ಯಾರಾದರೂ ಹಾಗೆ ಕರೆದರೆ ಮುಳ್ಳುಹಂದಿಗೆ ಬಹಳ ಕಿರಿಕಿರಿಯಾಗುತ್ತಿತ್ತು. “ಏನೆಂದೆ? ತಾಳು, ನಿನ್ನ ಅಮ್ಮನಿಗೆ ನಾನು ದೂರು ಹೇಳ್ತೇನೆ” ಎಂದಿತು ಮುಳ್ಳುಹಂದಿ.

“ಹೋಗು, ಹೋಗು; ಹೇಳು, ಹೇಳು - ನನ್ನ ಅಪ್ಪನಿಗೆ, ಅಮ್ಮನಿಗೆ, ನನ್ನ ಸೋದರರಿಗೆ, ಸೋದರಿಯರಿಗೆ, ನನ್ನ ಅಜ್ಜಿಯರಿಗೆ, ಅಜ್ಜಂದಿರಿಗೆ, ನನ್ನ ಮುತ್ತಜ್ಜಿಯರಿಗೆ ಮತ್ತು ಮುತ್ತಜ್ಜರಿಗೆ ಎಲ್ಲರಿಗೂ ಹೋಗಿ ಹೇಳು!" ಎಂದಿತು ಗುಂಡ ಮೊಲದಮರಿ.

“ಓಹೋ! ನೀನು ಬಹಳ ಬುದ್ಧಿವಂತ ಅಂದುಕೊಂಡಿದ್ದಿ” ಎಂದಿತು ಮುಳ್ಳುಹಂದಿ. “ಹಾಗೆ ಅಂದುಕೊಂಡಿರೋದಲ್ಲ, ಅದು ನನಗೆ ಚೆನ್ನಾಗಿ ಗೊತ್ತಿದೆ” ಎಂದು ಎದುರುತ್ತರ ಕೊಟ್ಟಿತು ಗುಂಡ ಮೊಲದಮರಿ.

ಅಷ್ಟರಲ್ಲಿ ಚಂದದ ಮಿಂಚುಳ್ಳಿ ಮರದಿಂದ ಕೆಳಕ್ಕೆ ಹಾರುವುದನ್ನು ಗುಂಡ ಮೊಲದಮರಿ ಕಂಡಿತು. ನೀಲಿ ಮತ್ತು ಹಸುರು ಗರಿಗಳಿಂದ ಮಿಂಚುವ ಮಿಂಚುಳ್ಳಿ ಹಕ್ಕಿಯ ಬಾಲ ಮೊಂಡು; ಅದಕ್ಕೆ ಈ ಬಗ್ಗೆ ಬೇಸರವಿತ್ತು.

ಒಂದು ಪೊದೆಯಿಂದ ತಲೆ ಹೊರಗೆ ಹಾಕಿದ ಗುಂಡ ಮೊಲದಮರಿ, “ ಏ ಮಿಂಚುಳ್ಳಿ, ನಿನ್ನ ಬಾಲವನ್ನು ಮನೆಯಲ್ಲೇ ಬಿಟ್ಟು ಬಂದಿದ್ದೀಯಾ?" ಎಂದು ಗೇಲಿ ಮಾಡಿತು. “ನೀನು ನನ್ನ ಮರಿಯಾಗಿದ್ದರೆ ನಿನಗೆ ಚೆನ್ನಾಗಿ ಏಟು ಬಾರಿಸಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದೆ” ಎಂದಿತು ಮಿಂಚುಳ್ಳಿ. "ನಾನು ನಿನ್ನ ಮರಿಯಾಗಿದ್ದರೆ, ಹೊಸ ಬಾಲವೊಂದನ್ನು ಹುಡುಕಿ, ನಿನಗೆ ಹೊಲಿಯುತ್ತಿದ್ದೆ” ಎಂದು ಉಡಾಫೆ ಉತ್ತರ ನೀಡಿತು ಗುಂಡ ಮೊಲದಮರಿ.

ಇಂತಹ ಗುಂಡ ಮೊಲದಮರಿ ಅದೊಂದು ದಿನ ಉಡಾಫೆ ಮಾಡಬಾರದ ವ್ಯಕ್ತಿಗೆ ಉಡಾಫೆ ಮಾಡಿತು! ಓಕ್ ಮರದ ಟೊಳ್ಳು ಪೊಟರೆಯಲ್ಲಿ ವಾಸ ಮಾಡುತ್ತಿದ್ದ ಬಿಂದುಯಕ್ಷನಿಗೆ ಗೇಲಿ ಮಾಡಿತು.

ಅದೊಮ್ಮೆ ಬಿಂದುಯಕ್ಷನ ಕೈಯಿಂದ ಕೆಂಪು ಪೈಂಟಿನ ಡಬ್ಬ ಕೈಜಾರಿ ಬಿದ್ದಿತ್ತು. ಆಗ ಅದರ ಪೈಂಟ್ ಸಿಡಿದು, ಅದರ ಮೈಯಲ್ಲಿ ಅಲ್ಲಲ್ಲಿ ಕೆಂಪು  ಬಿಂದುಗಳು ಮೂಡಿದ್ದವು. ಅದು ಮ್ಯಾಜಿಕ್ ಪೈಂಟ್ ಆಗಿದ್ದ ಕಾರಣ ಆ ಕೆಂಪು ಕಲೆಗಳನ್ನು ತೆಗೆಯಲು ಬಿಂದುಯಕ್ಷನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಆತನಿಗೆ ಬಿಂದುಯಕ್ಷ ಎಂಬ ಹೆಸರು.

ಆ ದಿನ ಬಿಂದುಯಕ್ಷ ನಡೆದು ಬರುತ್ತಿದ್ದಾಗ, ಗುಂಡ ಮೊಲದಮರಿ ಹಿಂಬದಿಯಿಂದ ಬಂದು ಆತನ ಪ್ಯಾಂಟಿನ ಅಂಚನ್ನು ಎಳೆಯಿತು. ನಂತರ "ಹಲೋ, ಸಿಡುಬು ರೋಗಿಯೇ, ನಿನ್ನ ಕಲೆಗಳು ಹೇಗಿವೆ?” ಎಂದು ಗೇಲಿ ಮಾಡಿತು. ಬಿಂದು ಯಕ್ಷ ಅಸಹನೆಯಿಂದ ಹಿಂದಕ್ಕೆ ತಿರುಗಿ ಹೇಳಿದ, “ನೀನು ಇನ್ನೊಮ್ಮೆ ಹಾಗೆ ಹೇಳಿದರೆ ನಿನಗೆ ಶಾಪ ಕೊಡುತ್ತೇನೆ.”

ಬಿಂದುಯಕ್ಷ ಹೇಳಿದ್ದನ್ನು ಗುಂಡ ಮೊಲದಮರಿ ನಂಬಲಿಲ್ಲ. ಅದು ಅಸಡ್ದೆಯಿಂದ ಅದೇ ಮಾತನ್ನು ಪುನರುಚ್ಚರಿಸಿತು ಮತ್ತು ತಕ್ಷಣವೇ ತನ್ನ ಬಿಲಕ್ಕೆ ಓಡಿತು.

“ರೂನಿರೂನಿ, ಸೊಟ್ಟಸೊಟ್ಟ ಕಿವಿಕಿವಿ” ಎಂದು ಬಿಂದುಯಕ್ಷ ಸಿಟ್ಟಿನಿಂದ ಜೋರಾಗಿ ಕಿರುಚಿತು. ಅದು ಮೊಲಗಳ ಕಿವಿಗಳಿಗೆ ಕೊಡುವ ಶಾಪ. ಆದರೆ ಗುಂಡ ಮೊಲದಮರಿಗೆ ಈ ಸಂಗತಿ ಗೊತ್ತಿರಲಿಲ್ಲ.

ಬಿಂದುಯಕ್ಷನ ಶಾಪ ತಗಲಿತು. ಗುಂಡ ಮೊಲದಮರಿ ತನ್ನ ಬಿಲದ ಬಾಯಿಯೊಳಗೆ ತೂರಿಕೊಳ್ಳಲಿಕ್ಕಾಗಿ ತನ್ನ ಕಿವಿಗಳನ್ನು ಕೆಳಕ್ಕೆ ಮಡಚಲು ಪ್ರಯತ್ನಿಸಿತು. ಬಿಲದೊಳಗೆ ಪ್ರವೇಶಿಸುವಾಗ ಎಲ್ಲ ಮೊಲಗಳೂ ತಮ್ಮ ನೆಟ್ಟಗಿನ ಕಿವಿಗಳನ್ನು ಕೆಳಕ್ಕೆ ಬಾಗಿಸುವುದು ವಾಡಿಕೆ. ಆದರೆ ಅದರ ಕಿವಿಗಳು ಕೆಳಕ್ಕೆ ಬಾಗಲೇ ಇಲ್ಲ; ಅವು ನೆಟ್ಟಗೆ ನಿಂತಿದ್ದವು.

ಗುಂಡ ಮೊಲದಮರಿ ತನ್ನ ಬಿಲದ ಬಾಯಿಯೊಳಗೆ ತೂರಲು ಪರದಾಡಿತು. ಇದನ್ನು ಕಂಡ ಅದರ ಅಮ್ಮಮೊಲ ಹೇಳಿತು, “ಏ, ನಿನ್ನ ಕಿವಿಗಳು ನೆಟ್ಟಗಿವೆ. ಅವನ್ನು ಕೆಳಕ್ಕೆ ಬಾಗಿಸಿ ಒಳಕ್ಕೆ ಬಾ.”

“ಅಮ್ಮ, ನನಗೆ ನನ್ನ ಕಿವಿಗಳನ್ನು ಕೆಳಕ್ಕೆ ಬಾಗಿಸಲು ಆಗ್ತಾ ಇಲ್ಲ” ಎಂದು ಚೀರಿತು ಗುಂಡ ಮೊಲದಮರಿ. “ಪೆದ್ದಗುಂಡನಂತೆ ಮಾತಾಡಬೇಡ. ಎಲ್ಲ ಮೊಲಗಳಿಗೂ ತಮ್ಮ ಕಿವಿಗಳನ್ನು ಕೆಳಕ್ಕೆ ಬಾಗಿಸಲು ಆಗ್ತದೆ" ಎಂದಿತು ಅಮ್ಮಮೊಲ.

ಏನು ಮಾಡಿದರೂ ಗುಂಡ ಮೊಲದಮರಿಗೆ ತನ್ನ ಕಿವಿಗಳನ್ನು ಕೆಳಕ್ಕೆ ಬಾಗಿಸಲು ಸಾಧ್ಯವಾಗಲಿಲ್ಲ. ಅದರ ಅಮ್ಮನೂ ಹತ್ತಿರ ಬಂದು ಮರಿಯ ಕಿವಿಗಳನ್ನು ಕೆಳಕ್ಕೆ ಬಾಗಿಸಲು ಪ್ರಯತ್ನಿಸಿತು. ಅದಕ್ಕೂ ಸಾಧ್ಯವಾಗಲಿಲ್ಲ. ಅಮ್ಮಮೊಲ ಕಿವಿಗಳನ್ನು ಜೋರಾಗಿ ಬಾಗಿಸಿದಾಗ ಗುಂಡ ಮೊಲದಮರಿ ನೋವಿನಿಂದ ಚೀರಿತು.

"ಸರಿ ಬಿಡು, ನಿನ್ನ ಕಿವಿಗಳನ್ನು ಕೆಳಕ್ಕೆ ಬಾಗಿಸದಿದ್ದರೆ ನಿನಗೆ ಬಿಲದೊಳಗೆ ಬರಲು ಸಾಧ್ಯವಾಗೋದಿಲ್ಲ. ನಿನ್ನ ಕಿವಿಗಳು ಹೀಗಾಗಬೇಕಾದರೆ ನೀನೇನು ಮಾಡಿದಿ" ಎಂದು ಕೇಳಿತು ಅಮ್ಮಮೊಲ.

"ನಾನು ಬಿಂದುಯಕ್ಷನಿಗೆ ಗೇಲಿ ಮಾಡಿದೆ. “ಹಲೋ, ಸಿಡುಬು ರೋಗಿಯೇ, ನಿನ್ನ ಕಲೆಗಳು ಹೇಗಿವೆ? ಎಂದು ಕೇಳಿದೆ” ಎಂದಿತು ಗುಂಡ ಮೊಲದಮರಿ. “ಏನು! ಹಾಗೆ ಗೇಲಿ ಮಾಡಿದೆಯಾ? ಇದನ್ನು ಕೇಳಿ ನನಗೆ ಮುಖವೆತ್ತದ ಹಾಗಾಗಿದೆ. ನಿನಗೆ ಸರಿಯಾದ ಶಾಸ್ತಿಯಾಯಿತು ಬಿಡು” ಎನ್ನುತ್ತಾ ಅಮ್ಮಮೊಲ ಬಿಲದೊಳಗೆ ಹೋಯಿತು.

ಅನಂತರ,  ಗುಂಡ ಮೊಲದಮರಿ ಬಹಳ ಸಂಕಟ ಪಟ್ಟಿತು. ಗಿಡುಗ, ನರಿ, ನಾಯಿ, ಬಂದೂಕು ಹಿಡಿದ ರೈತ ಇತ್ಯಾದಿ ವೈರಿಗಳು ಬಂದಾಗ, ಇತರ ಮೊಲಗಳು ತಮ್ಮತಮ್ಮ ಬಿಲದೊಳಗೆ ತೂರಿಕೊಳ್ಳುತ್ತಿದ್ದವು; ಆದರೆ ಗುಂಡ ಮೊಲದಮರಿಗೆ ಹಾಗೆ ತೂರಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಆಗೆಲ್ಲ ಗುಂಡ ಮೊಲದಮರಿ ಪೊದೆಗಳೊಳಗೆ ತೂರಿ ಅಡಗಿಕೊಳ್ಳುತ್ತಿತ್ತು. ಆದರೆ ನರಿಗಳು ಮತ್ತು ನಾಯಿಗಳು ಅದರ ವಾಸನೆ ಹಿಡಿದು, ಅದನ್ನು ಪತ್ತೆ ಮಾಡಿ, ಹಿಡಿಯಲು ಬರುತ್ತಿದ್ದವು. ಗುಂಡ ಮೊಲದಮರಿ ಅಲ್ಲಿಂದ ಓಡಿದಾಗ ಅವು ಅಟ್ಟಿಸಿಕೊಂಡು ಬರುತ್ತಿದ್ದವು. ಗುಂಡ ಓಡಿಓಡಿ ಸುಸ್ತಾಗಿ ಕೊನೆಗೆ ಮರವೊಂದಕ್ಕೆ ಜಿಗಿದು ಅಲ್ಲಿ ಅಲ್ಲಾಡದೆ ಕುಳಿತು ಅವುಗಳಿಂದ ಪಾರಾಗುತ್ತಿತ್ತು.

“ಇದು ಭಯಂಕರ ಬದುಕು. ಬಾಗಿಸಲಾಗದ ಕಿವಿಗಳಿದ್ದರೆ ನಾನು ಹೇಗೆ  ಬದುಕಲಿ? ಕಿವಿಗಳನ್ನು ಕೆಳಕ್ಕೆ ಬಾಗಿಸುವುದು ಮೊಲಗಳಿಗೆ ಇಷ್ಟು ಮುಖ್ಯ ಅನ್ನೋದು ನನಗೆ ಗೊತ್ತಿರಲೇ ಇಲ್ಲ” ಎಂದು ಆಗಾಗ ಗುಂಡ ಮೊಲದಮರಿ ಚಿಂತಿಸುತ್ತಿತ್ತು.

ಅದೊಂದು ದಿನ ಬಿಂದುಯಕ್ಷ ಗುಡ್ಡವೊಂದರ ತುದಿಯಲ್ಲಿ ನಿಂತಿರುವುದನ್ನು ಗುಂಡ ಮೊಲದಮರಿ ಕಂಡಿತು. ಅದು ಅಲ್ಲಿಗೆ ಓಡಿ ಹೋಗಿ ವಿನಮ್ರತೆಯಿಂದ ನಿಂತಿತು. “ಬಿಂದುಯಕ್ಷ, ನನ್ನನ್ನು ಕ್ಷಮಿಸು. ಆ ದಿನ ನಾನು ನಿನಗೆ ಗೇಲಿ ಮಾಡಿದೆ. ಹೇಗಾದರೂ ಮಾಡಿ ನನ್ನ ಕಿವಿಗಳಿಗೆ ಕೊಟ್ಟ ಶಾಪದಿಂದ ನನ್ನನ್ನು ವಿಮೋಚನೆ ಮಾಡು. ನಾನು ಇನ್ನೆಂದಿಗೂ ನಿನಗೆ ಗೇಲಿ ಮಾಡೋದಿಲ್ಲ" ಎಂದು ಬೇಡಿತು.

"ನಾನು ನಿನ್ನ ಶಾಪ ವಿಮೋಚನೆ ಮಾಡಲು ಸಾಧ್ಯವಿಲ್ಲ. ಆದರೆ ನಿನ್ನ ಕಿವಿಗಳನ್ನು ಗುಣಪಡಿಸಬಹುದು. ಅದಕ್ಕೆ ಒಂದೇ ಒಂದು ಉಪಾಯವಿದೆ: ನಿನ್ನನ್ನು ಗುಡ್ಡದ ತುದಿಯಿಂದ ಕೆಳಕ್ಕೆ ಒದ್ದು ತಳ್ಳಬೇಕು" ಎಂದ ಬಿಂದುಯಕ್ಷ. ತಕ್ಷಣವೇ ಬಿಂದುಯಕ್ಷ ಗುಂಡ ಮೊಲದಮರಿಗೊಂದು ಬಲವಾದ ಒದೆ ಕೊಟ್ಟ.

ಆಗ ಗುಂಡ ಮೊಲದಮರಿ ಗುಡ್ಡದ ತುದಿಯಿಂದ ಉರುಳುತ್ತಾ ಕೆಳಕ್ಕೆ ಬಂತು. ಅದರ ಕಾಲುಗಳಿಗೆ ಗಾಯಗಳಾದವು. ಬಾಲಕ್ಕೆ ಏಟಾಯಿತು. ಎರಡು ಮೀಸೆರೋಮಗಳು ತುಂಡಾದವು. ಕಿವಿಗಳಂತೂ ಉರುಳುವಾಗ ಬಾಗಿಬಾಗಿ ಅವು ತುಂಡಾದರೆ ಎಂದು ಭಯವಾಯಿತು ಗುಂಡ ಮೊಲದಮರಿಗೆ.

ಇದು ಗುಡ್ಡದಿಂದ ಹೀಗೆ ಉರುಳಿಉರುಳಿ ಕೆಳಕ್ಕೆ ಬಂದದ್ದನ್ನು ನೋಡಿದ ಎರಡು ಪುಟ್ಟ ಮೊಲದಮರಿಗಳು ಕೇಳಿದವು, “ನೀನು ಯಾವಾಗಲೂ ಗುಡ್ದದಿಂದ ಹೀಗೆಯೇ ಕೆಳಕ್ಕೆ ಬರೋದೇನು?" ಗುಂಡ ಮೊಲದಮರಿಗೆ ರೇಗಿತು. ಅದು ಅವನ್ನು ಅಟ್ಟಿಸಿಕೊಂಡು ಹೋಯಿತು. ಅವು ತಮ್ಮ ಬಿಲದೊಳಗೆ ತೂರಿದಾಗ ಅಲ್ಲಿಗೂ ಗುಂಡ ಮೊಲದಮರಿ ನುಗ್ಗಿತು ಮತ್ತು ಫಕ್ಕನೆ ನಿಂತಿತು. “ಅರೆ! ಬಿಲದ ಒಳಕ್ಕೆ ಬರುವಾಗ ನನ್ನ ಕಿವಿಗಳು ತನ್ನಿಂತಾನೇ ಕೆಳಕ್ಕೆ ಬಾಗಿವೆ" ಎಂದು ಅದಕ್ಕೆ ಖುಷಿಯಾಯಿತು.

ಹೌದು! ಗುಂಡ ಮೊಲದಮರಿಯ ಕಿವಿಗಳು ಸರಿಯಾಗಿದ್ದವು. ಆದರೆ ಅದು ಬಹಳ ನೋವಿನ ಪರಿಹಾರವಾಗಿತ್ತು. ಯಾಕೆಂದರೆ ಗುಡ್ದದಿಂದ ಕೆಳಕ್ಕೆ ಉರುಳುವಾಗ ಆಗಿದ್ದ ಗಾಯಗಳು ವಾಸಿಯಾಗಲು ಹಲವು ದಿನಗಳು ತಗಲಿದವು. ಆ ಅವಧಿಯಲ್ಲಿ ಗುಂಡ ಮೊಲದಮರಿಗೆ ತನ್ನ ಬಿಲದೊಳಗೆ ಹೋಗಲು ಬಹಳ ಕಷ್ಟವಾಗುತ್ತಿತ್ತು.

ಇಷ್ಟೆಲ್ಲ ಆದ ನಂತರ ಅಮ್ಮಮೊಲ ಕೇಳಿತು, "ಈಗ ಬೇರೆಯವರಿಗೆ ಉಪಟಳ ಮಾಡುವ ನಿನ್ನ ಅಭ್ಯಾಸವೂ ವಾಸಿ ಆಗಿರಬೇಕಲ್ಲವೇ?” “ಅಮ್ಮ, ಖಂಡಿತವಾಗಿ ವಾಸಿಯಾಗಿದೆ. ಈಗ ಭೂಮಿಯಲ್ಲಿ ನನ್ನಷ್ಟು ವಿನಮ್ರ ಮೊಲ ಬೇರೆ ಯಾವುದೂ ಇಲ್ಲ” ಎಂದು ಉತ್ತರಿಸಿತು ಗುಂಡ ಮೊಲದಮರಿ.

ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ