ಗುಡಿಬಂಡೆ ರಾಮಾಚಾರ್ : ಸಂಗೀತ ಕ್ಷೇತ್ರ ಕಂಡ ಅಪರೂಪದ ವ್ಯಕ್ತಿ - ಇನ್ನಿಲ್ಲ
ಗುಡಿಬಂಡೆ ರಾಮಾಚಾರ್ - ನಾನು ಕಂಡ ಅಪರೂಪದ ವ್ಯಕ್ತಿ .
ರಾಮಾಚಾರ್ ರವರು ನಾನು ಕಂಡ ಲಲಿತ ಕಲೆಗಳ ಭೀಷ್ಮ ರು ಎಂದರೆ ತಪ್ಪಾಗಲಾರದು. ಸಂಗೀತದ ಎಲ್ಲಾ ಪ್ರಕಾರಗಲ್ಲೂ ಮೆಲುಗೈ ಸಾಧಿಸಿದ ಅಪರೂಪದ ವ್ಯಕ್ತಿ. ಶಾಸ್ಟ್ರೀಯ ಸಂಗೀತ(ಕರ್ನಾಟಕ ಮತ್ತು ಉತ್ತರಾದಿ), ಭಾವಗೀತೆ, ಜಾನಪದಗೀತೆ, ಲಾವಣಿ, ಅಣಕು ಗೀತೆಗಳು , ಜಾವಳಿ, ಹಾಸ್ಯ ಗೀತೆಗಳು , ಗಮಕ, ಪಿಟೀಲು, ಗೋಟುವಾದ್ಯ, ಗಿಟಾರ್ ಇನ್ನೂ ಹತ್ತು ಹಲವಾರು ಸಂಗೀತದ ಬೇರೆ ಬೇರೆ ಪ್ರಕಾರಗಳ ಕರಗತಮಾಡಿಕೊಂಡ ಸಮಗ್ರ ವಕ್ತಿತ್ವ. ಇವರು ಶುಕ್ರವಾರ ಡಿಸೆಂಬರ್ 10 ರ ರಾತ್ರಿ ಸುಮಾರು 10:30 ರಲ್ಲಿ ತಮ್ಮ ಗಾನಸುಧೆಯ ನೆನಪುಗಳನ್ನು ನಮ್ಮಲ್ಲಿ ಚಿರಂತನವಾಗಲೆಂದು ಬಿಟ್ಟು ತಮ್ಮ 93 ವರ್ಷದ ಸುದೀರ್ಘ ಬದುಕಿಗೆ ಮಂಗಳವನ್ನು ಹಾಡಿದ್ದಾರೆ. ನಾನು ಈ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ.
ನನ್ನ ಹಾಗೂ ರಾಮಾಚಾರರವರ ಅವಿನಾಭಾವ ಸಂಬಂಧ ಆಕಸ್ಮಿಕ. ಬೆಂಗಳೂರಿನ ಸಹಕಾರನಗರದಲ್ಲಿ ಯಾರೆ ಹೊಸ ಪ್ರತಿಭೆ ಬಂದರೂ ಅದು ಪರಿಚಯವಾಗಿತ್ತಿದ್ದುದು ರಾಮಾಚಾರರಿಂದ ಮಾತ್ರ ಸಾಧ್ಯಗಾಗಿತ್ತು. ನನ್ನ ಅವರ ಪರಿಚಯ ಪ್ರಾರಂಭವಾಗಿದ್ದೆ ಹೀಗೆ; ನಂತರದ ದಿನಗಳಲ್ಲಿ ನನ್ನ ಅವರ ಸಂಬಂಧ ಬಹಳ ಸ್ನೇಹಮಯದಿಂದ ಕೂಡಿತ್ತು. ಕಳೆದ 4-5 ವರ್ಷಗಳಲ್ಲಿ ಪ್ರತಿ ಶನಿವಾರ ಅವರ ಭೇಟಿ ಕಡ್ಡಾಯವಾಗಿತ್ತು ಹಾಗೂ ಸಂಗೀತದ ವಿವಿಧ ಪ್ರಕಾರಗಳ ಚರ್ಚೆ ನಡೆಯುತ್ತಿತ್ತು . ಅವರ ಜೊತೆ ಹಂಚಿಕೊಂಡ ಆ ಸಿಹಿನೆನಪುಗಳನ್ನು ಮರೆಯಲು ಸಾಧ್ಯವಾಗದ ಮಾತು. ನನ್ನ ಅವರ ನಡುವೇ 50-60 ವರ್ಷಗಳ ಅಂತರವಿದ್ದರೂ ನಾನು ಅವರ ಆತ್ಮೀಯದ ವ್ಯಕ್ತಿಯಾಗಿದ್ದೆ. ಇಂದು ಅವರ ಅಗಲಿಕೆಯ ನೋವು ಬಹಳವಾಗಿ ನನ್ನನ್ನು ಕಾಡುತ್ತಾ ಇರುವುದು ಸತ್ಯದ ಸಂಗತಿ.
ಅವರ ಕಿರು ಪರಿಚಯ ಇಂತಿದೆ:
ಸುಗಮ ಸಂಗೀತಕ್ಕೆ ನಿರ್ದಿಷ್ಟವಾದ ಅಸ್ತಿತ್ವ ಇರದಿದ್ದ ಸಮಯದಲ್ಲಿ ಗಾಯನ ಕಲಾವಿದರು ಗಮಕ, ಭಕ್ತಿಗೀತೆ, ದಾಸರಪದ, ಜಾನಪದ, ಭಾವಗೀತೆಗಳಲ್ಲದೇ ಬೇರೆ ಭಾಷೆಯ ಗೀತೆಗಳನ್ನು ಹಾಡುವುದು ವಾಡಿಕೆಯಲ್ಲಿತ್ತು. ಅಂದು ತಮ್ಮನ್ನು ತಾವು ಗುರುತಿಸಿಕೊಳ್ಳುವುದೇ ಮಹತ್ವವಾಗಿತ್ತು. ಹೇಗಾದರೂ ಸರಿ ೩ ಗಂಟೆಗಳ ಕಾಲ ಶ್ರೋತೃಗಳನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಳ್ಳಲು ಗಾಯಕರು ಹೆಣಗಾಡುತ್ತಿದ್ದರು. ಹಿರಿಯ ಕಲಾವಿದರ ಜಾಡನ್ನು ಹಿಡಿಯುತ್ತಾ ಸಾಗಿದರೆ ಅವರು ಕನ್ನಡದ ಕವಿಗೀತೆಗಳನ್ನು ಹಾಡಿರುವುದಕ್ಕಿಂತ ಅನ್ಯ ಭಾಷೆಯ ಗೀತೆಗಳನ್ನೇ ಹೆಚ್ಚಾಗಿ ಹಾಡಿದ್ದಾರೆ. ಒಂದು ಮಾಧ್ಯಮವನ್ನು ಬಲಿಷ್ಥವಾಗಿ ರೂಪಿಸಲು ಹೊರಟಾಗ ಮೊದಮೊದಲು ಹೀಗೆ ಸಾಗಬೇಕು. ಇಂದು ಸುಗಮ ಸಂಗೀತ ತನ್ನದೇ ಆದ ಅಸ್ತಿತ್ವ ಪಡೆದು ಪ್ರಸಿದ್ಧಿಗೆ ಬಂದಿದೆ. ಜನಪ್ರಿಯತೆ ಗಳಿಸಿದೆ. ತನ್ನದೇ ಆದ ಒಂದು ಕೇಳುಗ ವರ್ಗವನ್ನು ಸಂಪಾದಿಸಿದೆ.
ಬೇರೆ ಪ್ರಾಂತ್ಯಗಳನ್ನು ಗಮನಿಸಿದರೆ ಕವಿಗೀತೆಗಳಿಗೆ ಪ್ರತ್ಯೇಕ ವೇದಿಕೆ ಇರುವುದು ಕರ್ನಾಟಕದಲ್ಲಿ ಮಾತ್ರ. ಇದು ಕನ್ನಡನಾಡಿನ ಸೌಭಾಗ್ಯವೂ ಹೌದು. ಈ ಮಾಧ್ಯಮ ಈ ಮಟ್ಟಕ್ಕೆ ಬರಲು ಎಷ್ಟು ಮಹನೀಯರು ಹಗಲು ರಾತ್ರಿ ದುಡಿದಿಲ್ಲ. ಮನೆ ಮಠವನ್ನು ತೊರೆದಿಲ್ಲ. ಇದೇ ಹಾದಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಬಂದು ಇಂದು ಮಹಾನ್ ಸಾಧಕರ ಸಾಲಿನಲ್ಲಿ ನಿಂತಿರುವ ಗಾಯಕರ ಪೈಕಿ ಗುಡಿಬಂಡೆ ರಾಮಾಚಾರ್ ಕೂಡ ಒಬ್ಬರು.
ಮುಮ್ಮುಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಸಂಸ್ಕೃತ ಪಂಡಿತರಾಗಿದ್ದ ಶ್ರೀಕಂದಾಳ ವಂಕಟಾಚಾರ್ಯರ ಸುಪುತ್ರ ಬಂಗಾರ್ ಕಡಿಯಾಲ್ ಶ್ರೀನಿವಾಸಚಾರ್ಯ ಹಾಗೂ ಸೀತಮ್ಮನವರ ಮುದ್ದಿನ ಮಗನಾಗಿ ೫ನೇ ಸೆಪ್ಟೆಂಬರ್ ೧೯೧೭ ರಂದು ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ಜನಿಸಿದರು. ಮನೆಯ ವಾತಾವರಣವೇ ಸಂಗೀತ ಮಯವಾಗಿತ್ತು, ಶಾಸ್ತ್ರೀಯ ಸಂಗೀತ, ದಾಸರಪದಗಳು, ಅಷ್ಟಪದಿ ಹೀಗೆ ಹಲವಾರು ರೀತಿಯ ಗೀತೆಗಳ ಮಜ್ಜನ ದಿನನಿತ್ಯವೂ ಆಗುತ್ತಿತ್ತು. ಹೀಗೆ ಬೆಳೆದ ರಾಮಾಚಾರ‍್ಯರು ಮುಂದೆ ಶಾಸ್ತ್ರಿಯ ಸಂಗೀತ ಕಲಿಕೆಗಾಗಿ ವಿದ್ವಾನ್ ವೆಂಕೋಬಾಚಾರ್ಯರ ಮೊರೆ ಹೋದರು. ಇವರೇ ಮೊದಲ ಗುರುವಾದರು. ಮುಂದೆ ಹೆಚ್ಚಿನ ಶಿಕ್ಷಣವನ್ನು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರಲ್ಲಿ ಮುಂದುವರೆಸಿದರು. ಅಂದು ಗಮಕ ವಾಚನ ಬಹುಪ್ರಸಿದ್ಧಿಯಲ್ಲಿತ್ತು.
ಇದರಿಂದ ಪ್ರೇರಿತರಾದ ರಾಮಾಚಾರ‍್ಯರು ಗಮಕ ಕಲೆಯನ್ನು ಅಭ್ಯಸಿಸಿದರು. ಬಹಳ ವರ್ಷಗಳ ಪರಿಶ್ರಮದಿಂದ ಗಮಕವನ್ನು ಸುಲಲಿತವಾಗಿ ವಾಚಿಸಲಾರಂಭಿಸಿದರು. ಸಂಗೀತದ ವಿವಿಧ ಪ್ರಕಾರಗಳಲ್ಲಿ ಈಜಿ ಅದನ್ನು ಕರಗತ ಮಾಡಿಕೊಳ್ಳವ ಛಲ ಹಾಗೂ ಆಸೆ, ಆಸಕ್ತಿಗಳು ಹುಟ್ಟಿನಿಂದಲೇ ವರವಾಗಿತ್ತು. ಆದ್ದರಿಂದಲೇ ಇವರು ತಮ್ಮನ್ನು ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡರು.
ಮುಂದೆ ಕವಿಗೀತೆಗಳ ಬಗ್ಗೆ ಆಸಕ್ತಿ ಹೊರಳಿ ಕನ್ನಡದ ಕವನಗಳನ್ನು ಹಾಡತೊಡಗಿದರು. ಕಾರ್ಯಕ್ರಮ್ರಗಳನ್ನು ನೀಡಲಾರಂಭಿಸಿದ ರಾಮಾಚಾರ‍್ಯರು ಇದರಲ್ಲಿ ಜನಪದ, ಚಲನಚಿತ್ರಗೀತೆ, ಭಾವಗೀತೆಗಳನ್ನು ಹಾಡುತ್ತಾ ಸಾಗಿದರು. ಒಮ್ಮೆ ಚಿತ್ರದುರ್ಗದ ಸಮಾರಂಭವೊಂದರಲ್ಲಿ ಇವರ ಪಾರ್ಥನೆ ನಡೆಯಬೇಕಿತ್ತು. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂಬಿಕಾತನಯದತ್ತ ಎಂಬ ಕಾವ್ಯನಾಮ ಹೊತ್ತು ಕನ್ನಡ ಕಾವ್ಯ ಪ್ರಪಂಚವನ್ನು ಸಮೃದ್ಧಿಗೊಳಿಸಿದ ವರಕವಿ ದ.ರಾ.ಬೇಂದ್ರೆ ಆಗಮಿಸಿದ್ದರು. ಇವರ ಸಮ್ಮುಖದಲ್ಲಿ ಹಾಡಿದ ರಾಮಾಚಾರ‍್ಯರನ್ನು ಹತ್ತಿರಕ್ಕೆ ಕರೆದು ಕನ್ನಡದ ಕವಿಗೀತೆಗಳಿಗೆ ಹೆಚ್ಚು ಒತ್ತು ನೀಡಲು ಹೇಳಿದರಂತೆ. ಕನ್ನಡ ಗೀತೆಗಳನ್ನು ಬೆಳೆಸುವಂತೆ ಹೇಳಿದರಂತೆ. ಅವರಿಂದ ದೀಕ್ಷೆ ಪಡೆದವರಂತೆ ಮುಂದೆ ಹೆಚ್ಚುಹೆಚ್ಚು ಕವಿಗೀತೆಗಳನ್ನು ಹಾಡುತ್ತಾ ಬಂದರು. ಅದರಿಂದಲೇ ಸುಪ್ರಸಿದ್ಧಿ ಪಡೆದರು.
ಗುಡಿಬಂಡೆ ರಾಮಾಚಾಯ್ಯರದು ಆಜಾನುಬಾಹು ವ್ಯಕ್ತಿತ್ವ. ಆರುವರೆ ಅಡಿ ಎತ್ತರದ ಮನುಷ್ಯ, ಮೋಲೊಂದು ಜುಬ್ಬ, ಬಿಳಿ ಮೇಲುಕೋಟೆ ಅಂಚಿನ ಕಚ್ಚೆಪಂಚೆ ಕಟ್ಟಿಕೊಂಡು ಸರಳವಾಗಿ ಇರುತ್ತಾರೆ. ಎಷ್ಟೋ ಕಷ್ಟದ ಹಾದಿಯನ್ನು ತುಳಿದಿದ್ದರೂ ನಗುಮುಖ ಹೊತ್ತೆ ಎಲ್ಲರನ್ನು ಮಾತನಾಡಿಸುವ ಗುಣ ಇವರಲ್ಲಿದೆ.
ಒಮ್ಮೆ ಬಿಜಾಪುರದಲ್ಲಿ ಇವರ ಗೀತಗಾಯನ ಏರ್ಪಾಟಾಗಿತ್ತು. ಆಗ ಎಲ್ಲೆಲ್ಲೂ ಬರದ ಕಾರ್ಮೋಡ ಕವಿದಿತ್ತು. ಹೀಗಿದ್ದರೂ ಜನ ಗೀತ ಗಾಯನ ಕೇಳಿ ಬರದ ನೋವು ಮರೆಯಲು ಅಸಂಖ್ಯ ಸಂಖ್ಯೆಯಲ್ಲಿ ನೆರೆದಿದ್ದರಂತೆ. ಕಾರ್ಯಕ್ರಮ ಆರಂಭಗೊಂಡಿತು. ಒಂದರ ಮೇಲೊಂದರಂತೆ ಕವಿಗೀತೆಗಳನ್ನು ಹಾಡಲಾರಂಭಿಸಿದರು ರಾಮಾಚಾರ್ಯರು. ಕೆಲವು ಗೀತೆಗಳನ್ನು ಹಾಡಿ ಮುಂದಿನ ಗೀತೆ ಬೇಂದ್ರೆಯವರ ‘ಗಂಗಾವತರಣ’ ಎಂದು ಹೇಳಿದಾಗ ಶ್ರೋತೃಗಳಿಗೆ ಈ ಗೀತೆಯಿಂದಲಾದರೂ ಮಳೆಬರಬಾರದೇ ಎಂದೆನಿಸದೇ ಇರಲಿಕ್ಕಿಲ್ಲ. ‘ಇಳಿದು ಬಾ ತಾಯೆ ಇಳಿದು ಬಾ’ ಎಂದು ಹಾಡಲಾರಂಭಿಸಿದ ರಾಮಾಚಾರ‍್ಯರ ಗೀತೆಗೆ ನಿಜಕ್ಕೂ ವರುಣ ಕೃಪೆ ತೋರಿ ನೀರನ್ನು ಕರುಣಿಸಿಯೇ ಬಿಟ್ಟನಂತೆ ಆ ದಿನವನ್ನು ತಮ್ಮ ಜೀವನದ ಅತ್ಯಂತ ಸುದಿನ ಎಂದು ಈಗಲೂರಾಮಾಚಾರ್ ನೆನೆಯುತ್ತಾರೆ. ಅಂದು ಬಿಜಾಪುರದ ಜನ ಕೊಂಡಾಡಿದರಂತೆ ಹಾಗೆಯೇ ಇವರಿಗೆ ‘ಸುಗಮಸಂಗೀತ ಋಷ್ಯಶೃಂಗ’ ಎಂಬ ಬಿರುದನ್ನು ನೀಡಿ ಗೌರವಿಸಿದರಂತೆ. ಇದೇ ಗೀತೆಯನ್ನು ಬೇಂದ್ರೆಯವರ ಸಮ್ಮುಖದಲ್ಲಿ ಹಾಡುವ ಅವಕಾಶ ದೊರಕಿ ಅಲ್ಲಿ ಹಾಡಿದಾಗಲೂ ಮಳೆ ಧಾರಾಕಾರಕವಾಗಿ ಸುರಿಯಿತಂತೆ. ಈ ಗೀತೆ ಮುಂದೆ ಇವರ ಕಾರ್ಯಕ್ರಮದ ಆಕರ್ಷಣೆಯಾಗುವುದು ಸಹಜವಾಗಿತ್ತು.
ಹೀಗೆ ಪ್ರವರ್ಧಮಾನಕ್ಕೆ ಬಂದ ರಾಮಾಚಾರ‍್ಯರು ಆಕಾಶವಾಣಿಯಲ್ಲಿ ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡುತ್ತಾ ಅಲೆಮಾರಿಯಂತೆ ಅಲೆದು ಕವಿಗೀತೆಗಳನ್ನು ಮನೆಮನೆಗೆ ಮುಟ್ಟಿಸಿದರು. ಆ ಕಾಲದಲ್ಲಿ ಬರೀ ಹಾಡುತ್ತಾ ಜೀವನ ನಡೆಸಲು ಆಗುತ್ತಲೇ ಇರಲಿಲ್ಲವಾದ್ದರಿಂದ ಭಾರತ ಸರ್ಕಾರದ ಪ್ರಚಾರ ಇಲಾಖೆಯಲ್ಲಿ ಪ್ರಚಾರಕರಾಗಿ ಕೆಲಸಕ್ಕೆ ಸೇರಿದರು. ಈ ಮಧ್ಯೆ ಮದುವೆಯೂ ಆಗಿತ್ತು ಸಂಸಾರದ ಭಾರತೂಗಲು ಈ ಕೆಲಸದ ಅಗತ್ಯತೆ ಹೆಚ್ಚಿತ್ತು. ಮುಂದೆ ಈ ಇಲಾಖೆಯಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಕುಟುಂಬಯೋಜನೆಯ ಗೀತೆಗಳು, ಲಾವಣಿಗಳ ಜೊತೆಗೆ ಮಧ್ಯೆ ಮಧ್ಯೆ ಕವಿಗೀತೆಗಳನ್ನು ಹಾಡುತ್ತಾ ಬಂದರು. ಇಲಾಖೆಯ ಕೆಲಸದಿಂದ ನಾನಾ ಊರಿಗೆ ಹೋಗುತ್ತಿದ್ದರಿಂದ ಆ ಊರಿನ ಪ್ರಸಿದ್ಧ ಕವಿಗಳನ್ನು ಕಂಡು ಮಾತನಾಡಿಸುವ, ಅವರ ಸಮ್ಮುಖದಲ್ಲಿ ಹಾಡುವ ಅವಕಾಶ ಹೆಚ್ಚು ದೊರಕಿತು. ಇದರಿಂದ ಎಲ್ಲ ಕವಿಗಳನ್ನು ಹತ್ತಿರದಿಂದ ಕಾಣುವ ಭಾಗ್ಯ ದೊರಕಿತು. ‘ಆಡಿದನಾಡಿದ ನಾದಶಂಕರ’, ‘ದೋಣಿಸಾಗಲಿ’, ‘ಜೀವ ಜಾತ್ರೆಯಲಿ ಪ್ರಾಣಪಾತ್ರೆಯಲಿ’, ‘ಇಳಿದು ಬಾ’, ಗೀತೆಗಳು ಬಹಳಷ್ಟು ಪ್ರಸಿದ್ಧಿಯಲ್ಲಿತ್ತು.
ದಿ|| ಅತ್ರಿಯವರ ಸಂಗೀತ ಸಮಾರಂಭವೊಂದು ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗುತ್ತಿತ್ತು. ಅಂದು ಬಿಡುವಿನ ಸಮಯದಲ್ಲಿ ಹಾಡಲು ನಿಂತ ಈ ಆಜಾನುಬಾಹುವಿನ ಶಾರೀರಕ್ಕೆ ಇಡೀ ಶ್ರೋತೃವರ್ಗವೇ ಮೂಕಸ್ಮಿತರಾದದ್ದುನ್ನು ಕಣ್ಣಾರೆ ಕಂಡಿದ್ದೇನೆ. ಎಲ್ಲರ ಕೋರಿಕೆಗಾಗಿ ಗಮಕದ ಸ್ಟೈಲ್‌ನಲ್ಲಿ ಕ್ರಿಕೆಟ್ ಕಾಮಿಂಟ್ರಿ ಹೇಳಿ ಎಲ್ಲರನ್ನೂ ರಂಜಿಸಿದರು. ಅಂದು ಎಲ್ಲರೂ ಇವರ ಹಾಸ್ಯಪ್ರeಗೆ ಮನಸೋತು ನಗೆಗಡಲಲ್ಲಿ ತೇಲಿದರು. ಈ ಇಳಿ ವಯಸ್ಸಿನಲ್ಲಿಯೂ ಇವರು ಹಾಡಲು ನಿಂತರೆ ಇಂದಿನ ಪ್ರಸಿದ್ಧ ಗಾಯಕರು ನಾಚುವಂತೆ ಹಾಡುತ್ತಾರೆ.
ಅಕ್ಟೋಬರ್ ೩೧ರಂದು ನಾಡಿಗೇರ್ ಕೃಷ್ಣರಾಯರು ಹಾಗೂ ಮೇಕಪ್ ನಾಣಿ ನೆನಪಿನಲ್ಲಿ ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ನಗುವಿಗೇಕೆ ರೇಷನ್ -ನಗೆ ಹಬ್ಬ. ಆ ನಗೆಹಬ್ಬದಲ್ಲೂ ಗುಡಿಬಂಡೆ ರಾಮಾಚಾರ್ ಎಲ್ಲರನ್ನೂ ನಕ್ಕು ನಗಿಸಿದರು. ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಎನಿಸಿದರು.
ರಾಮಾಚಾರ್ ಬಹುಭಾಷಾ ಗಾಯಕರು. ಕೇರಳಕ್ಕೆ ಹೋದರೆ ಮಲಯಾಳಂ ಗೀತೆ, ವಿಜವಾಡಕ್ಕೆ ಹೋದರೆ ತೆಲಗು ಗೀತೆ, ಮದ್ರಾಸಿಗೆ ಹೋದರೆ ತಮಿಳು ಗೀತೆ, ಹೀಗೆ ಯಾವ ಭಾಷೆಯಲ್ಲಾದರೂ ಹಾಡುವ ರಾಮಾಚಾರ‍್ಯರಿಗೆ ಸುಗಮ ಸಂಗೀತದಲ್ಲಿ ಉತ್ತಮ ಸ್ಥಾನ ಸಿಗದಿರುವುದು ಎಲ್ಲರಿಗೂ ತಿಳಿದ ವಿಷಯ. ಬಹುಶ ಇವರು ಕಾಳಿಂಗರಾಯರು ಅನಂತಸ್ವಾಮಿಯವರಂತೆ ಕನ್ನಡಕ್ಕೇ ಮುಖ್ಯಸ್ಥಾನ ನೀಡದಿರುವುದು ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡದಿರುವುದೇ ಕಾರಣವಿರಬಹುದು.
ಆದರೂ ಇವರು ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಕವನಗಳನ್ನು ಹಾಡಿರುವುದು ಇವರಿಗೆ ಕನ್ನಡದ ಮೇಲಿರುವ ಅಭಿಮಾನವನ್ನು ಎತ್ತಿ ತೋರುತ್ತದೆ. ರಾಮಾಚಾರ‍್ಯರು ಕೆಲವು ಕವನಗಳನ್ನೂ ರಚಿಸಿದ್ದಾರೆ. ಕೆಲವುಕಾಲ ‘ಪ್ರಜಾಮತ’ ವಾರಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು ಪತ್ರಕರ್ತರಷ್ಟೇ ಅಲ್ಲ, ಹಾಸ್ಯ ಬರಗಾರರೂ ಹೌದು. ಅಣಕು ಗೀತೆ, ಸ್ವಾತಂತ್ರ್ಯ ಕಿನ್ನರಿ, ಮಂಜುಭಾಷಿಣಿ, ಮಧುಚಂದನ ಹೀಗೆ ಹಲವಾರು ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ.
ಇವರು ಗಮಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗೆ ರಾಜ್ಯಪ್ರಶಸ್ತಿ ದೊರೆತರೆ ಸುಗಮ ಸಂಗೀತಕ್ಕಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೨ ರ ‘ ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಇವರ ಬಗಲಿಗೇರಿದೆ. ಸುಗಮ ಸಂಗೀತದ ಭೀಷ್ಮರಂತಿರುವ ರಾಮಾಚಾರ‍್ಯರು ಅದೆಷ್ಟು ಹಿರಿಯ ಕವಿಗಳ ಒಡನಾಡಿಯಲ್ಲಿ ಮಿಂದು ಬಂದಿದ್ದಾರೋ ತಿಳಿಯದು ಅದೆಷ್ಟು ಕವಿತೆಗಳನ್ನು ಹಾಡಿದ್ದಾರೋ ತಿಳಿಯದು. ಇಂಥ ಗಾಯಕರ ಧ್ವನಿ ಕ್ಯಾಸೆಟ್ ರೂಪದಲ್ಲಿ ಹೊರಬಂದರೆ ಪರಂಪರೆಯ ಮಹತ್ವ ಹೆಚ್ಚುತ್ತದೆ. ಈ ದಿಸೆಯಲ್ಲಿ ಕೆಲಸಮಾಡಲು ಹಣವಿರುವವರು ಮುಂದೆ ಬಂದರೆ ಸುಗಮ ಸಂಗೀತ ಕ್ಷೇತ್ರದ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಇಂದೂ ನಮ್ಮೊಂದಿಗಿದ್ದು, ಈಗಲೂ ಹಾಡುವ ಎಲ್ಲಾ ಸಾಮರ್ಥ್ಯ ಹೊಂದಿರುವ ಈ ಗಾಯಕರಿಗೆ ನಮ್ಮೆಲ್ಲಾ ಕಲಾವಿದರ ಹರಕೆ-ಹಾರ‍್ಯೆಕೆಗಳು ಸದಾ ಇರುತ್ತದೆ.
Comments
ಉ: ಗುಡಿಬಂಡೆ ರಾಮಾಚಾರ್ : ಸಂಗೀತ ಕ್ಷೇತ್ರ ಕಂಡ ಅಪರೂಪದ ವ್ಯಕ್ತಿ - ...