ಗುಣಮಟ್ಟದ ಹಲಸು ಪಡೆಯುವ ಕ್ರಮ
ಹಲಸು ಈಗ ಬಹು ಉಪಕಾರಿ ಫಲ. ತೋಟದ ಮೂಲೆಯಲ್ಲಿ ಮರವೊಂದರಲ್ಲಿ ಬೆಳೆದು ಕೊಳೆಯುತ್ತಿದ್ದ ಹಣ್ಣಿಗೆ ಈಗ ರಾಜಯೋಗ ಬಂದಿದೆ. ಹಲಸು ಈಗ ಕಲ್ಪವೃಕ್ಷವಾಗಿದೆ. ಹಲಸಿನ ಕಾಯಿಯಿಂದ ಹಲವಾರು ತಿಂಡಿ ತಿನಸುಗಳು, ಪದಾರ್ಥಗಳು ತಯಾರಾಗುತ್ತದೆ. ಹಲಸಿನ ಹಣ್ಣು ತಿನ್ನಲು, ಪಾಯಸ, ಹಲ್ವ, ಹಪ್ಪಳ, ಐಸ್ ಕ್ರೀಂ, ಚಿಪ್ಸ್ ಮಾಡಲು ಸಹಕಾರಿ. ಹಲಸಿನ ಮರದ ಎಲೆಯೂ ಕೊಟ್ಟಿಗೆ (ಕಡುಬು) ಮಾಡಲು ಉಪಯೋಗವಾಗುತ್ತದೆ. ಹಲಸು ಈಗಂತೂ ಎಲ್ಲಾ ಕಾಲದಲ್ಲೂ ಸಿಗುವಂತಹ ವ್ಯವಸ್ಥೆ ಹಾಗೂ ತಳಿಗಳು ಇವೆ. ಹಲಸಿನ ಸೊಳೆಯನ್ನು ಉಪ್ಪಿಗೆ ಹಾಕಿ ಇಟ್ಟರೆ ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ. ಹೀಗಾಗಿ ಈಗ ಹಲಸು ಎಂದರೆ ಅಗ್ಗದ ತರಕಾರಿ ಅಲ್ಲ. ಬಹು ಬೇಡಿಕೆಯ ತರಕಾರಿ ಹಾಗೂ ಹಣ್ಣು.
ಶಿವರಾತ್ರಿಯ ಸಮಯದ ಗಾಳಿ, ಚಳಿ ವಾತಾವರಣಕ್ಕೆ ಹಲಸಿನ ಮರದಲ್ಲಿ ಮಿಡಿಗಾಯಿ(ಕಳ್ಳಿಗೆ) ಬಿಡುತ್ತದೆ ಎಂಬುದು ನಮ್ಮ ಹಿರಿಯರ ಮಾತು. ನಿಜವಾಗಿ ಹಲಸಿನ ಮರವಾಗಲೀ ಮಾವಿನ ಮರವಾಗಲೀ ಹೂ ಬಿಡುವುದಕ್ಕೆ ಈ ಸಮಯದ ಶುಷ್ಕ ವಾತಾವರಣವೇ ಕಾರಣ. ಮಳೆಗಾಲ ಕಳೆದ ಮೇಲೆ ಚಳಿಗಾಲ ಬರುವಾಗ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಒಣ ವಾತಾವರಣ ಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ಸಸ್ಯಗಳು ಹೂ ಬಿಡಲು ಸಜ್ಜಾಗುತ್ತವೆ.
ಹಲಸಿನ ಮರದಲ್ಲಿ ಕೆಲವೊಮ್ಮೆ ವಾತಾವರಣದ ಅನುಕೂಲ ಹೊಂದಿಕೊಂಡು ಹೆಚ್ಚು, ಕಡಿಮೆ ಮಿಡಿಕಾಯಿಗಳೂ ಬಿಡುವುದುಂಟು. ಈಗ ಪ್ರತೀ ವರ್ಷ ಚಳಿ ಕಡಿಮೆ, ಶಿವರಾತ್ರಿ ಗಾಳಿಯೂ ಕಡಿಮೆ. ಆದ ಕಾರಣ ಹಲಸಿನ ಫಸಲೂ ಅಷ್ಟಕ್ಕಷ್ಟೇ. ಹಲಸಿನ ಮರದಲ್ಲಿ ಮಿಡಿಕಾಯಿಗಳು ಆದರೂ ಅದು ಉಳಿಯದೇ ಉದುರುವ ಸಾಧ್ಯತೆ ಇರುತ್ತದೆ.
ಹಲಸಿನ ಮರದಲ್ಲಿ ಬಿಡುವ ಎಲ್ಲಾ ಮಿಡಿಗಳನ್ನೂ ಉಳಿಸಿದರೆ ಯಾವ ಕಾಯಿಗಳೂ ಪುಷ್ಟಿಯಾಗುವುದಿಲ್ಲ. ಮರದ ಪ್ರಾಯ ಮತ್ತು ಗಾತ್ರ ನೋಡಿಕೊಂಡು ಮಧ್ಯಮ ಗಾತ್ರದ ಮರವೊಂದರಲ್ಲಿ ಹತ್ತರಿಂದ ಇಪತ್ತರಷ್ಟು ಹಾಗೂ ದೊಡ್ಡ ಮರದಲ್ಲಿ ಇಪ್ಪತ್ತರಿಂದ ಮೂವತ್ತು ಮಾತ್ರವೇ ಕಾಯಿಗಳನ್ನು ಬೆಳೆಯಲು ಬಿಟ್ಟು ಉಳಿದವುಗಳನ್ನು ತೆಗೆದರೆ ಉಳಿದ ಕಾಯಿಗಳಿಗೆ ಹೆಚ್ಚುವರಿ ಪೋಷಕಾಂಶಗಳು ದೊರೆತು ಕಾಯಿ ಪುಷ್ಟಿಯಾಗುತ್ತದೆ. ಕಾಯಿಗಳನ್ನು ಎಳೆಯದಿರುವಾಗ ತೆಗೆದು ಅದನ್ನು ಪಲ್ಯ, ಸಾಂಬಾರು, ಉಪ್ಪಿನಕಾಯಿ ಮುಂತಾದ ಅಡುಗೆ ಬಳಕೆಗೆ ಉಪಯೋಗಿಸಬಹುದು. ಸುಮಾರಾಗಿ ಕಾಯಿಗಳು ಮೂಡಿ ೧೦-೧೫ ದಿನಗಳ ಒಳಗೇ ಅದನ್ನು ಹಿಚುಕಬೇಕು. ಒಂದು ಗೊಂಚಲಿನಲ್ಲಿ ಒಂದರಿಂದ ಹೆಚ್ಚು ಮಿಡಿಗಳಿದ್ದರೆ ಒಂದನ್ನು ಉಳಿಸಿದರೆ ಒಳ್ಳೆಯದು. ಸಾಧ್ಯವಾದಷ್ಟು ಕಾಂಡ ಹಾಗೂ ದಪ್ಪದ ಗೆಲ್ಲುಗಳಲ್ಲಿ ಬಿಡುವ, ಬೆಳೆದ ನಂತರ ಕೀಳಲು ಸುಲಭವಾಗುವಂತಿರುವ ಕಾಯಿಗಳನ್ನು ಉಳಿಸಿ ಮಿಕ್ಕವುಗಳನ್ನು ತೆಗೆಯಬೇಕು. ಮರದ ತುದಿಯಲ್ಲಿರುವ ಕಾಯಿಗಳನ್ನು ಬೆಳೆಯಲು ಬಿಡದೇ ಕಾಯಿಗಳಾಗಿರುವಾಗಲೇ ಕೊಯ್ದು ಅಡುಗೆಗೆ ಬಳಸಬಹುದು. ಕಾಯಿಯಾಗಿರುವಾಗ ನೆಲಕ್ಕೆ ಬೀಳಿಸಿ ತೆಗೆದರೂ ಬಹುದೊಡ್ಡ ನಷ್ಟವಾಗುವುದಿಲ್ಲ. ಆದರೆ ಚೆನ್ನಾಗಿ ಮಾಗಿದ ಕಾಯಿ ನೆಲಕ್ಕೆ ಬಿದ್ದರೆ ಅದು ಹಣ್ಣಾಗುವಾಗ ಕೊಳೆತು ಹೋಗುತ್ತದೆ. ಹೀಗೆ ಹೆಚ್ಚುವರಿ ಕಾಯಿಗಳನ್ನು ತೆಗೆದಾಗ ಉಳಿದ ಕಾಯಿಗಳು ಪುಷ್ಟಿಯಾಗಿ ಸರಿಯಾಗಿ ಬೆಳವಣಿಗೆ ಹೊಂದುತ್ತವೆ. ಮರದ ತಾಳಿಕೆಗಿಂತ ಅಧಿಕ ಸಂಖ್ಯೆಯಲ್ಲಿ ಕಾಯಿಗಳು ಬಿಟ್ಟರೆ ಅದರಲ್ಲಿ ನಿಷ್ಪ್ರಯೋಜಕ ಕಾಯಿಗಳಾಗುವುದೇ ಅಧಿಕ. ಕಾಯಿಗಳು ಪೊಳ್ಳು ಆಗದೆ ಪೂರ್ತಿ ತುಂಬಿಕೊಂಡಿರಬೇಕು. ಆಗ ಅದರಲ್ಲಿ ಸೊಳೆಗಳ ಸಂಖ್ಯೆ ಹೆಚ್ಚು ಇರುತ್ತದೆ.
ಸಾಮಾನ್ಯವಾಗಿ ಹಲಸಿನ ಕಾಯಿಯೊಳಗೆ ಕಾಯಿ ಕೊರಕ ಹುಳು ಪ್ರವೇಶಿಸಿ ಒಳಗೆ ತಿರುಳು ಭಾಗವನ್ನು ತಿಂದು ಹಾನಿಯನ್ನುಂಟುಮಾಡುವುದು ಸಾಮಾನ್ಯ. ಇದನ್ನು 'ಬೆರ್ಪುರಿ' ಎಂದು ತುಳು ಭಾಷೆಯಲ್ಲಿ ಕರೆಯುತ್ತಾರೆ. ಇದರಿಂದ ಹಲಸಿನ ನೋಟ ಕೆಡುತ್ತದೆ. ಇದರ ನಿಯಂತ್ರಣಕ್ಕಾಗಿ ಮಿಡಿ ಹಂತದಲ್ಲಿ, ಅಂದರೆ ಮಿಡಿ ಬಿಟ್ಟು ಮೂರು ನಾಲ್ಕು ದಿನಗಳೊಳಗೆ ಈ ಮಿಡಿಯ ಮೇಲ್ಮೈಯನ್ನು ಯಾವುದಾದರೂ ಒಂದು ಪುಡಿ ರೂಪದ ಕೀಟ ನಾಶಕವನ್ನು (ಮೆಲಾಥಿಯಾನ್- ಕೆ ಒಥ್ರಿನ್) ಹತ್ತಿ ಬಟ್ಟೆಯೊಳಗೆ ಹಾಕಿ ಸವರಿದರೆ ಮುಂದೆ ಈ ಕೊರಕ ಹುಳು ಭಾಧಿಸುವುದಿಲ್ಲ. ಹಲಸಿನ ಕಾಯಿ ಹಾಗೂ ಹಣ್ಣುಗಳಿಗೆ ಈಗ ಬೇಡಿಕೆ ಹೆಚ್ಚಳವಾಗುತ್ತಿದ್ದು ಉತ್ತಮ ಗುಣಮಟ್ಟದ ಕಾಯಿಗಳಿದ್ದಲ್ಲಿ ಹಲಸು ಮಾರಾಟ ಮಾಡಿಯೂ ಲಾಭ ಮಾಡಿಕೊಳ್ಳಬಹುದು. ಹೆಚ್ಚು ಸೊಳೆಗಳಿರುವ ಹಲಸಿನ ಕಾಯಿಯಿಂದ ಹೆಚ್ಚು ಚಿಪ್ಸ್, ಹಪ್ಪಳ ಮಾಡಬಹುದು. ಹೀಗಾಗಿ ಹಲಸು ಒಂದು ವಾಣಿಜ್ಯ ಬೆಳೆಯಾಗಿ ಬೆಳೆದರೆ ಮೋಸವಿಲ್ಲ. ಬಹುಬೇಗನೇ ಇಳುವರಿ ಕೊಡುವ ಉತ್ತಮ ಸಿಹಿ ಹಾಗೂ ಬಣ್ಣವನ್ನು ಹೊಂದಿರುವ ಹಲಸಿನ ತಳಿಗಳು ಈಗ ಲಭ್ಯವಿದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ