ಗುಬ್ಬಚ್ಚಿ

ಗುಬ್ಬಚ್ಚಿ

ಕವನ

ರೆಕ್ಕೆ ಪುಕ್ಕವ ಬಿಚ್ಚಿ


ಹುಲ್ಲಕಡ್ಡಿಯ ಕಚ್ಚಿ


ಭರ್ರ್ ಎಂದು ಹಾರೆಲ್ಲಿ ಹೊಯ್ತು ಗುಬ್ಬಚ್ಚಿ.


 


ಮೂಡಣದಿ ರವಿ ಮೂಡಿ


ದೊಡನೆದ್ದು ಹಾರಾಡಿ


ಏಳಿಸುವ ಚಿಲಿಪಿಲಿಯ ಸ್ವರವ ಬಿಚ್ಚಿ


 


ಪಡಸಾಲೆಯಲಿ ನಿಂತ


ನೀರಿನಲಿ ಮುಳುಗುತ್ತ


ಮೈಗೊಡವಿ ನಲಿದಾಡುತಿತ್ತು ನೆಚ್ಚಿ


 


ರೆಕ್ಕೆ ಕೊಕ್ಕನು ತಿಕ್ಕಿ


ಬಿದ್ದ ಕಾಳ್ಗಳ ಹೆಕ್ಕಿ


ಗುಟುಕು ಕೊಡಲೋಡುವವು ಕಾಳ ಕಚ್ಚಿ


 


ಕನ್ನಡಿಯ ಮೇಲ್ಹಿಡಿಕಿ


ಅದರ ಮೇಲ್ಕುಳಿತ್ ಇಣುಕಿ


ಬಿಂಬ ಗೆಳೆಯನ ಕೆಣಕಿ ಕೊಕ್ಕ ಚುಚ್ಚಿ


 


ಹೊಲಮೇರೆ ಸಾಲಿನಲಿ


ಗಿಡಕೆ ನೇತಾಡುತಲಿ


ಗೂಡ ಹೆಣೆವುದು ಮೊಗದಿ ಹುಲ್ಲ ಕಚ್ಚಿ


 


ನಶಿಸಿ ವನ ಕಾಡುಗಳ


ಬೆಳೆಸಿದಿರಿ ನಾಡುಗಳ


ಗಗನ ಚುಂಬಿಸೊ ಸುಟ್ಟ ಇಟ್ಗೆ ಹಚ್ಚಿ


 


ನಿಮ್ಮ ಜೇಬಿನ ಬುಡದ


ಕಿರಿದಾದ ಕರ್ಕಷದ


ಚಲಿಸುಕೊಶವನೊಮ್ಮೆ ಓರೆಹಚ್ಚಿ


 


ಹುಚ್ಚಾಟವದು ನಿಮಗೆ


ಪ್ರಾಣ ಸಂಕಟ ನಮಗೆ


ತೀಕ್ಷ್ಣ ಲಹರಿಗಳೆಲ್ಲ ಎದೆಗೆ ಚುಚ್ಚಿ


 


ತಂತ್ರಙ್ನಾನದಿ ಬೆಳೆದು


ಸಂಪನ್ಮೂಲವ ತೊಳೆದು


ಪ್ರಕ್ರುತಿ ಸಂಕುಲಕೆಲ್ಲ ಬೆಂಕಿ ಹಚ್ಚಿ


 


ಪ್ರಳಯ ಸನಿಹಿಸುತಿಹುದು


ಕಟ್ಟಿಟ್ಟ ಬುತ್ತಿ ಅದು


ಉಣಲೆಬೇಕಲ್ಲ ನೀ ಬುತ್ತಿ ಬಿಚ್ಚಿ


                                             -  ತುಂಟ ಶೀನ


 

ಚಿತ್ರ್