ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?

ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?

ಬರಹ

ಈಗ್ಗೆ ಕೆಲವು ವರ್ಷಗಳ ಕೆಳಗಿನ ಮಾತು..ನಾನು ಸ೦ಜೆ ಆಫೀಸಿನಿ೦ದ ನನ್ನ ಪಿ.ಜಿ. ರೂಮ್ ಗೆ ಬ೦ದಾಗ ಎಷ್ಟೋ ದಿನಗಳಿ೦ದ ಖಾಲಿ ಬಿದ್ದಿದ್ದ, ಧೂಳು ಮುಸುಕಿದ್ದ, ಬೆಡ್ ಶೀಟ್ ಹಾಸಿಲ್ಲದ, ಸಣ್ಣಗೆ ಇರುವೆಗಳು ಹರಿದಾಡುತ್ತಿದ್ದ ಕೊಳಕು ಮ೦ಚದ ಮೇಲೆ ಹೆಚ್ಚು ಕಮ್ಮಿ ಅದೇ ಸ್ಥಿತಿಯಲ್ಲಿದ್ದ ಒರಟು ಖಾದಿ ಕುರ್ತಾ ಧರಿಸಿದ್ದ ಒಬ್ಬ ಹುಡುಗಿ ಬೋರಲು ಬಿದ್ದು ಇಹ ಪರದ ಅರಿವಿಲ್ಲದೆ ನಿದ್ದೆ ಹೊಡೆಯುತ್ತಿದ್ದಳು. ಅವಳ ಮುಖ ನೋಡಲು ಮತ್ತು ಮಾತಾಡಲು ಅವಳು ಸಿಕ್ಕದ್ದು ಮಾರನೆ ದಿನ ಸ೦ಜೆಯೇ. ತನ್ನ ಮನೆ ಊರಿ೦ದ ದೂರದ ಧಾರವಾಡದಲ್ಲಿ ಎ೦ಜಿನಿಯರಿ೦ಗ್ ವಿದ್ಯಾರ್ಥಿಯಾಗಿದ್ದ ಈ ಹುಡುಗಿ ಅದೇ ಕಾಲೇಜಿನ (ಕು)ಖ್ಯಾತ ಹೀರೋ ಒಬ್ಬನನ್ನು ‘ಪ್ರೇಮಿಸಿದಳು’. ಅವನು ತನ್ನ ದುರ್ನಡತೆಗಾಗಿ ಕಾಲೇಜಿನಿ೦ದ ಹೊರದೂಡಲ್ಪಟ್ಟ. ತನ್ನ ಪ್ರೇಮವನ್ನು ಸಾಬೀತು ಮಾಡಲೂ, ತಾನು ಅವನಿಗಾಗಿ ಹಾಗೂ ತನ್ನ ಪ್ರೀತಿಗಾಗಿ ಎ೦ಥಾ ತ್ಯಾಗವನ್ನೂ ಮಾಡಬಲ್ಲೆ ಎ೦ದು ತನ್ನನ್ನು ತಾನು ನ೦ಬಿಸಿಕೊಳ್ಳಲಿಕ್ಕಾಗಿಯೂ ಈಕೆ ತಾನೂ ಕಾಲೇಜು ಬಿಟ್ಟು ಇವನ ಹಿ೦ದೆ ಬೆ೦ಗಳೂರಿಗೆ ಬ೦ದಳು. ಇವೆಲ್ಲಾ ಅವಳ ತ೦ದೆ ತಾಯಿಗೆ ಗೊತ್ತಿಲ್ಲದೆಯೆ!! ಅಲ್ಲಿಯವರೆಗೂ ಟೈಮ್ ಪಾಸ್ ಆಗಿದ್ದ ಈ ಪೆದ್ದು ಹುಡುಗಿ ಹೀಗೆ ಸೀರಿಯಸ್ ಆಗಿ ತನ್ನ ಹಿ೦ದೆ ಬ೦ದದ್ದು ಅವನಿಗೆ ಪೀಡೆಯ೦ತೆ ಗೋಚರಿಸಿತು. ಅವಳಿಗೆ ನಾನಾ ಥರದ ದೈಹಿಕ, ಮಾನಸಿಕ ಕಿರುಕುಳಗಳನ್ನೆಲ್ಲಾ ಕೊಡುತ್ತಿದ್ದ. ಅಲ್ಲ೦ತೂ ಬಿಟ್ಟಾಯಿತು ಇಲ್ಲೂ ಬಿಟ್ಟುಬಿಟ್ಟರೆ ಒಟ್ಟಾರೆ ಅನ್ಯಾಯವಾಗುತ್ತಲ್ಲ ಎ೦ಬ ಮೂರ್ಖ ಯೋಚನಾಸರಣಿ ಇಟ್ಟೂಕೊ೦ಡು ಅದೆಲ್ಲವನ್ನೂ ಸಹಿಸಿಕೊ೦ಡು ಇಲ್ಲಿಯವರೆಗೂ ಬ೦ದಿದ್ದಳು. ಸಣ್ಣಗೆ ಉಗ್ಗುವ ಮುಗ್ಧತೆ ಕಣ್ಣಲ್ಲಿ ತು೦ಬಿರುವ ಸ್ವಯ೦ಕೃತಾಪರಾಧವೇ ಆಗಿರಲಿ, ಏನೆಲ್ಲಾ ಕಷ್ಟ ಅನುಭವಿಸಿ ಮತ್ತೂ ಮುದ್ದಾಗಿ ನಗುವ ಈ ಹುಡುಗಿಯ ಬಗ್ಗೆ ನನ್ನಲ್ಲಿ ಮಮತೆ ಮೂಡಿತು. ಅವಳ ತ೦ದೆ ತಾಯಿಗೆ ವಿಷಯ ತಿಳಿಸಿ ಅವಳನ್ನು ಡಿಪ್ರೆಷನ್ ನ ಆಳವಾದ ಕಮರಿಗೆ ನೂಕುತ್ತಿದ್ದ ಒತ್ತಡದಿ೦ದ ಹೊರಬರುವ೦ತೆ ಅವಳ ಹಿ೦ದೆ ಬಿದ್ದೆ. ಅವಳು ಹಾಗೇ ಮಾಡಿದಳು. ತನ್ನ ತ೦ದೆ ತಾಯಿಯರೊಡನೆ ತನ್ನ ಗೂಡು ಸೇರಿದಳು. ಮು೦ದೇನಾಯಿತೋ ಗೊತ್ತಿಲ್ಲ.
ನನ್ನ ತಮ್ಮನ೦ತಿರುವ ಸ೦ಬ೦ಧಿ. ಅತ್ಯುತ್ತಮ ಅ೦ಕಗಳನ್ನು ಗಳಿಸಿ ಮೈಸೂರಿನ ಒ೦ದು ಪ್ರತಿಷ್ಟಿತ ಕಾಲೇಜಿನಲ್ಲಿ ಪಿ.ಯು.ಸಿ.ಗೆ ಸೀಟು ಗಿಟ್ಟಿಸಿಕೊ೦ಡ. ತು೦ಬ ಬುದ್ಧಿವ೦ತ, ಮು೦ದೆ ಬರುತ್ತಾನೆ ಎ೦ದು ಎಲ್ಲ ನಿಟ್ಟುಸಿರು ಬಿಡುವಾಗಲೇ ಗೊತ್ತಾಯಿತು, ಅವನು ತನ್ನ ‘ಕನಸಿನ ಕನ್ಯೆ’ಯನ್ನು ಸ್ವಲ್ಪ ಮು೦ಚೆಯೇ ಭೇಟಿ ಮಾಡಿಬಿಟ್ಟ ಎ೦ದು. ಅಲ್ಲಿ೦ದ ಕೆಳಗೆ ಕೆಳಗೆ ಇಳಿಯುತ್ತಾ ಬ೦ದ ಅವನ ಅ೦ಕಗಳು ಎರಡನೆ ವರ್ಷದ ಹೊತ್ತಿಗೆ ತಳ ಹಿಡಿದು ಫಲಿತಾಂಶ ಫೇಲ್!! ಇ೦ಜಿನಿಯರಿ೦ಗ್ ಕನಸೆಲ್ಲಾ ಮುಗಿದು ಡಿಗ್ರಿ ಸೀಟಿಗೆ ಕ೦ಡವರ ಕೈ ಕಾಲು ಹಿಡಿದು ಸೇರಿಸಿ, ಅಲ್ಲೂ ಕು೦ಟಿಕೊ೦ಡು ಕೊಸರಿಕೊ೦ಡು...ಬಿಡಿ.. ಆದರೆ ಪ್ರೇಮ ಮಾತ್ರ ಅವ್ಯಾಹತವಾಗಿ ನಡೆದಿದೆ.
ಹದಿನೆ೦ಟು ಪ್ರೀತಿ ಪ್ರೇಮದ ವಯಸು ಎಂದು ಸಿನಿಮಾದಲ್ಲಿ ಹೇಳುತ್ತಾರೆ. ಆದರೆ ಅದೇ ಸಿನಿಮಾದಲ್ಲಿ ಒಬ್ಬ ಹೀರೋ ಹದಿನಾರು ಜನಕ್ಕೆ ಒದ್ದು ಗೆದ್ದುಬಿಡುತ್ತಾನೆ. ಅದು ಸತ್ಯಕ್ಕೆ ಹತ್ತಿರವಲ್ಲವಾದರೆ ಇದೂ ಅಲ್ಲ ಅಲ್ಲವೇ?ಪ್ರೀತಿ ಪ್ರೇಮ ತಪ್ಪು ಎ೦ದು ನಾನು ಹೇಳುತ್ತಿಲ್ಲ. ಆದರೆ ವಿದ್ಯಾರ್ಥಿ ಜೀವನದಲ್ಲಿ ತಪ್ಪು ಎನ್ನುತ್ತಿದ್ದೇನೆ. ಅದು ನಮ್ಮ ಜೀವನವನ್ನು ರೂಪಿಸುವ ಅತ್ಯ೦ತ ಗ೦ಭೀರ ಮತ್ತು ಪ್ರಮುಖ ಘಟ್ಟ. ಅಲ್ಲಿ ಕೇವಲ ನಮ್ಮ ಗುರಿಯ ಕಡೆ ಗಮನವಿರಬೇಕೇ ಹೊರತು ಯಾವುದೇ ಕ್ಷಣಿಕ ಆಕರ್ಷಣೆಗಳಿಗಲ್ಲ. ಆಕೆಯ ಮೇಲೋ, ಆತನ ಮೇಲೋ ಒಲವೊ೦ದಿದ್ದರೆ ಸಾಲದಲ್ಲ..ಹಣವೂ ಬೇಕು. ಸಿನಿಮಾದಲ್ಲಿ ಮಾತ್ರ ಕೂಲಿ ಕೆಲಸ ಮಾಡಿ ಬದುಕಬಹುದು. ನಿಜ ಜೀವನದಲ್ಲಿ ಅಲ್ಲ. ನಮ್ಮ ಪ್ರೀತಿ ಸ್ನೇಹದ ರೂಪದಲ್ಲಿ ಅ೦ತರ್ಗಾಮಿಯಾಗಿ ಹರಿಯುತ್ತಿರಲಿ, ಪರಸ್ಪರರ ಏಳಿಗೆಗೆ ಪೂರಕವಾಗಿರಲಿ..ನಮ್ಮ ಅರ್ಹತೆಗೆ ತಕ್ಕ ಓದು ಓದಿ, ನಮ್ಮ ಬುದ್ಧಿಮತ್ತೆಗೆ ತಕ್ಕ ಕೆಲಸ ಪಡೆದು, ನಮ್ಮ ಅಸ್ತಿತ್ವ ರೂಪುಗೊಳಿಸಿಕೊಳ್ಳೋಣ. "ಏನು ಮಾಡುತ್ತಾಳೆ/ನೆ ನಿಮ್ಮ ಮಗಳು/ಮಗ?" ಎ೦ದು ಯಾರಾದರೂ ಕೇಳಿದರೆ ನಸುನಗೆಯಿ೦ದ ಹೆಮ್ಮೆಯನ್ನು ತೋರ್ಪಡಿಸಿಕೊಳ್ಳದಿರಲು ಪ್ರಯತ್ನಿಸುತ್ತಾ ಉತ್ತರ ಹೇಳುವ ಅವಕಾಶವನ್ನು ನಮ್ಮ ಅಪ್ಪ ಅಮ್ಮ೦ದಿರಿಗೆ ಕೊಡೋಣ. ಆಮೇಲೆ ನಾವು ಬಯಸಿದ ಬಾಳ ಸ೦ಗಾತಿಯನ್ನು ತೋರಿಸೋಣ ಅವರಿಗೆ..ಬೇಡ ಎನ್ನುವ ಮನಸ್ಸು ಯಾವ ತ೦ದೆ ತಾಯಿಯರಿಗಿರುತ್ತದೋ ನೋಡೇ ಬಿಡೋಣ..
ನನ್ನ ಆ ಮುಗ್ಧ ಗೆಳತಿ, ನೀನೆಲ್ಲಿದ್ದೀಯೋ ಗೊತ್ತಿಲ್ಲ. ಆದರೆ ಬದುಕು ನಿನಗೆ ಇನ್ನೊಂದು ಅವಕಾಶ ಕೊಟ್ಟಿದೆ ಎಂದು ನಾನು ಧೃಡವಾಗಿ ನಂಬಿದ್ದೇನೆ...