ಗುರುಕಾರುಣ್ಯ
ಸಕಲ ಪ್ರಪಂಚವನ್ನು ಸೃಷ್ಟಿಸಿದ ದಯಾಮಯನಾದ ದೇವನನ್ನು ಕಾಣಬೇಕೆಂಬ ಹೆಬ್ಬಯಕೆಯಿಂದ ಸಾಧಕರು ಉತ್ಕಟವಾದ ಅಪೇಕ್ಷೆ ಹೊತ್ತು ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಆದರೆ, ಕಣ್ಣಿಗೆ ಕಾಣದ ನಿರಾಕಾರ, ನಿರ್ಗುಣ,ನಿರಂಜನನಾದ ದೇವನನ್ನು ಕಾಣುವ ಬಗೆಯಾದರೂ ಹೇಗೆ? ಸಾಧಕರು ಪ್ರಾರಂಭದಲ್ಲಿ ಕಾಣದ ದೇವನನ್ನು ಕಂಡೇ ತೀರಬೆಕೆ೦ದು ಹಠ ಹಿಡಿದವರಂತೆ, ಹುಡುಕಿ ಕಾಣಲೇಬೇಕೆಂದು ಪಡಬಾರದ ಕಷ್ಟ ಪಡುತ್ತಾರೆ. ಹತ್ತಾರು ಯೋಗಗಳನ್ನೂ ಆಚರಿಸುತ್ತಾರೆ; ಹಲವಾರು ಗ್ರಂಥಗಳನ್ನು ಓದುತ್ತಾರೆ; ಕಾಡು ಮೇಡು ಸುತ್ತಿ ಕಠಿಣವಾದ ವ್ರತಗಳನ್ನು ಆಚರಿಸುತ್ತಾ, ಹಲವು ಹದಿನೆಂಟು ಸಂತ ಸಾಧಕರನ್ನೂ ಬೇಟಿಮಾಡುತ್ತಾರೆ. ಇಷ್ಟಾದರೂ ಸಾಧಕರಿಗೆ ಭಗವಂತನು ಕಾಣದೇ ಹೋದಾಗ ಕೆಲವರು ನಿರಾಶರಾಗಿ ಬಿಡುತ್ತಾರೆ, ನಂಬುಗೆ ಕಳೆದುಕೊಂಡು ಬಿಡುತ್ತಾರೆ, ಸಾಧನಾ ಪ್ರಪಂಚದಿಂದ ಲೌಕಿಕ ಬದುಕಿನತ್ತ ಮುಖ ಮಾಡಿಬಿಡುತ್ತಾರೆ. ಇಂತಹ ಸಾಧಕರನ್ನು ಕಂಡೇ ಅಲ್ಲಮ ಪ್ರಭುಗಳು ಹೇಳುತಾರೆ.........
ಕಂಡುದ ಹಿಡಿಯಲೊಲ್ಲದೆ, ಕಾಣುದದನರಸಿ ಹಿಡಿದಿಹೆನೆ೦ದರೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದನೆ ಕಂಡು, ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ !
ಸಚ್ಚಿದಾನಂದ ಸ್ವರೂಪನಾದ ಭಗವಂತನನ್ನು ಕಾಣುವುದು ಕೇವಲ ಈ ಚರ್ಮದ ಚಕ್ಷುವಿನಿಂದ ಸಾಧ್ಯವಿಲ್ಲ. ಅಂತರಂಗದ ಚಕ್ಷುವಿನಿ೦ದ ಮಾತ್ರ ಸಾಧ್ಯ ಎನ್ನುವ ಪರಮ ಸತ್ಯದ ಅರಿವಾಗಬೇಕು. ಆಗ ಅಂತಹ ಅಂತರ ಚಕ್ಷುವನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಅರಿಯಲು ಸಮರ್ಥ ಗುರುವಿನ ಆಶ್ರಯ ಬೇಕಾಗುತ್ತದೆ. ಇಂತಹ ಅರಿವಿನ ಚಕ್ಷುವನ್ನು ಪಡೆಯಲು ಸಮರ್ಥ ಗುರುವಿನ ಪಾದವನ್ನು ಗಟ್ಟಿಯಾಗಿ ಹಿಡಿಯಬೇಕು; ಗುರುಪಾದ ಸೇವೆ ಮಾಡುತ್ತಾ, ಗುರುವಿನಲ್ಲಿ ಸಾಧಕನು ತನ್ನ ತೀವ್ರ ವ್ಯಾಕುಲತೆಯನ್ನು ಸಮರ್ಪಣೆ ಮಾಡತ್ತಾ ನಿರಂತರ ಪ್ರಾರ್ಥನೆ ಸಲ್ಲಿಸಬೇಕು .
ಅಜ್ಞಾನ ತಿಮಿರಾಂಧಸ್ಯ ಜ್ನಾನಾಂಜನ ಶಲಾಕಯ / ಚಕ್ಷುರ್ ಉನ್ಮೀಲಿತಂ ಏನ ತಸ್ಮೈ ಶ್ರೀ ಗುರವೇ ನಮಃ //
ಗುರುವು ಅರಿವಿನ ಕಣ್ಣನ್ನು ದಯಪಾಲಿಸಿದ ನಂತರವಷ್ಟೇ ನಮಗೆ ನಿಚ್ಚಳವಾಗಿ ಭಗವಂತನ ದರ್ಶನವಾಗುವುದು . ಒಂದು ಸಾವಿರ ವರ್ಷಗಳಿಂದಲೂ ಕತ್ತಲೆಯಲ್ಲೇ ಇದ್ದರೂ ಸಹಾ , ಒಂದು ಚಿಕ್ಕ ದೀಪದ ಕಿರಣ ಸಾಕು, ನಮ್ಮನ್ನು ತಕ್ಷಣವೆ ಕತ್ತಲಿಂದ ದೂರಮಾಡಿ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಹೀಗೆಯೇ ನಾವು ಜನ್ಮಜನ್ಮಾಂತರದಿಂದ ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದರೂ ಸಹಾ , ಜ್ಞಾನ ಭಾಸ್ಕರನಾದ ಗುರುವಿನ ಆಗಮನವಾದ ತಕ್ಷಣ ಅಜ್ಞಾನದ ಅಂಧಕಾರವೆಲ್ಲಾ ಕಳೆದು ಜ್ಞಾನದ ಸಾಗರದಲ್ಲಿ ಮುಳುಗಿ ಬಿಡುತ್ತೇವೆ.
ಇದನ್ನೇ ಪುರಂದರದಾಸರು "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಗುರುವಿನ ಮಹತ್ವವನ್ನು ವಿಶೇಷವಾಗಿ ಹೇಳುತ್ತಾರೆ. ಸರ್ವಜ್ಞ ಮೂರ್ತಿಯು ಶ್ರೀ ಗುರುವಿನ ಉಪದೇಶ ನಂಬಿ ಪಾಲಿಸಬೇಕು; ದೃಢವಾದ ವಿಶ್ವಾಸವಿಟ್ಟು ಗುರು ತೋರಿದ ಮಾಗ೯ದಲ್ಲಿ ನಡೆದು ಮುಕ್ತಿ ಸಂಪಾದಿಸಬೇಕು ಎಂದು ಹೇಳುತ್ತಾನೆ.
ಎತ್ತಾಗೆ ತೊತ್ತಾಗಿ ಹಿತ್ತಲದ ಗಿಡವಾಗಿ
ಮತ್ತೆ ಪಾದದಾ ಕೆರವಾಗಿ ಗುರುವಿನ
ಹತ್ತಲಿರು ಎಂದ ಸರ್ವಜ್ಞ.
ಇಂತಹ ಗುರುವಿನ ಸಾನಿಧ್ಯ ಪ್ರಾಪ್ತವಾದಲ್ಲಿ ನಾವು ಪರಮ ಭಾಗ್ಯಶಾಲಿಗಳೇ ಸರಿ.