ಗುರುವಂದನೆ

ಗುರುವಂದನೆ

ಕವನ

ಆಷಾಢ ಮಾಸದ ಪೂರ್ಣಿಮೆಯಂದು

ಜನಮಾನಸಕೆ ಪವಿತ್ರ ದಿನವಿಂದು|

ವಿದ್ಯೆ ಬುದ್ಧಿಯ ತಿದ್ದಿ ತೀಡಿದ

ಗುರುವರ್ಯರಿಗೆ ನಮಸ್ಕರಿಸುವೆವಿದು||

 

ಗುರುಪೀಠವು ಪರಮ ಪವಿತ್ರವು

ಅನುದಿನವು ನೆನೆದು ಶಿರಬಾಗುವೆವು

ಅಜ್ಞಾನವೆಂಬ ಕತ್ತಲೆಯ ಕಳೆದು

ಸುಜ್ಞಾನದ  ಬೆಳಕ ಪಸರಿಸಿದ ದೇವರು||

 

ಬುವಿಯ ಬೆಳಕ ಕಾಣಿಸಿದ ತಾಯಿ

ಪೋಷಿಸಿದ ದಾತ ತಂದೆ ಮಹನೀಯ

ಒಂದಕ್ಷರ ಕಲಿಸಿದವರು ಗುರುವಿನಂತೆ

ಬಾಗಿ ನಡೆ ಮನುಜ ಸಜ್ಜನಿಯಂತೆ||

 

ಮಹಾಭಾರತ ಕರ್ತೃ ವೇದವ್ಯಾಸರು

ವೈದಿಕ ಅಧ್ಯಯನಕೆ ನಾಂದಿ ಹಾಡಿದವರಂತೆ

ಪುಣ್ಯದಿನವಿಂದು ವ್ಯಾಸಪೂರ್ಣಿಮೆಯಂತೆ

ಗುರುಗೀತೆಗಾಯನ ಈ ದಿನವಂತೆ||

 

ಯೋಗ ಸಂಪ್ರದಾಯದಲಿ ಸಪ್ತ ಋಷಿವರೇಣ್ಯರಿಗೆ

ಯೋಗವಿದ್ಯೆಯ ಧಾರೆ ಎರೆದ ಪರಶಿವನಂತೆ

ಜಗದಲಿ ವಿಜೃಂಭಿಸಿದ ಪರಮೇಶ್ವರ

ಜಗದಗಲ ಪಸರಿಸಿದ ಮಹಾಗುರುವಂತೆ||

 

ಆಧ್ಯಾತ್ಮಿಕ ಪ್ರವಚನ  ಚಟುವಟಿಕೆ ಹೂರಣ

ಸಾಂಸ್ಕೃತಿಕ ವೈಭವದ ರಮ್ಯ ತಾಣ

ಗುರು -ಶಿಷ್ಯ ಪರಂಪರೆಗೆ ದಾರಿ ತೋರಿಸಿ

ಕಾಣಿಕೆ ಸಮರ್ಪಿಸುವ ಪರ್ವಕಾಲ

 

ಬುದ್ಧನಿಗೆ ಜ್ಞಾನೋದಯವಾದ ಮಹತ್ತರ ದಿನ‍ವು

ಅನುಯಾಯಿಗಳು ಶಿಷ್ಯತ್ವ ಸ್ವೀಕರಿಸಿ ಮೆರೆದೆರು

ಬೌದ್ಧಬಿಕ್ಷುಗಳ ಬೋಧನೆ  ಮಾರ್ಗದರ್ಶನ

ಜ್ಞಾನದಾಹದ ಕಲಿಕೆ ನಿರಂತರ||

 

ನಮಿಸೋಣ ಬಾಗೋಣ ಮೆರೆಸೋಣ

ಮರೆಯದೆ  ಕೃತಜ್ಞತೆಯ ಸಲ್ಲಿಸೋಣ

ಗುರು ಪರಂಪರೆಗೆ ಚ್ಯುತಿ ತಾರದಿರೋಣ

ಗುರುವಿನ ಗುಲಾಮತನದಲಿ ಮುಕ್ತಿ ಅಡಗಿದೆಯಣ್ಣ||

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್