ಗುರುವೇ.... ಸಿದ್ದೇಸ
ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡಿ ಅದಕ್ಕೆ. ಹೀಗೆ ಒಮ್ಮೆ ಸಿದ್ದೇಸನ ಜಾತ್ರೆ, ಮನೆಯವರೆಲ್ಲ ಜಾತ್ರೆಗೆ ವೈನಾಗೆ ಹೋಗಿದ್ವಿ. ಬೆಳಗ್ಗೆ ಬೇಗನೇ ಎದ್ದು, ಊಟ ಕಟ್ಕೊಂಡು ಗಾಡಿಯಲ್ಲಿ ಹೋಗಿದ್ವಿ. ಊರ ಹೊರಗೆ ಗಾಡಿ ನಿಲ್ಸಿ, ಜಾತ್ರೆ ಒಳಗೆ ಹೊಂಟ್ವಿ. ಹಳೇ ದೋಸ್ತಿಗಳೆಲ್ಲಾ ಏನ್ಲಾ ಎಂಗಿದ್ದೀಯಲ್ಲಾ, ಸಂದಾಗಿದೀನ ಕಣ್ರಲ್ಲಾ ಅಂತ ಅಂಗೇ ಮುಂದೆ ಓಯ್ತಾ ಇದ್ವಿ. ಮಗ, ಅಪ್ಪಾ, ಅಪ್ಪಾ ಅಲ್ನೋಡು ಬಲೂನ್, ಸುಮ್ ಬಾರಲಾ, ಮೊದಲು ಸಿದ್ದೇಸನ್ನ ನೋಡವಾ, ಆಮ್ಯಾಕೆ ಏನಿದ್ರು.
ನನ್ನ ಹೆಂಡತಿ ಪ್ರಮೋಸನ್ ಸಿಕ್ಕರೆ ಅದೇನೋ ಮಾಡ್ತೀನಿ ಅಂತಾ ಹೇಳ್ಕೊಂಡಿದ್ದರಲ್ಲಾ ಅಂದ್ಲು, ಅದು ಪ್ರಮೋಸನ್ ಸಿಕ್ಕ ಮ್ಯಾಕೆ ಅಂದೆ. ಏ ಮೂದೇವಿ ಮೊದಲೇ ಹರಕೆ ತೀರಿಸಿದರೆ ಖಂಡಿತಾ ಕೆಲಸ ಆಯ್ತದಂತೆ ಅಂದ್ಲು. ಹಾಗಾ ಹಣ್ಣು ಕಾಯಿ ಮಾಡಿಸ್ತೀನಿ ಅಂದಿದ್ದೆ. ಏ ನನ್ನ ಕಿತಾನೇ ಸುಳ್ಳು ಹೇಳ್ತೀಯಾ, ಬೆಂಕಿ ತುಳೀತೀನಿ ಅಂತಾ ಹರಕೆ ಹೊತ್ತಿದ್ಯಲ್ಲಾ ಅಂದ್ಲು. ಬಿರ್ರನೆ ಹರಕೆ ಮುಗಿಸು ಒಳ್ಳೆದು ಆಯ್ತದೆ. ಏ.... ನಾನು ಯಾವಾಗೇ ಹೇಳಿದ್ದೆ,
ಹಣ್ಣು ಕಾಯಿ ಮಾಡಿಸ್ತೀನಿ ಅಂತಾ ಮಾತ್ರ ಹೇಳಿದ್ದೆ. ಹೇಯ್ ನಂಗೆ ಸುಳ್ಳು ಏಳ್ತೀಯಾ. ಅವತ್ತು ನೀವು ಸಿದ್ದೇಸನ ಪೋಟೋ ಮುಂದೆ ಹೇಳ್ತಿದ್ದಾಗ ಕೇಳಿಸಿಕೊಂಡೆ ಅಂದ್ಲು. ಇಲ್ಲಾ ಅಂದ್ರು ಒಪ್ಪಲಿಲ್ಲ. ಸಂಜೆ ಗುಡಿ ಮುಂದೆ ಬೆಂಕಿ ಕೊಂಡ ಆಕ್ತಾರೆ ತಯಾರಾಗಿ ಅಂದ್ಲು. ತಯಾರಾಗಕೇ ಇದೇನು ಸೂಟಿಂಗಾ, ನಾನು ಏನೇ ಹೇಳಿದ್ರು ಒಪ್ಪಲಿಲ್ಲ.
ನೀನು ಬೆಂಕಿ ತುಳೀಲಿಲ್ಲ ಅಂದ್ರೆ ನನ್ನ ಮಕ್ಕಳು ಮೇಲೆ ಆಣೆ ಅಂದ್ಲು. ನಮ್ದೂ ಅನ್ನೆ. ದೇವರು ದರ್ಸನ ಮಾಡಿದ್ವಿ, ಹಣ್ಣು, ಕಾಯಿ ಆಯ್ತು, ಮಧ್ಯಾಹ್ನ ಊಟನೂ ಆಯ್ತು. ಮರದ ಕೆಳಗೆ ಅಂಗೇ ಮಕ್ಕೊಂಡೆ, ಆದ್ರೆ ಮನಸಾಗೆಲ್ಲಾ ಬರೇ ಬೆಂಕಿ ಉಂಡೆಗಳೇ ಕಾಣ್ತಾ ಇದ್ವು. ಏನೋ ಒಂಥರಾ ಭಯ. ಸಂಜೆ ಬಂದೇ ಬಿಡ್ತು. ಗುಂಡಿಯೊಳಗೆ ದೊಡ್ಡ ಮರದ ಬಡ್ಡೆ ಹತ್ತು ಉರೀತಿತ್ತು. ಇನ್ನು ಬೆಂಕಿಯ ಜಳ ತಾಕೇ ಇಲ್ಲ ಆಗಲೇ ಮೈಯೆಲ್ಲಾ ಬೆವತು ಹೋಗಿತ್ತು. ನನ್ನ ಹೆಂಡ್ತಿ ಬೇಗ ಬೇಗ ಬಟ್ಟೆ ತೆಗದು ಟವಲ್ ಉಟ್ಟುಕೊಳ್ಳಿರಿ. ಅಂದವಳೆ ಸರ್ಟ್ ತೆಗೆದೇ ಬಿಟ್ಟಳು. ಗುರವೇ ಸಿದ್ದೇಸ ಅಂತಾ ಕೆಲವರು ಬೆಂಕಿ ಹಾಯ್ತಾ ಇರೋದನ್ನ ನೋಡಿ ಪ್ರಮೋಸನ್ ಬೇಡ ಏನು ಬೇಡ, ತೆಪ್ಪಗೆ ಮನೆ ಸೇರ್ಕೊಂಡ್ರೆ ಸಾಕಪ್ಪಾ ಅನ್ನಿಸ್ತು.
ಇನ್ನೇನು ತುಳಿ ಬೇಕು ಅಂತಾ ಯೋಚಿಸುತ್ತಿರುವಾಗಲೇ ಯಾವನೋ ಬಡ್ಡೆ ಐದ ಹಿಂದಿಂದ ತಳ್ಳೇ ಬಿಟ್ಟ. ತಳ್ಳಿದ ರಭಸಕ್ಕೆ ಮೊದಲು ಬಡ್ಡೇ ಮೇಲೆ ಬಿದ್ದು, ಹಾಗೇ ಎದ್ದು ಆ ದಡ ಸೇರಿದೆ. ಮೈಗೆ ನೀರು ಹುಯ್ದಾಗ ಏನೋ ಸಮಾಧಾನ. ಮನೆಗೆ ಬಂದ್ಮೇಲೆ ಗೊತ್ತಾಗಿದ್ದು, ನೀರು ಉಯ್ದಿದ್ದು ಎಫೆಕ್ಟ್. ಮೈಯೆಲ್ಲಾ ಬೊಬ್ಬೆ. ಬೊಬ್ಬೆ ನೋಡಿ ಗೊತ್ತಿಲ್ಲದೇನೇ ಗುರುವೇ ಸಿದ್ದೇಸ ಅಂದೆ.
ಮೈಗೆಲ್ಲಾ ಮುಲಾಮು ಬಳೆದುಕೊಂಡು ಹಾಸಿಗೆ ಮೇಲೆ ಹಾಗೇ ಮಕಾಡ ಬಿದ್ದೆ. ಸ್ವಲ್ಪ ಸಮಯದ ನಂತರ ಹೇಗಿದೀರಾ, ತುಂಬಾ ನೋವಾಗುತ್ತಿದೆಯಾ ಅಂತಾ ನನ್ನ ಹೆಂಡ್ತಿ ಅಂದಾಗ, ಅಬ್ಬಾ ಅಂತೂ ನನ್ನ ಬಗ್ಗೆ ಕಾಳಜಿ ಇಟ್ಟಾವಳಲ್ಲಾ ಅಂದುಕೊಂಡು ಕೆಲ ನಿಮಿಷಕ್ಕೆ ನೀವು ಬೆಂಕಿ ಕೊಂಡದಲ್ಲಿ ಬಿದ್ದರಲ್ಲಾ ಅಂದ್ಲು. ಹೌದು ಅಂದೆ. ಹಾಗಾದ್ರೆ ನಿಮ್ಮೇಲೆ ಸಿದ್ದೇಸ ಮುನಿಸಿಕೊಂಡಿದ್ದಾನೆ ಅಂತಾ ಆಯ್ತು. ಬರೋ ಹುಣ್ಣಿಮೆಗೆ ಮತ್ತೆ ಕೊಂಡ ಹಾಯ್ತಾರಂತೆ
ಇನ್ನೊಂದು ಬಾರಿ ನನಗೋಸ್ಕರ ಹಾದ್ ಬಿಡ್ರಿ ಅಂದ್ಲು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನಾನು, ಪೂರ್ಣ ಪ್ರಜ್ಞೆ ಕಳೆದುಕೊಂಡಿದ್ದೆ. ಬೆಳಗ್ಗೆ ಎದ್ದರೆ ಮತ್ತೆ ಅದೇ ಪ್ರಮೋಸನ್ ವಿಷಯ ತಲೆಯೊಳಗೆ. ಗುರುವೇ ಸಿದ್ದೇಸ ಈ ಬಾರಿ ನನಗೆ ಏನಾದ್ರು ಪ್ರಮೋಸನ್ ಸಿಕ್ಕರೆ (ಆ ಕಡೆ ಈ ಕಡೆ ನೋಡಿ, ಯಾರೂ ಇಲ್ಲಾ ಎಂದು ಖಚಿತವಾದ ಮೇಲೆ) 101 ಮಂಡಿ ನಮಸ್ಕಾರ ಮಾಡ್ತೇನೆ ಅಂದೆ. ಅದೆಲ್ಲಿದ್ದಳೋ ಏನ್ರೀ ನನ್ನ ಹೆಂಡ್ತಿ. ಈ ಹರಕೆನೂ ಇದೇ ಹುಣ್ಣಿಮೆಯಲ್ಲಿ ತೀರಸ್ಬಿಡವಾ ಅಂದ್ಲು. ಅಯ್ಯಯ್ಯೋ ಗುರುವೇ ಸಿದ್ದೇಸ.
ಎಲ್ಲರಿಗೂ ನಮಸ್ಕಾರ, ಸಂಪದಕ್ಕೆ ಹೊಸ ಸೇರ್ಪಡೆ. ತಪ್ಪಿದ್ದರೆ ತಿದ್ದಿ.