ಗುರು ಪೂರ್ಣಿಮೆ ಆಚರಣೆಯ ಪುರಾಣ ಕಥೆ
ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸ ಜನ್ಮದಿನ.
ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತೀ ದೇವಿ. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಮೀನು ಕೊಳೆತಾಗ ಬರುವ ಕೆಟ್ಟ ವಾಸನೆ ಬರುತ್ತಿತ್ತು. ಅವರು ಆ ದ್ವೀಪಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಆ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು ಮತ್ಸ್ಯಗಂಧೀ ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು ಯೋಜನಗಂಧೀ ಎಂದೂ ಕರೆಯುತ್ತಾರೆ. ಆಕೆಯು ಮೂಲತಃ ಬೆಸ್ತರವಳಲ್ಲ. ಅದ್ರಿಕೆ ಎಂಬ ಒಬ್ಬಳು ಅಪ್ಸರೆಯು ಬ್ರಹ್ಮನ ಶಾಪದಿಂದಾಗಿ ಮತ್ಸ್ಯ ಕನ್ಯೆಯಾಗಿದ್ದಳು. ಆ ಮತ್ಸ್ಯಕನ್ಯೆ ಅದ್ರಿಕೆಗೆ ಜನಿಸಿದವಳು ಈ ಸತ್ಯವತಿ. ಬೆಸ್ತರ ರಾಜ ಕಂದರನು ಆಕೆಯನ್ನು ಸಾಕಿಕೊಂಡಿದ್ದುದರಿಂದ ಆಕೆ ಬೆಸ್ತರ ಮಗಳಾದಳು. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು.
ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ನನ್ನ ಶಾಪ ವಿಮೋಚನೆ ಮಾಡಬೇಕೆಂದು ಆಕೆ ಪರಾಶರರನ್ನು ಪ್ರಾರ್ಥಿಸಿದಾಗ , ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಳಾದಳು. ನಂತರ ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ , ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾದರು. ಇವರಿಬ್ಬರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಅಂದರೆ ವ್ಯಾಸರು. ಕೃಷ್ಣ ಎಂದರೆ ಕಪ್ಪು ಎಂತಲೂ ದ್ವೈಪಾಯನ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ.
ಮಗುವಾಗಿ ಹುಟ್ಟಿದ ಕ್ಷಣವೇ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು , ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾದರು. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇರುವ ಏಳು ಚಿರಂಜೀವಿಗಳಲ್ಲಿ ಇವರೂ ಒಬ್ಬರು. ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ , ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ , ಯಜುರ್ವೇದ , ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ , ವೈಶಂಪಾಯನ , ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.
ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ ವೇದವ್ಯಾಸ ಎಂಬ ಗೌರವ ನಾಮ ದೊರೆಯಿತು. ಭಗವಾನ್ ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ , 18 ಪುರಾಣಗಳನ್ನು , ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳಾಗಿದ್ದಾರೆ. ಹೀಗಾಗಿ ಅವರ ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.
ಹಿಂದೂಗಳಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಗುರಗಳದ್ದಾಗಿದೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಗೌರವ ತೋರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿವಸವನ್ನು ಆಚರಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸರ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದೇ ದಿನದಂದು ಗುರುಗಳ ಪಾದಪೂಜೆಗಳನ್ನು ಮಾಡುತ್ತಾರೆ. ಯತಿಗಳು ಗುರುಪೂರ್ಣಿಮೆಯಂದು ಚಾತುರ್ಮಾಸ್ಯವನ್ನು ಆರಂಭಿಸುತ್ತಾರೆ. ವೇದವ್ಯಾಸರು ಇದೇ ದಿನದಂದು ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರಂತೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ. ಏಕಲವ್ಯನು ಇದೇ ದಿನದಂದು ತನ್ನ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬರಳನ್ನೇ ಕತ್ತರಿಸಿಕೊಟ್ಟನಂತೆ.
ಬೌದ್ಧರಿಗೂ ಗುರು ಪೂರ್ಣಿಮೆಯು ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಬೌದ್ಧರು ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಇದೇ ಗುರುಪೌರ್ಣಿಮೆಯ ವಿಶೇಷತೆ.
(ವಾಟ್ಸಾಪ್ ಮೂಲಕ ಹಂಚಿ ಬಂದ ಅಜ್ಞಾತ ಲೇಖಕರ ಬರಹದ ಸಂಗ್ರಹ)
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು