ಗುರು ಶಿಷ್ಯರ ಯುಗ
ಮತ್ತೊಂದು ಗುರುಗಳಿಗೆ ಮೀಸಲಾದ ದಿನ ಬಂದಿದೆಯೆಂದು ನೆನಪಾಗಿತ್ತು ಮಗನಿಗೂ ಸಿಂಗಪುರದ ಸ್ಕೂಲು ರಜೆಯೆಂದರಿವಾದಾಗ. ಈ ಬಾರಿ ಇಲ್ಲೂ ಸೆಪ್ಟಂಬರ ಐದರಂದೆ 'ಟೀಚರ್ಸ್ ಡೆ' ಇರುವ ಕಾರಣ (ಪ್ರತಿ ವರ್ಷದ ಸೆಪ್ಟಂಬರ ತಿಂಗಳಿನ ಮೊದಲ ಶುಕ್ರವಾರ) ಆ ದಿನ ಶಾಲೆ ರಜೆಯಿರುವುದು ಮಾತ್ರವಲ್ಲ, ಆ ರಜೆಯ ಹಿಂದಿನ ದಿನ ಮಕ್ಕಳ ಕಲಾ ಪ್ರದರ್ಶನವೂ ಜರುಗುತ್ತದೆ ತಮ್ಮ ಗುರುಗಳ ಸಲುವಾಗಿ (ಮುಂದೆ ಅಕ್ಟೋಬರಿನಲ್ಲಿ ಬರುವ ಸಿಂಗಾಪುರದ ಮಕ್ಕಳ ದಿನಾಚರಣೆಯಲ್ಲೂ ಸಹ ಶಾಲೆಗಳ ಉಪಾಧ್ಯಾಯರುಗಳೆಲ್ಲ ಸೇರಿ ಅದೆ ಲಹರಿಯ ನಾಟಕ, ನೃತ್ಯ, ಪ್ರಹಸನ, ಗಾಯನ, ಸಂಗೀತಾದಿ ಸಾಂಸ್ಖೃತಿಕ ಕಲಾ ಪ್ರದರ್ಶನ ನಡೆಸಿ ಮಕ್ಕಳನ್ನು ರಂಜಿಸುತ್ತಾರೆ). ಕಾಲನ ಮಾಂತ್ರಿಕ ಜಾಲಕ್ಕೆ ಸಿಲುಕಿ ತನ್ನ ರೂಪು ರೇಷೆಗಳಲ್ಲಿ ಏನೆಲ್ಲ ಬದಲಾವಣೆಯನ್ನು ಕಂಡಿದ್ದರು, ಗುರು ಶಿಷ್ಯ ಸಂಬಂಧದ ಸೂಕ್ಷ್ಮ ತಂತು ಮಾತ್ರ ತನ್ನ ನವಿರನ್ನು ಯಾವುದೊ ಮೂಲೆಯಲ್ಲಿ ಅಡಗಿಸಿಟ್ಟುಕೊಂಡು ಕನಿಷ್ಠ ಈ ದಿನಾಚರಣೆಗಳ ನೆಪದಲ್ಲಾದರೂ ಪ್ರಕಟ ಭಾವವಾಗುವ ಹುನ್ನಾರ ವ್ಯಕ್ತಪಡಿಸುವುದು ಆ ಭಾಂಧವ್ಯದ ತುಡಿತ ಇನ್ನು ಎಲ್ಲೊ ಹೇಗೊ ಜೀವಂತವಾಗಿರುವುದರ ಸಂಕೇತವೆನ್ನಬಹುದು.
ಆದರೆ ಆ ಪಾರಂಪಾರಿಕ ಗುರು ಶಿಷ್ಯ ಸಂಬಂಧದ ಶ್ರದ್ಧೆ ಇನ್ನೂ ತನ್ನ ಅದೆ ಪುರಾತನ ವೈಭವ, ಘನತೆ, ಗೌರವಗಳನ್ನು ಕಾಪಾಡಿಕೊಂಡು ಬಂದಿದೆಯೆಂದು ಹೇಳುವುದು ಕಷ್ಟ. ಈಗೆಲ್ಲ ಅಂತರ್ಜಾಲವೆ ಗುರುವಾಗಿಬಿಡುವ ಜಾದೂ ಸಮಯ. ನಿಜವಾದ ಗುರುಗಳನ್ನೆ ಗಣಿಸದೆ, ಲೆಕ್ಕಿಸದೆ, ಗೌರವಿಸದೆ ಉಢಾಫೆಯಿಂದ ಕಾಣುವ ಕಾಲ. ಮತ್ತೊಂದೆಡೆ ಸಂಪ್ರದಾಯದ ಪತಾಕೆ ಹಾರಿಸುತ್ತ ಮಾರ್ಗದರ್ಶಕವಾಗಬಲ್ಲ ಅದೆ ಗುರುಗಳ ಜಾಗದಲ್ಲಿ ಹೊಟ್ಟೆ ಪಾಡಿಗೆ ವೃತ್ತಿ ಹಿಡಿದು ಕಾಲ ದೂಡುತ್ತ, ಬೇಕಾಬಿಟ್ಟಿ ಕೆಲಸ ಮಾಡಿಕೊಂಡು ಕಾಲಹರಣ ಮಾಡುವ, ಅಥವಾ ಶಿಕ್ಷಣ ಭೋಧನೆಗೆ ಸಿಕ್ಕ ಅವಕಾಶವನ್ನು ಹಣ ಗಳಿಕೆಯ ಮಾರ್ಗಕ್ಕೊ, ಮತ್ತಾವುದೊ ತೃಷೆ, ಕಾಮನೆಗಳ ಹಿಂಗಿಸುವಿಕೆಗೊ ಬಳಸುವ ಶಿಕ್ಷಕ ಬಳಗವೂ ಹೆಚ್ಚುತ್ತಿರುವುದು ಇತ್ತೀಚಿನ ದುರಂತ. ಇದೆಲ್ಲಾ ಬರೆಯುವಾಗಲೆ ಹಿನ್ನಲೆಯಲ್ಲಿ ನೆನಪಾಗುತ್ತಿದೆ 'ಸ್ಕೂಲ್ ಮಾಸ್ಟರ' ಚಿತ್ರ ಮತ್ತು ಅದರ ಮಧುರವಾದ, ಕಿವಿಗಿಂಪಾದ, ಹಿತವಾದ ಹಾಡುಗಳು - ಸಿಹಿ ಕಹಿಯೆರಡರ ಸಮತೋಲಿತ ಮಿಶ್ರಣದಂತೆ.
ಗುರು ಶಿಷ್ಯರ ನಡುವಣ ಬಾಂಧವ್ಯ ಅನೂಹ್ಯ ಸ್ತರದ್ದು. ಇಬ್ಬರೂ ಪರಸ್ಪರರ ಶಕ್ತಿ, ದೌರ್ಬಲ್ಯಗಳನ್ನರಿತುಕೊಂಡು ಪರಸ್ಪರರಿಗೆ ಪೂರಕರಾಗಿ ಕಲಿಕೆಯ ವೇದಿಕೆ ಏರ್ಪಡಿಸಿಕೊಳ್ಳಲು ಅವರಿಬ್ಬರ ನಡುವೆ ಮೃದು ಮಧುರ ಬಾಂಧವ್ಯ , ನಂಟು ಏರ್ಪಡುವುದು ಬಲು ಮುಖ್ಯ. ಆದರೆ ಈಗಿನ ಶಿಕ್ಷಣ ಪದ್ದತಿಯಲ್ಲಿ ಪ್ರತಿ ವರ್ಷಕ್ಕೊಂದು ಅಧ್ಯಾಪಕರ ತಂಡವಿರುತ್ತದೆ. ಮುಂದಿನ ವರ್ಷ ಮತ್ತೊಂದು ಹೊಸ ತಂಡ - ಅಪ್ಪಿ ತಪ್ಪಿ ಯಾರಾದರೂ ಒಬ್ಬಿಬ್ಬರು ಶಿಕ್ಷಕರು ಆ ವರ್ಷವೊ ಮತ್ತಿನ್ನೊಂದು ವರ್ಷವೊ ಪುನರಾವರ್ತಿಸಬಹುದಾದರು ಅಲ್ಲೆಲ್ಲ ನಂಟಿನ ಅಂಟಿಗಿಂತ ಕರ್ತವ್ಯದ ಪಾಲೆ ಹೆಚ್ಚು ; ಗುರುಕುಲಗಳಲ್ಲಿರುತ್ತಿದ್ದ ಏಕೋಪಾಧ್ಯಾಯ ಉಸ್ತುವಾರಿತ್ವ ಇರುವುದಿಲ್ಲ. ಹೀಗಾಗಿ ಮಕ್ಕಳಿಗೆ ಪಾಠದ ಕಲಿಕೆ ಸಿಗುವುದೆ ಹೊರತು ಸರಿಯಾದ ಮಾರ್ಗದರ್ಶನ ಸಿಗುವುದಿಲ್ಲ. ಒಬ್ಬನೆ ಗುರು ಚಿಗುರಲ್ಲೆ ಶಕ್ತಿ ದೌರ್ಬಲ್ಯಗಳನ್ನು ಅರಿತು ನಂತರ ಆ ಶಿಷ್ಯನ ಸಾಮರ್ಥ್ಯದ ಆಧಾರದ ಮೇಲೆ ಸರಿಯಾದ ನಿಟ್ಟಿನೆಡೆ ದೂಡುವ ಕಾರ್ಯ ಆಗುವ ಬದಲು ಗುಂಪಿನಲ್ಲಿ ಗೋವಿಂದವಾಗುವುದೆ ಹೆಚ್ಚು.
ಶಿಕ್ಷಕರ ದಿನಾಚರಣೆಯ ಈ ಹೊತ್ತಿನಲ್ಲಿ ಆ ಶಿಕ್ಷಕ - ಗುರು ಬಳಗಕ್ಕೆ ನಮಿಸುತ್ತ, ಗುರು - ಶಿಷ್ಯರ ನಂಟಿನ ಕುರಿತಾದ ಈ ಕವನ ಲಹರಿಯನ್ನು ನಿಮ್ಮ ಅವಗಾಹನೆಗಿಡುತ್ತಿದ್ದೇನೆ - ತಮ್ಮೆಲ್ಲರಿಗೂ ಈ ವಿಶೇಷ ದಿನದ ಶುಭಾಶಯಗಳೊಡನೆ.
ಗುರು ಶಿಷ್ಯರ ಯುಗ
___________________
ಎಲ್ಲಿ ಹೋಯಿತೊ ಗುರುಶಿಷ್ಯರ ಯುಗ
ಕಾಣದಂತೆ ಮಾಯ ಜಗಮಗ
ಈಗೆಲ್ಲ ಬರಿ ಫೀಸಿನ ಕಾಸಿನ ಕಾಲ
ಪಾಸಿನಂಕೆ ದರ್ಜೆ ಬಂದರೆ ಸಾಕಲ್ಲ ||
ಕಲಿಸಬೇಕು ಗುರು ಗಣಿತ ಜ್ಞಾನ ನಿಜ
ಬದುಕುವ ಜ್ಞಾನ ಅದಕಿಂತಲು ಖನಿಜ
ಅಂಕದ ಹಿಂದೆ ಓಡುವಾಟವೆ ಬಾಳುವೆ
ಎಂದು ಕಲಿತರೆ ಬಾಳಲಿ ಸಿಗದು - ಸಾಸಿವೆ ||
ರೀತಿ ನೀತಿ ನೇಮ ನಿಯಮ ಜೀವನ ಮೌಲ್ಯ
ನೈತಿಕತೆ ಜಾಣ್ಮೆ ತನ್ಮಯತೆ ವಿಧೇಯತೆ ಬಲ
ಕಟ್ಟಿಕೊಡುತಿದ್ದ ಕಲಿಕೆ ಎಲ್ಲಿ ಹೋಯ್ತೊ ಗುರು?
ಆರರ ವಯಸಿಗೆ ಅಂತರ್ಜಾಲದಲೆಲ್ಲಾ ಶುರು ! ||
ಕಲಿಯುವುದಲ್ಲ ಕಷ್ಟ, ಕಲಿಯುವುದೇನು ಇಷ್ಟ ?
ಎಂದರಿವತನಕ ಗುರು ಮಾರ್ಗದರ್ಶನ ಗರಿಷ್ಠ
ಬೇಕದಕೆ ಕಲಿಕೆ ಕಟ್ಟುತ ಮಧುರತೆ ಭಾಂಧವ್ಯ
ಸೇತುವೆಯಾದಾಗ ಗೋಚರ ಪ್ರಾಬಲ್ಯ, ದೌರ್ಬಲ್ಯ ||
ಅರಿವಾದಾಗ ಗುರುವಿಗೆ ಶಿಷ್ಯನ ಸಾರಸಗಟು
ಧಾರೆಯೆರೆದು ಬಿಡಿಸುತ ತನಗೆ ತಿಳಿದ ಒಗಟು
ಕಳಿಸುವ ಮುಂದಿನ ಬಾಗಿಲಿನ ಕಲಿಕೆಯತ್ತ
ಹಾಕುತ ಅಡಿಪಾಯ ಭವ್ಯ ಭವಿತದೆಡೆ ದೂಕುತ್ತ ||
------------------------------------------------------------------------------------
ನಾಗೇಶ ಮೈಸೂರು, ೦೫. ಸೆಪ್ಟಂಬರ . ೨೦೧೪, ಸಿಂಗಪುರ
-------------------------------------------------------------------------------------
Comments
ಉ: ಗುರು ಶಿಷ್ಯರ ಯುಗ
ನೈತಿಕತೆ ಉಚ್ಛ್ರಾಯ ಸ್ಥಿತಿಗೆ ಬಂದರೆ ಹಿಂದಿನ ಗುರು-ಶಿಷ್ಯ ಪರಂಪರೆ ಮತ್ತೆ ಪ್ರಾರಂಭವಾದೀತು!
In reply to ಉ: ಗುರು ಶಿಷ್ಯರ ಯುಗ by kavinagaraj
ಉ: ಗುರು ಶಿಷ್ಯರ ಯುಗ
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮಾತು ಕೇಳಿದರೆ ಬೀಜ ವೃಕ್ಷ ನ್ಯಾಯ ನೆನಪಿಗೆ ಬರುತ್ತಿದೆ. ಪರಂಪರಾಗತ ಭಾಂಧವ್ಯದ ವೃಕ್ಷದಾಸರೆಯಿಲ್ಲದೆ ನೈತಿಕತೆಯ ಬೀಜ ಬಿತ್ತಲು ಸಾಧ್ಯವಿಲ್ಲ. ನೈತಿಕತೆಯ ಬೀಜವನ್ನುತ್ತಿ ಬಿತ್ತದ ಹೊರತು ಪರಂಪರೆಯ ಸಸಿ ಮೊಳೆತು, ಚಿಗುರಿ, ವಿಶಾಲ ವೃಕ್ಷವಾಗುವುದಿಲ್ಲ. ಅದಿಲ್ಲದೆ ಇದು ಬರದು, ಇದು ಬರುವತನಕ ಅದರಿರುವಿಕೆಯಿರದು. ಒಟ್ಟಾರೆ 'ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ..' ಅನ್ನುವಂತಹ ಪರಿಸ್ಥಿತಿ ಬರದಿದ್ದರೆ ಸಾಕಪ್ಪ ಎಂದು ಪ್ರಾರ್ಥಿಸಬೇಕಾಗಿದೆ :-)