ಗೂಗಲ್‍ಗೆ ಪೆಂಟಾಗನ್ ನಿಷೇಧ

ಗೂಗಲ್‍ಗೆ ಪೆಂಟಾಗನ್ ನಿಷೇಧ

ಬರಹ

 (ಇ-ಲೋಕ-65)(10/3/2008) 

 ಅಮೆರಿಕಾದ ಮಿಲಿಟರಿ ಕೇಂದ್ರಸ್ಥಾನಗಳ ದರ್ಶನ ಮಾಡಿಸುವ ಗೂಗಲ್ ಚಿತ್ರಗಳನ್ನು ನಿಷೇಧಿಸಲಾಗಿದೆ.ಗೂಗಲ್ ಜಗತ್ತಿನ ಹಲವು ಸ್ಥಳಗಳ ಪಕ್ಷಿನೋಟ ಒದಗಿಸುವ ಗೂಗಲ್ ಮ್ಯಾಪ್ ಸೇವೆ ನೀಡುತ್ತಿದೆ.ಆಗಸದಿಂದ ಕೃತಕ ಉಪಗ್ರಹ ಬಳಸಿ ತೆಗೆದ ಚಿತ್ರಗಳು ಸ್ಥಳದ ನಕಾಶೆ ಒದಗಿಸುವುದರ ಜತೆಗೆ ಸ್ಥಳ ಪರಿಚಯವನ್ನೂ ಮಾಡಿಸುತ್ತವೆ.ನವದೆಹಲಿಯ ರಾಷ್ಟ್ರಪತಿ ಭವನದ ಉಪಗ್ರಹ ಚಿತ್ರಗಳನ್ನು ಗೂಗಲ್ ಮ್ಯಾಪ್ ನೀಡಿದಾಗ ಭದ್ರತೆಗೆ ಧಕ್ಕೆ ಬರಬಹುದು ಎಂಬ ಆಕ್ರೋಶ ವ್ಯಕ್ತವಾಯಿತು.ನಂತರ ಗೂಗಲ್ ಚಿತ್ರಗಳನ್ನು ಮಸುಕಾಗಿಸಿದು ನಿಮ್ಮ ನೆನಪಿನಿಂದ ಮರೆಯಾಗಿರಲಿಕ್ಕಿಲ್ಲ.
 ಈಗ ಗೂಗಲ್ ರೋಡ್ ವ್ಯೂ ಎಂಬ ವಿನೂತನ ಸೇವೆ ನೀಡ ತೊಡಗಿದೆ.ರಸ್ತೆಯಲ್ಲಿ ಸಾಗುವ ವಾಹನದಿಂದ ತೆಗೆದ ಮೂರು ಆಯಾಮದ ಚಿತ್ರಗಳು,ರಸ್ತೆಯಲ್ಲಿ ಸಾಗಿದ ಅನುಭವವನ್ನು ಬಳಕೆದಾರರಿಗೆ ನೀಡುತ್ತವೆ.ಈ ಸೇವೆಯ ಮೂಲಕ ಹೌಸ್ಟನ್‍ನ ಮಿಲಿಟರಿ ನೆಲೆಯ ಚಿತ್ರಗಳನ್ನೂ ಗೂಗಲ್ ಸಾರ್ವಜನಿಕರಿಗೆ ಲಭ್ಯವಾಗಿಸಿತ್ತು.ಇದನ್ನು ಅಮೆರಿಕಾದ ಮಿಲಿಟರಿ ಆಕ್ಷೇಪಿಸಿದೆ.ಅದರ ಬೆನ್ನಲ್ಲೇ ಗೂಗಲ್ ತನ್ನ ತಪ್ಪನ್ನು ಒಪಿಕೊಂಡು,ಚಿತ್ರಗಳನ್ನು ಹಿಂದೆಗೆದುಕೊಂಡಿದೆ.
ವಿದ್ಯುತ್ ಕಾರುಗಳು ಪರಿಸರಪ್ರಿಯ ವಾಹನಗಳೇ?
 ವಿದ್ಯುತ್ ಚಾಲಿತ ವಾಹನಗಳು ರಸ್ತೆಯಲ್ಲಿ ಸಾಗುವಾಗ ಹೊಗೆಯುಗುಳುವುದಿಲ್ಲ.ಹಾಗಾದರೆ ಅವು ಪರಿಸರಸ್ನೇಹಿಗಳೇ?ಮೇಲ್ನೋಟಕ್ಕೆ ಹಾಗೆನಿಸಿದರೂ,ಲೆಕ್ಕಾಚಾರ ಮಾಡಿ ನೋಡಿದಾಗ ವಾಸ್ತವ ಅದಕ್ಕೆ ಭಿನ್ನವಾಗಿದೆ.ಈ ಕಾರುಗಳನ್ನು ಚಾರ್ಜ್ ಮಾಡಲು ವಿದ್ಯುತ್ ಬೇಕು ತಾನೇ? ಈ ವಿದ್ಯುತ್ ಹೇಗೆ ಉತ್ಪಾದನೆಯಾಗುತದೆ ಎನ್ನುವ ಮೇಲೆ ಮುಂ಼ದಿನ ವಿಶ್ಲೇಷಣೆ ವಿಭಿನ್ನ ಫಲಿತಾಂಶ ನೀಡಬಲ್ಲುದು.ಒಂದು ವೇಳೆ ಸೌರಶಕ್ತಿಯ ಮೂಲಕ ವಿದ್ಯುದುತ್ಪಾದನೆಯಾದರೆ,ಅದು ಖಂಡಿತಾ ಪರಿಸರಕ್ಕೆ ಹಾನಿ ತರುವ ತಂತ್ರಜ್ಞಾನ ಬಳಸುತ್ತಿಲ್ಲ. ಹಾಗೆಯೇ ಗಾಳಿಯನ್ನು ಬಳಸುವ ವಿದ್ಯುಜ್ಜನಕ ಯಂತ್ರಗಳೂ ಪರಿಸರಕ್ಕೆ ಹಾನಿ ತಾರವು.ಆದರೆ ಶಾಖೋತ್ಪನ್ನ ವಿದ್ಯುಜ್ಜನಕ ಕೇಂದ್ರಗಳ ಮಾತೇ ಬೇರೆ.ಅವುಗಳು ಕಲ್ಲಿದ್ದಲು,ಅನಿಲ ಅಥವ ತೈಲ ಬಳಸುವ ಕಾರಣ ತ್ಯಾಜ್ಯ ಅನಿಲಗಳನ್ನು ಹೊರಸೂಸುತ್ತವೆ.ಅಷ್ಟು ಮಾತ್ರ ಅಲ್ಲ,ವಿದ್ಯುತ್ ಜನಕ ಯಂತ್ರವನ್ನು ತಿರುಗಿಸಲು ಬಳಕೆಯಾದ ಉಗಿಯನ್ನು ತಂಪು ಮಾಡಲು ಬಳಕೆಯಾಗುವ ನೀರು ಅಗಾಧ ಪ್ರಮಾಣದಲ್ಲಿ ಬೇಕು.ಈ ನೀರನ್ನು ಮರುಬಳಕೆ ಮಾಡಿದರೂ,ಸೋರಿಕೆಯ ಕಾರಣ ಭಾರೀ ಪ್ರಮಾಣದ ನೀರಿನ ಅವಶ್ಯಕತೆ ಶಾಖೋತ್ಪನ್ನ ಕೇಂದ್ರದಲ್ಲಿ ಬರುತ್ತದೆ.ಪೆಟ್ರೋಲ್ ಬಳಸುವ ವಾಹನಗಳಿಗೆ ಹೋಲಿಸಿದರೆ,ವಿದ್ಯುತ್ ಚಾಲಿತ ವಾಹನಗಳು ಮೂರು ಪಟ್ಟು ಅಧಿಕ ನೀರನ್ನು ಬಳಸುವುದು ಅಧ್ಯಯನದಿಂದ ತಿಳಿದು ಬಂದಿದೆ.ವಿದ್ಯುದಾಗಾರ ಕೇಂದ್ರಗಳಲ್ಲಿ ಗಾಳಿಯಂತಹ "ತೇವಮುಕ್ತ"ಶಾಖವಿನಿಮಯ ವಸ್ತುವಿನ ಬಳಕೆ ಈ ಸಮಸ್ಯೆಗೆ ಪರಿಹಾರ ನೀಡುತ್ತದೇನೋ ಹೌದು.
ರೊಬೋಟ್ ಗಗನಕ್ಕೆ
 ಎಂಡೇವರ್ ಬಾಹ್ಯಾಕಾಶ ವಾಹನ ಮುಂದಿನ ಮಂಗಳವಾರ ಗಗನಕ್ಕೇರಲಿದೆ.ಸ್ಪೇಸ್ ಶಟಲ್ ಎಂಟು ಜನರನ್ನು ಬಾಹ್ಯಾಕಾಶಕ್ಕೊಯ್ಯಲಿದೆ.ಇವರ ಪೈಕಿ ಏಳು ಜನರು ಬಾಹ್ಯಾಕಾಶಯಾನಿಗಳಾಗಿದ್ದರೆ,ಎಂಟನೆಯಾತ(?) ಡೆಕ್ಸ್ಟರ್ ಎಂಬ ರೊಬೋ!ಈ ರೋಬೋ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ದುರಸ್ತಿತಜ್ಞನಾಗಿ ಅಲ್ಲೇ ಉಳಿಯಲಿದೆ.ಮಾನವನ ಕೈಗಳಿಗಿಂತ ಹೆಚ್ಚು ಸಂಧಿಗಳನ್ನು ಹೊಂದಿದ ರೊಬೋ,ನಟ್-ಬೋಲ್ಟುಗಳನ್ನು ಬಿಗಿಗೊಳಿಸಲು ಹತ್ಯಾರುಗಳನ್ನು ತನ್ನ ಕೈಯಲ್ಲಿ ಹಿಡಿದು ಕೊಂಡಿರುವಂತೆ ವಿನ್ಯಾಸವಾಗಿದೆ.ಮುಂದಿನ ವರ್ಷದ ವೇಳೆಗೆ ಪೂರ್ಣವಾಗಿ ತಯಾರಾಗುವ ರೊಬೋ,ನಂತರ ಕಠಿನ ದುರಸ್ತಿ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಸ್ವತ: ಹೊರಲಿದೆ.ಈಗಲಾದರೆ ಬಾಹ್ಯಾಕಾಶಯಾನಿಗಳು ತಮ್ಮ ಗಗನ ನಡಿಗೆಯ ವೇಳೆ ಇಂತಹ ಅಪಾಯಕಾರಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ.ಈ ಸಲದ ಎಂಡೇವರ್ ಸ್ಪೇಸ್ ಶಟಲ್ ಯಾನ ಹದಿನಾರು ದಿನಗಳಷ್ಟು ದೀರ್ಘಾವಧಿಯದ್ದು.ಜಪಾನಿ ಪ್ರಯೋಗಾಲಯ ಸ್ಥಾಪನೆ ಈ ಯಾನದ ಮುಖ್ಯ ಕೆಲಸ.ಜತೆಗೆ ತೊಂದರೆ ನೀಡುತ್ತಿರುವ ಸೌರ ಫಲಕಗಳ ಮುರಿದ ಚಕ್ರಗಳ ದುರಸ್ತಿ ಕಾರ್ಯವೂ ನಡೆಯಲಿದೆ.
ಮೊಬೈಲ್ ಅಂತರ್ಜಾಲ ಮಾರುಕಟ್ಟೆ ಮೇಲೆ ಮೈಕ್ರೋಸಾಫ್ಟ್ ಕಣ್ಣು
 ನೋಕಿಯಾ ಮೊಬೈಲ್ ಹ್ಯಾಂಡ್‍ಸೆಟ್ ತಯಾರಕ ಕಂಪೆನಿಯೊಂದಿಗೆ ಮೈಕ್ರೋಸಾಫ್ಟ್ ಒಡಂಬಡಿಕೆಗೆ ಬಂದಿದೆ.ಕಂಪೆನಿಯ ಸಿಲ್ವರ್ಲೈಟ್ ಎಂಬ ತಂತ್ರಜ್ಞಾನವನ್ನು ನೋಕಿಯ ತನ್ನ ಮೊಬೈಲ್ ಸೆಟ್‍ಗಳಲ್ಲಿ ಬಳಸಲಿದೆ.ಸಿಲ್ವರ್ಲೈಟ್ ಎನ್ನುವುದು ಪ್ಲಾಶ್ ಎಂಬ ಮ್ಯಕ್ರೋಮಿಡಿಯ ಕಂಪೆನಿಯ ತಂತ್ರಜ್ಞಾನದ ಪ್ರತಿಸ್ಪರ್ಧಿ. ಸಿಲ್ವರ್‍ಲೈಟ್ ತಂತ್ರಜ್ಞಾನ ಬಳಸಿದರೆ,ಅದು ಬ್ರೌಸರ್ ತಂತ್ರಾಂಶಕ್ಕೆ ಜತೆಗೂಡಿ,ಹೊಸ ಸವಲತ್ತುಗಳನ್ನು ನೀಡಬಲ್ಲುದು.ಉದಾಹರಣೆಗೆ ಬ್ರೌಸರ್ ತಂತ್ರಾಂಶದೊಳಗೆ ವಿಡಿಯೋ ತೆರೆ ಮೂಡಿಸಿ,ಪ್ರದರ್ಶಿಸುವುದು.ಈ ತಂತ್ರಜ್ಞಾನ ಬಳಕೆಯಾದಾಗ,ಅಂತರ್ಜಾಲ ತಾಣವನ್ನು ರೂಪಿಸುವವರ ಕೆಲಸ ಹಗುರವಾಗುತ್ತದೆ.
ಐಪಾಡ್‍ಗೆ ಬಿಬಿಸಿಐಪ್ಲೇಯರ್
 ಬಿಬಿಸಿ ಟಿವಿ ಚಾನೆಲ್ ತನ್ನ ವಿಡಿಯೋ ಕಡತಗಳನ್ನು ಇಳಿಸಿಕೊಂಡು ವೀಕ್ಷಿಸಲು ಅನುವು ಮಾಡುವ ಬಿಬಿಸಿಐಪ್ಲೇಯರ್ ತಂತ್ರಾಂಶವನ್ನು ಬಿಡುಗಡೆ ಮಾಡಿದೆ.ತಂತ್ರಾಂಶವನ್ನು ಐಪಾಡ್ ಅಥವ ಐಫೋನ್ ಸಾಧನದಲ್ಲಿ ಸ್ಥಾಪಿಸಬೇಕು.ನಿಸ್ತಂತು ಜಾಲ ಲಭ್ಯವಿದ್ದೆಡೆ ಈ ತಂತ್ರಾಂಶ  ಮೂಲಕ ಬಿಬಿಸಿಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಐಪಾಡ್ ಅಥವ ಐಫೋನ್‍ಗೆ ತರಿಸಿ ವೀಕ್ಷಿಸಬಹುದು.ಮೊಬೈಲ್ ಜಾಲದ ಮೂಲಕ ಹೀಗೆ ಮಾಡಲು ಅವಕಾಶ ಸದ್ಯಕ್ಕಿಲ್ಲ.

ashokworld

udayavani 
*ಅಶೋಕ್‍ಕುಮಾರ್ ಎ