ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?
ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ಜಾಲತಾಣ ವಾರವಿಡಿ ಸುದ್ದಿ ಮಾಡಿತು.ಅರ್ಕುಟ್,ಬಜ್ ಮತ್ತು ವೇವ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಜನಾಕರ್ಷಣೆಗೆ ಗೂಗಲ್ ಯತ್ನಿಸಿ,ಅರ್ಕುಟ್ನಲ್ಲಿ ಮಾತ್ರಾ ತಕ್ಕ ಮಟ್ಟಿಗೆ ಯಶಸ್ವಿಯಾಯಿತು.ಫೇಸ್ಬುಕ್,ಟ್ವಿಟರ್ ಅಂತಹ ತಾಣಗಳು ಅಗಾಧ ಜನಸ್ತೋಮವನ್ನು ಆಕರ್ಷಿಸಿ,ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿ,ಗೂಗಲ್ ಮತ್ತೆ ಮತ್ತೆ ಇಂತಹ ಪ್ರಯನಕ್ಕೆ ಕೈಹಾಕುವಂತೆ ಮಾಡುತ್ತಿವೆ.ಆದರೆ ಗೂಗಲ್ ಸ್ಥಿತಿ,ರೈಲು ಹೋದ ಮೇಲೆ ನಿಲ್ದಾಣ ತಲುಪಿದ ಪ್ರಯಾಣಿಕನ ಸ್ಥಿತಿಯಂತಾಗಿದೆ ಎನ್ನದೆ ವಿಧಿಯಿಲ್ಲ.ಈಗಾಗಲೇ ಐವತ್ತು ಕೋಟಿ ಸದಸ್ಯರನ್ನು ಹೊಂದಿರುವ ಫೇಸ್ಬುಕ್ ತಾಣಕ್ಕೆ ಸ್ಪರ್ಧೆ ನೀಡಿ,ಜನರನ್ನು ಆಕರ್ಷಿಸಲು ಗೂಗಲ್ ಪ್ಲಸ್ನಲ್ಲಿ ಕೆಲವಾರು ಆಕರ್ಷಣೆಗಳಿವೆ.ಸದಸ್ಯರು ತಮ್ಮ ಗುರುತಿನವರನ್ನು ಸಂಬಂಧಿಗಳು,ಸ್ನೇಹಿತರು,ಸಹೋದ್ಯೋಗಿಗಳು ಹೀಗೆ ಬೇರೆ ಬೇರೆ ಗುಂಪಿಗೆ ಸೇರಿಸಬಹುದು.ಇದರಿಂದ ಒಮ್ದು ಗುಂಪಿನವರ ಜತೆ ಯಾವ ಮಾಹಿತಿ ಬೇಕೋ ಅದನ್ನು ಮಾತ್ರಾ ಹಂಚಿಕೊಳ್ಳಬಹುದು.ಖಾಸಗಿ ಚಿತ್ರಗಳನ್ನು ಸಂಬಂಧಿಗಳ ಜತೆ,ಸಹೋದ್ಯೊಗಿಗಳ ಜತೆ ಕಚೇರಿ ಮಾಹಿತಿಗಳನ್ನು ಹೀಗೆ ಹಂಚಿಕೊಳ್ಳಲು ಬರುವುದು ಇದರ ಪ್ಲಸ್ಪಾಯಿಂಟ್.ಈ ಸೌಕರ್ಯ ಇತರ ಜಾಣಗಳಲ್ಲಿಲ್ಲ.ಎಲ್ಲರಿಗೂ ನಿಮ್ಮ ಸಾರ್ವಜನಿಕ ಮಾಹಿತಿಗಳು ಲಭ್ಯವಾಗುತ್ತವೆ.ಹ್ಯಾಂಗೌಟ್ ಎನ್ನುವ ಸವಲತ್ತಿನಲ್ಲಿ ಬೇಕಾದ ಜನರನ್ನಷ್ಟೇ ಆಹ್ವಾನಿಸಿ,ವಿಚಾರ ವಿನಿಮಯ-ವೀಡಿಯೋ ಕಾನ್ಫರೆನ್ಸ್ ನಡೆಸಬಹುದು.ಗೂಗಲ್ ತನ್ನ ಶೋಧ ಪಟುತ್ವವನ್ನು ಗೂಗಲ್ಪ್ಲಸ್ ಮೂಲಕವೂ ನೀಡಲು ಸ್ಪಾರ್ಕ್ ಎಂಬ ಸೌಕರ್ಯ ನೀಡಿದೆ.ಇದೂ ಫೇಸ್ಬುಕ್ನಲ್ಲಿಲ್ಲ.ಇನ್ನು ಗೂಗಲ್ ಪ್ಲಸ್ನಲ್ಲಿ ಗೂಗಲ್ ಅಂಚೆ,ಪಿಕಾಸಾ,ಗ್ರೂಪ್,ಮ್ಯಾಪ್ ಇವೆಲ್ಲವೂ ಒಂದೇ ಕಡೆಯಿಂದ ಸಿಗುವ ಅನುಕೂಲ ಬೇರೆ ಇದೆ.ನಿಮಗೆ ಗೂಗಲ್ ಪ್ಲಸ್ ಸಾಕೆನಿಸಿದರೆ,ಅದರ ಖಾತೆ ಮುಚ್ಚಿ ಹೋಗುವಾಗ,ಇದುವರೆಗೆ ನೀವಲ್ಲಿ ಹಂಚಿಕೊಂಡಿದ್ದ ಸರ್ವವಿಧದ ಮಾಹಿತಿಯನ್ನು ವಾಪಸ್ಸು ಪಡೆಯುವ ಡೇಟಾ ಲಿಬರೇಶನ್ ಎಂಬ ವಿನೂತನ ವಿಧಾನ ಇದೆ.ಇಂತಹ ಖಾಸಗಿತನವನ್ನು ಗೌರವಿಸುವ ಸವಲತ್ತು ಇಲ್ಲದ್ದು ಫೇಸ್ಬುಕ್,ಟ್ವಿಟರ್ ತಾಣಗಳ ಮುಖ್ಯ ತೊಂದರೆಯೂ ಹೌದು.ಆಮಂತ್ರಣ ಮೂಲಕ ಮಾತ್ರಾ ಸದಸ್ಯತ್ವ ಎನ್ನುವ ತನ್ನ ತಂತ್ರದ ಮೂಲಕ,ಗೂಗಲ್ ಪ್ಲಸ್ ಮೊದಲಿಗೆ ಸುದ್ದಿ ಮಾಡಿತು.ಇಬೇ ತಾಣದಲ್ಲಿ ಇದರ ಆಮಂತ್ರಣ ಇಪ್ಪತ್ತು ಡಾಲರಿಗೆ ಮಾರಾಟವಾಗಿಯೂ ಹೋಗತೊಡಗಿತು.ನಂತರವೀಗ ನೇರವಾಗಿ ಸದಸ್ಯರಾಗುವ ಅವಕಾಶವಿದೆ.ಆಸಕ್ತರು https://plus.google.com/up/start/?continue=https ವಿಳಾಸಕ್ಕೆ ಭೇಟಿಕೊಡಿ.
ಅಂದ ಹಾಗೆ ಟ್ವಿಟರ್ ಬಳಕೆದಾರರ ಸಂಖ್ಯೆ ಇಪ್ಪತ್ತು ಕೋಟಿಯಂತೆ.ದಿನನಿತ್ಯ ಇಪ್ಪತ್ತು ಕೋಟಿ ಟ್ವೀಟ್ಗಳಿಲ್ಲಿ ಪ್ರಕಟವಾಗುತ್ತವೆ.ಟ್ವೀಟ್ಗಳು ನೂರನಲುವತ್ತು ಅಕ್ಷರಗಳಿಗೆ ಮಾತ್ರಾ ಸೀಮಿತವೆನ್ನುವುದು ನಿ.ಸಂ. ಒದುಗರಿಗೆ ಚೆನ್ನಾಗಿ ಗೊತ್ತು.
-----------------------------------------
ಮೈಸ್ಪೇಸ್:ಮಾರಾಟ
ರೂಪರ್ಟ್ ಮುರ್ಡೋಚ್ನ ನ್ಯೂಸ್ಕಾರ್ಪ್ ಸಂಸ್ಥೆಯು ಮೈಸ್ಪೇಸ್ ಸಾಮಾಜಿಕ ತಾಣವನು ಬರೇ ಮೂವತ್ತೈದು ದಶಲಕ್ಷ ಡಾಲರಿಗೆ ಮಾರಾಟ ಮಾಡಿ ಕೈತೊಳೆದುಕೊಂಡಿದೆ.ಮುರ್ಡೋಚ್ ಇದನ್ನು ಆರು ವರ್ಷಗಳ ಕಾಲ ನಡೆಸಿ ಕೈಸುಟ್ಟುಕೊಂಡದ್ದಷ್ಟೇ ಲಾಭ.ಸುಮಾರು ಆರುನೂರು ದಶಲಕ್ಷ ಡಾಲರು ಬೆಲೆ ತೆತ್ತು ಮೈಸ್ಪೇಸ್ ತಾಣವನ್ನು ಖರೀದಿಸಿದ ಮುರ್ಡೋಚ್,ಗೂಗಲ್ ಜತೆ ಒಪ್ಪಂದ ಮಾಡಿಕೊಂಡು,ತಾಣದಲ್ಲಿ ಜಾಹೀರಾತು ನೀಡತೊಡಗಿ,ಸಾಕಷ್ಟು ಲಾಭಗಿಟ್ಟಿಸಿಕೊಂಡರು.ನಂತರ ಇತರ ಸಾಮಾಜಿಕ ತಾಣಗಳು ಜನಪ್ರಿಯವಾಗ ತೊಡಗಿದೊಡನೆ,ಮೈಸ್ಪೇಸ್ ಜಾಹೀರಾತು ಕಾಟದಿಂದ ಬೇಸತ್ತ ಅದರ ಸದಸ್ಯರ ಸಂಖ್ಯೆ ಇಳಿಯ ತೊಡಗಿತು-ತಾಣವು ನಷ್ಟದ ಬಾಬತ್ತಾಯಿತು.ಈಗ ತಾಣ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಏರ್ಪಟ್ಟಿತು.ಮುರ್ಡೋಚ್ಗೆ ಅಂತರ್ಜಾಲ ಒಲಿದಿಲ್ಲ-ಮುದ್ರಣ ಮತ್ತು ಟಿವಿ ಮಾಧ್ಯಮಗಳೇ ಒಳಿತು ಎಂಬಂತೆ ಕಾಣುತ್ತಿದೆ.
----------------------------------------
ಸೌರಶಕ್ತಿಯಿಂದ ನಡೆವ ಜಾಹೀರುಫಲಕ
ಕಂಪೆನಿಯೊಂದು ತನ್ನ ಜಾಹೀರಾತು ಫಲಕವನ್ನು ಬೆಳಗಲು ಸಂಪೂರ್ಣವಾಗಿ ಸೌರಶಕ್ತಿ ಮತ್ತು ಪವನಶಕ್ತಿಯನ್ನು ಅವಲಂಬಿಸಿದೆ.ಹನ್ನೆರಡು ಕಿಲೋವ್ಯಾಟ್ ಶಕ್ತಿಯನ್ನು ಈ ಎರಡು ಶಕ್ತಿ ಮೂಲಗಳಿಂದ ಪಡೆಯಲು,ಫಲಕದಲ್ಲಿ ತೊಂಭತ್ತಾರು ಸೌರಫಲಕಗಳು ಮತ್ತು ಐದು ಗಾಳಿಯ ಟರ್ಬೈನ್ಗಳಿವೆ.ಇದನ್ನು ಲಂಡನ್ನ ಹೀತ್ರೂ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಿರುವ ಕಂಪೆನಿಯ ಇನ್ನೊಂದು ಸೌರಶಕ್ತಿಚಾಲಿತ ಜಾಹೀರಾತು ಫಲಕ ನ್ಯೂಯಾರ್ಕ್ಟೈಮ್ಸ್ ಸ್ಕ್ವೇರಿನಲ್ಲಿದೆ.
----------------------------------------------------------------
ಹಳೆ ಶೈಲಿ;ಹೊಸ ತಂತ್ರ
ಟೆಕ್ಸಾಸ್ನ ಆಸ್ಟಿನ್ನಲ್ಲಿ ಅಂಗಡಿಯೊಂದು ಹಳೆಯ ಮಾರಾಟ ಶೈಲಿ ಅನುಸರಿಸಿ ಸುದ್ದಿ ಮಾಡಿದೆ.ನಮ್ಮಲ್ಲಿನ್ನೂ ಪ್ರಚಲಿತದಲ್ಲಿರುವ ಬ್ರಾಂಡ್-ರಹಿತ ವಸ್ತುಗಳ ಮಾರ್ಕೆಟಿಂಗ್ ಅಮೆರಿಕಾದಲ್ಲಿ ಇದ್ದ ಹಾಗಿಲ್ಲ.ಅಲ್ಲಿ ಪ್ರತಿ ಉತ್ಪನ್ನವನ್ನೂ ಪ್ಯಾಕೆಟಿನಲ್ಲಿ ಹಾಕಿ,ಹೆಸರಿಟ್ಟು ಮಾರುವುದು ಸಾಮಾನ್ಯವಾಗಿದೆ.ಈಗ ಇನ್-ಗ್ರೇಡಿಯಂಟ್ ಎನ್ನುವ ಅಂಗಡಿಯೊಂದು,ವಸ್ತುಗಳನ್ನು ಬಿಡಿಯಾಗಿ ಮಾರುವ ನಿರ್ಧಾರ ಪ್ರಕಟಿಸಿದೆ-ಇದು ಪರಿಸರಪ್ರಿಯ ಮಾರ್ಕೆಟಿಂಗ್ ವಿಧಾನ ಎಂಬ ಹಣೆಪಟ್ಟಿಯ ಜತೆಗೆ,ಅಗ್ಗವಾಗಿಯೂ ದೊರಕುತ್ತದೆ.ಚೀಲ ತಂದರೆ,ಅದರಲ್ಲಿ ತುಂಬಿಕೊಂಡು ಹೋಗಬಹುದು.ರಾಶಿ ರಾಶಿ ಪ್ಲಾಸ್ಟಿಕ್ ಬಳಸುವ ನಮ್ಮ ಮಾಲ್ಗಳ್ಯಾಕೆ ಇತ್ತ ಗಮನಹರಿಸಬಾರದು?
---------------------------------------------
ವಿಮಾನ ನಿಲ್ದಾಣ:ಮಳೆ ಹೆಚ್ಚು?
ವಿಮಾನ ನಿಲ್ದಾಣಗಳ ಬಳಿ ಮಳೆ ಹೆಚ್ಚು ಎನ್ನುವವರಿದ್ದಾರೆ.ಹಾಗಿರುವುದು ಸಾಧ್ಯ ಎನ್ನುವುದು ಸಂಶೋಧನೆಯಿಂದ ವ್ಯಕ್ತವಾಗಿದೆ.ವಿಮಾನಗಳು ವೇಗವಾಗಿ ಚಲಿಸುವಾಗ,ಸುತ್ತಲಿನ ಗಾಳಿ ಹಿಗ್ಗಿ,ತಣಿಯುತ್ತದೆ.ಇದರಿಂದ ನೀರಾವಿಯು ಘನೀಕರಿಸಿ,ಮಂಜುಗಡ್ಡೆಯಾಗಿ ಮಾರ್ಪಟ್ಟು ಮಳೆ ಬೀಳುವ ಸಾಧ್ಯತೆಯಿದೆಯಂತೆ.ಸುತ್ತಲಿನ ಹವಾಗುಣ,ವಿಮಾನಗಳ ವೇಗ,ಗಾತ್ರ ಇವೆಲ್ಲವುಗಳೂ ಮಳೆಯ ಸಾಧ್ಯತೆಯನ್ನು ಬದಲಿಸಬಹುದು ಎಂದು ಎನ್ಸಿಏಆರ್(ನೇಶನಲ್ ಸೆಂಟರ್ ಫಾರ್ ಅಟ್ಮೋಸ್ಪಿಯರಿಕ್ ರಿಸರ್ಚ್)ಸಂಸ್ಥೆಯಲ್ಲಿ ನಡೆದಿರುವ ಸಂಶೋಧನೆ ಇದನ್ನು ಕಂಡುಕೊಂಡಿದೆ.
--------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*ಆನ್ಲೈನ್ ಮೌಲ್ಯಮಾಪನ ಅಳವಡಿಸಿ,ಸುದ್ದಿಯಲ್ಲಿರುವ ವಿಶ್ವವಿದ್ಯಾಲಯ ಯಾವುದು?
*ಏನಿದು ಹೊಸ ವ್ಯವಸ್ಥೆ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS38 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*FOSS ಎಂದರೆ ಉಚಿತ ಮತ್ತು ಮುಕ್ತ ತಂತ್ರಾಂಶ.
*ಉದಯವಾಣಿ ಇ-ಪತ್ರಿಕೆ ತಾಣವು ಬಳಕೆದಾರ ಸ್ನೇಹಿಯಾಗುವತ್ತ ತೆಗೆದುಕೊಂಡಿರುವ ಹೆಜ್ಜೆ-ಎಲ್ಲಾ ಆವೃತ್ತಿಗಳ ಎಂಟು ದಿನಗಳ ಪತ್ರಿಕೆಯ ಕೊಂಡಿಗಳೂ ಗೋಚರಿಸುವಂತೆ ಅಳವಡಿಸಲಾಗಿದೆ.(http://epaper.udayavani.com ನೋಡಿ. ಐಪ್ಯಾಡ್ ಆವೃತ್ತಿಯೂ ಲಭ್ಯ. ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರಾಣೇಶ್ ಜೋಷಿ,ಬನ್ನಿಕಟ್ತಿ,ಕೊಪ್ಪಳ. ಅಭಿನಂದನೆಗಳು.
UDAYAVANI UNICODE
UDAYAVANI
*ಅಶೋಕ್ಕುಮಾರ್ ಎ
Comments
ಉ: ಗೂಗಲ್ ಪ್ಲಸ್:ಆಮಂತ್ರಣ ಸಿಕ್ಕಿತೇ?