ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ!

ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ!

ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ!




ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ಜಗತ್ತಿನ ಸುಮಾರು ಹದಿನೇಳು ದೇಶಗಳ ರಸ್ತೆಯ ದೃಶ್ಯಗಳನ್ನು ನೇರವಾಗಿ ಜನರಿಗೆ ಒದಗಿಸುತ್ತದೆ.ಕಾರು,ಇತರ ವಾಹನಗಳು,ಜನರು ಹಿಡಿದಿರುವ ಕ್ಯಾಮರಾದ ಮೂಲಕ ರಸ್ತೆಯ ದೃಶ್ಯಗಳನ್ನು ನೇರವಾಗಿ ಸೆರೆಹಿಡಿದು,ಗೂಗಲ್ ಮ್ಯಾಪ್ ತಾಣದ ಮೂಲಕವದನ್ನು ಜನರೊಂದಿಗೆ ಹಂಚಿಕೊಳ್ಳುವ ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ನಾರ್ವೆ,ಸಿಂಗಾಪೂರ್,ಕೆನಡಾ,ಮಲೇಶ್ಯಾ,ಥೈಲ್ಯಾಂಡ್,ಅಮೆರಿಕಾ,ಲಂಡನ್,ಸ್ವೀಡನ್,ಡೆನ್ಮಾರ್ಕ್,ಟೈವಾನ್,ಇಟೆಲಿ,ಡೆನ್ಮಾರ್ಕ್ ಮೊದಲಾದ ದೇಶಗಳ ದೃಶ್ಯಗಳನ್ನು ಒಳಗೊಂಡಿದೆ.ದಾರಿ ಹುಡುಕುವಾಗ,ಅಥವಾ ತಿರುಗಾಡುವಾಗ ಈ ದೃಶ್ಯಗಳು ಬಹು ಪ್ರಯೋಜನಕಾರಿ.ಆಪಲ್‌ನ ಹೊಸ ಐಓಎಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ,ಗೂಗಲ್ ಮ್ಯಾಪ್ ಬದಲಿಗೆ,ಆಪಲ್ ತನ್ನದೇ ಆದ ನಕಾಶೆಯನ್ನು ಒದಗಿಸಿತ್ತು.ಆದರೆ ಈ ನಕಾಶೆಯು ತಪ್ಪು ತಪ್ಪು ಭೂಗುರುತುಗಳನ್ನು ಹೊಂದಿ,ಜನರ ತೀವ್ರ ಅಸಮಾಧಾನಕ್ಕೆ ತುತ್ತಾಗಿತ್ತು.ಅದರ ನಡುವೆ,ಗೂಗಲ್ ತನ್ನ ಸ್ಟ್ರೀಟ್‌ವ್ಯೂನಲ್ಲಿ ಇಪ್ಪತ್ತೈದು ಸಾವಿರ ಮೈಲು ವಿವರಗಳನ್ನು ಹೊಂದಿದೆ ಎನ್ನುವುದು,ಆಪಲ್ ಗಾಯಕ್ಕೆ ಉಪ್ಪು ಸುರಿದಂತಾಗದಿರದು.
------------------------------------
ಎರಡು ಬಾರಿ ಪಿಂಕಿಗೆ ಗೂಗಲ್ ಬಹುಮಾನ
ಗೂಗಲ್ ಕ್ರೋಮ್ ಬ್ರೌಸರ್ ಬಗ್ಗೆ ತಾವು ಕೇಳಿಯೇ ಇರುತ್ತೀರಿ.ಫೈರ್‌ಫಾಕ್ಸ್ ಬಿಟ್ಟರೀಗ ಜನಪ್ರಿಯ ಬ್ರೌಸರ್ ಕ್ರೋಮ್ ಆಗಿದೆ.ಈ ಬ್ರೌಸರಿನಲ್ಲಿ ಹುಳುಕುಗಳನ್ನು ಕಂಡುಹಿಡಿದವರಿಗೆ ಗೂಗಲ್ ಅರುವತ್ತು ಸಾವಿರ ಡಾಲರ್ ಬಹುಮಾನ ಘೋಷಿಸಿದೆ.ಇದನ್ನು ಪಿಂಕಿಪೈ ಎನ್ನುವ ಹ್ಯಾಕರ್ ಎರಡುಸಲ ಗೆದ್ದು ದಾಖಲೆ ಮಾಡಿರುವನು.ಈತನು ಹುಳುಕುಗಳನ್ನು ಹೇಳಿದ ತರುವಾಯ ಗೂಗಲ್ ಇಂಜಿನಿಯರುಗಳದನ್ನು ಸರಿಪಡಿಸಲು ಕೆಲವೇ ಗಂಟೆಗಳನ್ನು ತೆಗೆದುಕೊಂಡರು.ಕೌಲಾಲಂಪುರಾದಲ್ಲಿ ನಡೆದ ಸಮಾವೇಶದಲ್ಲಿ ಈ ಬಹುಮಾನವನ್ನು ಎರಡನೆಯ ಬಾರಿಗೆ ಪಿಂಕಿ‌ಪೈ ಗೆದ್ದುಕೊಂಡ.
-------------------------
ಗ್ರಾಫೀನ್ ಎನ್ನುವ ಮ್ಯಾಜಿಕ್ ವಸ್ತು
ಗ್ರಾಫೀನ್ ಎನ್ನುವ ಅತ್ಯಂತ ಹಗುರವಾದ ಇಂಗಾಲದ ಸಂಯುಕ್ತವು ಅದೆಷ್ಟು ತೆಳುಹಾಳೆಗಳಾಗಬಲ್ಲುದು ಎಂದರೆ,ಒಂದು ಔನ್ಸ್ ಗ್ರಾಪೀನ್ ಅನ್ನು ಫುಟ್‌ಬಾಲ್ ಕ್ರೀಡಾಂಗಣಕ್ಕೆ ಹರಡಲಾಗುವಷ್ಟು ತೆಳುವಾಗಿಸಬಹುದು!ಸ್ಪರ್ಶಸಂವೇದಿ ತೆರೆಯ ತಯಾರಿಯಲ್ಲಿಯೂ ಇದನ್ನು ಬಳಸಬಹುದು.ಹಾಗಾದರೆ,ಸ್ಪರ್ಶಸಂವೇದಿ ತೆರೆ ತೆಳುವಾಗುವುದಾದರು,ಅದು ದೃಡವಾಗಿರುತ್ತದೆ.ಇದನ್ನು ಬೇಕೆಂದಹಾಗೆ ಬಾಗಿಸಬಹುದು-ಆದರೆ ಮುರಿಯದು.ಇನ್ನು ಸೆಲ್‌ಫೋನ್ ಅಂತೂ ಗ್ರಾಫೀನ್ ತೆರೆಯಿದ್ದರೆ,ಅದೆಷ್ಟು ಹಗುರ ಮತ್ತು ತೆಳುವಾಗಬಲ್ಲುದು ಎಂದು ನೀವೇ ಯೋಚಿಸಿ.ಅಂದಹಾಗೆ ಗ್ರಾಫೀನ್ ಉಕ್ಕಿಗಿಂತ ಗಟ್ಟಿಯಾದ ವಸ್ತು!
--------------------
ವಿಂಡೋಸ್ ಎಂಟು:ಖರ್ಚು ಒಂದೂವರೆ ಬಿಲಿಯನ್ ಡಾಲರ್
ವಿಂಡೋಸ್ ಎಂಟು ಮೈಕ್ರೋಸಾಫ್ಟ್ ಕಂಪೆನಿಯಿಂದ ಬರಲಿರುವ ಹೊಸ ಆಪರೇಟಿಂಗ್ ವ್ಯವಸ್ಥೆಯಾಗಿದೆ.ಸರ್ಫೇಸ್ ಮತ್ತು ವಿಂಡೋಸ್ ಫೋನ್ ಸಾಧನಗಳನ್ನೂ ಮಾರುಕಟ್ಟೆಯಲ್ಲಿ ಸಫಲವಾಗಿಸಲು ಮೈಕ್ರೋಸಾಫ್ಟ್ ಪಣತೊಟ್ಟಿದೆ.ಇದಕ್ಕಾಗಿ ಏನಿಲ್ಲವೆಂದರೂ ಒಂದೂವರೆ ಬಿಲಿಯನ್ ಡಾಲರು ವೆಚ್ಚ ಮಾಡುವ ಬಜೆಟ್ ಹಾಕಿಕೊಂಡು ಕಂಪೆನಿಯು ಸಜ್ಜಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ.ಈ ಖರ್ಚು ಹೇಗೆ ಮಾಡಲಾಗುವುದು,ಅದು ಜಾಹೀರಾತಿಗೆ ಖರ್ಚೇ ಎಂಬೆಲ್ಲಾ ವಿವರಗಳು ಲಭ್ಯವಿಲ್ಲ.ಇಷ್ಟು ಖರ್ಚು ಮಾಡಿದ ಮೇಲೆ,ಇದರಿಂದ ಮೈಕ್ರೋಸಾಫ್ಟ್ ಕಂಪೆನಿಯು ನಿರೀಕ್ಷಿಸುವ ಆದಾಯ ಎಷ್ಟು ಎನ್ನುವುದು ನಿಮಗೆ ಗೊತ್ತಾಗಬಹುದು.
------------------------------
ಶೇರು ವ್ಯವಹಾರದ ಬಗ್ಗೆ ಎಸ್ಸೆಮ್ಮೆಸ್ 
ಶೇರು ವ್ಯವಹಾರದಲ್ಲಿ ಪಾರದರ್ಶಕತೆಯನ್ನುಳಿಸಿಕೊಂಡು,ಮುಗ್ಧ ಜನರಿಗೆ ಅನ್ಯಾಯವಾಗುವುದನ್ನು ತಡೆಯಲು ಎನ್‌ಎಸ್‌ಇ  ಎಂದೇ ಜನಪ್ರಿಯವಾಗಿರುವ ಶೇರು ವಿನಿಮಯ ಕೇಂದ್ರವಿನ್ನೀಗ,ಯಾವುದೇ ಶೇರು ವ್ಯವಹಾರ ನಡೆದಾಗಲೂ ಸಂಬಂಧಿತ ಗಿರಾಕಿಗೆ ಮೊಬೈಲ್ ಸಂದೇಶ ಮತ್ತು ಮಿಂಚಂಚೆಯನ್ನು ಕಳುಹಿಸಲಿದೆ.ಅಕ್ಟೋಬರ್ ಹದಿನೈದಕ್ಕೆ ಜಾರಿಗೆ ಬರಲಿರುವ ಈ ನಿರ್ಣಯದ ಅನ್ವಯ ಶೇರುಬ್ರೋಕರ್ ಮಾಡುವ ವ್ಯವಹಾರ ಗಿರಾಕಿಯ ಗಮನಕ್ಕೆ ಬರುವಂತೆ ಹೀಗೆ ಸಂದೇಶ ಕಳುಹಿಸುವ ಏರ್ಪಾಡು ಮಾಡಲಾಗುತ್ತದೆ.ಒಂದು ವೇಳೆ ಇದು ಕಿರಿಕಿರಿ ಅನ್ನಿಸಿದರೆ.ಈ ಸೇವೆಯಿಂದ ಹೊರತಾಗುವ ಅವಕಾಶ ಇದ್ದೇಇದೆ.
-----------------------------------
ಪಿಸಿ ಮಾರಾಟ ಇಳಿಕೆ
ಜನರೀಗ ಕಂಪ್ಯೂಟರ್,ಲ್ಯಾಪ್‌ಟಾಪ್ ಮತ್ತು ಅಲ್ಟ್ರಾಬುಕ್‌ಗಳನ್ನು ಬಿಟ್ಟು ಮೊಬೈಲ್ ಸಾಧನಗಳು,ಟ್ಯಾಬ್ಲೆಟ್ ಹಿಂದೆ ಬಿದ್ದಿರುವುದು ವ್ಯಕ್ತವಾಗುತ್ತಿದೆ.ಈ ವರ್ಷ ಕಂಪ್ಯೂಟರ್  ಮಾರಾಟವು ಕಳೆದ ವರ್ಷಕ್ಕಿಂತ ನಾಲ್ಕು ದಶಲಕ್ಷಗಳಷ್ಟು ಕಡಿಮೆಯಾದರೂ ಆಶ್ಚರ್ಯ ಪಡಬೇಕಿಲ್ಲವಂತೆ.ಇಂಟೆಲ್ ಕಳೆದ ತ್ರೈಮಾಸಿಕದ ವೇಳೆಯೇ ಈ ಬಗೆ ಮುನ್ಸೂಚನೆ ನೀಡಿತ್ತು.ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯ ಲಭ್ಯತೆ,ಇದನ್ನು ಅಳವಡಿಸಿದ ಕಂಪ್ಯೂಟರುಗಳ ಖರೀದಿಯಿಂದ ಈ ಸ್ಥಿತಿ ಬದಲಾಗಬಹುದು.ಆದರೆ ನಿಧಾನವಾಗಿಯಾದರೂ ಜನ ಕ್ಲೌಡ್ ಸೇವೆಗಳನ್ನು ಪಡೆದು,ತಮ್ಮ ಸ್ಮರಣಕೋಶಗಳನ್ನು ಅಂತರ್ಜಾಲದಲ್ಲೇ ಪಡೆದುಕೊಂಡು,ಮೊಬೈಲ್ ಸಾಧನಗಳು ಟ್ಯಾಬ್ಲೆಟ್ ಮೂಲಕವೇ ಇವನ್ನು ಸುಧಾರಿಸಿಕೊಂಡು,ಕಂಪ್ಯೂಟರುಗಳನ್ನು ಮನೆಯಲ್ಲಿ ಮಾತ್ರಾ ಬಳಸುವಂತೆ ಕಾಣಿಸುತ್ತದೆ ಅಲ್ಲವೇ?
--------------------------------------
ಕಣ್ಣನೋಟದಲ್ಲೇ ಪಾಸ್‌ವರ್ಡ್!
ಬೆರಳಚ್ಚು,ಕಣ್ಣಿನ ಐರಿಸ್,ಮುಖಚಹರೆ,ಹೀಗೆ ಹಲವು ಜೈವಿಕ ಚಹರೆಗಳ ಮೂಲಕ ವ್ಯಕ್ತಿಯನ್ನು ಗುರುತಿಸುವ ವ್ಯವಸ್ಥೆಗಳು ಇದೀಗ ಲಭ್ಯ.ಕೆಲವು ಚಹರೆಗಳು ಕೆಲವು ವ್ಯಕ್ತಿಗಳಿಗೆ ಸ್ಪಷ್ಟವಿಲ್ಲವಾದರೆ,ಆ ವ್ಯವಸ್ಥೆಯು ಆತನಿಗೆ ತೊಂದರೆ ಕೊಡುವ ಸಂಭವವಿದೆ.ಈಗ ಕಣ್ಣನೋಟದ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು,ಟೆಕ್ಸಾಸ್‌ನ ವಿಶ್ವವಿದ್ಯಾಲಯವು ಪ್ರಯತ್ನಿಸುತ್ತಿದೆ.ಇದರಲ್ಲಿ ನಾವು ಯಾವುದೇ ವಸ್ತುವನ್ನು ನೋಡಲು ದೃಷ್ಟಿ ಹೊರಳಿಸುವ ಪ್ರಕ್ರಿಯೆಯು ಒಬ್ಬನಿಗಿಂತ ಒಬ್ಬನಿಗೆ ಭಿನ್ನವಾಗಿರುತ್ತದೆ ಎನ್ನುವ ಆಧಾರದ ಮೇಲೆ ಅಭಿವೃದ್ಧಿ ಪಡಿಸಲಾಗುತ್ತಿದೆ.ಐರಿಎಸ್ ಮತ್ತಿದನ್ನು ಜತೆಯಾಗಿಸಿ,ಹೊಸ ವ್ಯವಸ್ಥೆಯನ್ನು ಅಳವಡಿಸಬಹುದು ಎಂದು ವಿವಿಯ ಸಂಶೋಧಕರ ಹೇಳಿಕೆ.ಐರಿಎಸ್ ಆಧಾರಿತ ವ್ಯವಸ್ಥೆಯನ್ನು, ಐರಿಸ್‌ನ ದೊಡ್ಡ ಮುದ್ರಿತ ಚಿತ್ರದ ಮೂಲಕ ವಂಚಿಸಲು ಸಾಧ್ಯವೆನ್ನುವುದು ಕಂಡುಬಂದ ನಂತರ,ಹೊಸ ಪ್ರಸ್ತಾವಕ್ಕೆ ಗರಿ ಮೂಡಿದೆ.ಆದರೆ ಯಾವ ಜೈವಿಕ ಚಹರೆಯಾಧರಿತ ವ್ಯವಸ್ಥೆಯೂ ಸಂಪೂರ್ಣ ಪರಿಹಾರವಾಗಲಾರದು.
-------------------------
ಹಾರ್ಡ್‌ಡಿಸ್ಕ್ ಸಾಕು,ಫ್ಲಾಶ್ ಬೇಕು:ಲೀನಸ್
ಲೀನಸ್ ತೊರ್ವಾಲ್ಡ್ಸ್ ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯ ಜನಕ.ಆತನ ವಿಚಾರಗಳು ಕಟುವಾಗಿಯೇ ಇರುತ್ತವೆ.ಈಗ ಆತ ಹಾರ್ಡ್‌ಡಿಸ್ಕ್‌ಗಳ ಹಿಂದೆ ಬಿದ್ದಿರುವ ಹಾಗಿದೆ.ಆತನು ಕಂಪ್ಯೂಟರಿನಲ್ಲಿ ಬಳಕೆಯಾಗುತ್ತಿರುವ ಹಾರ್ಡ್‌ಡಿಸ್ಕುಗಳ ಬಗ್ಗೆ ಆಕ್ಷೇಪ ಎತ್ತಿದ್ದಾನೆ.ಅವು ಬಹು ನಿಧಾನ,ಅವುಗಳಲ್ಲಿ ತಿರುಗುವ ಭಾಗಗಳಿವೆ ಮಾತ್ರವಲ್ಲ,ನಾವು ಹಾರ್ಡ್‌ಡಿಸ್ಕ್‌‍ನಲ್ಲಿ ಉಳಿಸಿದ ಮಾಹಿತಿಯ ಭದ್ರತೆ ಬಗ್ಗೆ ಖಾತರಿಯಿಲ್ಲ ಎನ್ನುವುದು ಆತನ ಆಕ್ಷೇಪವಾಗಿದೆ.ದೊಡ್ಡ ಡೇಟಾಸೆಂಟರುಗಳಲ್ಲಿ ಬಹಳ ದೊಡ್ಡ ಮಾಹಿತಿಗಳನ್ನು ಹಿಡಿದಿಡಲು ಹಾರ್ಡ್‌ಡಿಸ್ಕ್ ಬಳಕೆಯಾಗುವುದು ಸರಿ.ಆದರೆ ನಮ್ಮ ಕಂಪ್ಯೂಟರುಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಅವುಗಳನ್ನು ಬಳಸುವುದು,ಈಗ ಅನಿವಾರ್ಯವಲ್ಲ-ಫ್ಲಾಶ್ ಸ್ಮರಣಶಕ್ತಿ ಇರುವಾಗ,ಅವನ್ನು ಬಳಸುವುದೇ ಶ್ರೇಯಸ್ಕರ ಎನ್ನುವುದು ಅವರ ವಿಚಾರಸರಣಿ.ಫ್ಲಾಶ್ ಸ್ಮರಣಶಕ್ತಿಯಲ್ಲಿ ತಿರುಗುವ ಭಾಗಗಳಿಲ್ಲ,ಅವು ಹಾರ್ಡ್‌ಡಿಸ್ಕ್‌ಗೆ ಹೋಲಿಸಿದರೆ ಬಹು ಚುರುಕು ಕೂಡಾ.
UDAYAVANI
EPAPER
(ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.)