ಗೂಳೆಪ್ಪನೆಂಬ ಪ್ರತಿಫಲಾಪೇಕ್ಷೆಯಿಲ್ಲದ ಅರಣ್ಯ ಕಾವಲುಗಾರ

ಗೂಳೆಪ್ಪನೆಂಬ ಪ್ರತಿಫಲಾಪೇಕ್ಷೆಯಿಲ್ಲದ ಅರಣ್ಯ ಕಾವಲುಗಾರ

ಬರಹ

gooleppa

ಪ್ರತಿಫಲವಿಲ್ಲದೇ ಯಾವ ಕಾರ್ಯವನ್ನೂ ಮಾಡದ ದಿನಗಳಲ್ಲಿ ಏನನ್ನೂ ಬಯಸದೇ ೫೦ ಹೆಕ್ಟೇರ್ ಅರಣ್ಯವನ್ನು ಕಾವಲು ಕಾಯುತ್ತಿರುವ ಗೂಳೆಪ್ಪನಂತಹವರು ವಿರಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿಭಾಗದಲ್ಲಿ ಹಾಲಸಾಗರದ ಸಮೀಪ ಕಾದಿಟ್ಟ ಅರಣ್ಯವಿದೆ. ಕೂಡ್ಲಿಗಿ ವ್ಯಾಪ್ತಿಯ ಅರಣ್ಯದಲ್ಲಿ ಕಳೆದ ೨೦ ವರ್ಷಗಳಿಂದಲೂ ನಿರಂತರವಾಗಿ ತನ್ನ ಮಕ್ಕಳಂತೆಯೇ ಅರಣ್ಯದ ವನರಾಶಿಯನ್ನು ಕಾವಲು ಕಾಯುತ್ತಿರುವ ಗೂಳೆಪ್ಪ ಅಪರೂಪದ ವ್ಯಕ್ತಿ.
ಶಾಸಕರ ಆಪ್ತ ಸಹಾಯಕ ಡಾ.ವೆಂಕಟಗಿರಿ ದಳವಾಯಿ ಗೂಳೆಪ್ಪನ ಕಾರ್ಯವನ್ನು ಹೊಗಳಿದ್ದು ಕೇಳಿ, ಗೂಳೆಪ್ಪನನ್ನು ಕಾಣಲೇಬೇಕೆಂಬ ತುಡಿತ ಆರಂಭವಾಯಿತು. ಅರಣ್ಯವನ್ನು ಕಾವಲು ಕಾಯುವುದು ಹೇಗೆ? ಎಂಬ ಕುತೂಹಲದ ಜೊತೆಗೇ, ಹಗಲು ಇರುಳು ಯಾವುದೇ ಭಯವಿಲ್ಲದೆ, ಏನನ್ನೂ ಬಯಸದ ಈ ವ್ಯಕ್ತಿ ಅರಣ್ಯವನ್ನು ರಕ್ಷಿಸುತ್ತಿರುವ ಪರಿಯಾದರೂ ಎಂತಹದೆಂಬುದನ್ನು ನೋಡಲೇಬೇಕೆಂದು, ಕ್ಕಾಮೆರಾ ಹೆಗಲಿಗೇರಿಸಿ, ನನ್ನ ಸ್ನೇಹಿತ ವೃಷಭೇಂದ್ರನೊಂದಿಗೆ ಬೈಕ್‌ನ ಕಿವಿ ತಿರುವಿದೆ. ಕೂಡ್ಲಿಗಿ ತಾಲೂಕು ಕೇಂದ್ರದಿಂದ ಗುಡೇಕೋಟೆ ಮಾರ್ಗವಾಗಿ, ಹಾನಗಲ್‌ನ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಭಟ್ರಳ್ಳಿ ಎಂಬ ಗ್ರಾಮ ಬರುತ್ತದೆ. ಸುಮಾರು ೪೦ ಕಿ.ಮೀ ದೂರದ ಈ ಗ್ರಾಮದ ಎಡಕ್ಕೆ ಮತ್ತೆ ಬಂಡಿ ಜಾಡು ಹಿಡಿದು ೫ ಕಿ.ಮೀ ಸುತ್ತಿದರೆ ಎದುರಾಗುವುದು ಕೂಡ್ಲಿಗಿ ವಲಯದ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯ. ಅಲ್ಲಿಯೇ ಗೂಳೆಪ್ಪ ತನ್ನ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಸದಾ ಕಾವಲು ಕಾಯುತ್ತಿರುತ್ತಾನೆ. ತೆಳು ಮೈಕಟ್ಟು, ಚುರುಕಾದ ನಡಿಗೆ, ಕೈಯಲ್ಲಿ ಕೋಲು ಹಿಡಿದವನೇ ಗೂಳೆಪ್ಪ.
ಏನಣ್ಣಾ ನೀನು ಕಾವಲು ಕಾಯ್ತಿರೋ ಅರಣ್ಯ ತೋರಿಸ್ತೀಯಾ? ಎಂದುಬಿಟ್ಟರೆ ಆತನಿಗೆ ಖುಷಿಯೋ ಖುಷಿ. ಬನ್ನಿ ಸಾರ್ ಎಂದ ೫೬ ವರ್ಷದ ಯುವಕ ಗೂಳೆಪ್ಪನೊಂದಿಗೆ ಸೆಣಸಲಾಗದೆ ನಾವು ಕಾಲೆಳೆಯುತ್ತಾ ಆತ ರಕ್ಷಿಸಿರುವ ಅರಣ್ಯವನ್ನು ಸುತ್ತತೊಡಗಿದವು. ಸಾರ್ ಇದು ೯೫ರೊಳಗೆ ನೆಟ್ಟ ಗಿಡಗಳು, ಇವು ೯೭ರೊಳಗೆ ನೆಟ್ಟ ಗಿಡಗಳು ಈಗ ಹೆಂಗಾಗಿವೆ ಸಾರ್?, ನಾನ್ ಕೇಳೋದೇನೈತೆ ನೀವೆ ನೋಡ್ತಾ ಬರ್ರಿ ಎಂದು ಸಂತಸದಿಂದ ತನ್ನ ಕುಟುಂಬದವರನ್ನು ಪರಿಚಯಿಸಿದಂತೆ ಗೂಳೆಪ್ಪ ಓಡತೊಡಗಿದರೆ, ನಾವು ಸುಧಾರಿಸಿಕೊಳ್ಳುತ್ತ ಆತನ ಹಿಂದೆ ಸುತ್ತಿದೆವು. ೫೦ ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತನ್ನು ಗೂಳೆಪ್ಪ ಹೇಗೆ ರಕ್ಷಿಸಿದ್ದಾನೆಂದು ನಾವು ಕಣ್ಣಾರೆ ನೋಡಿದೆವು. ಅಲ್ಲಿ ಆಡು, ಮೇಕೆ, ದನಗಳಿಗೆ ಅವಕಾಶವಿಲ್ಲ. ಯಾರೂ ಕೊಡಲಿಯನ್ನು ಎತ್ತುವಂತಿಲ್ಲ. ಯಾರೇ ಆಗಲಿ ಕೊಡಲಿ ಎತ್ತಿದರೆ ಅಲ್ಲಿ ಗೂಳೆಪ್ಪ ಹಾಜರ್. ತನ್ನ ತಲೆ ಒಡೆದರೂ ಸರಿಯೆ ಗಿಡಕ್ಕೆ ಕೊಡಲಿಯನ್ನು ಯಾರೂ ಮುಟ್ಟಿಸುವಂತಿಲ್ಲ, ಇದು ಗೂಳೆಪ್ಪನ ನಿಯಮ. ಸಾರ್ ನೋಡಿ ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ ಏಸೊಂದು ಗಿಡ ಅದಾವ ನೋಡ್ರಿ, ನಾನು ಯಾರಿಗೂ ಮುಟ್ಟಿಸಿಕೊಟ್ಟಿಲ್ಲ, ಒಂದಾದರೂ ಗಿಡ ಕಡಿದದ್ವು ಇದಾವೇನ್ ನೋಡ್ರಿ ಎಂದು ಕೇಳಿದ. ನಿಜ ಅಲ್ಲಿ ಯಾರೂ ಯಾವ ಗಿಡವನ್ನೂ ಮುಟ್ಟಿಲ್ಲ, ಜಾನುವಾರುಗಳಿಗಾಗಿ ಎಲೆಯನ್ನೂ ಹರಿದಿಲ್ಲ, ಕೊಂಬೆಗಳನ್ನೂ ಕಡಿದಿಲ್ಲ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತಿನ ಸಿಪಾಯಿಗಳಂತೆ ಹಚ್ಚ ಹಸುರಾಗಿ ಬೆಳೆದ ವನರಾಶಿಯನ್ನು ನೋಡುವುದೇ ಒಂದು ಸೊಗಸು. ಬಂದ ಅತಿಥಿಗಳು ಎಷ್ಟು ಚೆನ್ನಾಗಿ ಬೆಳೆಸಿದಿಯಪಾ ಗೂಳೆಪ್ಪಾ ಎಂದರಷ್ಟೇ ಸಾಕು ಗೂಳೆಪ್ಪನ ಎದೆ ಮತ್ತಷ್ಟು ಉಬ್ಬುತ್ತದೆ. ಸಾರ್ ನಾನು ಇರೋವರೆಗೆ ಯಾರೂ ಈ ಕಾಡನ್ನು ಮುಟ್ಟಲಿಕ್ಕೆ ಬಿಡೋದಿಲ್ಲ, ಊರೋರನ್ನೇ ಎದುರು ಹಾಕ್ಕೊಂಡ ಮನಸಾ ನಾನು ಎಂದು ಹೆಮ್ಮೆಯಿಂದ ಹೇಳಿಕೊಂಡ. ಇಲ್ಲಿ ನವಿಲು, ಕರಡಿ, ಕಾಡುಹಂದಿ, ಚಿರತೆ, ನರಿಗಳಿವೆಯಂತೆ. ಅವುಗಳ ಪಾಡಿಗೆ ಅವು, ಈತನ ಪಾಲಿಗೆ ಅರಣ್ಯ ಅಷ್ಟೆ. ಹಗಲು ರಾತ್ರಿ ಇಲ್ಲೇ ಕಾವಲು ಕಾಯ್ತಿಯಲ್ಲ ನಿನಗೆ ಭಯ ಆಗೋದಿಲ್ಲಾ? ಎಂದರೆ, ಭಯ ಯಾಕೆ ಸಾರ್, ಎಲ್ಲೆಲ್ಲಿ ಬಂಡೆ ಐತೋ ಅಲ್ಲಿ ರಾತ್ರಿ ಕೂತ್ಗೊಂಡು ಕಾಯ್ತೀನಿ, ನನ್ ಜೊತೆ ದ್ಯಾವ್ರು ಇದಾನಲ್ಲ ಅತನೇ ನನ್ನ ಕಾಪಾಡೋದು, ನೋಡಿ ಒಮ್ಮೆ ಮರಿ ಹಾಕಿದ ಕಾಡು ಹಂದಿ ತನ್ ಹತ್ರ ನಾನ್ ಬಂದ್ ಏನಾರ ಮಾಡೀನೇನೋ ಅಂತ ಗಾಯ ಮಾಡ್ತು, ತೊಡೆ ಹರೀತು, ಹಂಗೆ ಆಸ್ಪತ್ರೆಲಿ ಸೇರ್ಕೋಂಡೆ, ಗಾಯ ಮಾಯ್ದಿದ್ರೂ ಬಂದು ನನ್ ಕಾಡ್ನ ನಾನ್ ಕಾವಲು ಕಾಯ್ದೆ, ಅದನ್ ಹಂಗೆ ಬಿಟ್ರೆ ಯಾರ್ ಕಾಯ್ತಾರೆ ಸಾರ್? ಎಂದು ಅರಣ್ಯದ ಬಗ್ಗೆ ಕಕ್ಕುಲಾತಿಯಿಂದ ಮುಗ್ಧನಾಗಿ ಗೂಳೆಪ್ಪ ಪ್ರಶ್ನಿಸಿದ. ಒಂದೆರಡು ಸಲ ಗಿಡ ಕಡಿಯುವವರನ್ನ ಈತ ಹಾಗೂ ಈತನ ಮಗ ಸೇರಿ ಹಿಡಿದು, ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಗೂಳೆಪ್ಪ ಕಾವಲು ಕಾಯ್ತಾ ಇದಾನೆ ಅಂದ್ರೆ ಯಾರೂ ಇದ್ರಾಗೆ ಬರಂಗಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಇತ್ತೀಚೆಗೆ ಕಾಡಿನ ಪಕ್ಕದಲ್ಲಿರುವ ಬಂಡೆಗಲ್ಲನ್ನು ಒಡೆಯಲು ಕೆಲವರು ಬಂದಿದ್ದರಂತೆ, ಅದನ್ನೂ ಗೂಳೆಪ್ಪ ವಿರೋಧಿಸಿದ್ದಾನೆ. ಬಂಡೆ ಒಡೆಯಲಿಕ್ಕೆ ಬಂದವರು, ಕಾಡನ್ನೂ ಕಡಿದಾರೆಂಬ ಭಯ ಆತನಿಗೆ. ಹಾಗಾಗಿ ಇಲ್ಲಿ ಬಂಡೆಯನ್ನು ಒಡೆಯುವುದೂ ನಿಷೇಧ. ಪ್ರಾಣಿಗಳಿಗೆ ಕುಡಿಯಲು ನೀರಿನ ತೊಂದರೆಯಾಗುವುದೆಂದು ಗೂಳೆಪ್ಪ ತಾನೇ ಕೆಲವೆಡೆ ಅಲ್ಲಲ್ಲಿ ೮-೧೦ ಅಡಿ ಆಳದ ಗುಂಡಿಗಳನ್ನು ತೋಡಿದ್ದಾನೆ. ಅಲ್ಲಿ ಸಂಗ್ರಹವಾಗುವ ನೀರು ಪ್ರಾಣಿಗಳಿಗೆ ಆಸರೆಯಾಗಿದೆ. ಕಾಡಿನ ಅಂಗುಲ ಅಂಗುಲವೂ ಪರಿಚಯವಿರುವ ಗೂಳೆಪ್ಪನಿಗೆ, ಅದನ್ನು ಕಾಪಾಡುವುದೊಂದೇ ತನ್ನ ಕರ್ತವ್ಯ ಎಂದು ಬಗೆಯುತ್ತಾನೆ. ಪ್ರತಿದಿನವೂ ಬೆಳಿಗ್ಗೆ ೫ ಕಿ.ಮೀ ದೂರದ ತನ್ನ ಊರಾದ ಭಟ್ರಳ್ಳಿಗೆ ಹೋಗಿ ಊಟ ಮಾಡಿ, ಬುತ್ತಿ ತೆಗೆದುಕೊಂಡು ಮತ್ತೆ ಅರಣ್ಯಕ್ಕೆ ಬರುತ್ತಾನೆ. ರಾತ್ರಿಯೆಲ್ಲ ಕಾವಲು ಕಾಯುತ್ತಾನೆ. ಮನೆಯಲ್ಲಿ ಮೊದ ಮೊದಲು ಇದನ್ನು ವಿರೋಧಿಸಿದರೂ ಈಗ ಎಲ್ಲರೂ ಹೊಂದಿಕೊಂಡಿದ್ದಾರಲ್ಲದೆ, ಗೂಳೆಪ್ಪ ಎಲ್ಲಾದರೂ ಊರಿಗೆ ಹೋದರೆ, ಆತನ ಮಕ್ಕಳು ಅರಣ್ಯದ ಕಾವಲು ಜವಾಬ್ದಾರಿಯನ್ನು ಹೊರುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಇದುವರೆಗೆ ಈತ ಈ ಕೆಲಸಕ್ಕಾಗಿ ಅರಣ್ಯ ಇಲಾಖೆಯಿಂದ ಏನನ್ನೂ ಬಯಸಿಲ್ಲ. ೪ ಜನ ಪುತ್ರರು, ಇಬ್ಬರು ಪುತ್ರಿಯರು ಈತನಿಗಿದ್ದಾರೆ. ಇಬ್ಬರು ಬೇಸಾಯ ಮಾಡಿದರೆ, ಇಬ್ಬರು ಪುತ್ರರು ಓದುತ್ತಿದ್ದಾರೆ. ಇಬ್ಬರು ಪುತ್ರಿಯರಿಗೂ ಮದುವೆಯಾಗಿದೆ.
ನನಗೇನೋ ಕಾಡು ಕಾಯ್ಬೇಕೂಂತ ಪ್ರೇರಣೆಯಾಯ್ತು ಸಾರ್, ಕಾಯ್ತಾ ಅದೀನಿ, ನನಗೇನೂ ಬ್ಯಾಡ, ಕಾಡು ಚಂದಾಗಿದ್ರೆ ಸಾಕು, ಕಾಡು ಬೆಳೆದರೇ ನಾಡು ಬೆಳೀತದೆ ಅಲ್ವಾ? ಎಂದು ಆತ ಕೇಳಿದ ಪ್ರಶ್ನೆಗೆ ಏನು ಹೇಳಬೇಕೋ ತಿಳೀಲಿಲ್ಲ. ಕೇವಲ ಘೋಷಣೆಗಳನ್ನು ಕೂಗುತ್ತ ಅರಣ್ಯ ನಾಶ ಮಾಡುತ್ತಿರುವ ನಗರವಾಸಿಗಳು ಒಂದೆಡೆಯಾದರೆ, ಘೋಷಣೆಗೆ ನಿಜವಾದ ಅರ್ಥ ಕಲ್ಪಿಸಿಕೊಟ್ಟ ನಿಷ್ಕಾಮ ಕರ್ಮಿ ಗೂಳೆಪ್ಪ ಮತ್ತೊಂದೆಡೆ. ಮನಸ್ಸು ಮೂಕವಾಯಿತು. ಗೂಳೆಪ್ಪನಿಗೆ ಮನಪೂರ್ವಕವಾಗಿ ನಮಸ್ಕರಿಸಿ ಬೈಕ್ ಏರಿದೆ. ಅಂದಹಾಗೆ ಗೂಳೆಪ್ಪನಿಗೆ ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ತಾಲೂಕು ವತಿಯಿಂದ ಕ್ಷೇತ್ರದ ಶಾಸಕ  ಬಿ.ನಾಗೇಂದ್ರ ಶಾಲು ಹೊದೆಸಿ ಸನ್ಮಾನಿಸಿದರು. ರಾಜ್ಯ ಸರ್ಕಾರವೂ ಈತನ ಕಾರ್ಯವನ್ನು ಗುರುತಿಸಿ ಗೌರವಿಸಬೇಕಾಗಿದೆ. 
ಪ್ರತಿಫಲವಿಲ್ಲದೇ ಯಾವ ಕಾರ್ಯವನ್ನೂ ಮಾಡದ ದಿನಗಳಲ್ಲಿ ಏನನ್ನೂ ಬಯಸದೇ ೫೦ ಹೆಕ್ಟೇರ್ ಅರಣ್ಯವನ್ನು ಕಾವಲು ಕಾಯುತ್ತಿರುವ ಗೂಳೆಪ್ಪನಂತಹವರು ವಿರಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿಭಾಗದಲ್ಲಿ ಹಾಲಸಾಗರದ ಸಮೀಪ ಕಾದಿಟ್ಟ ಅರಣ್ಯವಿದೆ. ಕೂಡ್ಲಿಗಿ ವ್ಯಾಪ್ತಿಯ ಅರಣ್ಯದಲ್ಲಿ ಕಳೆದ ೨೦ ವರ್ಷಗಳಿಂದಲೂ ನಿರಂತರವಾಗಿ ತನ್ನ ಮಕ್ಕಳಂತೆಯೇ ಅರಣ್ಯದ ವನರಾಶಿಯನ್ನು ಕಾವಲು ಕಾಯುತ್ತಿರುವ ಗೂಳೆಪ್ಪ ಅಪರೂಪದ ವ್ಯಕ್ತಿ.ಅರಣ್ಯವನ್ನು ಕಾವಲು ಕಾಯುವುದು ಹೇಗೆ? ಎಂಬ ಕುತೂಹಲದ ಜೊತೆಗೇ, ಹಗಲು ಇರುಳು ಯಾವುದೇ ಭಯವಿಲ್ಲದೆ, ಏನನ್ನೂ ಬಯಸದ ಈ ವ್ಯಕ್ತಿ ಅರಣ್ಯವನ್ನು ರಕ್ಷಿಸುತ್ತಿರುವ ಪರಿಯಾದರೂ ಎಂತಹದೆಂಬುದನ್ನು ನೋಡಲೇಬೇಕೆಂದು, ಕ್ಕಾಮೆರಾ ಹೆಗಲಿಗೇರಿಸಿ, ನನ್ನ ಸ್ನೇಹಿತ ವೃಷಭೇಂದ್ರನೊಂದಿಗೆ ಬೈಕ್‌ನ ಕಿವಿ ತಿರುವಿದೆ. ಕೂಡ್ಲಿಗಿ ತಾಲೂಕು ಕೇಂದ್ರದಿಂದ ಗುಡೇಕೋಟೆ ಮಾರ್ಗವಾಗಿ, ಹಾನಗಲ್‌ನ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಭಟ್ರಳ್ಳಿ ಎಂಬ ಗ್ರಾಮ ಬರುತ್ತದೆ. ಸುಮಾರು ೪೦ ಕಿ.ಮೀ ದೂರದ ಈ ಗ್ರಾಮದ ಎಡಕ್ಕೆ ಮತ್ತೆ ಬಂಡಿ ಜಾಡು ಹಿಡಿದು ೫ ಕಿ.ಮೀ ಸುತ್ತಿದರೆ ಎದುರಾಗುವುದು ಕೂಡ್ಲಿಗಿ ವಲಯದ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯ. ಅಲ್ಲಿಯೇ ಗೂಳೆಪ್ಪ ತನ್ನ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಸದಾ ಕಾವಲು ಕಾಯುತ್ತಿರುತ್ತಾನೆ. ತೆಳು ಮೈಕಟ್ಟು, ಚುರುಕಾದ ನಡಿಗೆ, ಕೈಯಲ್ಲಿ ಕೋಲು ಹಿಡಿದವನೇ ಗೂಳೆಪ್ಪ.ಏನಣ್ಣಾ ನೀನು ಕಾವಲು ಕಾಯ್ತಿರೋ ಅರಣ್ಯ ತೋರಿಸ್ತೀಯಾ? ಎಂದುಬಿಟ್ಟರೆ ಆತನಿಗೆ ಖುಷಿಯೋ ಖುಷಿ. ಬನ್ನಿ ಸಾರ್ ಎಂದ ೫೬ ವರ್ಷದ ಯುವಕ ಗೂಳೆಪ್ಪನೊಂದಿಗೆ ಸೆಣಸಲಾಗದೆ ನಾವು ಕಾಲೆಳೆಯುತ್ತಾ ಆತ ರಕ್ಷಿಸಿರುವ ಅರಣ್ಯವನ್ನು ಸುತ್ತತೊಡಗಿದವು. ಸಾರ್ ಇದು ೯೫ರೊಳಗೆ ನೆಟ್ಟ ಗಿಡಗಳು, ಇವು ೯೭ರೊಳಗೆ ನೆಟ್ಟ ಗಿಡಗಳು ಈಗ ಹೆಂಗಾಗಿವೆ ಸಾರ್?, ನಾನ್ ಕೇಳೋದೇನೈತೆ ನೀವೆ ನೋಡ್ತಾ ಬರ್ರಿ ಎಂದು ಸಂತಸದಿಂದ ತನ್ನ ಕುಟುಂಬದವರನ್ನು ಪರಿಚಯಿಸಿದಂತೆ ಗೂಳೆಪ್ಪ ಓಡತೊಡಗಿದರೆ, ನಾವು ಸುಧಾರಿಸಿಕೊಳ್ಳುತ್ತ ಆತನ ಹಿಂದೆ ಸುತ್ತಿದೆವು. ೫೦ ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತನ್ನು ಗೂಳೆಪ್ಪ ಹೇಗೆ ರಕ್ಷಿಸಿದ್ದಾನೆಂದು ನಾವು ಕಣ್ಣಾರೆ ನೋಡಿದೆವು. ಅಲ್ಲಿ ಆಡು, ಮೇಕೆ, ದನಗಳಿಗೆ ಅವಕಾಶವಿಲ್ಲ. ಯಾರೂ ಕೊಡಲಿಯನ್ನು ಎತ್ತುವಂತಿಲ್ಲ. ಯಾರೇ ಆಗಲಿ ಕೊಡಲಿ ಎತ್ತಿದರೆ ಅಲ್ಲಿ ಗೂಳೆಪ್ಪ ಹಾಜರ್. ತನ್ನ ತಲೆ ಒಡೆದರೂ ಸರಿಯೆ ಗಿಡಕ್ಕೆ ಕೊಡಲಿಯನ್ನು ಯಾರೂ ಮುಟ್ಟಿಸುವಂತಿಲ್ಲ, ಇದು ಗೂಳೆಪ್ಪನ ನಿಯಮ. ಸಾರ್ ನೋಡಿ ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ ಏಸೊಂದು ಗಿಡ ಅದಾವ ನೋಡ್ರಿ, ನಾನು ಯಾರಿಗೂ ಮುಟ್ಟಿಸಿಕೊಟ್ಟಿಲ್ಲ, ಒಂದಾದರೂ ಗಿಡ ಕಡಿದದ್ವು ಇದಾವೇನ್ ನೋಡ್ರಿ ಎಂದು ಕೇಳಿದ. ನಿಜ ಅಲ್ಲಿ ಯಾರೂ ಯಾವ ಗಿಡವನ್ನೂ ಮುಟ್ಟಿಲ್ಲ, ಜಾನುವಾರುಗಳಿಗಾಗಿ ಎಲೆಯನ್ನೂ ಹರಿದಿಲ್ಲ, ಕೊಂಬೆಗಳನ್ನೂ ಕಡಿದಿಲ್ಲ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತಿನ ಸಿಪಾಯಿಗಳಂತೆ ಹಚ್ಚ ಹಸುರಾಗಿ ಬೆಳೆದ ವನರಾಶಿಯನ್ನು ನೋಡುವುದೇ ಒಂದು ಸೊಗಸು. ಬಂದ ಅತಿಥಿಗಳು ಎಷ್ಟು ಚೆನ್ನಾಗಿ ಬೆಳೆಸಿದಿಯಪಾ ಗೂಳೆಪ್ಪಾ ಎಂದರಷ್ಟೇ ಸಾಕು ಗೂಳೆಪ್ಪನ ಎದೆ ಮತ್ತಷ್ಟು ಉಬ್ಬುತ್ತದೆ. ಸಾರ್ ನಾನು ಇರೋವರೆಗೆ ಯಾರೂ ಈ ಕಾಡನ್ನು ಮುಟ್ಟಲಿಕ್ಕೆ ಬಿಡೋದಿಲ್ಲ, ಊರೋರನ್ನೇ ಎದುರು ಹಾಕ್ಕೊಂಡ ಮನಸಾ ನಾನು ಎಂದು ಹೆಮ್ಮೆಯಿಂದ ಹೇಳಿಕೊಂಡ. ಇಲ್ಲಿ ನವಿಲು, ಕರಡಿ, ಕಾಡುಹಂದಿ, ಚಿರತೆ, ನರಿಗಳಿವೆಯಂತೆ. ಅವುಗಳ ಪಾಡಿಗೆ ಅವು, ಈತನ ಪಾಲಿಗೆ ಅರಣ್ಯ ಅಷ್ಟೆ. ಹಗಲು ರಾತ್ರಿ ಇಲ್ಲೇ ಕಾವಲು ಕಾಯ್ತಿಯಲ್ಲ ನಿನಗೆ ಭಯ ಆಗೋದಿಲ್ಲಾ? ಎಂದರೆ, ಭಯ ಯಾಕೆ ಸಾರ್, ಎಲ್ಲೆಲ್ಲಿ ಬಂಡೆ ಐತೋ ಅಲ್ಲಿ ರಾತ್ರಿ ಕೂತ್ಗೊಂಡು ಕಾಯ್ತೀನಿ, ನನ್ ಜೊತೆ ದ್ಯಾವ್ರು ಇದಾನಲ್ಲ ಅತನೇ ನನ್ನ ಕಾಪಾಡೋದು, ನೋಡಿ ಒಮ್ಮೆ ಮರಿ ಹಾಕಿದ ಕಾಡು ಹಂದಿ ತನ್ ಹತ್ರ ನಾನ್ ಬಂದ್ ಏನಾರ ಮಾಡೀನೇನೋ ಅಂತ ಗಾಯ ಮಾಡ್ತು, ತೊಡೆ ಹರೀತು, ಹಂಗೆ ಆಸ್ಪತ್ರೆಲಿ ಸೇರ್ಕೋಂಡೆ, ಗಾಯ ಮಾಯ್ದಿದ್ರೂ ಬಂದು ನನ್ ಕಾಡ್ನ ನಾನ್ ಕಾವಲು ಕಾಯ್ದೆ, ಅದನ್ ಹಂಗೆ ಬಿಟ್ರೆ ಯಾರ್ ಕಾಯ್ತಾರೆ ಸಾರ್? ಎಂದು ಅರಣ್ಯದ ಬಗ್ಗೆ ಕಕ್ಕುಲಾತಿಯಿಂದ ಮುಗ್ಧನಾಗಿ ಗೂಳೆಪ್ಪ ಪ್ರಶ್ನಿಸಿದ. ಒಂದೆರಡು ಸಲ ಗಿಡ ಕಡಿಯುವವರನ್ನ ಈತ ಹಾಗೂ ಈತನ ಮಗ ಸೇರಿ ಹಿಡಿದು, ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಗೂಳೆಪ್ಪ ಕಾವಲು ಕಾಯ್ತಾ ಇದಾನೆ ಅಂದ್ರೆ ಯಾರೂ ಇದ್ರಾಗೆ ಬರಂಗಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಇತ್ತೀಚೆಗೆ ಕಾಡಿನ ಪಕ್ಕದಲ್ಲಿರುವ ಬಂಡೆಗಲ್ಲನ್ನು ಒಡೆಯಲು ಕೆಲವರು ಬಂದಿದ್ದರಂತೆ, ಅದನ್ನೂ ಗೂಳೆಪ್ಪ ವಿರೋಧಿಸಿದ್ದಾನೆ. ಬಂಡೆ ಒಡೆಯಲಿಕ್ಕೆ ಬಂದವರು, ಕಾಡನ್ನೂ ಕಡಿದಾರೆಂಬ ಭಯ ಆತನಿಗೆ. ಹಾಗಾಗಿ ಇಲ್ಲಿ ಬಂಡೆಯನ್ನು ಒಡೆಯುವುದೂ ನಿಷೇಧ. ಪ್ರಾಣಿಗಳಿಗೆ ಕುಡಿಯಲು ನೀರಿನ ತೊಂದರೆಯಾಗುವುದೆಂದು ಗೂಳೆಪ್ಪ ತಾನೇ ಕೆಲವೆಡೆ ಅಲ್ಲಲ್ಲಿ ೮-೧೦ ಅಡಿ ಆಳದ ಗುಂಡಿಗಳನ್ನು ತೋಡಿದ್ದಾನೆ. ಅಲ್ಲಿ ಸಂಗ್ರಹವಾಗುವ ನೀರು ಪ್ರಾಣಿಗಳಿಗೆ ಆಸರೆಯಾಗಿದೆ. ಕಾಡಿನ ಅಂಗುಲ ಅಂಗುಲವೂ ಪರಿಚಯವಿರುವ ಗೂಳೆಪ್ಪನಿಗೆ, ಅದನ್ನು ಕಾಪಾಡುವುದೊಂದೇ ತನ್ನ ಕರ್ತವ್ಯ ಎಂದು ಬಗೆಯುತ್ತಾನೆ. ಪ್ರತಿದಿನವೂ ಬೆಳಿಗ್ಗೆ ೫ ಕಿ.ಮೀ ದೂರದ ತನ್ನ ಊರಾದ ಭಟ್ರಳ್ಳಿಗೆ ಹೋಗಿ ಊಟ ಮಾಡಿ, ಬುತ್ತಿ ತೆಗೆದುಕೊಂಡು ಮತ್ತೆ ಅರಣ್ಯಕ್ಕೆ ಬರುತ್ತಾನೆ. ರಾತ್ರಿಯೆಲ್ಲ ಕಾವಲು ಕಾಯುತ್ತಾನೆ. ಮನೆಯಲ್ಲಿ ಮೊದ ಮೊದಲು ಇದನ್ನು ವಿರೋಧಿಸಿದರೂ ಈಗ ಎಲ್ಲರೂ ಹೊಂದಿಕೊಂಡಿದ್ದಾರಲ್ಲದೆ, ಗೂಳೆಪ್ಪ ಎಲ್ಲಾದರೂ ಊರಿಗೆ ಹೋದರೆ, ಆತನ ಮಕ್ಕಳು ಅರಣ್ಯದ ಕಾವಲು ಜವಾಬ್ದಾರಿಯನ್ನು ಹೊರುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಇದುವರೆಗೆ ಈತ ಈ ಕೆಲಸಕ್ಕಾಗಿ ಅರಣ್ಯ ಇಲಾಖೆಯಿಂದ ಏನನ್ನೂ ಬಯಸಿಲ್ಲ. ೪ ಜನ ಪುತ್ರರು, ಇಬ್ಬರು ಪುತ್ರಿಯರು ಈತನಿಗಿದ್ದಾರೆ. ಇಬ್ಬರು ಬೇಸಾಯ ಮಾಡಿದರೆ, ಇಬ್ಬರು ಪುತ್ರರು ಓದುತ್ತಿದ್ದಾರೆ. ಇಬ್ಬರು ಪುತ್ರಿಯರಿಗೂ ಮದುವೆಯಾಗಿದೆ.ನನಗೇನೋ ಕಾಡು ಕಾಯ್ಬೇಕೂಂತ ಪ್ರೇರಣೆಯಾಯ್ತು ಸಾರ್, ಕಾಯ್ತಾ ಅದೀನಿ, ನನಗೇನೂ ಬ್ಯಾಡ, ಕಾಡು ಚಂದಾಗಿದ್ರೆ ಸಾಕು, ಕಾಡು ಬೆಳೆದರೇ ನಾಡು ಬೆಳೀತದೆ ಅಲ್ವಾ? ಎಂದು ಆತ ಕೇಳಿದ ಪ್ರಶ್ನೆಗೆ ಏನು ಹೇಳಬೇಕೋ ತಿಳೀಲಿಲ್ಲ. ಕೇವಲ ಘೋಷಣೆಗಳನ್ನು ಕೂಗುತ್ತ ಅರಣ್ಯ ನಾಶ ಮಾಡುತ್ತಿರುವ ನಗರವಾಸಿಗಳು ಒಂದೆಡೆಯಾದರೆ, ಘೋಷಣೆಗೆ ನಿಜವಾದ ಅರ್ಥ ಕಲ್ಪಿಸಿಕೊಟ್ಟ ನಿಷ್ಕಾಮ ಕರ್ಮಿ ಗೂಳೆಪ್ಪ ಮತ್ತೊಂದೆಡೆ. ಮನಸ್ಸು ಮೂಕವಾಯಿತು. ಗೂಳೆಪ್ಪನಿಗೆ ಮನಪೂರ್ವಕವಾಗಿ ನಮಸ್ಕರಿಸಿ ಬೈಕ್ ಏರಿದೆ. ಅಂದಹಾಗೆ ಗೂಳೆಪ್ಪನಿಗೆ ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ತಾಲೂಕು ವತಿಯಿಂದ ಕ್ಷೇತ್ರದ ಶಾಸಕ  ಬಿ.ನಾಗೇಂದ್ರ ಶಾಲು ಹೊದೆಸಿ ಸನ್ಮಾನಿಸಿದರು. ರಾಜ್ಯ ಸರ್ಕಾರವೂ ಈತನ ಕಾರ್ಯವನ್ನು ಗುರುತಿಸಿ ಗೌರವಿಸಬೇಕಾಗಿದೆ.  -ಸಿದ್ಧರಾಮ ಹಿರೇಮಠ. ಕೂಡ್ಲಿಗಿ