ಗೆಳತಿ ನಿನ್ನ ಉದಾರ ಮನಸ್ಸಿನ ಭಾವನೆಗಳಿಗೆ ನಾನು ಹೇಗೆ ಅಥ೯ ಮಾಡಿಕೊಳ್ಳಲಿ..?

ಗೆಳತಿ ನಿನ್ನ ಉದಾರ ಮನಸ್ಸಿನ ಭಾವನೆಗಳಿಗೆ ನಾನು ಹೇಗೆ ಅಥ೯ ಮಾಡಿಕೊಳ್ಳಲಿ..?

ನೀ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಏನಂತ ಬಣ್ಣಿಸಲಿ ಗೆಳತಿ. ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿಗಿಂತ ಹೆಚ್ಚು ಆಭಿಮಾನ ಪಡಬೇಕಾಗಿದೆ. ನಿನ್ನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಬರೀ ಸೌಂದರ್ಯವಷ್ಟೇ ನಿನ್ನಲಿದಿದ್ದರೆ ಈ ಪತ್ರ ಬರೆಯುವ ಮನಸ್ಸು ಕೂಡ ಬರುತಿರಲಿಲ್ಲ. ನಿನ್ನಲ್ಲಿರುವ ಆ ವಿಶಾಲ ಹೃದಯ, ಗೊತ್ತು ಪರಿಚಯವಿಲ್ಲದಿದ್ದರೂ ಸಹಕಾರ ಮನೋಭಾವನೆ ಹೊಂದಿರುವ ನಿನ್ನನ್ನು ಒಂದೇ ಒಂದು ಸಾಲಿನಲ್ಲಿ ಹೇಗೆ ಹಿಡಿದಿಡಲಿ.

ನಿನ್ನ ಬಗ್ಗೆ ನಾನು ಕಟ್ಟಿಕೊಂಡಿದ್ದ ಕನಸು ಕಲ್ಪನೆಗಳಿಗೆ ನೀನು ಈ ರೀತಿ ಫುಲ್‍ಸ್ಟಾಪ್ ಹಾಕುತ್ತಿಯಾ ಅಂತ ಭಾವಿಸಿರಲಿಲ್ಲ. ಅನಿರೀಕ್ಷಿತ ಬೆಳವಣಿಗೆಯಿಂದ ಎಲ್ಲಾ ಬಯಕೆಗಳು ಕರಗಿ ಹೋದವು. ಮನುಷ್ಯನಿಗೆ ಜೀವನದಲ್ಲಿ ಕಷ್ಟವನ್ನು ಬರದೇ ಇರದಿದ್ದರೆ ವಾಸ್ತವಿಕ ಜೀವನದಲ್ಲಿ ಪ್ರತಿಯೊಬ್ಬರ ಮನಸ್ಸು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ನೀನು ತೋರಿಸಿಕೊಟ್ಟಿರುವೆ.
ಹಿಂದೆ ಮುಂದೆ ಯಾವುದನ್ನು ಯೋಚಿಸದೇ, ನನ್ನನ್ನು ಮುಖಾಮುಖಿಯಾಗಿ ನೋಡದೆ, ನನ್ನ ಬಗ್ಗೆ ಏನೊಂದು ತಿಳಿದುಕೊಳ್ಳದೇ ನಾನು ತೊಂದರೆಯಲ್ಲಿ ಸಿಲುಕಿರುವೆ ಎಂಬ ಇಮೇಲ್ ಕಳುಹಿಸಿದ ಕ್ಷಣಕ್ಕೆ ಸ್ಪಂಧಿಸಿ, ಅಷ್ಟು ದೊಡ್ಡ ಮೊತ್ತವನ್ನು ಕಳುಹಿಸಿರುವುದಕ್ಕೆ ನಿನ್ನ ಹೃದಯ ವಿಶಾಲತೆಗೆ ಯಾವ ರೀತಿ ಕೃತಜ್ಞತೆ ಹೇಳಲಿ ಗೊತ್ತಾಗುತ್ತಿಲ್ಲ.
 
ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಆ ಕಷ್ಟಗಳನ್ನು ಎದುರಿಸುವ ಮನಸ್ಥೈರ್ಯ ಕುಂದಿದ್ದಾಗ ದಿಕ್ಕೆ ತೋಚುವುದಿಲ್ಲ. ಆಗ ಆತ್ಮೀಯರಲ್ಲಿ ಹೇಳಿಕೊಂಡಾಗಲೂ ಸಹಾಯಕ್ಕೆ ಬರದೇ ಎಲ್ಲರೂ ದೂರ ಸರಿಯುತ್ತಾರೆ. ಅಂಥದರಲ್ಲಿ ನೀನು ನಾನು ಯಾವತ್ತು ಭೇಟಿಯಾಗಿಲ್ಲ. ನಮ್ಮಿಬ್ಬರ ಹುಟ್ಟು ಬದುಕಿನ ನಡುವೆ ಎಲ್ಲವೂ ಕುತೂಹಲದ ಸಂಗತಿಗಳೇ ಆಗಿದ್ದವು. ನಾವಿಬ್ಬರೂ ಸ್ನೇಹಿತರಾಗಿ ಹೇಗೋ ಜೀವನ ಸಾಗಿಸುತ್ತಲಿದ್ದಾಗ ನನಗೆ ಬಂದಿರುವ ಕಷ್ಟಕ್ಕೆ ನೀ ಸಾರಥಿಯಾಗಿ ನಿಂತಿದ್ದಕ್ಕೆ ನಿನಗಾಗಿ ಕಟ್ಟಿಕೊಂಡ ಕನಸಿನ ಸೌಧ ಮುರಿದು ಹಾಕಲು ತುಂಬಾ ಖುಷಿಯಾಗುತ್ತಿದೆ. ಕಾರಣ ನೀನು ಪ್ರೇಮ ದೇವತೆ ಆಗುವುದಕ್ಕಿಂತ ಇನ್ನು ಮುಂದೆ ಆರಾಧ್ಯ ದೇವತೆಯಾಗಿ ಸ್ವೀಕರಿಸಲು ಸಂತೋಷವಾಗುತ್ತಿದೆ.

ಈ ನನ್ನ ವಿಚಾರಗಳು ಕೇಳಿ ನಿನಗೆ ಶಾಕ್! ಆಗಿರಬೇಕು. ನಿನ್ನ ಮನದಲ್ಲಿ ಆ ಪ್ರೀತಿ ಇತ್ತೋ ಇಲ್ಲವೊ ಗೊತ್ತಿಲ್ಲ. ನಾನು ಮಾತ್ರ ಅಂಥ ಒಂದು ಪ್ರೇಮದ ಅರಮನೆ ಕಟ್ಟಿಕೊಂಡಿದ್ದೆ. ನಿನ್ನ ದೈತ್ಯ ಸಹಕಾರಕ್ಕೆ ಕಳಪೆ ಮಟ್ಟದ ಕಟ್ಟಡ ಕುಸಿದು ಬಿದ್ದಂತೆ ನಿನ್ನ ದೊಡ್ಡ ಗುಣದ ಮುಂದೆ ನಾನು ಕುಬ್ಜನಾಗಿದ್ದೇನೆ ಗೆಳತಿ. ದಯವಿಟ್ಟು ಕ್ಷಮೆ ಇರಲಿ. ನಿನ್ನೊಳಗೆ ನನ್ನ ಬಗ್ಗೆ ಪ್ರೀತಿ-ಪ್ರೇಮ ಕಾಮನೆಯ ಭಾವನೆಗಳು ಇಲ್ಲವೆಂದು ಭಾವಿಸಿದ್ದೇನೆ. ಅವೆಲ್ಲ ದುರ್ಗುಣಗಳು ಏನಿದ್ದರೂ ನನ್ನಲ್ಲಿದ್ದವು. ಅವು ನೀನಿಗ ನಾಶಗೊಳಿಸಿದ್ದಿಯ. ಈಗ ಬರೀ ನಿಷ್ಕಲ್ಮಶವಾದ ಸ್ನೇಹ. ಸಂಬಂಧಗಳು ಶಾಶ್ವತವಾಗಿರಲು ಇಂಥ ಘಟನೆಗಳು ಎದುರಾಗಬೇಕು ಎನ್ನಲು ಪುಳಕಗೊಳ್ಳುತ್ತೇನೆ. ನಿನ್ನನ್ನು ಗೌರವ ಸ್ಥಾನದಲ್ಲಿಟ್ಟು ಪೂಜಿಸಿ, ನಿನ್ನ ಆರಾಧನೆಯಲ್ಲಿ ನೀ ಮಾಡಿರುವ ಸಹಾಯಕ್ಕೆ ಋಣ ಹೇಗೆ ತೀರಿಸಲಿ ಎಂಬುದು ಚಿಂತಿಸುತಿದ್ದೇನೆ.
 
ಸಾಧನೆಯ ಶಿಖರವೊಂದು ಏರಲು ಪ್ರೇರೆಪಿಸುತ್ತಿರುವ ನಿನ್ನ ಪ್ರೋತ್ಸಾಹಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಸದಾ ನನ್ನ ಬೆಂಬಲಕ್ಕೆ ನಿಂತಿರುವ ನಿನಗೆ ನನ್ನ ಪ್ರೇಯಸಿಯಾಗಲು ಒತ್ತಾಯಿಸುವುದಿಲ್ಲ. ಕೇವಲ ಗೆಳತಿಯಾಗಿರು ಸಾಕು..... ನಿನ್ನ ಸೌಂದರ್ಯಕ್ಕೆ ಸೋತು ದುರಾಸೆ ಪಡುವುದು ಮೂರ್ಖತನವೆನಿಸುತ್ತಿದೆ. ಕಣ್ಣಿಗೆ ಕಾಣುವ ಸೌಂದರ್ಯ ಕೈಗೆಟುಕುವುದಿಲ್ಲ. ಅದು ಹಾಗೆ ನಗು ನಗುತ್ತಲೆ ಇರಬೇಕು. ಸದಾ ಬಾಡದ ಹೂವಾಗಿ ನೀನಿರಬೇಕು. ಪ್ರೀತಿ ಕುರುಡು ಅಂತ ಹೇಳುವುದು ಕಣ್ಣಿಗೆ ಗೋಚರಿಸದೇ ಇರುವುದನ್ನು ಆರ್ಥ ಮಾಡಿಕೊಳ್ಳದೇ ಪಶ್ಚಾತ್ತಾಪ ಪಟ್ಟಿದ್ದು ಸಾಕೆನಿಸುತ್ತಿದೆ. ನಿನ್ನ ಮನಸ್ಸಿಗೆ ನೋವಾದರೆ ಒಂದು ಕ್ಷಣ ಮಾತ್ರ ಕ್ಷಮಿಸು ನಿಟ್ಟುಸಿರು ಬಿಡುವೆ. ಇಲ್ಲವೆಂದರೆ ಧೀರ್ಘವಾದ ಉಸಿರಿನಿಂದ ಮರೆಯಾಗಿ ಹೋಗುವೆ....

                                                                                                             ನಿನ್ನಿಂದ ಮರೆಯಾಗಿ ಹೋಗುವ ನಿರೀಕ್ಷೆಯಲ್ಲಿ....
                                                                                                                             ನಿನ್ನ ಗೆಳೆಯ