ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

ಬರಹ

೨೩ ನೇ ಡಿಸೆಂಬರ್, ೨೦೦೬, ಶನಿವಾರ, ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗದಲ್ಲಿ ಕನ್ನಡ ಪುಸ್ತಕಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಎರ್ಪಟ್ಟಿತ್ತು. ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ. ಶ್ರೀನಿವಾಸ್ ಮತ್ತು ಶ್ರೀ ಮಂಜುನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಮೊದಲು ಶ್ರೀ. ಹಂಸಲೇಖ, ದೇಸಿ ಚಿಂತಕ, ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ,ಕನ್ನಡ ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆಯನ್ನು ಮಾಡಿದರು. ನಂತರ ಮೊದಲನೆಯ ಮಹಡಿಯಲ್ಲಿ ಹವಾನಿಯಂತ್ರಿತ ಸಭಾಗೃಹದಲ್ಲಿ ಮುಂದಿನ ಕಾರ್ಯಕ್ರಮಗಳು ಪ್ರಾರಂಭವಾದವು.

ಶ್ರೀ ಚಂದ್ರಶೇಖರ ಪಾಲೆತ್ತಾಡಿ, ಸಂಪಾದಕ, ಕರ್ನಾಟಕ ಮಲ್ಲ, ಮುಂಬೈ, ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮುಂಬೈನಂತಹ ಬೃಹತ್ ಶಹರಿನಲ್ಲಿ ಒಂದು ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕುವ ಪ್ರಕ್ರಿಯೆ ಎಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎನ್ನುವ ವಿಚಾರವನ್ನು ಮನದಟ್ಟು ಮಾಡಿದರು. ಈಗ 'ಕರ್ನಾಟಕ ಮಲ್ಲ' ಮುಂಬೈ ಕನ್ನಡಿಗರ ಉಸುರಿನಂತೆ ಕೆಲಸಮಾಡುತ್ತಿದೆ ! ಮೈಸೂರಸೋಸಿಯೇಷನ್ನಿನ ಕನ್ನಡ ಪುಸ್ತಕ ಮಾರಾಟ ಮಳಿಗೆ ಕೇವಲ ಕನ್ನಡ ಪ್ರಾಧಿಕಾರದ ಪುಸ್ತಕಗಳನ್ನೇ ಮಾರುವ ಕೇಂದ್ರವಾಗದೆ, ಮುಂಬೈ ಲೇಖಕರ ಮೌಲ್ಯಾಧಾರಿತ ಕೃತಿಗಳನ್ನೂ ಪ್ರದರ್ಶಿಸಿ ಅವರಿಗೆ ಭರವಸೆ ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಶ್ರೀ. ಹಂಸಲೇಖರವರು ಕನ್ನಡ ಪುಸ್ತಕ ಪ್ರಾಧಿಕಾರದ ಕೊಡುಗೆಯನ್ನು ಸ್ಮರಿಸುತ್ತಾ "ಈಗಾಗಲೇ ೧೦ ಮಳಿಗೆಗಳು ಕರ್ಣಾಟಕದಲ್ಲಿ ತೆರೆದಿವೆ; ೧೧ ನೆಯದು ಮುಂಬೈ ಪಟ್ಟಣದಲ್ಲಿ ! ಮುಂಬೈಸೇರಿದಂತೆ ಒಟ್ಟು ೩ ಮಳಿಗೆಗಳ ಉದ್ಘಾಟನೆಯನ್ನು ನನ್ನ ಕೈಲೇ ಮಾಡಿಸಿ ಒಂದು 'ಹ್ಯಾಟ್ರಿಕ್' ಗಳಿಸುವುದಕ್ಕೆ ಅನುವುಮಾಡಿಕೊಟ್ಟಿರುವುದು ನನಗೆ ಸಂತಸ ತಂದಿದೆ ಎಂದರು. ಕನ್ನಡಪರ ಚಟುವಟಿಕೆ ಮತ್ತು ಅದರಲ್ಲಿನ ತೀವ್ರ ಆಸಕ್ತಿಗಳು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ" ಎಂದರು. ಜನಪ್ರಿಯ ಕನ್ನಡ ಪ್ರಕಟನಾಲಯ ಒಂದರ ಮಾಲೀಕರಾದ ಶ್ರೀ. ಹಂಸಲೇಖ, ತಮ್ಮ ಚಲನ ಚಿತ್ರ ಸಂಗೀತ ನಿರ್ದೇಶನದ ಕಾರ್ಯವನ್ನೂ ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಡಾ ಪುಟ್ಟಸ್ವಾಮಿ, ಸಹಾಯಕ ನಿರ್ದೇಶಕ, ಕನ್ನಡ ಪುಸ್ತಕ ಪ್ರಾಧಿಕಾರ, ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು. ಪ್ರಾಧಿಕಾರ ಕೊಡುವ ರಿಯಾಯಿತಿ, ಮತ್ತು ಬಾಡಿಗೆ ಇತ್ಯಾದಿಗಳನ್ನು ಹೇಳಿ ಈ ೬ ವರ್ಷಗಳಲ್ಲಿ ಆದ ಕೆಲಸಕ್ಕಿಂತ ಶ್ರೀ ಸಿದ್ಧರಾಮಯ್ಯನವರ ಕಾಲದಲ್ಲಿ ಹಮ್ಮಿಕೊಂಡ ಕಾರ್ಯಗಳು ಪಡೆದ ಹೊಸ ದಿಶೆಯನ್ನು ವಿವರಿಸಿದರು.

ಪ್ರೊಫೆಸರ್. ಸಿದ್ಧರಾಮಯ್ಯನವರು ತಮ್ಮ ಆಡಳಿತ ವರ್ಗದ ಮಿತ್ರರ ಸಹಕಾರ ಮತ್ತು ಕನ್ನಡಪ್ರಾಧಿಕಾರಕ್ಕೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಕೊಡುತ್ತಿರುವ ಅನುದಾನದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಎಲ್ಲಾ ಖ್ಯಾತ ಮತ್ತು ನವೋದಯ ಲೇಖಕರಿಗೂ ವಂದನೆ ಸಲ್ಲಿಸುತ್ತಾ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಿ ಮನೆಮನೆಗೂ ಪುಸ್ತಕಗಳನ್ನು ಮುಟ್ಟಿಸುವ ಆಸೆಯನ್ನು ವ್ಯಕ್ತಪಡಿಸಿದರು. ಸ್ವತಃ ಕವಿಗಳಾದ ಅವರು ತಮ್ಮ ಭಾಷಣದಿಂದ ಎಲ್ಲರನ್ನೂ ಆಕರ್ಷಿಸಿದರು. ಭವಾನಿ ಭಾರ್ಗವ್ ರವರು ಮೈಸೂರ್ ಅಸೋಸಿಯೇಷನ್ ಪರವಾಗಿ ವಂದನಾರ್ಪಣೆ ಮಾಡಿದರು.

ಚಹಾ ಪಾನದ ವ್ಯವಸ್ಥೆಯನಂತರ ಅಪ್ಪಗೆರೆ ತಿಮ್ಮರಾಜು, ಖ್ಯಾತ ಜಾನಪದ ಗಾಯಕರಿಂದ ಹಾಡುಗಾರಿಕೆ ಇತ್ತು. ಇದರ ತರುವಾಯ, ಡಾ. ಕೆ ವೈ. ನಾರಾಯಣಸ್ವಾಮಿ, ಅಧ್ಯಾಪಕ, ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು ಅವರಿಂದ 'ವಾಚನಾಭಿರುಚಿ ಕಮ್ಮಟ' ಆರಂಭವಾಯಿತು. ಅವರು ಎಲ್ಲರನ್ನೂ ಸೇರಿಸಿಕೊಂಡು ಕವನವನ್ನು ಓದುವುದು ಹೇಗೆ ? ಅದನ್ನು ಅರ್ಥೈಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ವಿವರಿಸಿದರು. ರಾತ್ರಿ ೯-೪೫ ರ ವರೆಗೂ ಈ ಕಮ್ಮಟ ಬಹಳ ಯಶಸ್ವಿಯಾಗಿ ನಡೆದಿತ್ತು. ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಆಡಳಿತಾಧಿಕಾರಿ, ಕ. ಪು. ಪ್ರಾ.ರವರು ಎರಡುದಿನದ ಕಾರ್ಯಕ್ರಮಗಳಲ್ಲೂ ಉಪಸ್ಥಿತರಾಗಲಿಲ್ಲ.

೨೪ ನೇ ಡಿಸೆಂಬರ್, ೨೦೦೬, ರವಿವಾರ, ಸರಿಯಾಗಿ ೧೧-೩೦ ಕ್ಕೆ ಎರಡಮೆಯದಿನದ ಕಾರ್ಯಕ್ರಮ ಶುರುವಾಯಿತು. ಸಾಹಿತ್ಯಾಭಿರುಚಿ ಇರುವ ಎಲ್ಲಾ ಶ್ರೋತೃಗಳೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಶ್ರೀ ಲಕ್ಷ್ಮೀಪತಿ, ಕವಿ, ಸಂಸ್ಕೃತಿ ಚಿಂತಕ, ಮತ್ತು ಡಾ. ಕೆ ವೈ. ನಾರಾಯಣಸ್ವಾಮಿ ಯವರು ಹೊಸ ಶ್ರೋತ್ರುಗಳಿಗೆ ಮತ್ತೆ ಕನ್ನಡ ಸಾಹಿತ್ಯದ ಚಿಂತನೆಗಳು ಅದರ ತಾತ್ವಿಕ ಹಿನ್ನೆಲೆ, ಒಳಹುದಿಗಳ ತುಣುಕುಗಳನ್ನು ವಿಧಿವತ್ತಾಗಿ ಎಲ್ಲರಿಗೂ ತಿಳಿಸಿದರು. ಕಾವ್ಯ ರಚನೆಯ ಕೆಲವು ಹಂತಗಳಲ್ಲಿ ಕೆಲವು ಅತಿಗಳು ಗಮನಕ್ಕೆ ಬರುತ್ತವೆ ಎನ್ನುವುದು ಎಲ್ಲರಿಗೂ ಗಮನಕ್ಕೆ ಬಂತು.

೧. ಸಮಾಜ ನಿರಸನೆ ಕಾವ್ಯ- ಇದು ವ್ಯಕ್ತಿಗಳನ್ನು ಕುರಿತಿದ್ದು
೨. ಸಮಾಜದ ಅತಿಬದ್ಧತೆಯ ದೌರ್ಬಲ್ಯ

ಈಗಾಗಲೇ ಕನ್ನಡದಲ್ಲಿ ಅನೇಕ ಉತ್ತಮ ಕಾವ್ಯರಚನೆಯಾಗಿದೆ. ಇದು ಕುವೆಂಪುರವರಿಂದ ಹಿಡಿದು ಇತ್ತೀಚಿನ ಉದಯೊನ್ಮುಖ ಕವಿಗಳವರೆಗೆ ದಾಖಲು ಮಾಡಿಯಾಗಿದೆ. ಕಮ್ಮಟಕ್ಕೆ ಬಂದ ಕಾವ್ಯಾಸಕ್ತರಿಗೆ ಸುಮಾರು ೧೨ ಅಂತಹ ಕವಿತೆಗಳ ಪ್ರತಿಗಳನ್ನು ಹಂಚಿದ್ದರು. ಅದನ್ನು ತಮ್ಮ ಜ್ಞಾನಶಕ್ತಿಗನುಗುಣವಾಗಿ ಓದಿ ಅರ್ಥವನ್ನು ಎಲ್ಲರ ಮುಂದೆ ಕೆಲವರು ಪ್ರಸ್ತುತಪಡಿಸಿದರು.

"Liberty is the statue in America", ಅಮೆರಿಕದ ಕಪ್ಪು ಲೇಖಕನೊಬ್ಬ ಬರೆದ ಒಂದು ಸಾಲು ಅಲೆಗಳನ್ನು ಎಬ್ಬಿಸಿತು ಎನ್ನುವುದು ಇಲ್ಲಿ ಪ್ರಸ್ತುತ.( ಸ್ವಾತಂತ್ರ್ಯವನ್ನು ಮಾನವ ಅಧಿಕಾರಗಳನ್ನೂ ಪ್ರತಿಪಾದಿಸುವ ಸ್ವಾತಂತ್ರ್ಯದೇವಿಯ ಮೂರ್ತಿ ಅಮೆರಿಕಾದಲ್ಲಿದೆ ! ) ಅಮೆರಿಕದಲ್ಲಿದೆ ಸರಿ. ಆದರೆ ಅನುಷ್ಠಾನಕ್ಕೆ ಅವುಗಳನ್ನು ಎಲ್ಲಿ ತರುತ್ತಿದ್ದಾರೆ ? ಇದನ್ನು ಅವನು ಮಾರ್ಮಿಕವಾಗಿ ತನ್ನ ಎರಡು ಸಾಲಿನಲ್ಲಿ ಹೇಳಬಯಸುತ್ತಾನೆ ! ಈ ಪದಗಳು ಬಿಳಿಯರು ಕಪ್ಪು ಜನರಮೇಲೆ ತೋರಿಸಿದ ದೌರ್ಜನ್ಯ, ದ್ವೇಶ, ಅಸಮಾನತೆಗಳನ್ನು ಎತ್ತಿ ಹೇಳುತ್ತವೆ.ಒಂದು ಸಮಯದಲ್ಲಿ ಕರಿಯರನ್ನು ಪ್ರಾಣಿಗಳಂತೆ ಹಿಡಿದು ತಂದು ಹರಾಜು ಹಾಕಿ ಮಾರಾಟ ಮಾಡುತ್ತಿದ್ದ ವಿಷಯವನ್ನು ನಾವು ಓದಿ ಬಲ್ಲೆವು !

ಹಾಗೆಯೇ ಜಪಾನಿನ ಚಲನ ಚಿತ್ರ ನಿರ್ದೇಶಕ ಅಕಿರಾ ಕುರೋಸೊವ ರವರು ತಯಾರಿಸಿದ, ದೃಷ್ಯ ಕಾವ್ಯಗಳು ಹೆಮ್ಮೆಯ ಪ್ರತೀಕಗಳಾಗಿವೆ. ಅವರು ಅಲ್ಲಿ ತಲೆಯೆತ್ತುವ ಅಹಂಕಾರವನ್ನು ಕುರಿತು ಹೀಗೆ ಹೇಳುತ್ತಾರೆ. "ಮನುಷ್ಯನ ಅಹಂಕಾರ ಸತ್ತಮೇಲೂ ಅವನ ಗೋರಿಯಿಂದ ಎದ್ದು ಬಂದು ಮಾತಾಡುತ್ತದೆ"!

ಒಂದು ವಿಶೇಷ ಕೃತಿ ಬರಬೇಕಾದರೆ ಕವಿಗೆ ಯಾವ ಪೂರ್ವಾಗ್ರಹವೂ ಇಲ್ಲದಿದ್ದಾಗ ಮಾತ್ರ. ಅಂದರೆ ಶೂನ್ಯದಲ್ಲಿ- ಅವನ ತಲೆ ಪೂರ್ತಿ ಕಾಲಿಯಿದ್ದಾಗ. ಕವಿತೆ ಅತ್ಯಂತ ಆನಂದ ಅಥವಾ ಭಾವೋದ್ವೇಗದ ಸಮಯದಲ್ಲಿ ಮಾತ್ರ ಬುದ್ಧನಿಗೆ ಜ್ಞಾನೋದಯವಾದಂತೆ ಭುಗಿಲೆಂದು ಕ್ಷ-ಕಿರಣದಂತೆ ಮಿಂಚುತ್ತದೆ !

ಕಾವ್ಯ ಮರದ ದಿಮ್ಮಿಯಂತೆ- ಅದನ್ನು ಕೆತ್ತಿ ನಮಗೆ ಬೇಕಾದ ಆಕಾರಗಳನ್ನು ಮಾಡುವ ಸಾಧ್ಯತೆಗಳು ಒಬ್ಬ ಪ್ರಗತಿಶೀಲ ಕವಿಯಲ್ಲಿದೆ. ಕಾವ್ಯರಚನೆಯೆಂದರೆ- ಸಂವೇದನೆಗಳ ನಿರಂತರ ಹುಡುಕಾಟ.

ಕವಿತೆಯನ್ನು ಅರ್ಥಮಾಡಿಕೊಳ್ಳಲು ಅದರ ನಿರಂತರ ಅಧ್ಯಯನ, ಮತ್ತು ಅರಿವು ಅತ್ಯಾವಶ್ಯಕ ! ವ್ಯಕ್ತಿಯ ಜ್ಞಾನಪ್ರಪಂಚ ವೃದ್ಧಿಸಿದಂತೆ, 'ಸಂಚಿತ ಜ್ಞಾನ'ದ ಪರಿಧಿ ವಿಸ್ತಾರವಾದಂತೆ ಅರ್ಥಗಳೂ ಬದಲಾಗುತ್ತವೆ. ಈ ಕೆಳಗೆ ಕಂಡ ಖ್ಯಾತಕವಿಗಳ ಮತ್ತು ಯುವಕವಿಗಳ ಕವಿತೆಗಳನ್ನು 'ಹೋಮ್ ವರ್ಕ್' ಗಾಗಿ ಕೊಟ್ಟಿದ್ದರು :

೧. ಪಂಚಮಾಶ್ವಾಸಂ- ಪಂಪ-*
೨. ಚಿತ್ರದ ಬೆನ್ನು- ಎನ್. ಕೆ. ಹನುಮಂತಯ್ಯ-*
೩. ಮುಂಬೈ ಜಾತಕ- ಜೀ. ಎಸ್.ಎಸ್.
೪. ಅವ್ವ- ಪಿ. ಲಂಕೇಶ್
೫ ಯೋಧ ಮತ್ತು ಹೆಂಗಸು- ಎಕ್ಕುಂಡಿ
೬. ಅಂಬಪಾಲಿ- ಶಿವಪ್ರಕಾಶ್
೭. ಕುರುಡು ಕಾಂಚಾಣ- ದ. ರಾ. ಬೇಂದ್ರೆ-*
೮. ಧನ್ಯವಾದಗಳು- ಲಲಿತ ಸಿದ್ಧಬಸವಯ್ಯ-*
೯. ಗೊಬ್ಬರ- ಡಾ. ಕೆ. ವಿ. ಪುಟ್ಟಪ್ಪ-*
೧೦. ತಾಯಿ- ಗಂಗಾಧರ ಚಿತ್ತಾಲ
೧೧. ಚಿಂತಾಮಣಿಯಲ್ಲಿ ಕಂಡ ಮುಖ- ಡಾ. ಗೋಪಾಲಕೃಷ್ಣ ಅಡಿಗ
೧೨. ಮವೋತ್ಸೆ ತುಂಗನಿಗೆ- ಡಾ. ಚಂದ್ರಶೇಖರ ಕಂಬಾರ

* ಈ ೫ ಕವಿತೆಗಳನ್ನು ಓದಿಸಿ ಅರ್ಥ ಹೇಳಿದರು. ಬೇರೆ ಕವಿತೆಗಳನ್ನು ಸಮಯಾವಕಾಶವಿಲ್ಲದೆ ಓದಲು ಆಗಲಿಲ್ಲ

"ಗೊಬ್ಬರದಮೇಲೆ ಬರೆವುದೆ ಕಬ್ಬಮಂ ? ಹಾಕಡುಕಷ್ಟ ! ಕಲಿಕಾಲಕೇನು ಬಂದಪುದೋ ?

ಈ ಕವನವನ್ನು 'ಕುವೆಂಪು'ರವರು ಬರೆದು ಈಗಾಗಲೇ ದಶಕಗಳೇ ಆಗಿವೆ. ಆದರೆ ಇಂದಿಗೂ ಅದರ ಪ್ರಸ್ತುತೆ ಇದೆ. ಮುಂದೆಯೂ ಇರುವುದರಲ್ಲಿ ಸಂದೇಹವಿಲ್ಲ ! ಗೊಬ್ಬರದ ಶೀರ್ಶಿಕೆಯನ್ನು ಹೊತ್ತ ಕವಿತೆಯನ್ನು ಯಾರುತಾನೇ ಮೆಚ್ಚಿಯಾರು ? ಗೊಬ್ಬರದ ಅಸಹ್ಯ, ಹೊಲಸು ನಾತ ಎಂತಹವರನ್ನೂ ಬೆಚ್ಚಿಸುವಂತಹದು! ಆದರೆ ಅದೇ ಕುವೆಂಪುರವರ ಕವಿತೆಯ ಮೂಲದ್ರವ್ಯವಾದಾಗ, ಜನ ಹೇಗೆ ಪ್ರತಿಕ್ರಿಯಿಸಿರಬೇಕು ?

"ಗೊಬ್ಬರದಮೇಲೆ ಬರೆವುದೆ ಕಬ್ಬಮಂ ? ಹಾ
ಕಡುಕಷ್ಟ ! ಕಲಿಕಾಲಕೇನು ಬಂದಪುದೋ ?

ಎಂದು ಪ್ರಾರಂಬಿಸಿದ ಪುಟ್ಟಪ್ಪನವರು,

ಗೊಬ್ಬರಂ ಸಿಂಹಾಸನಕ್ಕೇರಿದಾ ದಿನಂ
ತನ್ನ ಹೊಗಳಿದ ಕಬ್ಬಿಲನ ಕಬ್ಬಿಗನ ಮಾಡಿ
ಮೆರೆಯುವುದು ! ಅಂದು ಗೊಬ್ಬರದ ಕಂಪೆಲ್ಲರ್ಗೆ
ಪರಿಂಅಳ ದ್ರವ್ಯ ತಾನಾದಪುದು ! ಏತಕೆನೆ,
ಸಿರಿವೆರಸು ಶಕ್ತಿಇರೆ ಗೊಬ್ಬರವೆ ಪರಿಮಳಂ;
ಇಲ್ಲದಿರೆ ಪುನುಗು ತಾನಾದೊಡಂ ಗೊಬ್ಬರಂ!"

ಎಂದು ಹೇಳಿ ಗೊಬ್ಬರದ ಮಹಿಮೆಯನ್ನು ತಿಳಿಸಿ ತಮ್ಮ ಕವನವನ್ನು ಅಂತ್ಯಗೊಳಿಸುತ್ತಾರೆ !

ಇನ್ನೊಂದು ಕವಿತೆಯನ್ನು ಶ್ರೀ. ಎನ್. ಕೆ. ಹನುಮಂತಯ್ಯನವರು ಬರೆದಿದ್ದಾರೆ.

ಅದರ ಶೀರ್ಶಿಕೆ : 'ಚಿತ್ರದ ಬೆನ್ನು' ಇದು ಇರುವೆ, ಬಸವನಹುಳು, ಮತ್ತೆ ಪಕ್ಷಿಯನ್ನು ಕುರಿತು ಹೇಳುತ್ತದೆ.

ಪ್ರಕೃತಿಯ ವಿಸ್ಮಯವನ್ನು ಎತ್ತಿಹೇಳುವ ಈ ಕವಿತೆಯ ಕೊನೆಯ ಸಾಲುಗಳು ಅರ್ಥವಾಗುವುದು ಕಠಿಣ. ಇದು ದಲಿತನೊಬ್ಬ ಬರೆದ ಕವಿತೆ.ಇರುವೆಯಮೇಲೆ ತನ್ನ ಕಾಲನ್ನು ಇಟ್ಟು ದೇಹದ ಭಾರವನ್ನು ಹಾಕುತ್ತಾನೆ. ಮತ್ತೆ ಕಾಲು ಎತ್ತಿದಾಗ ಇರುವೆ ಚಲನಶೀಲವಾಗುತ್ತದೆ. ತನ್ನ ಭಾರವೇ ಹೆಚ್ಚೆನಿಸಿದ ಬಸವನಹುಳು ನಿಧಾನವಾಗಿ ತೆಳವಿಕೊಂಡು ಹೋಗುತ್ತಿದೆ.ಅದರ ಮೃದುತ್ವವೇ ಅದಕ್ಕೆ ಒಂದು ಭೂಷಣ. ಒಂದು ಚಿಕ್ಕ ಕಡ್ಡಿಯಮೇಲೆ ಕುಳಿತು ಕಡ್ಡಿ ಮುರಿಯದಂತೆ ಉಯ್ಯಾಲೆಯಾಡುವ ಹಕ್ಕಿಗೆ ಇದೆ. ಈ ಮೂರು ನಿಸರ್ಗದ ವಿಸ್ಮಯಗಳಿಗೂ ಅವನು ಶರಣು ಹೇಳುತ್ತಾನೆ.

ಅಗ್ನಿ ಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ

ಕೊನೆಯಲ್ಲಿ ಶತಮಾನಗಳಿಂದ ದಾಶ್ಯದಲ್ಲೇ ಪರಿತಪಿಸುತ್ತಿರುವ ನನ್ನ ಅಳಲನ್ನು ಮತ್ತೆ ಮತ್ತೆ ಚಿತ್ರಿಸುವೆಯೇಕೆ ? ಅದಕ್ಕೆ ಬೆನ್ನು ಫಲಕವೇಕೆ ಬರೆಯುತ್ತಿಯೆ ?

ಡಾ. ನಾರಾಯಣ್ ಕವಿಯ ವ್ಯಕ್ತಿವಿಚಾರ ತಿಳಿಸಿದಮೇಲೆ ಕವಿತೆಯನ್ನು ಅರಿಯಲು ಸಹಾಯಕವಾಯಿತು
ಮೇಲೆ ತಿಳಿಸಿದ 'ಕಮ್ಮಟ' ನಿಜಕ್ಕೂ ಬೋಧಪ್ರದವಾಗಿದ್ದು ಎಲ್ಲರ ಮನರಂಜಿಸಿತು. ಮುಂಬೈನ ಕಾವ್ಯಪ್ರಿಯರಿಗೆ ಇದೊಂದು ರಸಾನುಭವ ! ರವಿವಾರ ನಿಜಕ್ಕೂ ಸ್ಮರಣೀಯವಾಗಿತ್ತು.