ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧

ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧

ಬರಹ

ಭಾಗ-೧

ಒಂದು ವಾರದ ಬೆಳವಣಿಗೆಗಳು ಒಂದಕ್ಕಿಂತ ಒಂದು ಆಘಾತಕಾರಿಯಾಗಿವೆ.

ರಸಗೊಬ್ಬರ ಗಲಾಟೆ ಧಾರವಾಡದ ಮಟ್ಟಿಗೆ ಖಂಡಿತ ಹೊಸದಲ್ಲ. ಆದರೆ, ಅದು ದೊಂಬಿಯ ರೂಪಕ್ಕೆ ತಿರುಗಿದ್ದು ತೀರಾ ಅಪರೂಪ. ನಾನು ಚಿಕ್ಕವಳಿದ್ದಾಗಿಂದ ನೋಡಿದ್ದೇನೆ. ಪ್ರತಿ ವರ್ಷ ಮೊದಲ ಮಳೆ ಬೀಳುತ್ತಲೇ ಸಿಬಿಟಿ (ಸಿಟಿ ಬಸ್‌ ಟರ್ಮಿನಸ್‌) ಸುತ್ತಮುತ್ತಲಿನ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರುವ ಅಂಗಡಿಗಳಲ್ಲಿ ರೈತರ ದಂಡು ಕಂಡು ಬರುತ್ತಿತ್ತು. ಒಮ್ಮೆಮ್ಮೆ ಬೇಕಾದ ಬಿತ್ತನೆ ಬೀಜದ ಕೊರತೆಯಿಂದಾಗಿ, ರೈತರು ಹಾಗೂ ಅಂಗಡಿಕಾರರ ನಡುವೆ ವಾಗ್ಯುದ್ಧ ನಡೆಯುತ್ತಿತ್ತು. ಆದರೆ, ಅದು ಗಲಾಟೆಯಾದ ಸಂದರ್ಭಗಳು ತೀರಾ ಅಪರೂಪ.

ಆಗ ರಸಗೊಬ್ಬರದ ಹುಚ್ಚೂ ಇಷ್ಟೊಂದು ಕಂಡು ಬರುತ್ತಿದ್ದಿಲ್ಲ. ಬಂಡಿಗೊಬ್ಬರ ಎಂದು ಕರೆಯಲ್ಪಡುವ ಕೊಟ್ಟಿಗೆ ಗೊಬ್ಬರದ ಮೇಲೆಯೇ ರೈತರು ಹೆಚ್ಚು ಅವಲಂಬಿತರಾಗಿದ್ದರು. ಉಳ್ಳ ರೈತರು ಮಾತ್ರ ರಸಗೊಬ್ಬರ ಬಳಸುತ್ತಿದ್ದರು.

ಆದರೆ, ಪರಿಸ್ಥಿತಿ ಈಗ ಏನಾಗಿದೆ ನೋಡಿ! ಹೆಚ್ಚುಕಡಿಮೆ ಎಲ್ಲ ರೈತರು ರಸಗೊಬ್ಬರವೊಂದೇ ಪರಿಹಾರ ಎನ್ನುವಷ್ಟರ ಮಟ್ಟಿಗೆ ದಾಸರಾಗಿ ಹೋಗಿದ್ದಾರೆ. ಏನಾದರೂ ಮಾಡಿ ಹೆಚ್ಚು ಬೆಳೆಯಬೇಕು, ಲಾಭ ಗಳಿಸಬೇಕು ಎಂಬ ದುರಾಸೆಗೆ ಬಿದ್ದಿದ್ದಾರೆ. ದುರಾಸೆ ಎಂಬ ಶಬ್ದ ಬಳಸಿದ್ದೇಕೆಂದರೆ, ಹಾಗೆ ಬೆಳೆಯಲು ಏನು ಬೇಕಾದರೂ ಮಾಡಲು ರೈತರು ಸಿದ್ಧರಾಗಿದ್ದಾರೆ. ಭೂಮಿಗೆ ವಿಷ ಉಣಿಸಿಯಾದರೂ ಸರಿ ಹೆಚ್ಚು ಬೆಳೆಯಬೇಕು. ಲಾಭ ಗಳಿಸಬೇಕು ಎಂಬುದು ದುರಾಸೆಯೇ ಎಂಬುದು ನನ್ನ ವೈಯಕ್ತಿಕ ನಂಬಿಕೆ.

ಹೀಗಾಗಿ, ಒಂದೇ ರೀತಿಯ ಬೆಳೆ, ವಾಣಿಜ್ಯ ಬೆಳೆಗಳು ರೈತರಿಗೆ ಪ್ರಿಯವಾದವು. ಬೆಳೆದರೆ ಎಲ್ಲರೂ ಉಳ್ಳಾಗಡ್ಡಿ (ಈರುಳ್ಳಿ) ಅಥವಾ ಮೆಣಸಿನಕಾಯಿ, ಇಲ್ಲವೇ ಹತ್ತಿ ಅಥವಾ ಸೋಯಾಬೀನ್‌ ಬೆಳೆಯುವುದು ಚಾಲ್ತಿಗೆ ಬಂದಿತು. ಇದನ್ನೇ ಕಾಯುತ್ತಿದ್ದವರಂತೆ ದಲ್ಲಾಳಿಗಳು ಬೆಳೆ ಕೈಗೆ ಬರುವ ಸಮಯಕ್ಕೆ ಸರಿಯಾಗಿ ಬೆಲೆ ಇಳಿಸುತ್ತಿದ್ದರು. ಸರ್ಕಾರದ ಬೆಂಬಲ ಬೆಲೆ ಘೋಷಣೆ ಉದ್ದೇಶಪೂರ್ವಕವಾಗಿ ಪ್ರತಿ ವರ್ಷ ತಡವಾಗಿಯೇ ಬರುತ್ತದೆ. ಇದೆಲ್ಲ ಒಂದು ಕೆಟ್ಟ ವ್ಯವಸ್ಥೆಯಂತೆ ಬೆಳೆಯುತ್ತ ಹೋಯಿತು.

ಅದೆಲ್ಲದರ ಅಭಿವ್ಯಕ್ತಿಯಾಗಿ ಧಾರವಾಡದ ಹಿಂಸಾಚಾರ ಮೂಡಿ ಬಂದಿತು. ಶಾಂತವಾಗಿದ್ದ ನನ್ನ ಫೇಡೆ ನಾಡು, ಶಾಲ್ಮಲೆ ಬೀಡು ಬೆಂಕಿ ಮತ್ತು ಆಕ್ರೋಶದಿಂದ ತತ್ತರಿಸಿತು.

ಆ ದಿನ ನನಗಿನ್ನೂ ನೆನಪಿದೆ.

(ಮುಂದಿನ ಭಾಗಕ್ಕೆ)

- ಪಲ್ಲವಿ ಎಸ್‌.