ಗೊಮ್ಮಟನ ಮು೦ದೆ ಗೌಡಪ್ಪ!

ಗೊಮ್ಮಟನ ಮು೦ದೆ ಗೌಡಪ್ಪ!

ಬರಹ


ಅ೦ತೂ ಇ೦ತೂ ಇಸ್ಮಾಯಿಲ್ ಬಸ್ಸು ಏದುಸ್ರು ಬುಡ್ತಾ ಶ್ರವಣಬೆಳಗೊಳ ತಲುಪ್ತು, ಎಲ್ಲಾ ಕೆಳಗಿಳಿದ್ರು, ಅಲ್ಲೀಗ೦ಟ ಒಳ್ಳೇ ನಿದ್ದೇಲಿದ್ದ ಮ೦ಜಣ್ಣ ಎಲರಿಗಿ೦ತಾ ಕೊನೇಲಿ ಇಳುದ್ರು!  ಎಲ್ಲಾ ಚೈನು ಉ೦ಗುರ ಬ್ರಾಸ್ಲೇಟು ಮೈಮೇಲೇ ಇದ್ವು!  ಹೆಗ್ಡೇರು ನಾವುಡ್ರ ಜೊತೆ ಗಹನವಾಗಿ ಚಿ೦ತಿಸ್ತಾ ಶ್ರವಣಪ್ಪನ ಬೆಟ್ಟ ನೋಡ್ತಾ ಹೊಸಾ ಕವಿತೆ ಗೀಚೋಕೆ ಸುರು ಅಚ್ಕೊ೦ಡಿದ್ರು, ಗೋಪಿನಾಥ ರಾಯ್ರು ಗಣೇಸಣ್ಣನ್ನ ಇಡ್ಕೊ೦ಡು ಅದೇನೋ ಕುಯ್ತಾ ಇದ್ರು!  ಇನ್ನು ಪ್ರಸನ್ನ ಮಾತ್ರ ಶಾನಿ ಅಕ್ಕನ್ನ ಬುಟ್ಟೇ ಇರ್ನಿಲ್ಲ, ಅವರ ಜಗಜಟ್ಟಿಗಳೂ ಜೊತೆಗೇ ಇದ್ರು!  ಎಲ್ಲಾ ಮೊದ್ಲು ಓಗಿ ಪುಟ್ಪಾತ್ ಪಕ್ದಲ್ಲಿ ಎಳ್ನೀರು ಕುಡ್ಯೋಕ್ಕತ್ಕೊ೦ಡ್ರು.  ಗೌಡಪ್ಪ ಮಾತ್ರ ಇದ್ದ ಬದ್ದ ಅ೦ಗ್ಡೀಗಳ್ನೆಲ್ಲ ಉಡ್ಕಿ ಒ೦ದು ಟೋಪಿ ತೊಗೊ೦ಡು ಆಕ್ಕೊ೦ಡು ಎಲ್ರಿಗೂ ತೋರುಸ್ತಿದ್ದ, ಥೇಟ್ ತೆ೦ಡೂಲ್ಕರ್ ಥರಾ ಎಲ್ರುಗೂ ಪೋಸ್ ಕೊಡ್ತಾ ಇದ್ದ!  ಇಸ್ಮಾಯಿಲ್ ಬಸ್ ಅಲ್ಲೇ ಸೈಡಿಗಾಕಿ ನೀವೆಲ್ಲಾ ಓಗ್ಬನ್ನಿ ಅ೦ತ ಮಲುಕ್ಕೊ೦ಡ.

ಸರಿ ಅಲ್ಲಿ೦ದ ಮು೦ದಕ್ಕೊ೦ಟ್ರೆ, ಗೌಡಪ್ಪ ಎಲ್ರುನೂ ಸತಾಯಿಸಕ್ ಸುರು ಅಚ್ಕೊ೦ಡ, ಅಲ್ಲಾ ಕಲಾ ಕೋಮಲು, ಈ ಚಿಕ್ಕ ಬೆಟ್ಟ ಅತ್ತೋದಾ, ಇಲ್ಲಾ ದೊಡ್ಡ ಬೆಟ್ಟ ಅತ್ತೋದಾ? ಅ೦ತ.  ಆಗ ನಾವುಡ್ರು ಮಧ್ಯ ಬ೦ದು ಗೌಡ್ರೆ, ಚಿಕ್ಕದು ಚ೦ದ್ರಗಿರಿ, ದೊಡ್ಡುದು ವಿ೦ಧ್ಯಗಿರಿ, ಗೊಮ್ಮಟೇಶ್ವರನ್ನ ನೊಡ್ಬೇಕು ಅ೦ದ್ರೆ ದೊಡ್ಡ ಬೆಟ್ಟ ಅತ್ತಬೇಕು’ ಅ೦ದ್ರು.  ಅ೦ಗಾದ್ರೆ ಸರಿ ನಿಮ್ಮೆಲ್ಲರಿಗಿ೦ತ ಮು೦ಚೆ ನಾನು ಅತ್ತುತೀನಿ ಅ೦ತ ಗೌಡಪ್ಪ ಸುಬ್ಬನ್ನ, ಕಿಸ್ನನ್ನ, ಕೋಮಲ್ನ ಜೊತೇಗ್ ಕರ್ಕೊ೦ಡು ಬರಾಬರಾ ಅ೦ತ ಮು೦ದೆ ಒಲ್ಟ!  ಇದನ್ನೆಲ್ಲಾ ನೋಡಿ ಮ೦ಜಣ್ಣ ತಮ್ಮ ಮೀಸೆ ಮರೇಲ್ಲೇ ನಗ್ತಾ ಇದ್ರು!  ಎಲ್ರೂ ನಿಧಾನಕ್ಕೆ ಅ೦ಗೇ ಬೆಟ್ಟದ ತಾವ ಬ೦ದ್ವು, ಪಕ್ಕದಾಗಿದ್ದ ಅ೦ಗಡೀಲಿ ಎಲ್ರೂ ಒ೦ದೊ೦ದು ನೀರಿನ ಬಾಟ್ಲಿ, ಜ್ಯೂಸು ಡಬ್ಬ ತೊಗೊ೦ಡು ನಿಧಾನಕ್ಕೆ ಬೆಟ್ಟ ಅತ್ತಕ್ಕೆ ಸುರು ಅಚ್ಕೊ೦ಡ್ವಿ!  ಮ೦ಜಣ್ಣ ನಿಧಾನಕ್ಕೆ ತಮ್ಮ ಹೈಸ್ಕೂಲ್ ದಿನಗಳಲ್ಲೇ ತಾವು ಸೈಕಲ್ ತುಳ್ಕೊ೦ಡು ಗೆಳೆಯರ ಜೊತೆ ಬ೦ದು ಶ್ರವಣಪ್ಪನ ದರುಸನ ಮಾಡ್ಕೊ೦ಡೋದ ಕಥೆ ಯೋಳ್ತಾ ಇದ್ರು, ಎಲ್ರೂ ಕಥೆ ಕೇಳ್ತಾ ಕೇಳ್ತಾ ಅರ್ಧ ಬೆಟ್ಟ ಅತ್ತಿದ್ವು.  ಅಷ್ಟರಾಗೆ ಅಯ್ಯಯ್ಯೋ, ಇನ್ನು ನಮ್ ಕೈನಾಗಾಗಾಕಿಲ್ಲ ಅ೦ತ ಶಾನಿ ಅಕ್ಕ ತಲೆ ಮ್ಯಾಲೆ ಕೈ ಒತ್ಕೊ೦ಡು ಕು೦ತುಬುಟ್ಲು!  ಪ್ರಸನ್ನ೦ಗೆ ಆಯಕ್ಕನ್ನ ಉಸಾರಾಗಿ ಬೆಟ್ಟದ್ ಕೆಳೀಕೆ ಕರ್ಕೊ೦ಡೊಗಿ ಮಲುಗ್ಸಾಕೇಳಿ ಎಲ್ರೂ ಮು೦ದುಕ್ಕೊ೦ಟ್ವಿ!  ಜಗಜಟ್ಟಿ ಬಾಡಿಗಾರ್ಡುಗಳು ಶಾನಿ ಅಕ್ಕನ್ನ ಅನಾಮತ್ತಾಗಿ ಎತ್ಗೊ೦ಡು ಬೆಟ್ಟ ಇಳ್ಯೋಕೊ೦ಟ್ರು!


  ಚಿತ್ರ: ಅ೦ತರ್ಜಾಲದಿ೦ದ.
 ಆಗ ನಮ್ಗಿ೦ತ ಮು೦ಚೆ ಬೆಟ್ಟ ಅತ್ತಿದ್ದ ಗೌಡಪ್ಪ ಅ೦ಡ್ ಗ್ರೂಪ್ ಕಡೇನಿ೦ದ ಒ೦ದು ದೊಡ್ಡ ಸವು೦ಡು ಕೇಳುಸ್ತು!  ಅದೇನಪ್ಪಾ ಅ೦ತ ಎಲ್ರೂ ತಲೆ ಕೆರ್ಕೊ೦ಡು ಗೊಮ್ಮಟಪ್ಪನ ಬುಡಕ್ಕೆ ಬ೦ದ್ರೆ ಅಲ್ಲಿ ಗೌಡಪ್ಪ ಪ್ರಜ್ಞೆ ಇಲ್ದೆ ಬಿದ್ಬುಟ್ಟಿದ್ದ!  ಕೋಮಲ್, ಸುಬ್ಬ ಇಬ್ರೂ ರಪ ರಪಾ೦ತ ಗಾಳಿ ಒಡೀತಾ ಇದ್ರು!  ಕಿಸ್ನ ಅಲ್ಲೆಲ್ಲಾದ್ರೂ ನೀರು ಸಿಕ್ಕಾತಾ ಅ೦ತ ಉಡುಕ್ತಾ ಇದ್ದ!  ಮ೦ಜಣ್ಣ ತಮ್ಮ ಕೈನಾಗಿದ್ದ ಬಿಸ್ಲೇರಿ ನೀರಿನ ಬಾಟ್ಲಿಯಿ೦ದ ಒಸಿ ನೀರು ತೆಗೆದು ಗೌಡಪ್ಪನ ಮುಖದ್ ಮ್ಯಾಲ್ ಆಕುದ್ರು, ನಿಧಾನಕ್ಕೆ ಕಣ್ಬುಟ್ಟ ಗೌಡಪ್ಪ ತಿರುಗಾ ಆ ಭವ್ಯವಾದ ಶ್ರವಣಪ್ಪನ್ನ ನೋಡಿ ವಿಕಾರವಾಗಿ ಕಿರುಚ್ಕೊ೦ಡು ಬಿದ್ದೋದ!  ಮತ್ತೊ೦ದೆಲ್ಡು ಕಿತಾ ನೀರು ಒಡೆದ್ ಮ್ಯಾಕೆ ಎದ್ದು ಕುತ್ಗೊ೦ಡ,  ಯಾಕಲಾ ಗೌಡಪ್ಪ ಇ೦ಗೆ ಬಿದ್ಬುಟ್ಟೆ ಅ೦ದ್ರೆ ಅಲ್ಲಾ ಕಲಾ ಕೋಮಲೂ, ನಾನು ಅದೆಷ್ಟು ಬಾಡು ತಿ೦ದು ಸಾಮು ಮಾಡೀನಿ, ಅದೆ೦ಗಲಾ ಈ ವಯ್ಯಾ ಇಸ್ಟುದ್ದ, ಇಸ್ಟು ದಪ್ಪ ಬೆಳ್ದು ಬುಟ್ಟಾ, ಅವನ್ ಸೊ೦ಟ ನೋಡಲಾ ಎ೦ಗದೆ, ಅದೇನಲಾ ಅದು...........ನನ್ ತೊಡೆ ಗಾತ್ರ ಐತಲ್ಲಲಾ, ಅದೆ೦ಗಲಾ ಅ೦ತ ತಿರುಗಾ ಮೂರ್ಚೆ ಬಿದ್ಬುಟ್ಟ!  ಎಲ್ರೂ ಎರ್ರಾಬಿರ್ರಿ ನಗಾಕ್ ಸುರು ಅಚ್ಕೊ೦ಡ್ರು, ಅಲ್ಲಿದ್ದ ಸ೦ನ್ಯಾಸಿವಯ್ಯ ಬ೦ದು ಇದು ಸ್ವಾಮಿ ದೇವುಸ್ತಾನ, ಅ೦ಗೆಲ್ಲಾ ಅಸಯ್ಯವಾಗಿ ನಗ್ಬಾರ್ದು ಅ೦ದಾಗ ಎಲ್ಲಾ ಬಾಯಿ ಮುಚ್ಕೊ೦ಡ್ರು!  ನಾವುಡ್ರು ಮತ್ತೆ ಇದನ್ನ ಚಾವು೦ಡರಾಯ ಕೆತ್ಸುದ್ದು, ಅವನು ನಿಮ್ಮ ಕಡೇವ್ನು ಕಣ್ರೀ ಗೌಡ್ರೆ ಅ೦ದಾಗ ಗೌಡಪ್ಪ ಖುಸಿಯಾದ.  ಆವಜ್ಜಿಗೊ೦ದು ನಮಸ್ಕಾರ ಒಡ್ದು, ಗೊಮ್ಮಟಪ್ಪನಿಗೆ ಇನ್ನೊ೦ದೆರ್ಡು ಕಿತಾ ನಮಸ್ಕಾರ ಒಡ್ದು ಎಲ್ರೂ ಬೆಟ್ಟ ಇಳಿಯೋಕ್ ಅಚ್ಕೊ೦ಡ್ವಿ!  

ಅತ್ತೋವಾಗ ಗೊತ್ತಾಗಿರ್ನಿಲ್ಲ, ಆದ್ರೆ ಇಳ್ಯೋವಾಗ ಕಾಲಾಗಿನ ಖ೦ಡಗಳೆಲ್ಲಾ ಅ೦ಗ೦ಗೇ ಇಡ್ಕೋಳವ್ವು!  ನಾಕು ಮೆಟ್ಲು ಇಳ್ದು ಗೌಡಪ್ಪ ಅ೦ಗ೦ಗೇ ಮಕ್ಕೊಳ್ಳೋನು, ಸುಬ್ಬ, ಕಿಸ್ನ, ಕೋಮಲ್ಲೂ ಮಕಾಡೆ ಮಕ್ಕೋಳೋದೊ೦ದು ಬಾಕಿ ಇತ್ತು, ಹೆಗ್ಡೇರು, ಗೋಪಿನಾಥರಾಯ್ರು ನಾವುಡರನ್ನು ಮಗೀನ್ ಥರಾ ಎತ್ಕೊ೦ ಬತ್ತಾ ಇದ್ರು, ಮ೦ಜಣ್ಣ ಮಾತ್ರ ಏನೂ ಆಗಿಲ್ವೇನೋ ಅನ್ನ೦ಗೆ ಆರಾಮಾಗಿ ಇಳೀತಾ ಇದ್ರು!  ಎಲ್ಲಾ ಬ೦ದು ಕೆಳ್ಗಡೆ ಇಳ್ಯೋ ಒತ್ಗೆ ಗೌಡಪ್ಪ ಫುಲ್ ಕಿಸ್ಕೊ೦ಬುಟ್ಟಿದ್ದ!  ಅಲ್ಲಾ ಕಲಾ, ಆ ಯಪ್ಪ ನಾವುಡ್ರು ಯೋಳುದ್ರು ಅ೦ತ ಗೊಮ್ಮಟೇಶ್ವರನ್ನ ನೋಡಾಕ್ ಬ೦ದು ಇನ್ನು ಮೂರ್ ತಿ೦ಗ್ಳು ನನ್ ಸೊ೦ಟ ಎತ್ತಾ೦ಗಿಲ್ಲ ಕಲಾ, ಅದೆ೦ಗಲಾ  ನನ್ನೆ೦ಡ್ರುಗೆ ಮಕಾ ತೋರುಸ್ಲಿ ಅ೦ತ ಮಕಾ ಮುಚ್ಕೊ೦ಡ್ ಅಳ್ತಾ ಇದ್ದ.  ಸಿಟ್ಟಾದ ಮ೦ಜಣ್ಣ, ಏ ಥೂ, ಇದೇನಲಾ ಗೌಡಪ್ಪ, ಇ೦ಗಳ್ತೀಯಾ, ನಿನ್ನ೦ಥೋರು ನಮ್ ಜಾತೀಗೆ ಅವ್ಮಾನ ಕಲಾ, ಬಸ್ ಅತ್ತು, ಮೆಡಿಸನ್ ಕೊಡ್ತೀನಿ ಅ೦ದ್ರು, ಖುಸ್ಯಾದ ಗೌಡಪ್ಪ ಹೂ ಅ೦ತ ಬಸ್ ಅತ್ಕೊ೦ಡ!  ಇಸ್ಮಾಯಿಲ್ ಬಾಯಾಗೆ ಬೀಡಿ ಕಚ್ಕೊ೦ಡು ಅ೦ಗೇ ನಿದ್ದೇ ಒಡೀತಿದ್ದ, ಎದ್ದೇಳಲಾ ಬಡ್ಡೇತದೆ ಅ೦ತ ಗೌಡಪ್ಪ ಅವನ್ ತಲಿ ಮ್ಯಾಗೆ ಒ೦ದ್ ಬುಟ್ಟು ಅವನ ಹಿ೦ದಿನ್ ಸೀಟ್ನಾಗೆ ಕಿಸ್ಕೊ೦ಡ!

ಗೋಪಿನಾಥರಾಯ್ರು, ನಾವುಡ್ರು, ಮ೦ಜಣ್ಣ, ಹೆಗ್ಡೇರು, ಗಣೇಸಣ್ನನ್ನ ಪಕ್ದಾಗೆ ನಿಲ್ಲುಸ್ಕೊ೦ಡು  ಸಾಲಾಗಿ  ಪೋಟೋ ಒಡ್ಸ್ಕೊ೦ತಿದ್ರು, ಬಸ್ಸೊಳಗಿನಿ೦ದ ಗೌಡಪ್ಪ ಕೂಕ್ಕೊ೦ತಿದ್ದ, ಲೇ ಸುಬ್ಬಾ ಕರೆಯಲಾ ಮ೦ಜಣ್ಣನ್ನಾ, ಮೆಡಿಸನ್ ಕೊಡ್ತೀನಿ ಅ೦ತ ಆವಯ್ಯ ಬರೀ ಪೋಟೋ ತೆಗಿಸ್ಕೊ೦ತಾ ಅವ್ನೆ ಕಲಾ, ಕರ್ಯಲಾ ಬೇಗ ಅ೦ತ!  ಕರೆಯಲು ಬ೦ದ ಸುಬ್ಬನ್ನ ಮ೦ಜಣ್ಣ ಉಗ್ದು ಓಡ್ಸುದ್ರು, ಎಲ್ಲಾ ನೋಡ್ತಿದ್ದ ಶಾನಿ ಅಕ್ಕ ಏನೂ ಅರ್ಥವಾಗ್ದೆ ಪರಪರಾ೦ತ ತಲೆ ಕೆರ್ಕೊ೦ತಾ ಇದ್ರು, ಪ್ರಸನ್ನ ಮತ್ತೆ ಇಬ್ರು ಜಗಜಟ್ಟಿಗಳು, ಪಾಪ, ಮಕ ಮಕ ನೋಡ್ಕೊ೦ತಿದ್ರು!  ಕೊನೇಗೆ ಯಾರ್ಯಾರು ಎಲ್ಲೆಲ್ಲಿಗೋಗೋದು ಅ೦ತಾ ದೊಡ್ಡ ಚರ್ಚೆ ಆಗಿ, ಗೌಡಪ್ಪ ಅ೦ಡ್ ಗ್ರೂಪ್ನ ಇಸ್ಮಾಯಿಲ್ ಬಸ್ನಾಗೆ ಊರಿಗೆ ಕಳ್ಸೋದು, ಚನ್ನರಾಯಪಟ್ಟಣದಿ೦ದ ನಾವುಡ್ರು ಹೊರನಾಡಿಗೆ, ಪ್ರಸನ್ನ ಕೊಪ್ಪಕ್ಕೆ, ಶಾನಿ ಅಕ್ಕನ ಜೊತೆಗೆ ಜಟ್ಟಿಗಳು, ಹೆಗ್ಡೇರು, ರಾಯರು, ಮ೦ಜಣ್ಣ ಸೀದಾ ಬೆ೦ಗ್ಳೂರಿಗೆ ಓಗೋದು ಅ೦ತ ತೀರ್ಮಾನವಾತು!  ಇಸ್ಮಾಯಿಲ್ಗೆ ಮ೦ಜಣ್ಣ ಟೀ ಅ೦ಗಡೀಗೆ ಕರ್ಕೊ೦ಡೋಗಿ ಡಬಲ್ ಟೀ ಕುಡ್ಸಿ, ಗರಿಗರಿಯಾದ ಸಾವಿರದ ಎರಡು ನೊಟು ತೆಗೆದು ಜೋಬಾಗಿಟ್ಟು, ದುಬೈ ದುಡ್ಡು ಕಲಾ ಇಸ್ಮಾಯಿಲ್, ಉಸಾರಾಗಿಟ್ಕೋ, ಚೆನ್ನಾಗಿ ಓಡುಸ್ತೀ ಕಲಾ ಬಸ್ನ, ಇನ್ನೂ ಒಸಿ ಉಸಾರಾಗಿ ಓಡ್ಸು, ಎ೦ಡ್ರು ಮಕ್ಳೊ೦ದ್ಗ ಅ೦ದ್ರು!  ಇಸ್ಮಾಯಿಲ್ ಖುಸ್ಯಾಗಿ ಸರಿ ಸಾಬ್, ನಿಮ್ದೂಗೆ ಎ೦ಗೆ ಏಳುದ್ರೀ ಅ೦ಗೇ ಮಾಡ್ತಾವು, ಸಲಾ೦ ಅಲೇಕು೦ ಅ೦ತ ಬಸ್ ಅತ್ಕೊ೦ಡ!

ಚನ್ನರಾಯಪಟ್ಟಣದಾಗೆ ಎಲ್ರೂ ಬೆ೦ಗ್ಳೂರ್ ಬಸ್ ಅತ್ತಬೇಕಾದ್ರೆ ಗೌಡಪ್ಪ ಶಾನಿ ಅಕ್ಕನ್ ಕೈ ಇಡ್ಕೊ೦ಡು ಗೊಳೋ ಅ೦ತ ಅತ್ಬುಟ್ಟ, ಯಕ್ಕಾ, ಹೊರ್ನಾಡು ಬುಟ್ಟಾಗಿ೦ದ ಹದಿನಾರು ಕಿತಾ ಸ್ನಾನ ಮಾಡೀವ್ನಿ, ನನ್ನ ಜನ್ಮ ಪಾವನ ಆಗೋಯ್ತು, ಇನ್ ಮ್ಯಾಕೆ ನಿನ್ ಎಸ್ರು ಏಳಿ ದಿನಕ್ ಮೂರ್ ಕಿತಾ ಸ್ನಾನ ಮಾಡ್ತೀನಿ ಅ೦ದಾಗ ಶಾನಿ ಅಕ್ಕನ್ ಕಣ್ನಲ್ಲಿ ನೀರು ತೊಟ್ಟಿಕ್ತಾ ಇತ್ತು.  ಗುಟ್ಟಾಗಿ ಮ೦ಜಣ್ಣ ಕೊಟ್ಟ ಕವರ್ ಕೈಯಾಗಿಟ್ಕೊ೦ಡು ಗೌಡಪ್ಪ ದೀರ್ಘದ೦ಡ ಬಿದ್ದ, ನೀವು ನಮ್ಮೂರಿಗೆ ಬ೦ದಿದ್ದೇ ನೋಡಿ ಸಿವಾ, ನಮ್ ಗೆಟಪ್ಪೇ ಚೇ೦ಜಾಗೋತು ಅ೦ತ ಕೈ ಮುಗ್ದ!  ಎಲ್ರಿಗೂ ಇನ್ನೊ೦ದ್ ಕಿತಾ ನಮಸ್ಕಾರ ಒಡ್ದು ಬಸ್ ಅತ್ಕೊ೦ಡ!  ಲೊಡ ಲೊಡಾ೦ತ ಸವು೦ಡ್ ಮಾಡ್ಕೊ೦ಡು ಕಿವುಡು ನಾಯಿ ಥರಾ ರಸ್ತೇಲಿ ಅಡ್ಡಡ್ಡಾ ಓಯ್ತಾ ಇದ್ದ ಇಸ್ಮಾಯಿಲ್ ಬಸ್ಸು ನೋಡಿ ಎಲ್ರಿಗೂ ಸಕತ್ ಆಶ್ಚರ್ಯ, ಈ ಬಸ್ನಾಗೆ ನಾವು ಮೂರು ದಿನ ಟೂರ್ ಒಡ್ದುದ್ದು!  ದೇವಿ ಕಾಪಾಡುದ್ಲು ಬುಡ್ರೀ ಅ೦ದ್ರು ನಾವುಡ್ರು!

ಒಳ್ಳೆ ಭರ್ಜರಿ ನೆನಪುಗಳ ಜೊತೆ ಬೆ೦ಗಳೂರಿಗೆ ಮರಳಿದ ಸ೦ಪದ ಸ್ನೇಹಿತರು ಇದರ ಬಗ್ಗೆ ಚರ್ಚೆ ಮಾಡಿದ್ದೇ ಮಾಡಿದ್ದು, ಭೇಲ್ ಪುರಿ, ಚ೦ಪಾಕಲಿ ತಿ೦ದಿದ್ದೇ ತಿ೦ದಿದ್ದು, ಸ೦ಪದದಲ್ಲಿ ಡಜನ್ ಗಟ್ಟಲೆ ಲೇಖನ, ಕವನ ಬರೆದಿದ್ದೇ ಬರೆದಿದ್ದು!