ಗೊಲ್ಲರಹಟ್ಟಿ ಮೌಢ್ಯಗಳಿಗೆ ಅಂತ್ಯ ಹಾಡಲು ಗಂಭೀರ ಕ್ರಮ ಅಗತ್ಯ
ಹೆರಿಗೆಯಾದಾಗ, ಋತುಮತಿಯಾದಾಗ ಹೆಣ್ಣುಮಕ್ಕಳನ್ನು ಸೂತಕದ ಹೆಸರಿನಲ್ಲಿ ಊರಿನಿಂದ ಆಚೆ ಇರುವ ತಾತ್ಕಾಲಿಕ ಗುಡಿಸಲಿನಲ್ಲಿ ಕೆಲವು ದಿನಗಳ ಕಾಲ ಇಡುವ ಮೂಢ ನಂಬಿಕೆಗೆ ತುಮಕೂರಿನಲ್ಲಿ ನವಜಾತ ಶಿಶುವೊಂದು ಬಲಿಯಾಗಿದೆ. ನತದೃಷ್ಟ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟಿದ್ದವು. ಆಸ್ಪತ್ರೆಯಲ್ಲಿ ಒಂದು ಮಗು ಸಾವಿಗೀಡಾಗಿತ್ತು. ಮತ್ತೊಂದು ಮಗುವಿನ ಜತೆ ಬಾಣಂತಿ ಮನೆಗೆ ಮರಳಬೇಕಿತ್ತು. ಆದರೆ ಊರಿನ ಮೂಢನಂಬಿಕೆಯಂತೆ ಬಾಣಂತಿಯನ್ನು ಗ್ರಾಮದಿಂದಾಚೆ ಇಟ್ಟಿದ್ದರು. ಅವಧಿ ಪೂರ್ವವಾಗಿ ಜನಿಸಿದ್ದ ಹಸುಳೆ ಮೊದಲೇ ಕಡಿಮೆ ತೂಕ ಹೊಂದಿತ್ತು. ಈ ನಡುವೆ ಮುಂಗಾರು ಅಬ್ವರದಿಂದಾಗಿ ರಾಜ್ಯಾದ್ಯಂತ ಶೀತ ವಾತಾವರಣ ಹೆಚ್ಚಿರುವುದರಿಂದ ಮಗು ಅಸ್ವಸ್ಥಗೊಂಡಿತು. ಆಸ್ಪತ್ರೆಗೆ ದಾಖಲಿಸಿದಾಗ ಅದು ಅಸು ನೀಗಿದೆ. ಪ್ರಪಂಚ ನೋಡುವ ಮೊದಲೇ ಮೂಢನಂಬಿಕೆಗೆ ಅದು ಪ್ರಾಣ ತೆತ್ತಿದೆ. ಮನೆಯಲ್ಲಿ ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ್ದರೆ ಆ ಮಗು ಬದುಕುತ್ತಿತ್ತೋ ಏನೋ? ತುಮಕೂರು ಸೀಮೆಯ ಗೊಲ್ಲರಹಟ್ಟಿಗಳಲ್ಲಿ ಈ ರೀತಿಯ ಆಚರಣೆ ಇದೆ ಎಂಬುದು ಗೊತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಹಿಳೆಯರ ನೋವಿನ ಕತೆಗಳು ಬಂದಿವೆ. ದುರಾದೃಷ್ಟವೆಂದರೆ, ಗೊಲ್ಲರಹಟ್ಟಿಗಳಲ್ಲಿ ಆ ಮೌಢ್ಯ ಇನ್ನೂ ಹೋಗಿಲ್ಲ. ಇದಕ್ಕೆ ಯಾರು ಹೊಣೆ?
ಚಂದ್ರನ ಅಂಗಳಕ್ಕೆ ನೌಕೆ ಕಳುಹಿಸುವ ವೈಜ್ಞಾನಿಕ ಕಾಲದಲ್ಲಿ ನಾವಿದ್ದೇವೆ. ಆದರೆ ಎಂದೋ ಶುರುವಾದ ಮೂಢನಂಬಿಕೆಗಳನ್ನು ಜನ ಇವತ್ತಿನ ದಿನಮಾನಗಳಲ್ಲೂ ಎಷ್ಟು ಗಂಭೀರವಾಗಿ ಆಚರಿಸುತ್ತಿದ್ದಾರೆ ಎಂಬುದಕ್ಕೆ ತುಮಕೂರಿನ ಪ್ರಕರಣ ಸ್ಪಷ್ಟ ನಿದರ್ಶನ. ಇಂತಹ ಪ್ರಕರಣಗಳು ನಡೆದಾಗ ಅಧಿಕಾರಿಗಳು ಗೊಲ್ಲರಹಟ್ಟಿಗೆ ದೌಡಾಯಿಸುವುದು, ಜಾಗೃತಿ ಮೂಡಿಸುವ ಕಸರತ್ತು ನಡೆಸುವುದು, ಬಳಿಕ ವಾಪಾಸಾಗುವ ಪ್ರಹಸನಗಳು ನಡೆಯುತ್ತವೆ. ಆದರೆ ಮೂಢನಂಬಿಕೆ ಮಾತ್ರ ನಿಲ್ಲುವುದಿಲ್ಲ. ಇಂತಹ ಮೌಢ್ಯಗಳ ಕುರಿತು ಜನರಲ್ಲಿ ಸ್ಪಷ್ಟ ತಿಳುವಳಿಕೆ ಮೂಡುವವರೆಗೂ, ಅದರ ಭಯ ನಿವಾರಣೆಯಾಗುವವರೆಗೂ ಇಂತಹದ್ದೆಲ್ಲಾ ನಡೆಯುತ್ತಲೇ ಇರುತ್ತದೆ. ಜಾಗೃತಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಇರಬಾರದು. ಜನರು ಜಾಗೃತಿಗೆ ಮಣಿಯದಿದ್ದರೆ ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಂಡು, ಮಹಿಳೆಯರು ಹಾಗೂ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಯಾತನೆಯಿಂದ ಅವರನ್ನು ಹೊರಗೆ ತರಬೇಕು. ಈಗೆಲ್ಲಾ ೮-೯ನೇ ವಯಸ್ಸಿಗೇ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ ಪ್ರಪಂಚದ ಅರಿವು ಸ್ಪಷ್ಟವಾಗಿ ಮೂಡುವ ಮುನ್ನವೇ ಅವರನ್ನು ಊರಿನಿಂದ ಆಚೆ ಇರುವ ಗುಡಿಸಲಿನಲ್ಲಿ, ಒಮ್ಮೊಮ್ಮೆ ಏಕಾಂಗಿಯಾಗಿ ಇಟ್ಟುಬಿಟ್ಟರೆ ಅವರ ಮಾನಸಿಕ ಸ್ಥಿತಿ ಏನಾಗಬೇಡ? ಗೊಲ್ಲರಹಟ್ಟಿಯಲ್ಲಿ ಇಂತಹ ಆಚರಣೆಗಳನ್ನು ನಿಲ್ಲಿಸಲು ನವಜಾತ ಶಿಶುವಿನ ಸಾವು ಪಾಠವಾಗಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೮-೦೭-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ